






ಪುತ್ತೂರು: 386 ವರ್ಷಗಳ ಇತಿಹಾಸವುಳ್ಳ ಕೆಮ್ಮಿಂಜೆ ಗ್ರಾಮದ ಮೊಟ್ಟೆತ್ತಡ್ಕ ಶ್ರೀ ಕೊರಗಜ್ಜ ಮತ್ತು ಶ್ರೀ ಆದಿಬ್ರಹ್ಮ ಮೊಗೇರ್ಕಳ ದೈವಸ್ಥಾನದ ಶ್ರೀ ಕ್ಷೇತ್ರ ಮಣ್ಣಾಪು ಕೊರಗಜ್ಜ ದೈವಸ್ಥಾನದ ವಾರ್ಷಿಕ ನೇಮೋತ್ಸವವು ಜ.23 ರಿಂದ 25ರ ತನಕ ಮಣ್ಣಾಪು ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲುರವರ ನೇತೃತ್ವದಲ್ಲಿ ವಿಜ್ರಂಭಣೆಯಿಂದ ನಡೆಯಲಿದ್ದು, ಈಗಾಗಲೇ ಶ್ರೀ ಕ್ಷೇತ್ರದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳೊಂದಿಗೆ ಚಾಲನೆ ನೀಡಲಾಗಿದೆ.


ಜ.23 ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಭಜನಾ ಕಾರ್ಯಕ್ರಮ, ಗಣಹೋಮ, ಶ್ರೀ ಸತ್ಯನಾರಾಯಣ ಪೂಜೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು, ಜ.24ರಂದು ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆ, ಮಧ್ಯಾಹ್ನ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವದ ಕಾಲಾವಧಿ ತಂಬಿಲ ಗ್ರಾಮದೇವರ ಅರ್ಚಕರ ನೇತೃತ್ವದಲ್ಲಿ ಜರಗಿದ್ದು ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.




ದೈವದ ಪ್ರಧಾನ ಅರ್ಚಕರಾದ ಕುಂಡ ಮಣ್ಣಾಪು, ಅಣ್ಣು ಮಣ್ಣಾಪು, ರವಿ ಕೆ.ಮಣ್ಣಾಪು, ಮಧ್ಯಸ್ತ ಗಣೇಶ್ ಪೂಜಾರಿ ಕೆಮ್ಮಿಂಜೆರವರು ಧಾರ್ಮಿಕ ವಿಧಿವಿಧಾನಗಳನ್ನು ನರವೇರಿಸಿದರು. ಶ್ರೀ ಕ್ಷೇತ್ರದ ಗೌರವಾಧ್ಯಕ್ಷ ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಅಧ್ಯಕ್ಷ ವಿಶ್ವನಾಥ್ ಮಣ್ಣಾಪು, ಕಾರ್ಯದರ್ಶಿ ದಿನೇಶ್ ಕೆಮ್ಮಿಂಜೆ, ಉಪಾಧ್ಯಕ್ಷ ವಿಶ್ವನಾಥ ಪೂಜಾರಿ ಮೊಟ್ಟೆತ್ತಡ್ಕ, ಕೋಶಾಧಿಕಾರಿ ಗುರುವ ಮಣ್ಣಾಪು, ಗೌರವ ಸಲಹೆಗಾರರಾದ ಗಂಗಾಧರ ಮಣ್ಣಾಪು, ವಿಶ್ವನಾಥ ನಾಯ್ಕ ಅಮ್ಮುಂಜ ಸಹಿತ ಹಲವರು ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಲೈಟಿಂಗ್ಸ್ಗಳಿಂದ ಕಂಗೊಳಿಸುತ್ತಿದೆ ಶ್ರೀ ಕ್ಷೇತ್ರ:
ವಾರ್ಷಿಕ ನೇಮೋತ್ಸವದ ಪ್ರಯಕ್ತ ಶ್ರೀ ಕ್ಷೇತ್ರವು ಬಣ್ಣ ಬಣ್ಣದ ಲೈಟಿಂಗ್ಸ್ಗಳಿಂದ ಕಂಗೊಳಿಸುತ್ತಿದ್ದು ಭಕ್ತರ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಿದೆ. ಜೊತೆಗೆ ಮಣ್ಣಾಪು ಕ್ಷೇತ್ರದ ದಾರಿಯುದ್ದಕ್ಕೂ ಕೇಸರಿ ತಳಿರು ತೋರಣಗಳನ್ನು ಜೋಡಿಸಲಾಗಿದೆ. ಮೊಟ್ಟೆತ್ತಡ್ಕ ಜಂಕ್ಷನ್ ಬಳಿಯ ಮಣ್ಣಾಪು ಶ್ರೀ ಕ್ಷೇತ್ರಕ್ಕೆ ಎಂಟ್ರಿ ಕೊಡುವ ದಾರಿಯಲ್ಲಿ ಬೃಹತ್ ದ್ವಾರವನ್ನು ಅಳವಡಿಸಲಾಗಿದೆ.
