






ಪುತ್ತೂರು: ಗಾಣಿಗ ಯಾನೆ ಸಪಲಿಗರ ಸೇವಾ ಸಂಘ ಪುತ್ತೂರು ಇದರ ಆಶ್ರಯದಲ್ಲಿ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಸ್ವಜಾತಿ ಬಾಂಧವರ ’ಗಾಣಿಗ ಸಂಗಮ-2026’ ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಪುತ್ತೂರು ಸಾಲ್ಮರ ಕೊಟೇಚಾ ಹಾಲ್ನಲ್ಲಿ ಮಾ.1ರಂದು ಬೆಳಗ್ಗಿನಿಂದ ಸಂಜೆಯ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜ್ರಂಭಣೆಯಿಂದ ನಡೆಯಿತು.


ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸಹೋದರರೂ ಆಗಿರುವ ಭಾರತೀಯ ತೈಲಿಕ್ ಸಾಹು ರಾಥೋಡ್ ಮಹಾಸಭಾದ ಮುಖ್ಯ ಸಲಹೆಗಾರರಾದ ಪ್ರಹ್ಲಾದ್ ದಾಮೋದರ್ ದಾಸ್ ಮೋದೀಜಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಸಮಾವೇಶಕ್ಕೆ ವಿಶೇಷ ಮೆರುಗು ನೀಡಿತು. ಸಂಪ್ರದಾಯದಂತೆ ಒಂದು ಸೇರು ಅಕ್ಕಿಯಲ್ಲಿ ತೆಂಗಿನ ಕಾಯಿ, ಅಡಿಕೆ ವೀಳ್ಯದೆಲೆ ಇಟ್ಟು ಗಣಪತಿ ದೇವರಿಗೆ ಪ್ರಾರ್ಥನೆ ಸಲ್ಲಿಸುವ ಮೂಲಕ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.




ಎಲ್ಲರೂ ಸಂಘಟಿತರಾಗುವ ಅನಿವಾರ್ಯತೆಯಿದೆ:
ಗೌರವ ಮುಖ್ಯ ಅತಿಥಿಯಾಗಿ ಆಗಮಿಸಿ, ಸನ್ಮಾನ ಸ್ವೀಕರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ತಮ್ಮ, ಭಾರತೀಯ ತೈಲಿಕ್ ಸಾಹು ರಾಥೋಡ್ ಮಹಾಸಭಾದ ಮುಖ್ಯ ಸಲಹೆಗಾರರಾದ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಅವರು ಮಾತನಾಡಿ, ಗಾಣಿಗ ಸಮಾಜದ ಮಗನೊಬ್ಬ ವಿಶ್ವಕ್ಕೆ ಸಮಾಜದ ಹೆಸರು ಬೆಳಗಿಸಿದ್ದಾನೆ. ಎಲ್ಲೇ ಹೋಗಿ ನಾನು ಮೋದಿ ಎಂದರೆ ಅವರ ಮಾತು ಕೇಳಲು ಜನ ಸಿದ್ದರಾಗುತ್ತಾರೆ. ಇದು ಗಾಣಿಗ ಸಮಾಜದ ತಾಕತ್ತು. ದೇಶದಲ್ಲಿ ಗಾಣಿಗ ಸಮಾಜದವರು ಸುಮಾರು 14 ಕೋಟಿ ಇದ್ದಾರೆ. ಎಲ್ಲರೂ ಸಂಘಟಿತರಾಗುವ ಅನಿವಾರ್ಯತೆಯಿದೆ ಎಂದರು. ನಿಮಗೆ ಅನಿಸಿರಬಹುದು, ಸರ್ಕಾರಗಳು ಗಾಣಿಗ ಸಮಾಜದ ಮಾತು ಕೇಳುವುದಿಲ್ಲ, ಗಾಣಿಗ ಸಮಾಜಕ್ಕೆ ಯಾವುದೇ ಸವಲತ್ತು ಕೊಡುವುದಿಲ್ಲವೆಂದು. ಆದರೆ ಒಗ್ಗಟ್ಟಾದಾಗ ಎಲ್ಲವೂ ಸಿಗುತ್ತದೆ ಎಂದ ಅವರು ಗಾಣಿಗ ಸಮಾಜ ಗೌರವಯುತ ಸಮಾಜ. ಈ ಸಮಾಜ ರಾಮನಿಗೆ ರಾವಣನ ವಿರುದ್ದದ ಯುದ್ಧದಲ್ಲಿ ನೆರವಾದ ಸಮಾಜ ಎಂದರು.
