






ಉಪ್ಪಿನಂಗಡಿ: ಗ್ರಾಮ ಪಂಚಾಯತ್ ನಡೆಸಿದ ಕಾಮಗಾರಿಗಳಲ್ಲಿ ಗೋಲ್ಮಾಲ್ ನಡೆದಿದೆ ಎಂಬ ಗ್ರಾಮಸ್ಥರೋರ್ವರ ಆರೋಪವು ಸ್ವಲ್ಪ ಮಟ್ಟಿನ ಕೋಲಾಹಲಕ್ಕೆ ಕಾರಣವಾದ ಘಟನೆ ಜ.31ರಂದು ನಡೆದ ಗೋಳಿತ್ತೊಟ್ಟು ಗ್ರಾ.ಪಂ. ಗ್ರಾಮ ಸಭೆಯಲ್ಲಿ ನಡೆದಿದೆ.



ಗ್ರಾ.ಪಂ. ಅಧ್ಯಕ್ಷೆ ಸವಿತಾ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಚಂದ್ರಾವತಿ ಎನ್. ಅವರು ವರದಿ ಮಂಡಿಸಿದ ಬಳಿಕ ನೋಡಲ್ ಅಧಿಕಾರಿಯಾಗಿದ್ದ ಕಡಬ ತಾಲೂಕು ಪಂಚಾಯತ್ನ ಸಹಾಯಕ ನಿರ್ದೇಶಕ ಸಂದೇಶ್ ಅವರು ವರದಿ ಬಗ್ಗೆ ಪ್ರಶ್ನೆಗಳಿದ್ದರೆ ಕೇಳಿ ಎಂದರು. ಆಗ ಗ್ರಾಮಸ್ಥ ರಘುನಾಥ ಆಲಂತಾಯ ಮಾತನಾಡಿ, ಜಿ.ಪಂ. ಎಂಜಿನಿಯರ್ ಅವರು ಸಭೆಗೆ ಹಾಜರಾಗಿಲ್ಲ. ನಮಗೆ ಅವರಲ್ಲಿ ಕೇಳಲು ಪ್ರಶ್ನೆಗಳಿತ್ತು ಎಂದರು. ಅದಕ್ಕೆ ನೋಡಲ್ ಅಧಿಕಾರಿ ಸಂದೇಶ್ ಉತ್ತರಿಸಿ ಅವರು ಬರಬಹುದು. ನೀವು ಇತರೆ ವಿಷಯ ಮಾತನಾಡಿ ಪ್ರಶ್ನೆಗಳಿಲ್ಲದಿದ್ದರೆ ವರದಿಗೆ ಅನುಮೋದನೆ ಕೊಡಿ ಎಂದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರಘುನಾಥ, ನಮ್ಮ ಪ್ರಶ್ನೆಗೆ ಉತ್ತರ ನೀಡಲು ಅಧಿಕಾರಿಯೇ ಇಲ್ಲದಿದ್ದರೆ ನಾವು ಯಾರಲ್ಲಿ ಮಾತನಾಡುವುದು. ಇಲ್ಲಿ ಕಾಮಗಾರಿಗಳಲ್ಲಿ ಗೋಲ್ಮಾಲ್ ನಡೆದಿದೆ ಎಂದು ಆರೋಪಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾ.ಪಂ. ಸದಸ್ಯ ಜನಾರ್ದನ ಗೌಡ ಅವರು, ಸುಮ್ಮನೇ ಗೋಲ್ಮಾಲ್ ಆಗಿದೆ ಅನ್ನಬೇಡಿ. ಎಲ್ಲಿ ಆಗಿದೆ ಅದನ್ನು ಸಾಬೀತು ಪಡಿಸಿ ಎಂದರು. ಇದು ಸದಸ್ಯರು ಹಾಗೂ ಗ್ರಾಮಸ್ಥರ ಮಧ್ಯೆ ಸ್ವಲ್ಪ ಮಟ್ಟಿಗೆ ಪರ-ವಿರೋಧದ ಚರ್ಚೆಗೆ ಕಾರಣವಾಯಿತು. ಗ್ರಾಮಸ್ಥ ರಘುನಾಥ ಅವರು ಬೇರೊಂದು ವಾರ್ಡ್ನ ಕಾಮಗಾರಿಯ ಬಗ್ಗೆ ವಿಚಾರಿಸಿದಾಗ ಮಧ್ಯ ಪ್ರವೇಶಿಸಿ ಮಾತನಾಡಿದ ಸದಸ್ಯ ಜನಾರ್ದನ, ನೀವು ನಿಮ್ಮ ವಾರ್ಡ್ನ ಬಗ್ಗೆ ಕೇಳಿ ಎಂದರು. ಅದಕ್ಕೆ ವಿರೋಧ ವ್ಯಕ್ತಪಡಿಸಿ ಮಾತನಾಡಿದ ರಘುನಾಥ, ಇದು ಮೂರು ಗ್ರಾಮಗಳಿಗೆ ಸಂಬಂಧಿಸಿದ ಗ್ರಾಮ ಸಭೆ. ಗ್ರಾಮ ಸಭೆಯಲ್ಲಿ ನಮ್ಮ ಪ್ರಶ್ನೆಗಳನ್ನು ತಡೆಯುವ ಅಧಿಕಾರ ನಿಮಗಿಲ್ಲ. ಇದು ಗ್ರಾಮಸ್ಥರಿಗಿದ್ದ ಗ್ರಾಮ ಸಭೆ ಎಂದು ಖಡಕ್ಕಾಗಿಯೇ ಉತ್ತರಿಸಿದರು.



ಆಲಂತಾಯ, ಕೊಣಾಲು, ಗೋಳಿತ್ತೊಟ್ಟು ಗ್ರಾಮದ ದಾರಿ ದೀಪ ದುರಸ್ತಿಗೆ 23,570 ರೂ. ಬಿಲ್ ಮಾಡಲಾಗಿದೆ. ಇಷ್ಟೊಂದು ಮೊತ್ತದಲ್ಲಿ ಏನು ಮಾಡಲಾಗಿದೆ ಎಂದು ರಘುನಾಥ ಆಲಂತಾಯ ಪ್ರಶ್ನಿಸಿದರು. ಅದಕ್ಕೆ ಗ್ರಾ.ಪಂ. ಪಿಡಿಒ ಚಂದ್ರಾವತಿ ಉತ್ತರಿಸಿ, ಅದರಲ್ಲೇ ವಿದ್ಯುತ್ ದೀಪ ಖರೀದಿಯ ಲೆಕ್ಕ ಕೊಡಲಾಗಿದೆ ನೋಡಿ ಎಂದರು. ಆಗ ರಘುನಾಥ ಮಾತನಾಡಿ, 24 ವೋಲ್ಟ್ನ 35 ಬಲ್ಭ್ ಖರೀದಿಗೆ 15,750 ರೂ. ಲೆಕ್ಕ ತೋರಿಸಲಾಗಿದೆ. ಅದರ ಖರ್ಚನ್ನೂ ಇಲ್ಲಿ ಬೇರೆಯೇ ತೋರಿಸಲಾಗಿದೆ. ವಿದ್ಯುತ್ ದೀಪಗಳ ಖರೀದಿಗೆ 15,750 ರೂ. ಖರ್ಚಾದರೆ ಹಾಗಾದರೆ 23,570 ರೂ. ಯಾಕಾಗಿ ಖರ್ಚು ಮಾಡಿದ್ದು ಎಂದು ಪ್ರಶ್ನಿಸಿದರು. ಆಗ ಪಿಡಿಒ ಚಂದ್ರಾವತಿ ಅವರು, ಅದು ಬಲ್ಭ್ ಸಿಕ್ಕಿಸಲು ಎಂದು ಸಮಾಜಾಷಿಕೆ ನೀಡಿದರು. ಅದಕ್ಕೆ ರಘುನಾಥ ಅವರು ಕೇವಲ 35 ಬಲ್ಭ್ ಸಿಕ್ಕಿಸಲು ಇಷ್ಟೊಂದು ಹಣವಾ ಎಂದು ಮರು ಪ್ರಶ್ನಿಸಿದರು. ಅದಕ್ಕೆ ಪಿಡಿಒ ಚಂದ್ರಾವತಿ, ಅದರಲ್ಲಿ ಕೆಲವೊಂದು ದುರಸ್ತಿಯೂ ಇತ್ತು. ಕೆಲವು ಕಡೆಗಳಲ್ಲಿ ಬಲ್ಫ್ ಸಿಕ್ಕಿಸುವ ಹೋಲ್ಡರ್ಗಳು ಹೋಗಿತ್ತು ಎಂದರು. ಅಷ್ಟಕ್ಕೆ ಸುಮ್ಮನಾಗದ ರಘುನಾಥ, ಹೋಲ್ಡರ್ ಸೇರಿದಂತೆ ಇನ್ನಿತರ ಸಾಮಗ್ರಿ ಖರೀದಿಗಳ ಬಿಲ್ ತೋರಿಸಿ ಎಂದರು. ಅದಕ್ಕೆ ಪಿಡಿಒ ಚಂದ್ರಾವತಿ, ಅದು ಗ್ರಾಮ ಸಭೆಯಲ್ಲಿ ತೋರಿಸಲು ಸಾಧ್ಯವಿಲ್ಲ. ಗ್ರಾಮ ಸಭೆ ಮುಗಿದ ಬಳಿಕ ಕಚೇರಿ ಅವಧಿಯಲ್ಲಿ ಬನ್ನಿ ಆಗ ತೋರಿಸುತ್ತೇನೆ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ನೋಡಲ್ ಅಧಿಕಾರಿ ಸಂದೇಶ್ ಅವರು, ದಾಖಲೆಗಳನ್ನು ಹಾಗೆಲ್ಲಾ ಕೊಡಲು ಆಗುವುದಿಲ್ಲ. ಅದಕ್ಕೆ ಕೆಲವೊಂದು ನಿಯಮಾವಳಿಗಳಿವೆ. ದಾಖಲೆ ಬೇಕಾದರೆ ಮಾಹಿತಿ ಹಕ್ಕಿನಲ್ಲಿ ಕೇಳಿ ಎಂದರು. ಸಭೆ ಅಜೆಂಡಾ ಪ್ರಕಾರನೇ ಸಾಗಬೇಕಾಗುತ್ತೆ. ನೀವು ವರದಿ ಮೇಲೆ ಏನಾದರೂ ಪ್ರಶ್ನೆಗಳಿದ್ದರೆ ಕೇಳಿ. ಇಲ್ಲದಿದ್ದಲ್ಲಿ ಚಪ್ಪಾಳೆ ಮೂಲಕ ಅನುಮೋದನೆ ನೀಡಿ ಎಂದರು. ಆಗ ಆಕ್ರೋಶಿತರಾಗಿಯೇ ಮಾತನಾಡಿದ ರಘುನಾಥರವರು, ನೀವು ಬೇಗ ಸಭೆ ಮುಗಿಸಿ ಹೋಗಲು ಬಂದಿದ್ದಾ? ನಾನು ಆಗದಿಂದ ಗಮನಿಸುತ್ತಿದ್ದೇನೆ. ನೀವು ವರದಿ ಅನುಮೋದನೆಗೆ ಒತ್ತಾಯಿಸುತ್ತಿದ್ದೀರಿ ಎಂದು ಆರೋಪಿಸಿದರಲ್ಲದೆ, ನಮ್ಮ ಪ್ರಶ್ನೆಗಳಿಗೆ ಸಮರ್ಪಕ ಉತ್ತರಬೇಕು. ಈಗ ಈ ಬಿಲ್ನ ವಿಷಯದಲ್ಲಿ ನಮಗೆ ಸಂಶಯವಿದೆ. ಆದರೆ ಅದನ್ನು ನೀವು ಗ್ರಾಮ ಸಭೆಯಲ್ಲಿ ತೋರಿಸಲು ರೆಡಿ ಇಲ್ಲವಾದರೆ ಮತ್ತೆ ವರದಿಗೆ ಅನುಮೋದನೆ ನೀಡುವುದಾದರೂ ಹೇಗೆ ಎಂದರು. ಈ ಬಗ್ಗೆ ಕೆಲಕಾಲ ಚರ್ಚೆ ನಡೆಯಿತು. ಆದರೂ ರಘುನಾಥ ಅವರು ಬಿಲ್ಗಾಗಿ ಪಟ್ಟು ಹಿಡಿದರೂ ಅಧಿಕಾರಿಗಳು ತಮ್ಮ ಪಟ್ಟು ಸಡಿಸುವುದು ಕಂಡು ಬರಲಿಲ್ಲ. ಇದರ ನಡುವೆಯೇ ಸಭೆ ಬೇರೆ ಪ್ರಶ್ನೆಗಳತ್ತ ಹೋಯಿತು.
