







ನೆಲ್ಯಾಡಿ; ಅಡ್ಡಹೊಳೆಯಿಂದ ಬಿ.ಸಿ.ರೋಡ್ ತನಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು ಅಡ್ಡಹೊಳೆಯಿಂದ ಪೆರಿಯಶಾಂತಿ ತನಕ ಗುತ್ತಿಗೆ ವಹಿಸಿಕೊಂಡಿರುವ ಕಂಪನಿ ಬಹುತೇಕ ಕಾಮಗಾರಿ ಪೂರ್ಣಗೊಳಿಸಿದೆ. ಆದರೆ ಲಾವತ್ತಡ್ಕದಲ್ಲಿ ಆನೆದಾಟು ನಿರ್ಮಾಣ ಪ್ರಶ್ನಿಸಿ ಸ್ಥಳೀಯರು ನ್ಯಾಯಾಲಯದ ಮೊರೆ ಹೋದ ಕಾರಣ ಕಾಮಗಾರಿಗೆ ಕೋರ್ಟ್ ತಡೆಯಾಜ್ಞೆ ನೀಡಿದೆ.



ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿ.ರೋಡ್ನಿಂದ ಅಡ್ಡಹೊಳೆಯವರೆಗೆ ನಡೆಯುತ್ತಿರುವ ಚತುಷ್ಪಥ ಕಾಮಗಾರಿ ಬಹುಪಾಲು ಮುಕ್ತಾಯದ ಹಂತದಲ್ಲಿದೆ. ಅಡ್ಡಹೊಳೆಯಿಂದ ಪೆರಿಯಶಾಂತಿ ತನಕ ಹೆದ್ದಾರಿ ಕಾಮಗಾರಿ ಕೊನೆ ಹಂತದಲ್ಲಿದೆ. ಈ ಮಧ್ಯೆ ಆನೆದಾಟು ನಿರ್ಮಾಣ ಪ್ರಶ್ನಿಸಿ ಸ್ಥಳೀಯರು ನ್ಯಾಯಾಲಯದ ಮೊರೆ ಹೋದ ಕಾರಣ ನೂಜಿಬಾಳ್ತಿಲ ಗ್ರಾಮದ ಲಾವತ್ತಡ್ಕ ಎಂಬಲ್ಲಿ ಸುಮಾರು 400 ಮೀಟರ್ ರಸ್ತೆ ಕಾಮಗಾರಿ ಸಂಪೂರ್ಣ ಸ್ಥಗಿತಕೊಂಡಿದೆ. ಇದರಿಂದಾಗಿ ಪರ್ಯಾಯ ಆನೆದಾಟು ಸ್ಥಳ ಆಯ್ಕೆಯ ಆನಿವಾರ್ಯತೆ ತಲೆದೋರಿದೆ.