ವಿಶ್ವಗಾಣಿಗ ಸಂಸ್ಥೆಯಾಗಬೇಕೆಂಬ ಕೂಗಿಗೆ ಸಂಘಟನೆ ಒಂದಾಗಬೇಕು:
ಪ್ರಧಾನ ಭಾಷಣಕಾರರಾದ ಮುಂಬೈ ಸಾಪಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ. ಸಪಲ್ಯ ಅವರು ಮಾತನಾಡಿ, ಗೀತೆಯ ಉಪದೇಶದಂತೆ ಮಾತೃಭೂಮಿಗೆ ಗೌರವ, ಸಂಸತ್ಗೆ ನಮಸ್ಕಾರ ಸಹಿತ ಭಾರತೀಯ ಸಂಸ್ಕೃತಿಗೆ ಒತ್ತುಕೊಡುತ್ತಿರುವವರು ನಮ್ಮ ಪ್ರಧಾನಿ ನರೇಂದ್ರ ಮೋದಿಯವರು. ಅವರ ಸಹೋದರ ನಮ್ಮ ಸಮಾಜದ ಏಳ್ಗೆಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಇವತ್ತು ಇಚ್ಚಾಶಕ್ತಿಯ ಪ್ರೇರಣೆಯಿಂದಾಗಿ ಸಂಘ ಬೆಳೆದಿದೆ. ಈ ಸಮಾವೇಶ ಕೇವಲ ಸಮಾರಂಭವಾಗದೆ ಗಾಣಿಗರ ಆತ್ಮಾವಲೋಕನವಾಗಬೇಕಾಗಿದೆ. ನಾವು ಎಲ್ಲಿ ತಪ್ಪಿದ್ದೇವೆ, ಹೇಗೆ ಬೆಳೆಯಬೇಕೆಂಬ ಸಮಾಲೋಚನೆ ಮಾಡಬೇಕಾಗಿದೆ. ವಿಶ್ವಗಾಣಿಗ ಸಂಸ್ಥೆಯಾಗಬೇಕೆಂಬ ಕೂಗಿಗೆ ನಾವೆಲ್ಲರೂ ಒಂದಾಗಬೇಕು. ಈ ನಿಟ್ಟಿನಲ್ಲಿ ಯುವಕರ ಪಾಲ್ಗೊಳ್ಳುವಿಕೆ ಆಗಬೇಕು. ಇಲ್ಲವಾದರೆ ಸಂಘ ಕುಂಠಿತವಾಗಬಹುದು. ಪುತ್ತೂರಿನಲ್ಲಿ ಗಾಣಿಗರ ಸಮುದಾಯ ಭವನ ಆಗಬೇಕು. ಇದಕ್ಕಾಗಿ ಶಾಸಕರಿಗೆ ಮನವಿ ನೀಡಬೇಕು. ಅವರ ಸಹಕಾರ ಬಂದಾಗ ಮುಂಬೈಯಿಂದ ಗಾಣಿಗ ಸಮುದಾಯವು ಪೂರ್ಣ ಸಹಕಾರ ನೀಡುತ್ತದೆ. ಈ ಸಮುದಾಯಭವನ ನಿರ್ಮಾಣಕ್ಕೆ ಪುತ್ತೂರಿನ ಗಾಣಿಗ ಸಂಘದ ಅಧ್ಯಕ್ಷ ಲಕ್ಷ್ಮೀಪ್ರಸಾದ್ ಬೆಟ್ಟ ಅವರಲ್ಲಿ ಕಾಳಜಿ ಇದೆ ಎಂದ ಅವರು ಯಕ್ಷಗಾನದ ರೂಪದಲ್ಲಿ ಗಾಣಿಗ ಸಂಘವನ್ನು ಕೊಂಡಾಡುವ ಹಾಡನ್ನು ಹೇಳಿ ಭಾಷಣ ಕೊನೆಗೊಳಿಸಿದರು.