ಸಭೆಯ ಆರಂಭದಲ್ಲಿಯೇ ಗ್ರಾಮಸ್ಥ ಅಬ್ದುಲ್ ಕುಂಞಿ ಮಾತನಾಡಿ, ನಾನು ಈ ಬಾರಿಯ ಸಭೆಗೆ ಎಲ್ಲಾ ಅಧಿಕಾರಿಗಳು ಹಾಜರಿರಬೇಕು ಎಂದು ಅರ್ಜಿ ನೀಡಿದ್ದೆ. ಎಲ್ಲಾ ಇಲಾಖೆಯ ಅಧಿಕಾರಿಗಳು ಬಂದಿದ್ದಾರ ಎಂದರು. ಆಗ ಪಿಡಿಒ ಚಂದ್ರಾವತಿಯವರು ಜಿ.ಪಂ. ಎಂಜಿನಿಯರ್ ಬಂದಿಲ್ಲ ಎಂದರು. ಅದಕ್ಕೆ ಅಬ್ದುಲ್ ಕುಂಞಿ, ಅವರಿಗೆ ಇನ್ನು ಫೋನ್ ಮಾಡಬೇಡಿ. ಇಲಾಖಾಧಿಕಾರಿಗಳು ಇಲ್ಲದೆ ಸಭೆ ನಡೆಸಬೇಡಿ. ಸಭೆಯನ್ನು ಮುಂದೂಡೋಣ. ಇಲ್ಲಿ ಪ್ರತಿ ಸಾರಿಯೂ ಹಾಗೆ. ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲು ಅಧಿಕಾರಿಗಳೇ ಇರುವುದಿಲ್ಲ. ಕಾಟಾಚಾರಕ್ಕೆ ಸಭೆ ನಡೆಸಲಾಗುತ್ತದೆ ಎಂದರು. ಅದಕ್ಕೆ ನೋಡಲ್ ಅಧಿಕಾರಿ ಸಂದೇಶ್ ಉತ್ತರಿಸಿ, ಗ್ರಾಮ ಸಭೆಗೆ ಗ್ರಾಮ ಮಟ್ಟದ ಅಧಿಕಾರಿಗಳು ಬರಬೇಕಾಗಿರುವುದು. ಅವರೆಲ್ಲಾ ಬಂದಿದ್ದಾರೆ. ಇವತ್ತು ಪುತ್ತೂರಿನಲ್ಲಿ ನ್ಯಾಯಾಲಯ ಉದ್ಘಾಟನೆ ಇರುವ ಕಾರಣ ತಾಲೂಕು ಮಟ್ಟದ ಹೆಚ್ಚಿನ ಅಧಿಕಾರಿಗಳು ಅಲ್ಲಿಗೆ ಹೋಗಿದ್ದಾರೆ ಎಂದರು. ಎಂಜಿನಿಯರ್ ಅವರು ಸಭೆಗೆ ಬರಲೇ ಬೇಕು ಎಂಬ ಒತ್ತಡ ಗ್ರಾಮಸ್ಥರಿಂದ ಹೆಚ್ಚಾದಾಗ ಈಗ ಸಭೆ ಮುಂದುವರಿಸೋಣ. ಆಗ ಅವರು ಬರಬಹುದು ಎಂದರು.
