ಕಾಂಚನೋತ್ಸವಕ್ಕೆ ಚಾಲನೆ-ಇಂದು ಸಂಗೀತ ಶಾಲೆ ಲೋಕಾರ್ಪಣೆ

0

ರಾಘವೇಶ್ವರ ಶ್ರೀ, ಡಾ| ಡಿ.ವೀರೇಂದ್ರ ಹೆಗ್ಗಡೆ, ಡಿ.ಕೆ.ಶಿವಕುಮಾರ್ ಆಗಮನ

ಉಪ್ಪಿನಂಗಡಿ: ಪುತ್ತೂರು ತಾಲೂಕಿನ ಬಜತ್ತೂರು ಗ್ರಾಮದ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಕಾಂಚನೋತ್ಸವ ಫೆ.5ರಂದು ಸಂಜೆ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆಯಲ್ಲಿ ಆರಂಭಗೊಂಡಿತು.


ಸಂಜೆ ನೂತನವಾಗಿ ನಿರ್ಮಾಣಗೊಂಡ ಸಂಗೀತ ಶಾಲೆಯಲ್ಲಿ ವೇ.ಬ್ರ.ಶ್ರೀ ನಾರಾಯಣ ಬಡಿಕಿಲ್ಲಾಯರ ನೇತೃತ್ವದಲ್ಲಿ ಪ್ರಾಸಾದಾದಿ ಪರಿಗ್ರಹ, ಪುಣ್ಯಾಹವಾಚನ, ಆಚಾರ್ಯಾದಿ ಋತ್ವಿಕ್ ವರಣ, ಸಪ್ತಶುದ್ಧಿ, ಪ್ರಾಸಾದ ಶುದ್ಧಿ, ಸುದರ್ಶನ ಹೋಮ, ವಾಸ್ತುಹೋಮ, ವಾಸ್ತುಪೂಜೆ, ವಾಸ್ತುಬಲಿ, ಪ್ರಾಕಾರ ಬಲಿ ನಡೆಯಿತು. ೭೨ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ, ಸ್ಥಾಪಕ ಗುರು ಸಂಗೀತರತ್ನ ಕಾಂಚನ ವೆಂಕಟಸುಬ್ರಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂರವರ ಪುಣ್ಯ ಸ್ಮರಣೆಯ ಅಂಗವಾಗಿ ನಡೆದ ಸಂಗೀತ ಸೇವೆಯ ಆರಂಭ ಸ್ತುತಿಯಲ್ಲಿ ಸಂವಿತ್ ಆರ್.ಎಸ್. ಅವರು ಮೃದಂಗ ಹಾಗೂ ಕೆ.ಜೆ.ಋತ ಅವರು ವಯಲಿನ್ ನುಡಿಸಿದರು. ಬಳಿಕ ನಡೆದ ಸ್ವರ ಲಯ ಲಹರಿಯಲ್ಲಿ ಶ್ರೀಕೃಷ್ಣ ಭಟ್ ಕೊಳಲು, ತೇಜಸ್ವಿ ಸಂಜಯ್, ವರ್ಚಸ್ ವಿ., ಅಪ್ರಮೇಯ ಹೊಸಹಳ್ಳಿ, ಸಂವಿತ್ ಆರ್.ಎಸ್., ಶಮಿತ್ ಕಲ್ಕೂರ್, ಸಾಕೇತರಾಮ್ ಫಣಿ ವೇದಾಲ ಅವರು ಮೃದಂಗ ಹಾಗೂ ಕೆ.ಜೆ.ಋತ, ಅಭಯ್ ಸಂಪಿಗೆತ್ತಾಯ ವಯಲಿನ್ ನುಡಿಸಿದರು. ರಾತ್ರಿ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆಯ ಶಿಷ್ಯರು, ಪ್ರಶಿಷ್ಯರು ಮತ್ತು ಅತಿಥಿ ಕಲಾವಿದರಿಂದ ಸಂಗೀತ ಸೇವೆ ನಡೆಯಿತು. ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಅಕಾಡೆಮಿ ಟ್ರಸ್ಟ್ ಕಾರ್ಯದರ್ಶಿ ಕೆ.ರೋಹಿಣಿ ಸುಬ್ಬರತ್ನಂ, ಕಾಂಚನ ಸಹೋದರಿಯರಾದ ಕಾಂಚನ ಶ್ರೀರಂಜನಿ, ಕಾಂಚನ ಶ್ರುತಿರಂಜನಿ, ಕೆ.ಯು.ಜಯಚಂದ್ರ ರಾವ್, ರಾಜಶೇಖರ ಹಿಲ್ಯಾರ್ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಇಂದು ಸಂಗೀತ ಶಾಲೆ ಲೋಕಾರ್ಪಣೆ;
ಸ್ಥಾಪಕಗುರು ಸಂಗೀತರತ್ನ, ಋಷಿಗಂಧರ್ವ ವಿ.ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ 105ನೇಯ ಜನ್ಮ ವರ್ಷ ಮಹೋತ್ಸವದ ಅಂಗವಾಗಿ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ನೂತನ ಸಂಗೀತ ಕಲಾಶಾಲೆ, ಸಭಾಭವನ ಹಾಗೂ ಭೋಜನಶಾಲೆ ಲೋಕಾರ್ಪಣೆ ಫೆ.೬ರಂದು ನಡೆಯಲಿದೆ. ಬೆಳಗ್ಗೆ ಗಣಪತಿ ಹೋಮ, ಆಶ್ಲೇಷ ಬಲಿ, ವಟು ಆರಾಧನೆ ನಡೆದು ದಿವಾ ಗಂ.10.44ಕ್ಕೆ ನಡೆಯುವ ವೃಷಭ ಲಗ್ನದ ಶುಭ ಮುಹೂರ್ತದಲ್ಲಿ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆ, ಸಭಾಭವನ ಹಾಗೂ ಭೋಜನಶಾಲೆಯ ಪ್ರವೇಶೋತ್ಸವ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ವಿದ್ವಾನ್ ಕಾಂಚನ ವೆಂಕಟಸುಬ್ರಮಣ್ಯಂ ಅವರ 105ನೇ ಜನ್ಮದಿನದ ಪುಣ್ಯ ವರ್ಷದ ಪ್ರಯುಕ್ತ ಕಾಂಚನ ಮ್ಯೂಸಿಕ್ ಅಕಾಡೆಮಿ ಶಿಷ್ಯರು, ಪ್ರಶಿಷ್ಯರು ಹಾಗೂ ಅತಿಥಿ ವೃಂದದವರಿಂದ ’ಶತಾಧಿಕ ಕಂಠಗಾಯನ ಮತ್ತು ವಾದನ’ ನಡೆಯಲಿದೆ. ಬಳಿಕ ಸಂಗೀತ ಸೇವೆ ನಡೆಯಲಿದೆ.