ವಿಕಸಿತ ಭಾರತಕ್ಕೆ ಒಟ್ಟಾಗಿ ಹೆಜ್ಜೆ ಹಾಕೋಣ:
ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸನಾತನ ಸಂಸ್ಕೃತಿ ಬೆಳೆಯಲು ತಾಯಂದಿರು ಕಾರಣ. ಅವರು ಈ ಸಮಾವೇಶದಲ್ಲಿ ಅತ್ಯಂತ ಹೆಚ್ಚು ಪಾಲು ಪಡೆದಿರುವುದು ಸಂತೋಷ. ಯುವಕರು ಉದ್ಯಮಕ್ಕೆ ಬರಬೇಕೆಂಬ ದೃಷ್ಟಿಯಿಂದ ಬೊಳ್ಪು ಎಂಬ ಕಾರ್ಯಕ್ರಮ ಪ್ರಾರಂಭ ಮಾಡಿದ್ದೇವೆ. ಸಾವಿರಕ್ಕೂ ಹೆಚ್ಚು ಅರ್ಜಿ ಬಂದಿದೆ. ಇದು ಪ್ರಧಾನಿ ನರೇಂದ್ರ ಮೋದಿಯವರ ವಿಕಸಿತ ಭಾರತದ ಕಲ್ಪನೆ. ಅವರೊಂದಿಗೆ ನಾವು ತೊಡಗಿಸಿಕೊಳ್ಳಬೇಕು ಎಂದರು. ಹಿಂದೂ ಸಮಾಜ ಅತ್ಯಂತ ಪ್ರಬಲವಾಗಲು ಇಂತಹ ಹಲವು ಸಮಾಜಗಳು ಕಾರಣ. ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಕೆಲವವರು ಅಸಹನೆಯ ಮಾತನ್ನು ಆಡುತ್ತಾರೆ. ಹಿಂದೂ ಸಮಾಜ ಒಂದಾಗಿ ಒಟ್ಟಾಗಿ ಹೋಗಬೇಕಾದ ಅವಶ್ಯಕತೆ ಬೇಕಾಗಿದೆ. ಅಶಕ್ತರಿಗೆ ಸಹಾಯ, ಅನ್ಯಾಯಕ್ಕೆ ನ್ಯಾಯ ಕೊಡುವ ಕೆಲಸ ಆಗಬೇಕು. ಗಾಣಿಗ ಸಮಾಜ ಧರ್ಮದ ಹಾದಿಯಲ್ಲಿ ನಡೆಯುವ ಸಮಾಜ. ಇಂತಹ ಸಮಾಜದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಕನಸಾದ ವಿಕಸಿತ ಭಾರತಕ್ಕಾಗಿ ಒಟ್ಟಾಗಿ ಹೆಜ್ಜೆ ಹಾಕೋಣ ಎಂದರು.
ಸಮಾಜಕ್ಕೆ ಬೆಳಕು ನೀಡಿದ ಸಮಾಜ:
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅವರು ಮಾತನಾಡಿ, ಗಾಣಿಗ ಸಮಾಜ ದೇಶಕ್ಕೆ ನಾಯಕನನ್ನು ಕೊಟ್ಟ ಸಮಾಜ. ಇವತ್ತು ಬೇರೆ ಬೇರೆ ಜಾತಿ ಇದ್ದರೂ ನದಿ ಸಮುದ್ರಕ್ಕೆ ಸೇರಿದಂತೆ ಸನಾತನ ಹಿಂದೂ ಸಮಾಜ ಎಲ್ಲಾ ಜಾತಿ ಸಮುದಾಯದಿಂದ ಶಕ್ತಿಯುತವಾಗಿದೆ. ಗಾಣಿಗ ಸಮಾಜ ಸಮಾಜಕ್ಕೆ ಬೆಳಕು ನೀಡುವ ಸಮಾಜ ಎಂದರು.