ಕಳೆದ ಗ್ರಾಮ ಸಭೆಯಲ್ಲಿ ಹಾಗೂ ವಾರ್ಡ್ ಸಭೆಯಲ್ಲಿ ನಾವು ಮಾಡಿದ ನಿರ್ಣಯ, ಕಾಮಗಾರಿ ಬೇಡಿಕೆಗಳು ಎಷ್ಟು ಅಂಗೀಕಾರಗೊಂಡಿವೆ ಎಂಬ ಬಗ್ಗೆ ನಮಗೆ ಮಾಹಿತಿ ಬೇಕು. ಅದನ್ನು ಸಭೆಯಲ್ಲಿ ಓದಿ ಹೇಳಿ ಎಂದು ಅಬ್ದುಲ್ ಕುಂಞಿ ಹೇಳಿದರು. ಅದಕ್ಕೆ ನೋಡಲ್ ಅಧಿಕಾರಿ ಸಂದೇಶ್ ಅವರು ಕಾರ್ಯಸೂಚಿಯಂತೆ ಸಭೆ ಮುಂದುವರಿಯಲಿ. ವರದಿಗೆ ಅನುಮೋದನೆ ನೀಡಿದ ಬಳಿಕ ಅದನ್ನು ಸಭೆಗೆ ಓದಿ ಹೇಳಲಾಗುವುದು ಎಂದರು. ಅದಕ್ಕೆ ತೀವೃ ಆಕ್ಷೇಪ ವ್ಯಕ್ತಪಡಿಸಿದ ಅಬ್ದುಲ್ ಕುಂಞಿ, ನಮ್ಮ ನಿರ್ಣಯಕ್ಕೆ ಇಲ್ಲಿ ಬೆಲೆನೇ ಇಲ್ಲ. ನಾನು ಬೇಡಿಕೆ ಇಟ್ಟ ಕಾಮಗಾರಿಗಳು ಇಲ್ಲಿ ನಡೆಯುವುದೇ ಇಲ್ಲ. ಸದಸ್ಯರಿಗೆ ಇಷ್ಟ ಬಂದ ಕಡೆ ಕಾಮಗಾರಿ ನಡೆಸುತ್ತಾರೆ ಎಂದರು. ಆಗ ಗ್ರಾ.ಪಂ. ಉಪಾಧ್ಯಕ್ಷ ಕೆ. ಬಾಬು ಪೂಜಾರಿ ಮಾತನಾಡಿ, ನಮಗೆ ಎಲ್ಲಿಗೆ ಎಷ್ಟು ಅನುದಾನ ಇಡಬೇಕೆಂದು ಗೊತ್ತು ಎಂದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗ್ರಾಮಸ್ಥರು, ನೀವು ಹಾಗೆ ಹೇಳುವುದಾದರೆ ಗ್ರಾಮ ಸಭೆ ಯಾಕೆ ಎಂದು ಪ್ರಶ್ನಿಸಿದರು.
ಗ್ರಾಮಸ್ಥೆ ಆಯಿಷಾ ಮಾತನಾಡಿ, ಗ್ರಾಮ ಸಭೆಯಲ್ಲಿ ರಸ್ತೆ, ವಿದ್ಯುತ್, ನೀರಿನ ಚರ್ಚೆ ಮಾತ್ರ ಆಗುತ್ತಿದೆ. ಆದರೆ ಕಳೆದ 30ಕ್ಕೂ ಅಧಿಕ ವರ್ಷದಿಂದ ನಾವು ನಿವೇಶನಕ್ಕಾಗಿ ಬೇಡಿಕೆ ಇಡುತ್ತಿದ್ದೇವೆ. 2012ರಲ್ಲಿ ನಮಗೆ ಹಕ್ಕು ಪತ್ರ ಸಿಕ್ಕಿದೆ. ಹಕ್ಕು ಪತ್ರ ಸಿಕ್ಕಿದರೂ ಅದಕ್ಕೆ ಆರ್ಟಿಸಿ ಸಿಕ್ಕಿಲ್ಲ. ಆ ಜಾಗ ಕೂಡಾ ನಿರ್ಜನ ಪ್ರದೇಶವಾಗಿದ್ದು, ಸರಿಯಾದ ಕಡೆ ನಿವೇಶನ ನೀಡಲು ಗ್ರಾ.ಪಂ.ಗೆ ಸಾಧ್ಯವಾಗಿಲ್ಲ ಎಂದರಲ್ಲದೆ, ಬಡವರು ಸರಕಾರಿ ಜಾಗದಲ್ಲಿ ಮನೆ ಕಟ್ಟಲು ಮುಂದಾದರೆ ಅದಕ್ಕೆ ಗ್ರಾ.ಪಂ. ಮತ್ತು ಅರಣ್ಯ ಇಲಾಖೆಗಳು ಅಡ್ಡಿ ಪಡಿಸಿ, ಅದನ್ನು ತೆರವು ಮಾಡುತ್ತವೆ. ಆದರೆ ಬೇಕಾದಷ್ಟು ಜಮೀನು ಇದ್ದ ಶ್ರೀಮಂತರು ಸರಕಾರಿ ಜಾಗ ಒತ್ತುವರಿ ಮಾಡಿದರೆ ಎಲ್ಲಾ ಇಲಾಖೆಗಳು ಕಣ್ಮುಚ್ಚಿ ಕೂತುಕೊಳ್ಳುತ್ತವೆ ಎಂದು ಆರೋಪಿಸಿದರು. ಇದಕ್ಕೆ ಪೂರಕವಾಗಿ ಗ್ರಾಮಸ್ಥ ಅಬ್ದುಲ್ ನಾಸೀರ್ ಮಾತನಾಡಿ, ಗೋಳಿತ್ತೊಟ್ಟು ಗ್ರಾ.ಪಂ.ನಲ್ಲಿ ಬೇಕಾದಷ್ಟು ಸರಕಾರಿ ಜಾಗ ಇದೆ. ಆದರೆ ಅದನ್ನು ಅರಣ್ಯ ಇಲಾಖೆ ಒತ್ತುವರಿ ಮಾಡಿಕೊಂಡಿದೆ ಎಂದರಲ್ಲದೆ, ಗ್ರಾ.ಪಂ. ಇಲ್ಲಿರುವ ಸರಕಾರಿ ಭೂಮಿಗೆ ಬೇಲಿ ಹಾಕಿ. ನಿಮ್ಮ ಬೆಂಬಲಕ್ಕೆ ನಾವಿದ್ದೇವೆ. ಅರಣ್ಯ ಇಲಾಖೆಯವರು ತೆರವಿಗೆ ಬಂದರೆ ಜಂಟಿ ಸರ್ವೇಯ ಮಾಡಿಸಿ. ಅರಣ್ಯ ಇಲಾಖೆಯವರು ಇದಕ್ಕೆ ಸರಿಯಾದ ದಾಖಲೆ ತೋರಿಸಲಿ ಎಂದರು.
ಗೋಳಿತ್ತೊಟ್ಟು ಗ್ರಾಮ ತೀರಾ ಹಿಂದುಳಿದಿದೆ. ಇದಕ್ಕೆ ಸದಸ್ಯರಲ್ಲಿರುವ ಇಚ್ಛಾಶಕ್ತಿಯ ಕೊರತೆಯೇ ಕಾರಣ. ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರಿಂದ ಅನುದಾನ ತರಿಸಿಕೊಳ್ಳುವ ಕೆಲಸವನ್ನು ಇಲ್ಲಿನ ಸದಸ್ಯರು ಮಾಡುತ್ತಿಲ್ಲ ಎಂಬ ಆರೋಪವೂ ಈ ಸಂದರ್ಭ ಕೇಳಿ ಬಂತು.
