







ಕಠಿಣ ಪರಿಶ್ರಮದಿಂದ ಗ್ರಾಮೀಣ ವಿದ್ಯಾರ್ಥಿಗಳು ಐಎಎಸ್, ಐಪಿಎಸ್ ಅಧಿಕಾರಿಗಳಾಗಲು ಸಾಧ್ಯ: ಸ್ಟೆಲ್ಲಾ ವರ್ಗೀಸ್


ಪುತ್ತೂರು: ಸಾಕಷ್ಟು ಸಿದ್ಧತೆ ಮತ್ತು ಪರಿಶ್ರಮದಿಂದ ಗ್ರಾಮೀಣ ವಿದ್ಯಾರ್ಥಿಗಳು ಕೂಡ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಿ ಐಪಿಎಸ್, ಐಎಎಸ್ ಅಕಾರಿಗಳು ಸಾಧ್ಯವಿದೆ. ಈ ಪರೀಕ್ಷೆ ಬರೆಯಲು ಹೊರಡುವ ಮುನ್ನ ನಾನೇಕೆ ಈ ಕ್ಷೇತ್ರ ಆರಿಸಿಕೊಂಡಿದ್ದೇನೆ ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಹಾಗಿದ್ದಲ್ಲಿ ಮಾತ್ರ ಕಠಿಣ ಸವಾಲನ್ನು ಕೊನೆಯರೆಗೂ ಎದುರಿಸಿ ಗೆಲ್ಲಲು ಸಾಧ್ಯ ಎಂದು ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಹೇಳಿದರು.




ಅವರು ಅಕ್ಷಯ ಕಾಲೇಜು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಇದರನೇತೃತ್ವದಲ್ಲಿ ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ, ರೋಟರಿ ಕ್ಲಬ್ ಪುತ್ತೂರು ಪೂರ್ವ, ರೋಟರ್ಯಾಕ್ಟ್ ಕ್ಲಬ್ ಅಕ್ಷಯ ಕಾಲೇಜು ಮತ್ತು ಕಾಲೇಜಿನ ಐಕ್ಯುಎಸಿ ಸಹಯೋಗದಲ್ಲಿ ಫೆ.18ರಂದು ಸಂಪ್ಯ ಅಕ್ಷಯ ಕಾಲೇಜು ಕಾಲೇಜಿನ ಸಭಾಂಗಣದಲ್ಲಿ ನಡೆದ ಕನ್ನಡದಲ್ಲೂ ಐಎಎಸ್ ಬರೆಯಿರಿ ಅಭಿಯಾನದಂಗವಾಗಿ ಐಎಎಸ್- ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಿವಿಲ್ ಸರ್ವಿಸ್ನಲ್ಲಿ 20ಕ್ಕೂ ಹೆಚ್ಚು ವಿಭಾಗಗಳಲ್ಲಿ ಅವಕಾಶಗಳಿವೆ. ಯುಪಿಎಸ್ ಪರೀಕ್ಷೆಗೆ ಪ್ರತೀ ವರ್ಷ ಸುಮಾರು 10 ಲಕ್ಷ ಮಂದಿ ನೋಂದಣಿ ಮಾಡುತ್ತಾರೆ. ಇವರಲ್ಲಿ 15 ಸಾವಿರ ಮಂದಿ ಪ್ರಾಥಮಿಕ ಹಂತದ ಪರೀಕ್ಷೆ ಉತ್ತೀರ್ಣರಾಗಿ ಮೈನ್ಸ್ಗೆ ಆಯ್ಕೆಯಾಗುತ್ತಾರೆ. ಅದರಲ್ಲೂ ಉತ್ತೀಣರಾದವರು ನಂತರ ಸಂದರ್ಶನದಲ್ಲಿ ಗೆಲ್ಲಬೇಕಾಗುತ್ತದೆ. ಮೈನ್ಸ್ನಲ್ಲಿ ಅನುತ್ತೀರ್ಣಗೊಂಡರೆ ಮುಂದಿನ ವರ್ಷ ಮತ್ತೆ ಪ್ರಿಲಿಮಿನರಿ ಪರೀಕ್ಷೆಯಿಂದಲೇ ಸಾಗಬೇಕಾಗುತ್ತದೆ. ಸಮಾಜದ ಸೇವೆ ಮಾಡಲು, ಉತ್ತಮ ವೃತ್ತಿ ಹೊಂದಲು, ಹೆಸರು, ಕೀರ್ತಿ ಸಂಪಾದಿಸಲು ನಾಗರಿಕ ಸೇವೆ ಒಳ್ಳೆಯ ವೇದಿಕೆ. ಆದರೆ ಗಟ್ಟಿಯಾದ ಕಟಿಬದ್ಧತೆ ಬೇಕು ಎಂದವರು ಹೇಳಿದರು.
