ರಾಮಕುಂಜ: ಗುಂಡೇಟಿನಿಂದ ಬಾಲಕನ ಸಾವು ಪ್ರಕರಣ :ವೈದ್ಯಕೀಯ ವರದಿಗಾಗಿ ಕಾಯುತ್ತಿರುವ ಪೊಲೀಸ್ ಇಲಾಖೆ

0

ರಾಮಕುಂಜ: ಆರು ದಿನದ ಹಿಂದೆ ಇಲ್ಲಿನ ಪಾದೆ ಎಂಬಲ್ಲಿ ಬಂದೂಕಿನ ಗುಂಡು ಸಿಡಿದು ಬಾಲಕ ಮೃತಪಟ್ಟ ಹಾಗೂ ಆತನ ತಂದೆ ಗಾಯಗೊಂಡ ಪ್ರಕರಣದ ಕುರಿತಂತೆ ಗಾಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿ ಹಾಗೂ ಮರಣೋತ್ತರ ಪರೀಕ್ಷಾ ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.


ಜ.24ರಂದು ಸಂಜೆ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ಬಾಲಕ ಮೋಕ್ಷ್ (17ವ.)ಬಂದೂಕಿನಿಂದ ಸಿಡಿದ ಗುಂಡಿಗೆ ಮೃತಪಟ್ಟು ಹಾಗೂ ಆತನ ತಂದೆ ವಸಂತ ಅಮೀನ್(55ವ.) ಅವರು ಗಾಯಗೊಂಡ ಸ್ಥಿತಿಯಲ್ಲಿ ಅವರ ಮನೆಯಲ್ಲಿದ್ದರು. ಘಟನೆ ಕುರಿತಂತೆ ಸ್ನೇಹಿತರೊಬ್ಬರಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದ ವಸಂತ ಅಮೀನ್ ಅವರು ಪುತ್ರ ಚಾಕುವಿನಿಂದ ಇರಿದು ಗಾಯಗೊಳಿಸಿ ಬಂದೂಕಿನಿಂದ ಗುಂಡು ಹಾರಿಸಿಕೊಂಡಿರುವುದಾಗಿ ತಿಳಿಸಿದ್ದರು. ಸ್ಥಳಕ್ಕೆ ಬಂದಿದ್ದ ಪೊಲೀಸರಿಗೂ ಇದೇ ಮಾಹಿತಿ ನೀಡಿದ್ದರು. ಗಂಭೀರ ಗಾಯಗೊಂಡಿದ್ದ ವಸಂತ ಅಮೀನ್‌ರನ್ನು ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು. ಘಟನೆ ವೇಳೆ ಪೆರ್ಲದ ತಾಯಿ ಮನೆಯಲ್ಲಿದ್ದ ವಸಂತ ಅಮೀನ್ ಅವರ ಪತ್ನಿ ಜಯಶ್ರೀ ಹಾಗೂ ಸಹೋದರರು ರಾತ್ರಿ ಘಟನಾ ಸ್ಥಳವಾದ ರಾಮಕುಂಜ ಗ್ರಾಮದ ಪಾದೆ ಮನೆಗೆ ಬಂದಿದ್ದು, ಮೋಕ್ಷ್‌ನನ್ನು ತಂದೆ ವಸಂತ ಅಮೀನ್ ಅವರೇ ಕೊಲೆ ನಡೆಸಿರುವುದಾಗಿ ಆರೋಪಿಸಿ ಕಡಬ ಪೊಲೀಸರಿಗೆ ದೂರು ಸಹ ನೀಡಿದ್ದರು. ಈ ಮಧ್ಯೆ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ವಸಂತ ಅಮೀನ್‌ರವರ ದೇಹದಲ್ಲೂ ಬಂದೂಕಿನ ಗುಂಡುಗಳು ಪತ್ತೆಯಾಗಿವೆ ಎಂದು ಹೇಳಲಾಗಿದ್ದು ಪೊಲೀಸರಿಗೂ ಈ ಪ್ರಕರಣ ಕಗ್ಗಂಟಾಗಿ ಪರಿಣಮಿಸಿದೆ. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಮುಂದಿನ ಪ್ರಕ್ರಿಯೆಗಾಗಿ ಪೊಲೀಸ್ ಇಲಾಖೆಯೂ ವೈದ್ಯಕೀಯ ವರದಿಗಾಗಿ ಕಾಯುತ್ತಿರುವುದಾಗಿ ವರದಿಯಾಗಿದೆ.

ವರದಿ ಬಂದ ಬಳಿಕ ಹೆಚ್ಚಿನ ಮಾಹಿತಿ;
ಕುಟುಂಬ ಕಲಹದ ಹಿನ್ನೆಲೆಯಲ್ಲಿ ಬಾಲಕ ಮೋಕ್ಷ್ ಮನೆಯೊಳಗೆ ತಂದೆ ವಸಂತ್ ಅಮೀನ್‌ರವರ ಹೊಟ್ಟೆ ಭಾಗಕ್ಕೆ ಚಾಕುವಿನಿಂದ ಇರಿದಿದ್ದು ಗಾಯಗೊಂಡ ತಂದೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಂತರ ಬಾಲಕ ತನ್ನ ತಂದೆಯ ಹೆಸರಿನಲ್ಲಿ ಪರವಾನಗಿ ಹೊಂದಿರುವ ಬಂದೂಕಿನಿಂದ ತನ್ನ ಮುಖಕ್ಕೆ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಮೃತಪಟ್ಟಿರುತ್ತಾನೆ ಎಂದು ಘಟನಾ ದಿನವಾದ ಜ.24ರಂದು ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದರು. ಇದೀಗ ಗಾಯಕ್ಕೆ ಸಂಬಂಧಿಸಿದ ವೈದ್ಯಕೀಯ ವರದಿ ಮತ್ತು ಮರಣೋತ್ತರ ಪರೀಕ್ಷಾ ವರದಿ ಬರಲು ಬಾಕಿಯಿದ್ದು, ಬಂದ ನಂತರ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಪೊಲೀಸ್ ಇಲಾಖೆ ಪ್ರಕಟಣೆ ನೀಡಿದೆ. ಇದರಿಂದಾಗಿ ಘಟನೆಯ ಸತ್ಯಾಸತ್ಯತೆ ತಿಳಿಯಲು ಇನ್ನಷ್ಟು ದಿನ ಕಾಯಬೇಕಾಗಿದೆ.

LEAVE A REPLY

Please enter your comment!
Please enter your name here