ಫೆ.20: ಉಕ್ಕುಡ ಒತ್ತೆಸಾರು ಗೌಡರ ಕುಟುಂಬಸ್ಥರ ತರವಾಡು ಮನೆಯ ಜೀರ್ಣೋದ್ಧಾರ ಪೂರ್ವ ದೈವಗಳ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ

0

ಪುತ್ತೂರು: ವಿಟ್ಲದ ಉಕ್ಕುಡ ಒತ್ತೆಸಾರು ಗೌಡರ ಕುಟುಂಬಸ್ಥರ ತರವಾಡು ಮನೆಯ ಜೀರ್ಣೋದ್ಧಾರ ಪೂರ್ವ ದೈವಗಳ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಫೆ.20ರಂದು ನಡೆಯಲಿದೆ.

ಇತ್ತೀಚಿಗೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದಿರುವ ಪ್ರಕಾರ ಫೆ.20ನೇ ಶುಕ್ರವಾರ ಬೆಳಿಗ್ಗೆ 8.30 ಗಂಟೆಗೆ ದಿ. ಪೂವಪ್ಪ ಪೂಜಾರಿ ಒತ್ತೆಸಾರ್ ಉಕ್ಕುಡ, ಇವರ ಮನೆಯಿಂದ ಶ್ರೀ ರುದ್ರಚಾಮುಂಡಿ ದೈವದ ಸಾನಿಧ್ಯವನ್ನು ಮೆರವಣಿಗೆಯಲ್ಲಿ ತಂದು ಇತರ ಸಪರಿವಾರ ದೈವಗಳನ್ನು ಒತ್ತೆಸಾರ್ ತರವಾಡು ಮನೆಯಲ್ಲಿ ನಿರ್ಮಿಸಿದ ಬಾಲಾಲಯದಲ್ಲಿ ಕುಂಟು ಕುಡೇಲು ರಘುರಾಮ ತಂತ್ರಿಯವರ ನೇತೃತ್ವದಲ್ಲಿ ಪ್ರತಿಷ್ಠಾಪಿಸುವುದಾಗಿ ಕುಟುಂಬದ ಗುರು ಹಿರಿಯರು ನಿಶ್ಚಯಿಸಿದ್ದು, ಸಮಾರಂಭಕ್ಕೆ ಆಗಮಿಸುವಂತೆ ಒತ್ತೆಸಾ‌ರ್ ಗೌಡರ ತರವಾಡು ಸಮಿತಿ ಹಾಗೂ ಒತ್ತೆಸಾ‌ರ್ ಗೌಡರ ತರವಾಡು ಜೀರ್ಣೋದ್ಧಾರ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒತ್ತೆಸಾರು ಗೌಡರ ಕುಟುಂಬದ ಇತಿಹಾಸ
ಸುಮಾರು 300 ವರ್ಷಗಳ ಹಿಂದೆ ವಿಟ್ಲ ಅರಮನೆಯ ರಾಜರ ಆಳ್ವಿಕೆಯ ಕಾಲದಲ್ಲಿ ಜನರಿಗೆ ಹಾಗೂ ಕೃಷಿ ಬೆಳೆಗಳಿಗೆ ಪಕ್ಷಿ ಮೃಗಾದಿಗಳ ತೊಂದರೆ ಜಾಸ್ತಿಯಾದಾಗ ಆಗಿನ ರಾಜರ ಸೂಚನೆ ಮೇರೆಗೆ ಒತ್ತೆಸಾರ್‍ ಕುಟುಂಬಸ್ಥರ ಹಿರಿಯರು ಮೃಗಾದಿಗಳನ್ನು ಬೇಟೆಯಾಡಿ ಹಿಡಿದಿದ್ದರಿಂದ ರಾಜರಿಂದ ಪ್ರಶಸ್ತಿ ಲಭಿಸಿದ್ದು ಮತ್ತು ರಾಜರಿಂದ ಮಲರಾಯ, ಕಕ್ಕರಿ ಚಾಮುಂಡಿ ಎಂಬ ಶಕ್ತಿಗಳನ್ನು ಆರಾಧಿಸಲು ನಿರ್ದೇಶನವನ್ನು ಮಾಡಿ ಅವುಗಳ ಆರಾಧನೆಗಾಗಿ ಭೂಮಿಯನ್ನು ಬಿಟ್ಟುಕೊಟ್ಟಿರುವ ಬಗೆಗಿನ ವಿಚಾರ ತಾಮ್ರ ಶಾಸನಗಳಲ್ಲಿವೆ.

ಒತ್ತೆಸಾರ್‍ ತರವಾಡು ಕುಟುಂಬದಲ್ಲಿ ಒತ್ತೆಸಾರು- ಆಲಂಗಾರು, ಭಟ್ರಮೂಲೆ- ಅಲಂಗಾರು, ದೇವುಮೂಲೆ-ಸೆಂಟ್ಯಾರ್, ಮುದೂರು-ಡೆಪ್ಪಿನಿ, ದೊರ್ತೋಡಿ- ಊರುವಳು, ಬಲ್ನಾಡು-ಓಟೆಮನೆ, ಎಡಮಂಗಲ- ಕೂಟಾಜೆ, ಬೆಳ್ಳಾರೆ- ಪೆರಿಯಾಣ, ಕಡಬ-ತುಂಬೆತಡ್ಕ, ಬೈತಡ್ಕ- ಜೇಡರಕೇರಿ, ನೆಲಪ್ಪಾಲು-ಮುರ-ಧರ್ಮಸ್ಥಳ, ಕುಶಾಲನಗರ ಗುಡ್ಡೆಹೊಸೂರು, ಅರ್ಕಲ್ತೋಟ ಕುಂಡಡ್ಕ, ಗುಮ್ಮಟಗದ್ದೆ ಪಾಣಾಜೆ ವಿಭಾಗಗಳಿದ್ದು, ಎಲ್ಲ ವಿಭಾಗದವರು ಸೇರಿ ಅಂದಾಜು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ದೈವಸ್ಥಾನ ಹಾಗೂ ತರವಾಡು ಮನೆ ಜೀರ್ಣೋದ್ಧಾರ ನಡೆಸಲು ತೀರ್ಮಾನಿಸಿದ್ದು, ಇತ್ತೀಚಿಗೆ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡು ಬಂದ ಪ್ರಕಾರ ತರವಾಡು ಮನೆಯ ಜೀರ್ಣೋದ್ಧಾರ ಪೂರ್ವ ದೈವಗಳ ಬಾಲಾಲಯ ಪ್ರತಿಷ್ಠಾ ಕಾರ್ಯಕ್ರಮ ಫೆ.20ರಂದು ನಡೆಯಲಿದೆ.

LEAVE A REPLY

Please enter your comment!
Please enter your name here