






ಅಶೋಕ್ ರೈ ಅವರನ್ನು ಕಳೆದುಕೊಂಡಲ್ಲಿ ಕ್ಷೇತ್ರದ ಜನತೆ ವ್ಯಥೆ ಪಡಬೇಕಾದೀತು: ಶ್ರೀಕೃಷ್ಣ ಬೊಳಿಲ್ಲಾಯ
ಪುತ್ತೂರು; ಪುತ್ತೂರು ಶಾಸಕ ಅಶೋಕ್ ರೈ ಓರ್ವ ಧೀಮಂತ ನಾಯಕ. ಪಕ್ಷ ಬೇಧವಿಲ್ಲದೆ, ಯಾವುದೇ ಬೇಧ-ಭಾವವಿಲ್ಲದೆ ಅಭಿವೃದ್ದಿ ಕೆಲಸವನ್ನು ಮಾಡುತ್ತಿದ್ದು ಅವರನ್ನು ಕಳೆದುಕೊಂಡಲ್ಲಿ ಪುತ್ತೂರು ಕ್ಷೇತ್ರದ ಜನತೆ ವ್ಯಥೆ ಪಡಬೇಕಾದೀತು ಎಂದು ಪಾಣಾಜೆ ರಣಮಂಗಳ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೊಳಿಲ್ಲಾಯ ಹೇಳಿದರು.


ಅವರು ಪಾಣಾಜೆ ಗ್ರಾಮದ ಕೊಂದಲ್ಕಾನದಲ್ಲಿ ಒಂದು ಕೋಟಿ ರೂ ವೆಚ್ಚದ ನೂತನ ಸೇತುವೆಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ಯಾರಿಂದಲೂ ಸಾಧ್ಯವಾಗದ ಕೆಲಸವನ್ನು ಶಾಸಕರು ಮಾಡುತ್ತಿದ್ದಾರೆ. ಅಭಿವೃದ್ದಿಯಲ್ಲಿ ರಾಜಕೀಯ ಮಾಡಬಾರದು ಎಂಬುದನ್ನು ಇವರನ್ನು ನೋಡಿ ಕಲಿಯಬೇಕು. ಇಂಥಹ ಶಾಸಕರು ಹಿಂದೆಯೂ ಬಂದಿಲ್ಲ ಮುಂದೆಯೂ ಬರುವುದಿಲ್ಲ, ಈ ವಿಚಾರವನ್ನು ಬರೆದಿಟ್ಟುಕೊಳ್ಳಿ. ಶಾಸಕರಿಂದ ಲಾಭ ಪಡೆದವರು ಯಾರೂ ಅದನ್ನು ಮರೆಯಬಾರದು, ಮರೆತರೆ ದೇವರು ಮೆಚ್ಚುವುದಿಲ್ಲ ಮತ್ತು ಅಂಥವರಿಗೆ ದೇವರು ಒಳ್ಳೆಯದನ್ನು ಮಾಡುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಅವರನ್ನು ಗೆಲ್ಲಿಸುವ ಮೂಲಕ ನಾವು ಅವರಿಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು. ಮುಂದಿನ ಚುನಾವಣೆಯಲ್ಲಿ ಅಶೋಕ್ ರೈ ಗೆದ್ದು ಮತ್ತೆ ಶಾಸಕರಾಗಿಯೇ ಆಗುತ್ತಾರೆ, ಅವರಿಗೆ ದೇವರ ಅನುಗ್ರಹ ಇದ್ದೇ ಇದೆ ಎಂದು ಹೇಳಿದರು.




