






ಪುತ್ತೂರು: ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯನ್ನು ಕೇಂದ್ರ ಬಿಜೆಪಿ ಸರ್ಕಾರ ಬದಲಿಸಿರುವುದನ್ನು ಖಂಡಿಸಿ ಹಾಗೂ ಕಾಯ್ದೆ ಮರುಜಾರಿಗೆ ಆಗ್ರಹಿಸಿ ಜಿಲ್ಲಾ ಕಾಂಗ್ರೆಸ್ನಿಂದ ನಡೆಯುತ್ತಿರುವ ಸುಳ್ಯದಿಂದ-ಮೂಲ್ಕಿ ವರೆಗೆ 100 ಕಿ.ಮೀ ಪಾದಯಾತ್ರೆ ಫೆ.10ರಂದು ಅಪರಾಹ್ನ ಪುತ್ತೂರು ನಗರದಲ್ಲಿ ಸಾಗಿತು.



ಸುಳ್ಯದಿಂದ ಫೆ.9ರಂದು ಹೊರಟ ಪಾದಯಾತ್ರೆಯನ್ನು ಮಧ್ಯಾಹ್ನ ಅಮ್ಚಿನಡ್ಕದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ ಪುತ್ತೂರು, ವಿಟ್ಲ ಹಾಗೂ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ನಿಂದ ಸ್ವಾಗತಿಸಲಾಯಿತು. ನಂತರ ಕಾವು ಹೇಮನಾಥ ಶೆಟ್ಟಿಯವರ ನಿವಾಸದಲ್ಲಿ ಭೋಜನ ವಿರಾಮದ ಬಳಿಕ ಪ್ರಾರಂಭಗೊಂಡು ಪಾದಯಾತ್ರೆ ಸಂಜೆ ಕುಂಬ್ರಕ್ಕೆ ತಲುಪಿ ಅಲ್ಲಿ ಸಾರ್ವಜನಿಕ ಸಭೆ ನಡೆಯಿತು.



ಎರಡನೇ ದಿನವಾದ ಫೆ.10ರಂದು ಕುಂಬ್ರದಿಂದ ಪಾದಯಾತ್ರೆಯು ಪ್ರಾರಂಭಗೊಂಡಿತು. ಕುಂಬ್ರದಲ್ಲಿ ಬೆಳಗ್ಗಿನ ಉಪಾಹಾರದ ಬಳಿಕ ಪ್ರಾರಂಭಗೊಂಡ ಪಾದಯಾತ್ರೆಯು ಮಧ್ಯಾಹ್ನ ಮುಕ್ರಂಪಾಡಿ ಸುಭಧ್ರ ಕಲ್ಯಾಣ ಮಂಟಪದ ಬಳಿ ತಲುಪಿತು. ಅಲ್ಲಿ ವಿಶೇಷ ಭೋಜನ ಏರ್ಪಡಿಸಲಾಗಿತ್ತು. ಊಟದ ವಿರಾಮ ಬಳಿಕ ಅಪರಾಹ್ನ ಮತ್ತೆ ಪ್ರಾರಂಭಗೊಂಡ ಪಾದಯಾತ್ರೆಯು ಪುತ್ತೂರು ನಗರದ ಮುಖ್ಯರಸ್ತೆಯಲ್ಲಿ ಸಂಚರಿಸಿತು.

ಗಾಂಧಿ ಪ್ರತಿಮೆಗೆ ಹಾರಾರ್ಪಣೆ:
ಪಾದಯಾತ್ರೆಯ ಪುತ್ತೂರು ಮುಖ್ಯರಸ್ತೆಯಲ್ಲಿ ಸಂಚರಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆ ಹಾರಾರ್ಪಣೆ ನಡೆಸಿದರು. ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಸಂಯೋಜಕ ಕಾವು ಹೇಮನಾಥ ಶೆಟ್ಟಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ವಿಟ್ಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪದ್ಮನಾಭ ಪೂಜಾರಿ, ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯು.ಟಿ ತೌಸೀಫ್, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ ಜಯರಾಮ್, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಡಾ.ರಾಜಾರಾಮ್ ಕೆ.ಬಿ. ಮೊದಲಾದವರು ಉಪಸ್ಥಿತರಿದ್ದರು. ಅಲ್ಲಿಂದ ಮುಂದುವರಿದ ಪಾದಯಾತ್ರೆ ಮುಖ್ಯರಸ್ತೆ, ಬೊಳುವಾರು, ನೆಹರುನಗರ ಮೂಲಕ ಕಬಕದಿಂದ ಮುಂದೆ ಸಾಗಿದರು. ವಿವಿದ ಬ್ಲಾಕ್ ಕಾಂಗ್ರೆಸ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು, ವಲಯ ಅಧ್ಯಕ್ಷರುಗಳು, ಮುಂಚೂಣಿ ನಾಯಕರುಗಳು ಸೇರಿದಂತೆ ನೂರಾರು ಮಂದಿ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.