ಕೊಣಾಲುವಿಗೆ ಪಬ್ಲಿಕ್ ಸ್ಕೂಲ್ ಮಂಜೂರು ಮಾಡಬೇಕೆಂದು ನಾವು ಅರ್ಜಿ ಹಾಕಿದ್ದೆವು. ಇದಕ್ಕಾಗಿ ವಿಧಾನ ಸೌಧದ ಮೆಟ್ಟಿಲು ಹತ್ತಿದ್ದೇವೆ. ಆದರೆ ಕಡಬ ತಾಲೂಕಿಗೆ ಒಂದೇ ಒಂದು ಪಬ್ಲಿಕ್ ಸ್ಕೂಲ್ ಮಂಜೂರಾಗಿಲ್ಲ. ಆ ಕಡತ ಏನಾಗಿದೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿ ಮಂಜುನಾಥ್ರವರಲ್ಲಿ ಗ್ರಾಮಸ್ಥ ಕೆ.ಕೆ.ಇಸ್ಮಾಯಿಲ್ ಪ್ರಶ್ನಿಸಿದರು. ಅದಕ್ಕೆ ಅವರು ಅದು ಶಿಕ್ಷಣಾಧಿಕಾರಿಯವರ ಕಚೇರಿಯನ್ನೇ ತಲುಪಿಲ್ಲ ಎಂದರು. ಈ ಬಗ್ಗೆ ನೀವು ನಮಗೆ ಮಾಹಿತಿ ಕೊಡಬಹುದಿತ್ತು. ಯಾವ ರೀತಿ ನಾವು ಹೋಗಬಹುದಿತ್ತು ಎಂದು ತಿಳಿಸಬಹುದಿತ್ತಲ್ಲವೇ? ಎಂದರಲ್ಲದೆ, ಕೊಣಾಲುವಿನಲ್ಲಿ ಪಬ್ಲಿಕ್ ಸ್ಕೂಲ್ ಮಾಡಲು ಬೇಕಾದ ಎಲ್ಲಾ ವ್ಯವಸ್ಥೆಗಳು ಇವೆ. ಆದರೆ ಇಲ್ಲಿನ ಎಂಎಲ್ಎ ಅವರು ಅದನ್ನು ಇಲ್ಲಿಗೆ ನೀಡದೇ ಪಂಜ ಹಾಗೂ ಸುಳ್ಯಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಗೆ ಪಬ್ಲಿಕ್ ಸ್ಕೂಲ್ ಮಂಜೂರಾಗಿದೆ ಎಂದರು.
ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ನೋಣಯ್ಯ ಗೌಡ, ವಿ.ಸಿ. ಜೋಸೆಫ್, ವಾರಿಜಾಕ್ಷಿ, ಪ್ರಜಲ, ಹೇಮಲತಾ, ಬಾಲಕೃಷ್ಣ ಎ., ಜೀವಿತಾ, ಕುಮಾರಿ ಗುಲಾಬಿ ಕೆ., ಜಾನಕಿ, ಶೋಭಲತಾ, ಪದ್ಮನಾಭ, ಸಂಧ್ಯಾ, ಶಿವಪ್ರಸಾದ್ ಎಸ್.ಎಸ್. ಇದ್ದರು. ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಗ್ರಾಮಸ್ಥರಾದ ಕೊರಗಪ್ಪ ಗೌಡ, ಶೇಖರ ಗೌಡ, ಕೆ.ಕೆ. ಅಬೂಬಕ್ಕರ್, ಮನೋಹರ್, ತಾರನಾಥ ಮತ್ತಿತರರು ಉಪಸ್ಥಿತರಿದ್ದರು.