ಜಾಗ ತೋರಿಸಿದರೆ ಮುಖ್ಯಮಂತ್ರಿಗಳಿಂದ ಅನುಮೋದನೆ:
ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ, ಪುತ್ತೂರಿನವರು ಏನಾದರೂ ಮಾಡಿದರೆ ಅದನ್ನು ವ್ಯವಸ್ಥಿತವಾಗಿ ಮಾಡುತ್ತಾರೆ ಎಂಬುದಕ್ಕೆ ಗಾಣಿಗ ಸಮಾಜದ ಕಾರ್ಯಕ್ರಮ ಸಾಕ್ಷಿಯಾಗಿದೆ. ಇದಕ್ಕಾಗಿ ಪುತ್ತೂರಿನ ಗಾಣಿಗ ಸಮಾಜಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಕಷ್ಟದಲ್ಲಿದ್ದವರನ್ನು ಮೇಲೆತ್ತುವ, ವಿದ್ಯಾಭ್ಯಾಸ ಕೊಡುವ ಕೆಲಸ ಮಾಡಬೇಕು. ಆಗ ಮುಂದಿನ ಪೀಳಿಗೆಗೆ ಕೆಲಸ ಮಾಡಲು ಆಗುತ್ತದೆ. ಗಾಣಿಗ ಅಭಿವೃದ್ದಿ ನಿಗಮ ಕರ್ನಾಟಕದಲ್ಲಿ ಇದೆ. ಅದಕ್ಕೆ ಶಕ್ತಿ ಕೊಡುವ ಕೆಲಸ ಆಗಬೇಕು. ಈ ಸಮಾವೇಶದಿಂದ ಸಮಾಜಕ್ಕೆ ಸಂದೇಶ ಹೋಗಬೇಕು ಎಂದರು. ಸರಿಯಾದ ಆರ್.ಟಿ.ಸಿ., ಸರಕಾರಿ ಜಾಗ ತೋರಿಸಿದಲ್ಲಿ ಮುಖ್ಯಮಂತ್ರಿಗಳಿಂದ ಅನುಮೋದನೆ ತರುವ ಕೆಲಸ ಮಾಡುತ್ತೇನೆ. ಈಗಾಗಲೇ ಬಂಟರ, ಕುಲಾಲ, ಭಂಡಾರಿ ಸಮುದಾಯಕ್ಕೆ ಜಾಗ ನೀಡಲಾಗಿದೆ ಎಂದರು. ಈ ವೇಳೆ ಸಭೆಯಲ್ಲಿದ್ದವರು ಚಪ್ಪಾಳೆ ತಟ್ಟಿದರು. ಈಗಲೇ ಚಪ್ಪಾಳೆ ಹೊಡಿಬೇಡಿ. ಜಾಗ ಮಂಜೂರಾಗಲಿ. ಬಳಿಕ ಚಪ್ಪಾಳೆ ಹೊಡಿಯಿರಿ ಎಂದ ಅವರು ಪುತ್ತೂರಿನ ಇತಿಹಾಸದಲ್ಲಿ 1 ಸೆಂಟ್ಸ್ ಜಾಗ ಕೊಡದವರು ಇದ್ದಾರೆ. ಆದರೆ ನನ್ನಲ್ಲಿ ಮನವಿ ಮತ್ತು ಜಾಗ ತೋರಿಸಿ, ಅದನ್ನು ಪಾಲೋ ಮಾಡುವ ಕೆಲಸ ಆಗಬೇಕು. ಇಲ್ಲಿ ಕಾಂಗ್ರೆಸ್, ಬಿಜೆಪಿ ಎಂದು ನೋಡಬೇಡಿ. ಏನಾದರೂ ಕೆಲಸವಿದ್ದರೆ ಹೇಳಿ. ಸೋಮವಾರ ಕಚೇರಿಯಲ್ಲಿ ನನ್ನನ್ನು ಭೇಟಿ ಮಾಡಿ ಎಂದರು.