ಹೈಕೋರ್ಟ್ ನಲ್ಲಿ ರಿಟ್;
ನೂಜಿಬಾಳ್ತಿಲ ಗ್ರಾಮದ ಲಾವತ್ತಡ್ಕ ಎಂಬಲ್ಲಿ ಆನೆದಾಟು ಯೋಜನೆ ಜಾರಿಗೊಳಿಸುವ ವಿಚಾರವನ್ನು ಪ್ರಶ್ನಿಸಿ ಲಾವತ್ತಡ್ಕ ಕಳೆಂಜಾಲು ನಿವಾಸಿ ಹರಿಶ್ಚಂದ್ರ ಗೌಡ ಹಾಗೂ ರೆಖ್ಯ ಗ್ರಾಮದ ಮಯ್ಯಳಿ ನಿವಾಸಿ ಜೋಸ್ ಅವರು ಹೈಕೋರ್ಟ್ನಲ್ಲಿ ರಿಟ್ ಸಲ್ಲಿಸಿದ್ದಾರೆ. ವಿಚಾರಣೆ ನಡೆಸಿದ ಹೈಕೋರ್ಟ್ ಇಲ್ಲಿ ಆನೆದಾಟು ನಿರ್ಮಿಸುವುದಕ್ಕೆ ತಡೆಯಾಜ್ಞೆ ನೀಡಿದೆ. ಹೀಗಾಗಿ ಸುಮಾರು 400 ಮೀಟರ್ ಹೆದ್ದಾರಿ ಕಾಮಗಾರಿಯನ್ನು ನಿಲ್ಲಿಸಲಾಗಿದೆ. ಇಲ್ಲಿ ವಾಹನ ಸಂಚಾರ ದುಸ್ತರವಾಗಿ ಪರಿಣಮಿಸಿದೆ.
ಅರ್ಜಿದಾರರ ದೂರು?:
ಲಾವತ್ತಡ್ಕ ಪ್ರದೇಶ ಆನೆ ದಾಟು ನಿರ್ಮಿಸಲು ಸೂಕ್ತವಾದ ಸ್ಥಳವಲ್ಲ. ಲಾವತ್ತಡ್ಕದ ಕಳೆಂಜಾಲು ಸಂಪೂರ್ಣ ವಸತಿ ಪ್ರದೇಶ. ಇಲ್ಲಿ ಆನೆ ದಾಟು ಮಾಡಿಸಿದರೆ ಆನೆಗಳು ನೇರವಾಗಿ ಮನೆಯಂಗಳಕ್ಕೆ ಬರುವ ಅಪಾಯವಿದೆ. ಕೃಷಿ ಹಾನಿ ಉಂಟಾದೀತು. ಮೇಲಾಗಿ ಈ ಭಾಗದಲ್ಲಿ ಆನೆಗಳು ಹಿಂದಿನಿಂದ ಓಡಾಟ ಮಾಡಿದ ನಿದರ್ಶನವಿಲ್ಲ. ಆನೆಗಳು ಸಹಜವಾಗಿ ಸಾಗುವ ಹಾದಿಯಲ್ಲಿ ಆನೆದಾಟು ಮಾಡಬೇಕೇ ಹೊರತು, ಆನೆಗಳು ಸಂಚರಿಸದೇ ಇರುವಲ್ಲಿ ಮಾಡಿದರೆ ಜನವಸತಿ ಪ್ರದೇಶದಲ್ಲಿ ಆನೆಗಳು ನಡೆದಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅರ್ಜಿದಾರರು ವಾದಿಸಿದ್ದರು.
ಲಾವತ್ತಡ್ಕದ ಒಂದು ಬದಿ ಮೀಸಲು ಅರಣ್ಯವಾಗಿದ್ದರೂ ಮತ್ತೊಂದು ಬದಿಯಲ್ಲಿ ನದಿ ಇದೆ. ಬಾಳೆಮಾರು, ಅಡೆಂಜಬೈಲು, ಕಲ್ಲುಗುಡ್ಡೆ, ಕೊಣಾಜೆ ಸೇರಿದಂತೆ 400ಕ್ಕೂ ಹೆಚ್ಚು ಮನೆಗಳು, ದೇವಾಲಯ, ಶಾಲೆ ಇದೆ. ಇಲ್ಲಿ ಆನೆದಾಟು ರಚಿಸುವುದು ಸಂಪೂರ್ಣ ಅವೈಜ್ಞಾನಿಕ ಎಂದವರು ಪ್ರತಿಪಾದಿಸಿದ್ದಾರೆ.
ಮೂಲ ಯೋಜನೆ ಬದಲಾಗಿದೆಯೇ?;
ಮೂಲ ಯೋಜನಾ ವರದಿ ಪ್ರಕಾರ, ಹೆದ್ದಾರಿಯು ಲಾವತ್ತಡ್ಕ ಪೇಟೆಯಿಂದ ನೇರವಾಗಿ ಸಾಗಬೇಕಾಗಿತ್ತು. ಅಲ್ಲಿಂದ 1ಕಿ.ಮೀ ದೂರದಲ್ಲಿ ಎರಡೂ ಬದಿ ರಕ್ಷಿತ ಅರಣ್ಯವಿರುವ ಪ್ರದೇಶವನ್ನು ಆನೆ ದಾಟು ಎಂದು ಗುರುತಿಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಈ ಭಾಗದಲ್ಲಿ ಬಂಡೆಕಲ್ಲು ಇದೆ ಎಂಬ ಕಾರಣಕ್ಕೆ ಆನೆದಾಟು ಸ್ಥಳ ಬದಲಾವಣೆ ಮಾಡಲಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.
ಹೆದ್ದಾರಿ ಕಾಮಗಾರಿಗೆ ಆಕ್ಷೇಪವಿಲ್ಲ;
ಕೋರ್ಟ್ ತಡೆಯಾಜ್ಞೆಯಿಂದಾಗಿ 400 ಮೀಟರ್ ಚತುಷ್ಪಥ ಕಾಮಗಾರಿ ಸಂಪೂರ್ಣವಾಗಿ ನನೆಗುದಿಗೆ ಬಿದ್ದಿದೆ. ಹೀಗಾಗಿ ಇಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ವಾಹನ ಸಂಚಾರಕ್ಕೆ ಹರಸಾಹಸ ಪಡುವಂತಾಗಿದೆ. ಅರ್ಜಿದಾರ ಹರಿಶ್ಚಂದ್ರ ಗೌಡ ಪ್ರತಿಕ್ರಿಯೆ ನೀಡಿ, ನಮ್ಮ ಆಕ್ಷೇಪ ಆನೆ ದಾಟಿಗೆ ಆಯ್ಕೆ ಮಾಡಲಾದ ಸ್ಥಳದ ವಿರುದ್ಧ ಮಾತ್ರ. ಈ ಜಾಗದಲ್ಲಿ ಆನೆ ದಾಟು ನಿರ್ಮಿಸಿದರೆ ಮನೆಗಳು ಮತ್ತು ಕೃಷಿ ಅಪಾಯಕ್ಕೆ ಸಿಲುಕುತ್ತವೆ. ರಸ್ತೆ ಕಾಮಗಾರಿಗೆ ನಾವು ಅಡ್ಡಿ ಮಾಡಿಲ್ಲ ಎಂದು ಹೇಳಿದ್ದಾರೆ.