ನಿಮ್ಮೆಲ್ಲರ ಆಶೀರ್ವಾದದಿಂದ ಅನುದಾನ ಬರುತ್ತಿದೆ: ಅಶೋಕ್ ರೈ
ಕೊಂದಲ್ಕಾನದಲ್ಲಿ ಸೇತುವೆ ನಿರ್ಮಾಣವಾಗಬೇಕೆಂದು ಇಲ್ಲಿನ ಗ್ರಾಮಸ್ಥರು ಕಳೆದ 54 ವರ್ಷಗಳಿಂದ ಮನವಿ ಮಾಡುತ್ತಿದ್ದಾರೆ, ಆದರೆ ಇವರ ಮನವಿಗೆ ಕಿವಿಗೊಡುವವರು ಇರಲಿಲ್ಲ. ಯಾರಿಂದಲೂ ಆಗದ ಕೆಲಸವನ್ನು ನಿಮ್ಮೆಲ್ಲರ ಆಶೀರ್ವಾದದಿಂದ ಮಾಡುತ್ತಿದ್ದೇನೆ, ಮುಂದೆಯೂ ಮಾಡಲಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಈ ಭಾಗಕ್ಕೆ ಪ್ರಮುಖ ಸಂಪರ್ಕ ಕೊಂಡಿಯಾಗಿದ್ದ ಕೊಂದಲ್ಕಾನ ಸೇತುವೆಯನ್ನು ಯಾವ ಕಾರಣಕ್ಕೆ ಮಾಡಿಲ್ಲ ಎಂಬುದು ನನಗೆ ಗೊತ್ತಿಲ್ಲ, 54 ವರ್ಷಗಳ ಹಿಂದೆ ನಿರ್ಮಾಣವಾದ ಮೋರಿಯಂತಿರುವ ಈ ಸೇತುವೆಯಲ್ಲಿ ವಾಹನಗಳು ಸಂಚಾರ ಮಾಡುತ್ತಿದ್ದ ವಿಚಾರ ನನ್ನ ಗಮನಕ್ಕೆ ಬಂದಾಗ ಅದಕ್ಕೆ ಸರಕಾರದ ಮೂಲಕ ಒಂದು ಕೋಟಿ ರೂ ಅನುದಾನ ಇರಿಸಿದ್ದೇನೆ. ಪಾಣಾಜೆ ಗ್ರಾಮಕ್ಕೆ ಹಿಂದೆಂದೂ ಬಾರದಷ್ಟು ಅನುದಾನವನ್ನು ನೀಡಿದ್ದೇನೆ. ಗ್ರಾಮಸ್ಥರ ರಸ್ತೆ ಬೇಡಿಕೆ, ತಡೆಗೋಡೆ ಬೇಡಿಕೆಯನ್ನು ಈಡೇರಿಸಲಾಗಿದೆ ಎಂದು ಹೇಳಿದರು.
5 ತಿಂಗಳಲ್ಲೇ ಕಾಮಗಾರಿ ಪೂರ್ಣ
ಮುಂದಿನ 5 ತಿಂಗಳಲ್ಲಿ ಸೇತುವೆಯ ಕಾಮಗಾರಿ ಪೂರ್ಣವಾಗಲಿದೆ. 25 ಮೀಟರ್ ಅಗಲದಲ್ಲಿ ಸೇತುವೆ ನಿರ್ಮಾಣವಾಗಲಿದ್ದು ಸೇತುವೆಯ ಎರಡೂ ಬದಿಗಳಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ. ತಗ್ಗಿನಿಂದ ಕೂಡಿದ ಈ ರಸ್ತೆಯನ್ನು ಎತ್ತರಿಸಿ ನಿರ್ಮಾಣವಾಗಲಿದೆ. ಮಳೆಗಾಲಕ್ಕೆ ಮುನ್ನ ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಶಾಕರು ತಿಳಿಸಿದರು. ಪಕ್ಷ ಬೇಧವಿಲ್ಲದೆ, ಜಾತಿ, ಧರ್ಮ ಬೇಧವಿಲ್ಲದೆ ಎಲ್ಲರಿಗೂ ಅನುದಾನವನ್ನು ಹಂಚುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.
ಪಕ್ಷ ಬೇಧವಿಲ್ಲದ ರಾಜಕಾರಣಿ: ರಮನಾಥ ರೈ ಪಡ್ಯಂಬೆಟ್ಟು
ಶಾಸಕ ಅಶೋಕ್ ರೈ ಅವರು ಪಕ್ಷ ಬೇಧವಿಲ್ಲದೆ ಅಭಿವೃದ್ದಿ ಮಾಡುವ ರಾಜಕಾರಣಿ. ಇಂಥವರು ಶಾಸಕರಾಗಿರುವುದು ನಮ್ಮೆಲ್ಲರ ಹೆಮ್ಮೆಯಾಗಿದೆ. ಪಾಣಾಜೆಯ ಹಲವು ವರ್ಷಗಳ ಬೇಡಿಕೆಯನ್ನು ಈಡೇರಿಸಿದ್ದಾರೆ. ಕೊಡುಗೈದಾನಿಯೂ ಆಗಿರುವ ಶಾಸಕ ಬಡವರಿಗೆ ಸಹಾಯ ಮಾಡುತ್ತಿದ್ದಾರೆ. ನಿವೃತ್ತ ಸೈನಿಕರ ಕಟ್ಟಡ ಕಾರ್ಯಕ್ಕೆ 10 ವರ್ಷಗಳ ಹಿಂದೆ 10 ಸಾವಿರ ದೇಣಿಗೆ ನೀಡುವ ಮೂಲಕ ಸೈನಿಕರಿಗೆ ಗೌರವ ನೀಡಿದ ಮೊದಲ ವ್ಯಕ್ತಿಯಾಗಿದ್ದಾರೆ. ಇವರ ಕಾಲದಲ್ಲಿ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ದಿಯಾಗಲಿ ಎಂದು ರಮಾನಾಥ ರೈ ಪಡ್ಯಂಬೆಟ್ಟು ಹೇಳಿದರು.