ಸಮುದಾಯದಲ್ಲಿ ಪ್ರತಿಭೆಗೆ ಕೊರತೆಯಿಲ್ಲ;
ಕೆಪಿಸಿಸಿ ಉಪಾಧ್ಯಕ್ಷ, ವಿಧಾನ ಪರಿಷತ್ ಮಾಜಿ ಅಧ್ಯಕ್ಷರೂ ಆದ ವಿ.ಆರ್. ಸುದರ್ಶನ್ ಅವರು ಮಾತನಾಡಿ, ಬ್ಯಾರಿಷ್ಟರ್ ರತ್ನ ಪ್ರಶಸ್ತಿ ಪಡೆದ ಎಲ್ಲಪ್ಪರವರು ಸಾಧನೆ ಮಾಡಿದ ಮಹಾನ್ ವ್ಯಕ್ತಿ. ಅವರ ಕಾಲದಲ್ಲೇ ಮಂಗಳೂರಿನಲ್ಲಿ ರೈಲ್ವೇ ಸ್ಟೇಷನ್ ಜಾಗ ದಾನ ಮಾಡಿದ್ದಾರೆ ಎಂಬುದು ನಮಗೆ ಹೆಮ್ಮೆ. ಪುತ್ತೂರು ಅಂದಾಗ ಮಹಾಲಕ್ಷ್ಮೀ ದೇವಸ್ಥಾನ ನೆನಪಾಗುತ್ತದೆ. ಇಲ್ಲಿಯೂ ಗಾಣಿಗ ಸಮುದಾಯದವರು ಸಮಾಜ ಸೇವೆ ಮಾಡುತ್ತಿದ್ದಾರೆ. ಪುತ್ತೂರು ಪವಿತ್ರ ಧಾರ್ಮಿಕ ಕ್ಷೇತ್ರ. ಬ್ಯಾಂಕ್, ಸಾಹಿತ್ಯ, ಸಾಂಸ್ಕೃತಿಕ ಕ್ಷೇತ್ರಕ್ಕೆ ಹೆಚ್ಚಿನ ಕೊಡುಗೆ ನೀಡಿದ ಕರಾವಳಿ ಪ್ರದೇಶವನ್ನು ಕರ್ನಾಟಕ ಹೆಮ್ಮೆ ಪಡುತ್ತದೆ. ಆದರೆ ಸಾಮಾಜಿಕ ಸಂಘರ್ಷಗಳಿಂದ ಇಲ್ಲಿ ಅಭಿವೃದ್ಧಿ ಕುಂಠಿತ ಆಗುತ್ತಿದೆ. ಕೋಮು ಸೌಹಾರ್ದತೆ, ಭಾಷಾ ಸೌಹಾರ್ದತೆಯಿಂದ ಪ್ರಗತಿ ಸಾಧ್ಯ ಎಂದರು. ಗಾಣಿಗ ಸಮಾಜದಲ್ಲಿ ಜನಸಂಖ್ಯೆಯಲ್ಲಿ ಕಡಿಮೆ ಇದ್ದರೂ ಪ್ರತಿಭೆ ಮತ್ತು ಶ್ರಮದಲ್ಲಿ ಬಹಳ ದೊಡ್ಡ ಸಮುದಾಯವಾಗಿದೆ. ಈ ಸಮಾಜ ಅನೇಕ ಕೊಡುಗೆ ನೀಡಿದೆ. ವಿದ್ಯುತ್, ವಿಜ್ಞಾನ ಬರುವ ಮೊದಲೇ ದೇವಸ್ಥಾನ, ಮನೆಯಲ್ಲಿ ಉಪಯೋಗಿಸುತ್ತಿದ್ದ ದೀಪದ ಎಣ್ಣೆಯನ್ನು ಕೊಡುಗೆಯಾಗಿ ನೀಡಿದೆ. ಅಖಿಲ ಕರ್ನಾಟಕ ಗಾಣಿಗರ ಸಂಘ ಇದೆ. ೫೦ನೇ ವರ್ಷದ ಸಮಾರಂಭಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಂಘಕ್ಕೆ ರೂ.5ಕೋಟಿ ಘೋಷಣೆ ಮಾಡಿದ್ದರು. ಗಾಣಿಗ ಸಮಾಜಕ್ಕಾಗಿ ದೇವರಾಜ ಅಭಿವೃದ್ಧಿ ನಿಗಮ ಸ್ಥಾಪಿಸಲಾಗಿದೆ. ಗಾಣಿಗ ಸಮಾಜದಲ್ಲಿ ವಿದ್ಯಾವಂತರಿದ್ದಾರೆ. ಸಮುದಾಯದ ನರೇಂದ್ರ ಮೋದಿಯವರು ದೇಶದ ಪ್ರಧಾನಿ ಮಂತ್ರಿಯಾಗಿದ್ದಾರೆ. ಗಾಣಿಗ ಉದ್ಯಮವನ್ನು ವಿಶ್ವಕರ್ಮ ಯೋಜನೆ ಅಡಿಯಲ್ಲಿ ತರಬೇಕೆಂದು ನಾವು ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ ಎಂದರು.

ಗಾಣಿಗ ಸಮಾಜದಿಂದ ವಿವಿಧ ಕ್ಷೇತ್ರಕ್ಕೆ ಅಪಾರ ಕೊಡುಗೆ;
ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ, ಸಮಾಜದ ವಿವಿಧ ಕ್ಷೇತ್ರಗಳಿಗೆ ಗಾಣಿಗ ಸಮಾಜ ತನ್ನದೇ ಆದ ಕೊಡುಗೆ ನೀಡುತ್ತಿದೆ. ಮಹಾಲಿಂಗೇಶ್ವರ ದೇವಸ್ಥಾನದಲ್ಲೂ ಗಾಣಿಗ ಸಮಾಜದಿಂದಲೇ ಶುದ್ಧ ಎಣ್ಣೆ ಸಮರ್ಪಣೆ ವ್ಯವಸ್ಥೆ ನಡೆದು ಬಂದಿರುವುದು ಪ್ರಶ್ನಾಚಿಂತನೆಯಲ್ಲೇ ಕಂಡು ಬಂದಿತ್ತು. ಅದರಂತೆ ಮೋಹನ್ ಗಾಣಿಗ ಅವರ ಮೂಲಕ ದೇವಸ್ಥಾನಕ್ಕೆ ಶುದ್ಧ ಎಳ್ಳೆಣ್ಣೆ ಪಡೆಯುವ ಅವಕಾಶವಾಗಿದೆ. ಪ್ರತಿ ತಿಂಗಳು ದೇವರಿಗೆ ಎಳ್ಳೆಣ್ಣೆಯ ಅಭಿಷೇಕವೂ ನಡೆಯುತ್ತಿದೆ ಎಂದರು.