ಹರಕೆಯನ್ನು ಒಪ್ಪಿಸುವವರು ಅದೇ ದಿನ ಸಮಿತಿಯವರಲ್ಲಿ ತಿಳಿಸತಕ್ಕದ್ದು. ಪ್ರತೀ ಸಂಕ್ರಮಣದಂದು ಅಗೇಲು ಸೇವೆ ನಡೆಯಲಿರುವುದು. ಅಕ್ಕಿ, ಹೂ, ಹಿಂಗಾರ, ಬೀಡ, ಚಕ್ಕುಲಿ, ಶೇಂದಿ ಇತ್ಯಾದಿಗಳನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುತ್ತದೆ. ಭಕ್ತಾಧಿಗಳಿಂದ ಅನ್ನದಾನಕ್ಕೆ ಬೇಕಾದ ಅಕ್ಕಿ, ತೆಂಗಿನಕಾಯಿ, ದವಸಧಾನ್ಯಗಳು, ತರಕಾರಿಗಳು, ಬಾಳೆಎಲೆ ಮೊದಲಾದುವುಗಳನ್ನು ಕೃತಜ್ಞತಾಪೂರ್ವಕವಾಗಿ ಶ್ರೀ ಕ್ಷೇತ್ರದಲ್ಲಿ ಸ್ವೀಕರಿಸಲಾಗುತ್ತದೆ. ಹರಕೆಯನ್ನು ಸಲ್ಲಿಸಲು ಆಗಮಿಸುವ ಭಕ್ತಾಧಿಗಳಿಗೆ ಯಾವುದೇ ಬೇಡಿಕೆಗಳನ್ನು ಶ್ರೀ ಕ್ಷೇತ್ರದಲ್ಲಿ ಕೇಳಲಾಗುವುದಿಲ್ಲ. ಭಕ್ತರ ಇಚ್ಚೆಯನುಸಾರ ಕಾಣಿಕೆಯನ್ನು ನೀಡಿದ್ದಲ್ಲಿ ಮಾತ್ರ ಸ್ವೀಕರಿಸಲಾಗುವುದು. ಹೆಚ್ಚಿನ ಮಾಹಿತಿಗೆ ಗಣೇಶ್ ಪೂಜಾರಿ(7349237945), ವಿಶ್ವನಾಥ ಮಣ್ಣಾಪು(7760580714), ದಿನೇಶ್ ಕೆಮ್ಮಿಂಜೆ(7676806506) ನಂಬರಿಗೆ ಸಂಪರ್ಕಿಸಬಹುದಾಗಿದೆ ಎಂದು ಶ್ರೀ ಕ್ಷೇತ್ರದ ಪ್ರಕಟಣೆ ತಿಳಿಸಿದೆ.
