ಕಡಬ ತಾ| ಮಟ್ಟದ ಗಣರಾಜ್ಯೋತ್ಸವ ದಿನಾಚರಣೆ

0

ಸಂವಿಧಾನದ ಆಶಯದಂತೆ ದೇಶದ ಏಕತೆಯನ್ನು ಉಳಿಸೋಣ: ಪ್ರಭಾಕರ ಖಜೂರೆ

ಕಡಬ: ಬಾಬಾ ಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನ ನಮಗೆ ದಾರಿ ದೀಪ, ಅದರ ಆಶಯದಂತೆ ದೇಶದಲ್ಲಿ ಏಕತೆಯನ್ನು ಕಾಪಾಡಿಕೊಂಡು ಬರುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ ಹೇಳಿದರು.

ಅವರು ಜ.೨೬ರಂದು ಕಡಬ ತಾಲೂಕು ಕಚೇರಿಯಲ್ಲಿ ನಡೆದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜವಂಧನೆ ಸ್ವೀಕರಿಸಿ ಬಳಿಕ ಕಡಬ ಸೈಂಟ್ ಆನ್ಸ್ ಶಾಲಾ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಧಾನ ಭಾಷಣ ಮಾಡಿದ ಕಡಬ ಠಾಣಾಧಿಕಾರಿ ಜಂಬೂರಾಜ್ ಮಾತನಾಡಿ, ನಾವು ಸಂವಿಧಾನವನ್ನು ಅನುಸರಿಸಬೇಕಾದರೆ ಅದನ್ನು ಸಂಪೂರ್ಣ ಓದಿ ತಿಳಿದುಕೊಳ್ಳಬೇಕು, ಜಗತ್ತಿನ ಯಾವುದೇ ದೇಶದಲ್ಲಿ ಇಲ್ಲದ ದೊಡ್ಡ ಸಂವಿಧಾನ ನಮ್ಮ ದೇಶದಲ್ಲಿದೆ. ಅದರಲ್ಲಿ ಎಲ್ಲಾ ಜಾತಿ ಧರ್ಮ, ಬಡವ, ಬಲ್ಲಿದ, ಎನ್ನುವ ತಾರತಮ್ಯವಿಲ್ಲದೆ ಎಲ್ಲರಿಗೂ ಗೌರವ ಸಿಗುವ ಅಂಶಗಳಿವೆ, ಇದರಲ್ಲಿ 500ಕ್ಕೂ ಹೆಚ್ಚು ಆರ್ಟಿಕಲ್ ಇದ್ದು, 120ಕ್ಕೂ ಅಧಿಕ ಬಾರಿ ತಿದ್ದುಪಡಿ ಮಾಡಿದರೂ ಸದೃಢವಾಗಿದೆ. ಗ್ರಾಮ ಪಂಚಾಯತ್‌ನಿಂದ ಹಿಡಿದು ರಾಷ್ಟ್ರ ರಾಜಕಾರಣದವರೆಗೆ ಸಂವಿಧಾನದ ಅಡಿಯಲ್ಲೇ ಆಡಳಿತ ನಡೆಸಬೇಕು. ಸಾವಿರ ವರ್ಷವಾದರೂ ಸಂವಿಧಾನ ಸರ್ವಕಾಲಿಕವಾಗಿರುತ್ತದೆ. ಇಂತಹ ಪವಿತ್ರವಾದ ಸಂವಿಧಾನವನ್ನು ಅರಿತು ಎಲ್ಲರೂ ಪಾಲನೆ ಮಡಬೇಕು ಎಂದರು.


ಕಡಬ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಮನ್ನಾ ಜಬಿನ್ ಉದ್ಘಾಟಿಸಿದರು. ಜಿ.ಪಂ.ಮಾಜಿ ಸದಸ್ಯ ಪಿ.ಪಿ. ವರ್ಗೀಸ್, ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್, ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ.ಹನೀಫ್, ಕನ್ನಡ ಸಾಹಿತ್ಯ ಪರಿಷತ್ ಕಡಬ ತಾಲೂಕು ಘಟಕದ ಮಾಜಿ ಅಧ್ಯಕ್ಷ ಜನಾರ್ದನ ಗೌಡ ಪಣೆಮಜಲು ಮಾತನಾಡಿದರು. ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೀಲಾವತಿ ಇ., ಸದಸ್ಯರಾದ ಅಕ್ಷತಾ ಬಾಲಕೃಷ್ಣ, ರೋಹಿತ್ ಪಣೆಮಜಲು, ಮೋಹನ್, ದಯನಂದ ಪೊಯ್ಯೆತಡ್ಡ, ಕಡಬ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಿನ್ಸಿಪಾಲ್ ದೇವರಾಜ್, ಹೈಸ್ಕೂಲ್ ವಿಭಾಗದ ವೈಸ್ ಪ್ರಿನ್ಸಿಪಾಲ್ ಡಾ|ವೇದಾವತಿ, ಸೈಂಟ್ ಆನ್ಸ್ ಶಾಲಾ ಮುಖ್ಯಸ್ಥ ಫಾ|ಸುನಿಲ್ ಪ್ರವೀಣ್ ಪಿಂಟೋ, ಕಡಬ ತಾಲೂಕು ಕಚೇರಿ ಶಿರಸ್ತೇದಾರ್ ಶಾಯದುಲ್ಲಾಖಾನ್ ಮತ್ತಿತರರು ಉಪಸ್ಥಿತರಿದ್ದರು.


ಈ ಸಂದರ್ಭದಲ್ಲಿ ನಿವೃತ್ತ ಯೋಧ ಜೆ.ಪಿ.ಎಂ.ಚೆರಿಯನ್, ನಿವೃತ್ತ ಶಿಕ್ಷಕ ಶಿವರಾಮ ಗೌಡ ಕೋಡಿಂಬಾಳ, ನಿವೃತ್ತ ಪೊಲೀಸ್ ಅಧಿಕಾರಿ ದಾಮೋದರ ಕೆ., ಅಂಗನವಾಡಿ ಕಾರ್ಯಕರ್ತೆಯರಾದ ರೋಹಿಣಿ ಬಿಳಿನೆಲೆ, ಪಾರ್ವತಿ ನೆಲ್ಯಾಡಿ, ಆಶಾ ಕಾರ್ಯಕರ್ತೆ ಸುಚೇತ ಹಾಗೂ ಕ್ರೀಡಾ ಕ್ಷೇತ್ರದ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಕಡಬ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರೈತ ಗೀತೆ ಹಾಡಿದರು. ಉಪತಹಸೀಲ್ದಾರ್ ಗೋಪಾಲ್ ಕಲ್ಲುಗುಡ್ಡೆ ಸ್ವಾಗತಿಸಿದರು. ಹರೀಶ್ ಬೆದ್ರಾಜೆ ವಂದಿಸಿದರು. ಕಡಬ ತಾಲೂಕು ಯುವಜನ ಒಕ್ಕೂಟದ ಅಧ್ಯಕ್ಷ ಶಿವಪ್ರಸಾದ್ ರೈ ಮೈಲೇರಿ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here