ಗಣ್ಯರ ಆಗಮನ;
ಸಂಜೆ 4.30ರಿಂದ ನಡೆಯುವ ಸಂಗೀತ ಕಲಾಶಾಲೆ ಮತ್ತು ಸಭಾಭವನ ಲೋಕಾರ್ಪಣ ಸಮಾರಂಭದಲ್ಲಿ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಪದ್ಮವಿಭೂಷಣ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸಲಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಪುತ್ತೂರು ಶಾಸಕ ಅಶೋಕ್‌ಕುಮಾರ್ ರೈ, ದೈವಜ್ಞರು, ಪರಂಪರಾ ವಿದ್ಯಾಪೀಠದ ಮುಖ್ಯ ಪ್ರಾಚಾರ್ಯರಾದ ವೇ.ಬ್ರ.ಶ್ರೀ ವಿಷ್ಣುಪ್ರಸಾದ್ ಹೆಬ್ಬಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಇಂದು ಪದ್ಮಶ್ರೀ ಶಿವಮಣಿ, ಹಿರಿಯ ವಿದ್ವಾಂಸರಿಂದ ಸಂಗೀತ ಕಾರ್ಯಕ್ರಮ
ಸಂಜೆ 6.30ರಿಂದ ’ಕಿಂಗ್ ಆಫ್ ಡ್ರಮ್ಸ್’ ಪದ್ಮಶ್ರೀ ಕಲೈಮಾಮಣಿ ಶಿವಮಣಿ ಹಾಗೂ ನಾಡಿನ ಹಿರಿಯ ಸಂಗೀತ ವಿದ್ವಾಂಸರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. ಕಾಂಚನ ಸಹೋದರಿಯರಾದ ಕಾಂಚನ ಶ್ರೀರಂಜನಿ ಮತ್ತು ಕಾಂಚನ ಶ್ರುತಿರಂಜನಿ (ದ್ವಂದ್ವ ಗಾಯನ), ಕಾಂಚನ ಸುಮನಸರಂಜನಿ(ವಯಲಿನ್), ರವಿಚಂದ್ರ ಕೂಳೂರು(ಕೊಳಲು) ಹಾಗೂ ಕೆ.ಯು.ಜಯಚಂದ್ರ ರಾವ್(ಮೃದಂಗ) ಅವರು ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here