5 ಸಾವಿರ ಭಕ್ತರ ಆಗಮನ ನಿರೀಕ್ಷೆ
ಶ್ರೀ ಕ್ಷೇತ್ರದಲ್ಲಿ ವರ್ಷಂಪ್ರತಿ ನಡೆಯುವ ನೇಮೋತ್ಸವವು ಭಕ್ತರ ಆಶೀರ್ವಾದದಿಂದ ಯಶಸ್ವಿಯಾಗಿ ನಡೆದಿದ್ದು ಸರ್ವತ್ರ ಶ್ಲಾಘನೆಗೆ ಪ್ರಾಪ್ತವಾಗಿದೆ. ನೇಮೋತ್ಸವದ ತನಕ ನಡೆದ ಪ್ರತಿಯೊಂದು ಕಾರ್ಯಕ್ರಮವು ಬಹಳ ಅಚ್ಚುಕಟ್ಟಾಗಿ ಹಾಗೂ ಶಿಸ್ತುಬದ್ಧವಾಗಿ ನಡೆದಿರುವ ಹಿಂದೆ ಇಲ್ಲಿನ ಸ್ಥಳೀಯರು ನಿರ್ವಹಿಸಿದ ಕಾರ್ಯವೈಖರಿಯೇ ಕಾರಣವಾಗಿದೆ. ಪ್ರತಿಯೋರ್ವರು ತಮಗೆ ವಹಿಸಿದ ಕಾರ್ಯವನ್ನು ನಿಸ್ಸಂದೇಹವಾಗಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ ಎಂದು ಹೇಳಲು ಹೆಮ್ಮೆಯಾಗುತ್ತದೆ. ಇಲ್ಲಿನ ಮಣ್ಣಾಪು ಕೊರಗಜ್ಜ ಕ್ಷೇತ್ರವು ಜಾತ್ಯಾತೀತವಾಗಿ ಅಭಿವೃದ್ಧಿ ಪಥದಲ್ಲಿ ಸಾಗಲು ಶ್ರೀ ಕೊರಗಜ್ಜರವರೇ ಪ್ರೇರೇಪಣಾ ಶಕ್ತಿಯಾಗಿ ಆಶೀರ್ವದಿಸುತ್ತಿದ್ದಾರೆ. ಈ ಬಾರಿಯ ನೇಮೋತ್ಸವದಲ್ಲಿ ಐದು ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸುವ ನಿರೀಕ್ಷೆಯನ್ನು ಹೊಂದಲಾಗಿದೆ.
-ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಗೌರವಾಧ್ಯಕ್ಷರು, ಶ್ರೀ ಮಣ್ಣಾಪು ಕೊರಗಜ್ಜ ಕ್ಷೇತ್ರ

ಜ.25ರಂದು ವೈಭವದ ನೇಮೋತ್ಸವ..
ಜ.25 ರಂದು ಸೂರ್ಯೋದಯದಿಂದ ಸಂಜೆ ಸೂರ್ಯಾಸ್ತಮಾನದವರೆಗೆ ಅರ್ಧ ಏಕಾಹ ಭಜನೆ, ರಾತ್ರಿ ಕೊರಗಜ್ಜ ದೈವದ ಭಂಡಾರ ತೆಗೆಯುವುದು ಹಾಗೂ ಶ್ರೀ ಕೊರಗಜ್ಜ ದೈವಕ್ಕೆ ಎಣ್ಣೆ ಕೊಡುವುದು, ಶ್ರೀ ಕೊರಗಜ್ಜ ದೈವದ ನೇಮೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಜೈ ಶ್ರೀರಾಂ ಫ್ರೆಂಡ್ಸ್ ಪಂಜಳ ಇವರಿಂದ ‘ಮಾಯೊದ ಮದಿಪು’ ಭಕ್ತಿಗೀತೆ ಬಿಡುಗಡೆಯಾಗಲಿದ್ದು ಜೊತೆಗೆ ಶ್ರೀ ಕ್ಷೇತ್ರದಲ್ಲಿ ಶ್ರಮಿಸಿದವರನ್ನು ಗೌರವಿಸಲಾಗುವುದು. ಬಳಿಕ ಅನ್ನಸಂತರ್ಪಣೆ ಜರಗಲಿದೆ.