ಶಾಸಕರಿಂದಲೇ ಪಾಣಾಜೆ ಗ್ರಾಮ ಅಭಿವೃದ್ದಿ: ಶ್ರೀಪ್ರಸಾದ್ ಪಾಣಾಜೆ
ಪಾಣಾಜೆ ಗ್ರಾಮಕ್ಕೆ ಅತಿ ಹೆಚ್ಚು ಅನುದಾನ ಕೊಟ್ಟವರು ಶಾಸಕ ಅಶೋಕ್ ರೈ ಅವರು, ಇವರ ಮೂಲಕ ಪಾಣಾಜೆಯ ಒಂದೊಂದೇ ಬೇಡಿಕೆ ಈಡೇರುತ್ತಿದೆ. ಇಲ್ಲಿನ ದೇವಸ್ಥಾನಕ್ಕೆ ಅಂದಿನಿಂದ ಇಂದಿನ ತನಕ ಇವರ ನೆರವು ದೊರೆಯುತ್ತಿದೆ. ಎಲ್ಲಾ ಧರ್ಮದವರಿಗೂ ಶಾಸಕರ ನೆರವು ದೊರೆಯುತ್ತಿದೆ ಎಂದು ಯುವ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಶ್ರೀ ಪ್ರಸಾದ್ ಪಾಣಾಜೆ ಹೇಳಿದರು. ಶಾಸಕರು ಅವರ ಸ್ವಂತ ಗ್ರಾಮಕ್ಕಿಂತ ಹೆಚ್ಚಾಗಿ ಪಾಣಾಜೆಯನ್ನು ಪ್ರೀತಿ ಮಾಡುತ್ತಿದ್ದಾರೆ. ಕಿನ್ನಿಮಾಣಿ-ಪೂಮಾಣಿ ದೈವಸ್ಥಾನದ ಜಾತ್ರೋತ್ಸವಕ್ಕೆ ಮೊದಲ ಬಾರಿಗೆ ಅನ್ನದಾನ ವ್ಯವಸ್ಥೆಯನ್ನು ಮಾಡುವ ಮೂಲಕ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಶಾಸಕರು ಪಾಣಾಜೆಯವರ ಪಾಲಿನ ಭಾಗ್ಯವಿದಾತರಾಗಿದ್ದು ಇವರನ್ನು ಇಲ್ಲಿನ ಗ್ರಾಮಸ್ಥರು ಎಂದಿಗೂ ಮರೆಯಬಾರದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಾಣಾಜೆ ಗ್ರಾಪಂ ಅಧ್ಯಕ್ಷೆ ಮೈಮೂನತುಲ್ ಮೆಹ್ರಾ, ಸದಸ್ಯರುಗಳಾದ ವಿಮಲಾ ಮಹಾಲಿಂಗ ನಾಯ್ಕ, ವಲಯ ಅಧ್ಯಕ್ಷ , ಸ್ಥಳೀಯರಾದ ವಿನೋದ್ ರೈ ಪಡ್ಯಂಬೆಟ್ಟು, ಪಾಣಾಜೆ ಪ್ರಾಥಮಿಕ ಸಹಕಾರಿ ಸಂಘದ ಉಮೇಶ್ ರೈ ಗಿಳಿಯಾಳು, ಸದಾಶಿವ ರೈ ಸೂರಂಬೈಲು, ಜಗನ್ಮೋಹನ್ ರೈ, ಚನಿಯ ನಾಯ್ಕ,ಜಯರಾಂ ರೈ, ಶಂಕರನಾರಾಯಣ ಭಟ್, ನಾರಾಯಣ ನಾಯ್ಕ, ಕೃಷ್ಣ ನಾಯ್ಕ, ವಿಠಲ್ ರೈ, ವಿಶ್ವನಾಥ ರೈ ಕಡಮಾಜೆ, ವಿಶ್ವನಾಥ ಗುರಿಕ್ಕೇರ್, ಸರಸ್ವತಿ, ಸುಂದರಿ ಮತ್ತಿತರರು ಉಪಸ್ಥಿತರಿದ್ದರು. ವಲಯ ಅಧ್ಯಕ್ಷ ಸದಾನಂದ ನಾಯ್ಕ ವಂದಿಸಿದರು.