ಜಿಲ್ಲೆಯಲ್ಲಿ 4ನೇ ಸ್ಥಾನದಲ್ಲಿ ಗಾಣಿಗ ಸಮಾಜ:
ಬಂಟ್ವಾಳ ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ ಅವರು ಮಾತನಾಡಿ, ಪುತ್ತೂರಿನ ಈ ಕಾರ್ಯಕ್ರಮ ಮಾದರಿಯಾಗಿದೆ. ಮುಂದಿನ ದಿನ ಪ್ರತಿ ತಾಲೂಕಿನಲ್ಲೂ ಸಮುದಾಯ ಬೆಳೆಯಬೇಕು. ಗಾಣಿಗ ಸಮುದಾಯ ಸಣ್ಣ ಸಮುದಾಯವಲ್ಲ. ಜನಸಂಖ್ಯೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗಾಣಿಗ ಸಮಾಜ ೪ನೇ ಸ್ಥಾನದಲ್ಲಿದೆ. ಮುಂದಿನ ದಿನ ಪ್ರತಿ ತಾಲೂಕಿನಲ್ಲೂ ಸಮಾಜದ ಜನಸಂಖ್ಯೆಯ ಸರ್ವೆ ಮಾಡಬೇಕು. ಊರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಕ್ಕೆ ಊರಿಗೊಂದು ಗಾಣಿಗ ಸಮುದಾಯದ ಮನೆ ಇರಬೇಕಾಗಿದೆ. ದೇವತಾ ಕಾರ್ಯದಲ್ಲಿ ಗಾಣಿಗ ಸಮಾಜ ಮುಂಚೂಣಿಯಲ್ಲಿದೆ. ಇವತ್ತಿಗೂ ಹಿಂದಿನ ಪರಂಪರೆಯನ್ನು, ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವುದು ಗಾಣಿಗರು. ಮುಂದಿನ ದಿನ ಗಾಣಿಗರು ಎಲ್ಲಾ ಕ್ಷೇತ್ರದಲ್ಲಿ ಮುಂದೆ ಬರಬೇಕು. ಆರ್ಥಿಕ, ಶೈಕ್ಷಣಿಕ, ರಾಜಕೀಯವಾಗಿ ಬಲಾಢ್ಯರಾಗಲು ಒಂದಾಗೋಣ ಎಂದರು.

ಜಾತಿ ಸಂಘವಲ್ಲ, ಎಲ್ಲಾ ಸಮುದಾಯವನ್ನೂ ಒಗ್ಗೂಡಿಸುವ ಸಂಘ:
ಗಾಣಿಗ ಯಾನೆ ಸಪಲಿಗರ ಸೇವಾ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಲಕ್ಷ್ಮೀಪ್ರಸಾದ್ ಬೆಟ್ಟ ಪುತ್ತೂರು ಮಾತನಾಡಿ, ಸಂಘಟನೆಯನ್ನು ಬಲಗೊಳಿಸುವ ಉದ್ದೇಶವಿದೆ. ಯುವ ಸಮುದಾಯವು ಶೈಕ್ಷಣಿಕ, ಆರ್ಥಿಕವಾಗಿ ಬೆಳೆಯಬೇಕು. ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಸಂಘ ಮಾಡಿದ್ದೇವೆ. ಇದು ಕೇವಲ ಒಂದು ಜಾತಿ ಸಂಘವಲ್ಲ. ಎಲ್ಲಾ ಸಮುದಾಯವನ್ನು ಒಗ್ಗೂಡಿಸಿ ಕೆಲಸ ಮಾಡುವ ಉದ್ದೇಶವಿದೆ. ಸಂಘದ ಬೆಳವಣಿಗೆಯಲ್ಲಿ ನನ್ನ ಶ್ರಮಕ್ಕಿಂತ ಸಂಘದ ಸಕ್ರೀಯ ಸದಸ್ಯರ ಶ್ರಮ ಹೆಚ್ಚಿದೆ. ಅವರನ್ನು ಮುಂದಿನ ದಿನ ಅಭಿನಂದಿಸಲಾಗುವುದು ಎಂದು ಹೇಳಿದರು.
