ಕಾಂಚನೋತ್ಸವ, ಕಾಂಚನ ಶ್ರೀ ಪ್ರಶಸ್ತಿ ಪ್ರದಾನ

0

ಉಪ್ಪಿನಂಗಡಿ: ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ ವತಿಯಿಂದ 72ನೇ ವರ್ಷದ ಶ್ರೀ ತ್ಯಾಗರಾಜ, ಶ್ರೀ ಪುರಂದರದಾಸರ ಆರಾಧನಾ ಮಹೋತ್ಸವ, ಸ್ಥಾಪಕ ಗುರು ಸಂಗೀತರತ್ನ ಕಾಂಚನ ವೆಂಕಟಸುಬ್ರಹ್ಮಣ್ಯಂ ಹಾಗೂ ಕರ್ನಾಟಕ ಕಲಾಶ್ರೀ ಕಾಂಚನ ವಿ.ಸುಬ್ಬರತ್ನಂರವರ ಪುಣ್ಯಸ್ಮರಣೆಯ ಅಂಗವಾಗಿ ನಡೆಯುತ್ತಿರುವ ’ಕಾಂಚನೋತ್ಸವ 2026’ರಲ್ಲಿ ಪದ್ಮವಿಭೂಷಣ ಡಾ.ಎಲ್.ಸುಬ್ರಹ್ಮಣ್ಯಂ ಅವರಿಗೆ ಕಾಂಚನ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಫೆ.7ರಂದು ಸಂಜೆ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಕಲಾಶಾಲೆಯಲ್ಲಿ ನಡೆಯಿತು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀ ಸಂಸ್ಥಾನ ಗೋಕರ್ಣ ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನದ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮೀಜಿಯವರು, ಪ್ರಶಸ್ತಿ ಕಲೆಗೆ ಸಂದ ಗೌರವವಾಗಿದೆ. ಕಾಂಚನ ಶ್ರೀ ಪ್ರಶಸ್ತಿ ಪಡೆದ ದೇಶದ ಶ್ರೇಷ್ಠ ಪೀಟೀಲು ವಾದಕ ಎಲ್. ಸುಬ್ರಹ್ಮಣ್ಯಂ ಅವರಂತೆ ಆಗಬಹುದಾದ ನೂರಾರು ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ. ಈ ಮಕ್ಕಳಿಗೆ ಕಾಂಚನ ಶ್ರೀ ಪ್ರಶಸ್ತಿ ಪ್ರೇರಣೆ, ಸ್ಪೂರ್ತಿ ನೀಡಲಿ. ಇದೊಂದು ಔಚಿತ್ಯಪೂರ್ಣ, ಅರ್ಥಪೂರ್ಣವಾದ ಕಾರ್ಯಕ್ರಮವಾಗಿದೆ. ಕಲಾವಿದನ ಹೆಜ್ಜೆ ಗುರುತು ಕಲಾವಿದನೇ ಗುರುತಿಸಬಲ್ಲ, ಕಲೆಯ ಕುಟುಂಬವಾಗಿರುವ ಕಾಂಚನ ಮನೆತನದವರು ಗುರುತಿಸಿ ಕೊಟ್ಟಿರುವ ಪ್ರಶಸ್ತಿಗೆ ಮಹತ್ವವಿದೆ. ಕಾಂಚನ ಕುಟುಂಬದ ಸಂಗೀತ ಪರಂಪರೆಯನ್ನು ಉಳಿಸಿಕೊಳ್ಳಲು ನಾವು ಕೈಜೋಡಿಸಬೇಕಾಗಿದೆ ಎಂದರು.

