ಕೆದಂಬಾಡಿ ಗ್ರಾಮದಲ್ಲಿ ವಿಕಲಚೇತನರ ವಿಶೇಷ ಗ್ರಾಮ ಸಭೆ

0


ಪುತ್ತೂರು: ಕೆದಂಬಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ 2025–26ನೇ ಸಾಲಿನ ವಿಕಲಚೇತನರ ವಿಶೇಷ ಗ್ರಾಮ ಸಭೆ ಜ.30ರಂದು ನಡೆಯಿತು. ಸಭೆಯನ್ನು ಅಧ್ಯಕ್ಷರಾದ ಸುಜಾತಾ ಎನ್. ಅವರ ಅಧ್ಯಕ್ಷತೆಯಲ್ಲಿ ನಾಡಗೀತೆಯೊಂದಿಗೆ ಉದ್ಘಾಟಿಸಲಾಯಿತು.


ಸಭೆಯಲ್ಲಿ ಉಪಾಧ್ಯಕ್ಷೆ ಜಯಲಕ್ಷ್ಮಿ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಾವಣ್ಯ ಪಿ., ಕಾರ್ಯದರ್ಶಿ ಸುರೇಂದ್ರ ರೈ ಇ., ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮೆಲ್ವಿನ್ ಮೊಂತೆರೋ, ವಿಠಲ್ ರೈ ಸೇರಿದಂತೆ ಸರ್ವ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ ಇ. ಸ್ವಾಗತಿಸಿ ನಿರೂಪಿಸಿದರು.


ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪುತ್ತೂರು ತಾಲ್ಲೂಕು ಪಂಚಾಯತ್ ವಿಶೇಷ ಚೇತನರ ವಿವಿದೋದ್ದೇಶ ಪುನರ್ವಸತಿ ಕಾರ್ಯಕರ್ತ ನವೀನ್ ಕುಮಾರ್ ಅವರು, ವಿಕಲಚೇತನರ ವಿಶೇಷ ಗ್ರಾಮ ಸಭೆಯ ಉದ್ದೇಶ ಹಾಗೂ 21 ವಿಧದ ವಿಕಲತೆಗಳ ಕುರಿತು ವಿವರಿಸಿದರು. ಗ್ರಾಮ ಪಂಚಾಯತ್ ಅರಿವು ಕೇಂದ್ರ ಹಾಗೂ ಗ್ರಂಥಾಲಯಗಳಲ್ಲಿ ಲಭ್ಯವಿರುವ ಸಹಾಯಕ ಸಾಧನಗಳು, ದೃಷ್ಟಿಹೀನರಿಗೆ ಉಪಯೋಗವಾಗುವ ಬ್ರೈಲ್ ಲಿಪಿ, ಅಬಾಕಸ್, ಹಾವು-ಏಣಿ ಸೇರಿದಂತೆ ಬ್ರೈಲ್ ಪುಸ್ತಕಗಳ ಬಳಕೆಯ ಕುರಿತು ಮಾಹಿತಿ ನೀಡಿದರು.


ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಕಲಚೇತನರ ಇಲಾಖೆಯ ವಿವಿಧ ಯೋಜನೆಗಳು, ಯುಡಿಐಡಿ (ವಿಶಿಷ್ಟ ಗುರುತು ಚೀಟಿ), ಪಿಂಚಣಿ ಸೌಲಭ್ಯಗಳು, ಉಚಿತ ಬಸ್ ಪಾಸ್, ನಿರುದ್ಯೋಗ ಭತ್ಯೆ, ಆರೈಕೆದಾರರ ಪಿಂಚಣಿ, ಟೆಲಿ ಮನಸ್ 14416 ಸಹಾಯವಾಣಿ, ಹಿರಿಯ ನಾಗರಿಕರ ಪಾಲನೆ-ಪೋಷಣೆ ಕಾಯ್ದೆ 2007, ಹಾಗೂ ಯೋಗಕ್ಷೇಮ ಆರೋಗ್ಯ ಘಟಕದ ಸೇವೆಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.
ಸಭೆಯ ಸಂದರ್ಭದಲ್ಲಿ ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹುತಾತ್ಮರಾದವರ ಸ್ಮರಣಾರ್ಥ ಒಂದು ನಿಮಿಷ ಮೌನ ಪ್ರಾರ್ಥನೆ ನಡೆಸಲಾಯಿತು. ಕಾರ್ಯಕ್ರಮಕ್ಕೆ ಗ್ರಾಮ ಪಂಚಾಯತ್ ಸಿಬ್ಬಂದಿ, ಗ್ರಾಮೀಣ ಪುನರ್ವಸತಿ ಕಾರ್ಯಕರ್ತೆ ಪವಿತ್ರಾ, ಆಶಾ ಕಾರ್ಯಕರ್ತರು, ಶಾಲಾ ಮುಖ್ಯ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಕೇಂದ್ರದ ಅಧಿಕಾರಿಗಳು, ವಿಕಲಚೇತನರು ಮತ್ತು ಅವರ ಪೋಷಕರು, ಸಂಜೀವಿನಿ ಒಕ್ಕೂಟದ ಸದಸ್ಯರು ಸೇರಿದಂತೆ ಹಲವರು ಭಾಗವಹಿಸಿದ್ದರು.
ಪಂಚಾಯತ್ ಕಾರ್ಯದರ್ಶಿ ಸುರೇಂದ್ರ ರೈ ಇ. ಅವರು 5% ವಿಕಲಚೇತನರ ಕಲ್ಯಾಣ ನಿಧಿಯ ಕುರಿತು ಮಾಹಿತಿ ನೀಡಿ ವಂದಿಸಿದರು.

LEAVE A REPLY

Please enter your comment!
Please enter your name here