ಸಂಘದ ಮೂಲಕ ಕಟ್ಟಕಡೇಯ ವ್ಯಕ್ತಿಗೂ ಸೌಲಭ್ಯ:
ಗಾಣಿಗರ ಯಾನೆ ಸಪಲಿಗರ ಸೇವಾ ಸಂಘದ ಕಾರ್ಯದರ್ಶಿ ಜಯಂತ ಉರ್ಲಾಂಡಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ನಮ್ಮ ಸಂಘ ನ.೨೪ ಕ್ಕೆ ಪ್ರಾರಂಭಗೊಂಡಿತು. ಕೆಲವೇ ಅವಧಿಯಲ್ಲಿ ದೊಡ್ಡ ಸಮಾವೇಶ ಮಾಡಲು ಒಂದು ಸಂಚಲನ ಸೃಷ್ಟಿಯಾಗಿದೆ. ಈ ಹಿಂದೆಯೂ ಸಂಘಟನೆ ಇತ್ತು. ಆದರೆ ಅದು ಮುಂದುವರಿಯಲಿಲ್ಲ. ಈಗ ಸಂಘಟನೆ ಮತ್ತೊಮ್ಮೆ ಬಲಗೊಂಡಿದೆ. ಸಮುದಾಯದ ತೀರಾ ನಿರ್ಗತಿಕರು, ಬಡವರ ಏಳ್ಗೆಗಾಗಿ ಸಂಘ ಕೆಲಸ ಮಾಡಲಿದೆ. ಸಂಘದ ಮೂಲಕ ಕಟ್ಟಕಡೇಯ ವ್ಯಕ್ತಿಗೂ ಸೌಲಭ್ಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು. ಈ ನಿಟ್ಟಿನಲ್ಲಿ ಸಮಾವೇಶ ಹಮ್ಮಿಕೊಳ್ಳಲು ಪ್ರತಿ ದಿನ ಸಂಜೆ ಮನೆ ಮನೆಗೆ ಭೇಟಿ ಮಾಡುತ್ತಿದ್ದೆವು. ಪುತ್ತೂರಿನಲ್ಲಿ ಸುಮಾರು 1800 ಜನರನ್ನು ಸಂಘಟಿತರನ್ನಾಗಿಸಿದ್ದೇವೆ. ನಮ್ಮೊಂದಿಗೆ ಬಲಿಷ್ಠವಾದ ಅಧ್ಯಕ್ಷರಿದ್ದು ಯುವ ಪಡೆಯನ್ನು ಸಂಘಟಿಸಿದ್ದಾರೆ. ಸಮಾವೇಶಕ್ಕೆ ದ.ಕ.ಜಿಲ್ಲೆ, ಉಡುಪಿ, ಕಾಸರಗೋಡಿನಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದರು.
ಗೌರವ ಸನ್ಮಾನ:
ಭಾರತೀಯ ತೈಲಿಕ್ ಸಾಹು ರಾಥೋಡ್ ಮಹಾಸಭಾ ಮುಖ್ಯ ಸಲಹೆಗಾರರಾದ ಪ್ರಹ್ಲಾದ್ ದಾಮೋದರ್ ದಾಸ್ ಮೋದೀಜಿ, ಕೆಪಿಸಿಸಿ ಉಪಾಧ್ಯಕ್ಷ, ವಿಧಾನ ಪರಿಷತ್ ಮಾಜಿ ಅಧ್ಯಕ್ಷ ವಿ.ಆರ್. ಸುದರ್ಶನ್, ಗಿರಿಜಾ ವೆಲ್ಫೆರ್ ಅಸೋಸಿಯೇಶನ್ ಮುಂಬೈ ಇದರ ಅಧ್ಯಕ್ಷ, ಉದ್ಯಮಿ ವಸಂತ ಜಿ ಸಪಲ್ಯ ಮುಂಬೈ, ಅಖಿಲ ಕರ್ನಾಟಕ ಗಾಣಿಗರ ಸಂಘ ಬೆಂಗಳೂರು ಇದರ ಎಂ. ಆರ್. ರಾಜಶೇಖರ ಗಾಣಿಗ, ಸಾಪಲ್ಯ ಸೇವಾ ಸಂಘ ಮುಂಬೈ ಇದರ ಅಧ್ಯಕ್ಷ ಶ್ರೀನಿವಾಸ ಪಿ. ