






ಪುತ್ತೂರು: 4 ವರ್ಷದ ಹಿಂದೆ ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ನಡೆದ ಅಪಘಾತ ಪ್ರಕರಣವೊಂದರಲ್ಲಿ ಕಾರಿನಲ್ಲಿದ್ದ ಪ್ರಯಾಣಿಕರೋರ್ವರು ಮೃತಪಟ್ಟಿದ್ದು, ಆರೋಪಿ ಕಾರು ಚಾಲಕನಿಗೆ ಪುತ್ತೂರು ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


2022ರ ಎ. 16ರಂದು ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಆರೋಪಿ ಜೋಸೆಫ್ ಸ್ಟೀಫನ್ ಎಂಬವರು ಬೆಂಗಳೂರು ಕಡೆ ಚಲಾಯಿಸುತ್ತಿದ್ದ ಕಾರು (ಕೆ.ಎ 19 ಎಮ್‌ಎಲ್ 4893) ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಹಾಸನ ಕಡೆಯಿಂದ ಮಂಗಳೂರು ಕಡೆಗೆ ಸುದೀಪ್ ಸಿ.ಎಮ್ ಎಂಬವರು ಚಲಾಯಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ (ಕೆ.ಎ. 19 ಎಫ್ 374)ಕ್ಕೆ ಡಿಕ್ಕಿಯಾಗಿತ್ತು.



ಡಿಕ್ಕಿಯ ರಭಸಕ್ಕೆ ಕಾರಿನಲ್ಲಿ ಪ್ರಯಾಣಿಕರಾಗಿದ್ದ ರೆಜಿಸ್ಟೀಫನ್, ತ್ರಿಶಾ ಜೋಸೆಫ್, ಜೋಯಲ್ ಮತ್ತು ಜೋಸೆಫ್ ಎಂಬವರು ಗಾಯಗೊಂಡಿದ್ದರು. ಗಾಯಾಳುಗಳನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ತೀವ್ರ ಗಾಯಗೊಂಡ ರಿಜಿ ಸ್ಟೀಫನ್ ಎಂಬವರು ಮೃತಪಟ್ಟಿದ್ದರು. ಪ್ರಕರಣದ ತನಿಖೆಯನ್ನು ನಡೆಸಿದ ಪುತ್ತೂರು ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್ ಅವರು ಆರೋಪಿ ಕಾರು ಚಾಲಕನ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಾಸಿಕ್ಯೂಷನ್ ಪರ ಸಹಾಯಕ ಸರಕಾರಿ ಅಭಿಯೋಜಕಿ ಕವಿತಾ ಕೆ ಅವರು ವಾದಿಸಿದರು. ಪ್ರಕರಣದ ವಿಚಾರಣೆ ನಡೆಸಿ ಆರೋಪಿಯ ವಿರುದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿರುವ ದಂಡಾಧಿಕಾರಿ ಪ್ರಕೃತಿ ಕಲ್ಯಾಣಪುರ ಅವರು ಆರೋಪಿ ಕಾರು ಚಾಲಕನಿಗೆ 6 ತಿಂಗಳ ಕಾರಾವಾಸ ಮತ್ತು ರೂ. 10ಸಾವಿರ ದಂಡ ವಿಧಿಸಿದ್ದಾರೆ.