ಕನ್ನಡದಲ್ಲೂ ಐಎಸ್ಎಸ್ ಬರೆಯಿರಿ ಎಂಬ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸಿಕೊಟ್ಟ ಐ.ಎ.ಎಸ್. ದರ್ಶನ ಸಂಸ್ಥೆಯ ಮುಖ್ಯಸ್ಥ ದರ್ಶನ್ ಗರ್ತಿಕೆರೆ ಮಾತನಾಡಿ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಶಿಕ್ಷಣ, ಉದ್ಯಮದಲ್ಲಿ ಸಾಕಷ್ಟು ಮುಂದುವರಿದಿದ್ದರೂ ಇಲ್ಲಿ ನಾಗರಿಕ ಸೇವಾ ಕ್ಷೇತ್ರಕ್ಕೆ ಹೋಗುವವರ ಸಂಖ್ಯೆ ವಿರಳವಾಗಿದೆ. ಇದಕ್ಕೆ ಇಲ್ಲಿರುವ ಮಾಹಿತಿ ಕೊರತೆಯೇ ಕಾರಣ. ಇದನ್ನು ನೀಗಿಸಲು ಇಂಥ ಕಾರ್ಯಾಗಾರಗಳು ಉಪಯುಕ್ತ ಎಂದರು.
ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಧಾಕರ ಸುವರ್ಣ ತಿಂಗಳಾಡಿ, ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಕುಸುಮರಾಜ್ ಶುಭ ಹಾರೈಸಿದರು. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ದರ್ಶನ್ ಗರ್ತಿಕರೆ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಿರಿಯ ಸಾಹಿತಿ ಡಾ.ಎಚ್.ಜಿ. ಶ್ರೀಧರ್ ಸನ್ಮಾನಿತರ ಬಗ್ಗೆ ಮಾತನಾಡಿದರು.
ಅಕ್ಷಯ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಜಯಂತ ನಡುಬೈಲ್ ಮಾತನಾಡಿ, ಮುಂದಿನ ದಿನಗಳಲ್ಲಿ ಅಕ್ಷಯ ಕಾಲೇಜಿನಲ್ಲಿ ಐಎಎಸ್- ಐಪಿಎಸ್ ಕೋಚಿಂಗ್ ಆರಂಭಿಸಲಾಗುವುದು. ಇದಕ್ಕಾಗಿ ಸಂಬಂಧಪಟ್ಟ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ. ಪುತ್ತೂರು ಸುತ್ತಮುತ್ತಲಿನ ವಿದ್ಯಾರ್ಥಿಗಳು ಕೂಡ ಮುಂದಿನ ದಿನಗಳಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳಾಗಿ ಮೂಡಿ ಬರಬೇಕು ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಅಕ್ಷಯ ಕಾಲೇಜಿನ ಪ್ರಾಂಶುಪಾಲ ಸಂಪತ್ ಪಕ್ಕಳ ಸ್ವಾಗತಿಸಿದರು. ಕಾಲೇಜಿನ ಆಡಳಿತಾಧಿಕಾರಿ ಅರ್ಪಿತ್ ಉಪಸ್ಥಿತರಿದ್ದರು. ಪುತ್ತೂರು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಶೇ. ಕಜೆಮಾರ್ ವಂದಿಸಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ದರ್ಶನ್ ಗರ್ತಿಕೆರೆ ಅವರು ಐಎಎಸ್- ಐಪಿಎಸ್ ತತ್ಸಮಾನ ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಕಾರ್ಯಾಗಾರ ನಡೆಸಿಕೊಟ್ಟರು.
ಅಕ್ಷಯ ಕಾಲೇಜಿನಲ್ಲೂ ಐಎಎಸ್,ಐಪಿಎಸ್ ಕೋಚಿಂಗ್…!
ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡ ಐಎಎಸ್, ಐಪಿಎಸ್ ಪರೀಕ್ಷೆಗಳನ್ನು ಎದುರಿಸಬೇಕು, ಅಧಿಕಾರಿಗಳಾಗಿ ಮೂಡಿಬರಬೇಕು ಎಂಬ ನಿಟ್ಟಿನಲ್ಲಿ ಸಂಪ್ಯದ ಅಕ್ಷಯ ಕಾಲೇಜಿನಲ್ಲಿ ಐಎಎಸ್- ಐಪಿಎಸ್ ಕೋಚಿಂಗ್ ಆರಂಭಿಸಲಾಗುವುದು. ಇದಕ್ಕಾಗಿ ಸಂಬಂಧಪಟ್ಟ ಸಂಸ್ಥೆಗಳ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅಕ್ಷಯ ಕಾಲೇಜಿನ ಚೆಯರ್ಮೆನ್ ಜಯಂತ ನಡುಬೈಲ್ ತಿಳಿಸಿದರು.
ಕನ್ನಡದಲ್ಲೂ ಐಎಎಸ್ ಬರೆಯಿರಿ- ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯದಲ್ಲೇ ಪ್ರಥಮ ಅಭಿಯಾನ
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಐಎಎಸ್ ಐಪಿಎಸ್ ಪರೀಕ್ಷೆಗಳ ಬಗ್ಗೆ ಅರಿವು ಮೂಡಿಸಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ ಕ.ಸಾ.ಪ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ರವರ ಮುಂದಾಳತ್ವದಲ್ಲಿ ಆರಂಭಗೊಂಡಿರುವ ಕನ್ನಡದಲ್ಲೂ ಐಎಎಸ್ ಬರೆಯಿರಿ ಅಭಿಯಾನವು ರಾಜ್ಯದಲ್ಲೇ ಪ್ರಥಮವಾಗಿದೆ. ಈ ಅಭಿಯಾನ ಆರಂಭವಾಗಿ 3 ವರ್ಷ ಕಳೆದಿದ್ದು ಈಗಾಗಲೇ 200 ಕ್ಕೂ ಹೆಚ್ಚು ಕಾರ್ಯಾಗಾರ, 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ತಾಲೂಕಿನ 32 ಗ್ರಾಮಗಳಲ್ಲಿ ಕ.ಸಾ.ಪ ಗ್ರಾಮ ಸಾಹಿತ್ಯ ಸಂಭ್ರಮ ಕಾರ್ಯಕ್ರಮದಲ್ಲೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ಆಗಿದೆ. ದರ್ಶನ್ ಗರ್ತಿಕೆರೆಯವರು ಮಾಹಿತಿ ಕಾರ್ಯಾಗಾರ ನಡೆಸಿಕೊಡುತ್ತಿದ್ದಾರೆ. ಮುಂದಿನ 10 ವರ್ಷಗಳಲ್ಲಿ ಪುತ್ತೂರು ಸೇರಿದಂತೆ ದ.ಕ ಜಿಲ್ಲೆಯಿಂದ ಐಎಎಸ್, ಐಪಿಎಸ್ ಅಧಿಕಾರಿಗಳು ಬರಬೇಕು ಎಂಬುದೇ ನಮ್ಮ ಉದ್ದೇಶವಾಗಿದೆ ಎನ್ನುತ್ತಾರೆ ಪುತ್ತೂರು ಉಮೇಶ್ ನಾಯಕ್.