ಸಂಗೀತಕ್ಕಾಗಿ ಎಲ್ಲವನ್ನೂ ಧಾರೆ ಎರೆದಿದ್ದಾರೆ; ಡಿವಿಎಸ್
ಮುಖ್ಯ ಅತಿಥಿಯಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಮಾತನಾಡಿ, ಪ್ರೀತಿ, ವಿಶ್ವಾಸ, ಸಂಸ್ಕೃತಿ, ಸಂಸ್ಕಾರದೊಂದಿಗೆ ಸಂಗೀತ ಮತ್ತು ದೇವತಾರಾಧನೆಯನ್ನು ಕಾಂಚನ ಕುಟುಂಬ ಮೈಗೂಡಿಸಿಕೊಂಡಿದೆ, ಸಂಗೀತಕ್ಕಾಗಿ ಈ ಕುಟುಂಬ ಎಲ್ಲವನ್ನೂ ಧಾರೆ ಎರೆದಿದೆ. ಹೀಗಾಗಿ ಕಾಂಚನ ಎಂಬ ಪುಟ್ಟ ಹಳ್ಳಿ ಇಂದು ದೇಶದಾದ್ಯಂತ ಪರಿಚಿತವಾಗಿದೆ. ತಮ್ಮ ಶ್ರಮದಿಂದ ಈ ಕ್ಷೇತ್ರವನ್ನು ಇಷ್ಟು ಎತ್ತರಕ್ಕೆ ತಂದಿದ್ದಾರೆ, ಇಲ್ಲಿ ಸಾವಿರಾರು ಪ್ರತಿಭೆಗಳು ಸೃಷ್ಠಿಯಾಗಿ ದೇಶದಾದ್ಯಂತ ಹೆಸರು ಪಡೆಯುತ್ತಿದ್ದಾರೆ. ಇನ್ನೂ ನೂರಾರು ಪ್ರತಿಭೆಗಳು ಇಲ್ಲಿಂದ ಹೊರಹೊಮ್ಮಲಿ ಎಂದರು.

ಸಂಗೀತ ಮೋಕ್ಷದ ಮಾರ್ಗವಾಗಿದೆ; ಬಾನ್ಸುರಿ
ಕಾಂಚನಶ್ರೀ ಪ್ರಶಸ್ತಿ ಪ್ರದಾನ ಮಾಡಿದ ದೆಹಲಿ ಸಂಸದೆ ಬಾನ್ಸುರಿ ಸ್ವರಾಜ್ ಮಾತನಾಡಿ, ಸಂಗೀತ ಕೇವಲ ಮನರಂಜನೆ ಅಲ್ಲ, ಸಂಗೀತ ಮೋಕ್ಷದ ಮಾರ್ಗವಾಗಿದೆ, ಕಾಂಚನದಲ್ಲಿ ಸನಾತನ ಸಂಸ್ಕೃತಿಯ ಅನಾವರಣ ಆಗಿದೆ ಎಂದರು.

ಸಂಸ್ಕಾರ, ಸಂಸ್ಕೃತಿ ಮುಂದುವರಿಯಬೇಕು; ಬ್ರಿಜೇಶ್ ಚೌಟ
ಅಧ್ಯಕ್ಷತೆ ವಹಿಸಿದ್ದ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಮಾತನಾಡಿ, ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಇಂತಹದೊಂದು ಸಂಗೀತ ಕ್ಷೇತ್ರ ಇದೆ, ಈ ರೀತಿಯ ಕಾರ‍್ಯಕ್ರಮ ನಡೆಯುತ್ತಿದೆ ಎನ್ನುವುದಕ್ಕೆ ಹೆಮ್ಮೆ ಆಗುತ್ತಿದೆ. ಇಂತಹ ಸಂಸ್ಕಾರ, ಸಂಸ್ಕೃತಿಯ ಸೇವೆಯನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಕವಿತಾಕೃಷ್ಣಮೂರ್ತಿ ಅವರಿಂದ ಪ್ರಶಸ್ತಿ ಸ್ವೀಕಾರ;
’ಗಾಡ್ ಆಫ್ ಇಂಡಿಯನ್ ವಯಲಿನ್’ ಪದ್ಮವಿಭೂಷಣ ಡಾ.ಎಲ್.ಸುಬ್ರಹ್ಮಣ್ಯಂ ಅವರ ಪರವಾಗಿ ಅವರ ಪತ್ನಿ, ಪದ್ಮಶ್ರೀ ಕವಿತಾ ಕೃಷ್ಣಮೂರ್ತಿ ಸುಬ್ರಹ್ಮಣ್ಯಂ ಅವರು ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಿದ ಕವಿತಾಕೃಷ್ಣಮೂರ್ತಿ ಅವರು ಮಾತನಾಡಿ, ಕಾಂಚನ ಸಂಗೀತದ ದೇವಸ್ಥಾನವಾಗಿದೆ. ಇಲ್ಲಿಂದ ಪ್ರಶಸ್ತಿ ಪಡೆದುಕೊಂಡಿರುವುದು ಬಹಳ ಸಂತಸವಾಗಿದೆ ಎಂದು. ಸಂಜಯ್ ಬೆಂಗಳೂರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು.

ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ನೆಕ್ಕರಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿವಿಧ ರೀತಿಯಲ್ಲಿ ಸಹಕಾರ ನೀಡಿದ ನ್ಯಾಯವಾದಿ ಮಹೇಶ್ ಕಜೆ, ಶೋಭಾ, ಜಯರಾಮ, ಈಶ್ವರಭಟ್ ಕಾಂಚನ, ನಾರಾಯಣ ಬಡಿಕ್ಕಿಲ್ಲಾಯ, ಎಂ.ಆರ್.ಶೆಟ್ಟಿ ಮತ್ತಿತರರನ್ನು ಕಾಂಚನ ಮನೆತನದ ಪರವಾಗಿ ಸ್ವಾಮೀಜಿ ಗೌರವಿಸಿದರು. ಸ್ವಾಮೀಜಿಯವರಿಗೆ ಕಾಂಚನ ಮನೆತನದವರು ಫಲಪುಷ್ಪ ನೀಡಿ ಗೌರವಿಸಿದರು. ಶಿವರಾಮ ಕಾರಂತ ಉರಾಬೆ, ಮುಕುಂದ ಗೌಡ ಬಜತ್ತೂರು, ಯಾದವ ನೆಕ್ಕರೆ, ಹರೀಶ್ ಉರಾಬೆ, ವಿಕ್ರಂ ಯುವಕ ಮಂಡಲದ ರಾಮಚಂದ್ರ, ಗಿರೀಶ್ ಅವರು ಅತಿಥಿಗಳಿಗೆ ಗೌರವಾರ್ಪಣೆ ಮಾಡಿದರು. ರಘುನಂದನ್ ಸ್ವಾಗತಿಸಿದರು. ರಾಜಶೇಖರ ಹಿಲ್ಯಾರ್ ವಂದಿಸಿದರು. ನ್ಯಾಯವಾದಿ ಮಹೇಶ್ ಕಜೆ, ನಿವೃತ್ತ ಉಪನ್ಯಾಸಕ ಗಣರಾಜ್ ಕುಂಬ್ಳೆ, ಉಪನ್ಯಾಸಕ ಮೋಹನಚಂದ್ರ ಪದಕ ಕಾಂಚನ ಕಾರ್ಯಕ್ರಮ ನಿರೂಪಿಸಿದರು. ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್‌ನ ಕಾರ್ಯದರ್ಶಿ ಕೆ. ರೋಹಿಣಿ ಸುಬ್ಬರತ್ನಂ, ಕಾಂಚನ ಸಹೋದರಿಯರಾದ ಶ್ರೀರಂಜನಿ, ಶ್ರುತಿರಂಜನಿ, ಸುಮನಸ ರಂಜನಿ, ಕೆ.ಯು. ಜಯಚಂದ್ರ ರಾವ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಪದ್ಮನಾಭ ತಂತ್ರಿ, ಅಂಬಿಸುಬ್ರಹ್ಮಣ್ಯಂ, ಹೈಕೋರ‍್ಟ್ ವಕೀಲರಾದ ಅರುಣ್‌ಶ್ಯಾಂ ಮತ್ತಿತರ ಪ್ರಮುಖರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕಾಂಚನ ಮನೆತನದಿಂದ ಸಂಗೀತ ಶಾಲೆ ತನಕ ’ಉಂಛವೃತ್ತಿ’

ಬೆಳಗ್ಗೆ ಕಾಂಚನ ಮನೆಯಿಂದ ಸಂಗೀತ ಶಾಲೆಯ ತನಕ ಸಂಗೀತ ಸಂತ ಶ್ರೀ ತ್ಯಾಗರಾಜರ ಉತ್ಸವ ಸಂಪ್ರದಾಯ ಕೃತಿ ಹಾಗೂ ದಿವ್ಯ ನಾಮ ಸಂಕೀರ್ತನ ಕೀರ್ತನೆಗಳ ಗಾಯನ-ವಾದನಗಳೊಂದಿಗೆ ವಿದುಷಿ ಚಾರುಲತಾ ರಾಮಾನುಜಂ ಅವರ ನೇತೃತ್ವದಲ್ಲಿ ’ಉಂಛವೃತ್ತಿ’ ನಡೆಯಿತು. ಬಳಿಕ ಪಿಳ್ಳಾರಿಗೀತೆಗಳು ಮತ್ತು ಪಂಚರತ್ನ ಕೃತಿಗಳ ಗೋಷ್ಠಿ ಗಾಯನ, ಕಾಂಚನ ಸಂಗೀತ ಕಲಾಶಾಲೆಯ ಶಿಷ್ಯರು, ಪ್ರಶಿಷ್ಯರು ಹಾಗೂ ಅತಿಥಿ ಕಲಾವಿದರಿಂದ ಸಂಗೀತ ಸೇವೆ ನಡೆಯಿತು. ರಾತ್ರಿ ಖ್ಯಾತ ಕಲಾವಿದರಿಂದ ಪದ್ಮಶ್ರೀ ಕವಿತಾಕೃಷ್ಣಮೂರ್ತಿ ಸುಬ್ರಹ್ಮಣ್ಯಂ, ಅಂಬಿ ಸುಬ್ರಹ್ಮಣ್ಯಂ ಅವರಿಂದ ಸುರ-ಸಂಗೀತ ನಡೆಯಿತು.

ರೋಹಿಣಿ ಸುಬ್ಬರತ್ನಂ ಅವರಿಗೆ ಮಣಿಕೃಷ್ಣ ಸ್ವಾಮಿ ಅಕಾಡೆಮಿಯಿಂದ ಪ್ರಶಸ್ತಿ ಘೋಷಣೆ

ಮಣಿಕೃಷ್ಣ ಸ್ವಾಮಿ ಅಕಾಡೆಮಿ ವತಿಯಿಂದ ನೀಡುವ ಜಿಲ್ಲೆಯ ಅತ್ಯುದ್ಬುತ ಕಲಾವಿಮರ್ಶಕ ಎ.ಈಶ್ವರಯ್ಯ ಅವರ ಹೆಸರಿನಲ್ಲಿ ಕೊಡುವ ಪ್ರಶಸ್ತಿಯನ್ನು ಈ ವರ್ಷ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಅಕಾಡೆಮಿ ಟ್ರಸ್ಟ್‌ನ ಕಾರ್ಯದರ್ಶಿ ಕಾಂಚನ ರೋಹಿಣಿ ಸುಬ್ಬರತ್ನಂ ಅವರಿಗೆ ನೀಡುತ್ತಿರುವುದಾಗಿ ಅಕಾಡೆಮಿ ಕಾರ್ಯದರ್ಶಿ ನಿತ್ಯಾನಂದ ರಾವ್ ಅವರು ಸಮಾರಂಭದಲ್ಲಿ ಪ್ರಕಟಿಸಿದರು. ಮಣಿಕೃಷ್ಣ ಸ್ವಾಮಿ ಅಕಾಡೆಮಿ 21ನೇ ವರ್ಷಾಚರಣೆ ಆಚರಿಸುತ್ತಿದೆ. ನವೆಂಬರ್ ತಿಂಗಳಿನಲ್ಲಿ ನಡೆಯುವ ಸಂಗೀತೋತ್ಸವದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.


(ಫೋಟೋ ಇದೆ
ಕಾಂಚನ ೧-ಕಾಂಚನ ಶ್ರೀ ಪ್ರಶಸ್ತಿ ಪ್ರದಾನ
ಕಾಂಚನ ೨-
ಕಾಂಚನ ೩-ಸಂಗೀತ ಕಾರ್ಯಕ್ರಮ

ಉಂಛವೃತ್ತಿ(ಬಾಕ್ಸ್‌ಗೆ ಹಾಕಿ)

LEAVE A REPLY

Please enter your comment!
Please enter your name here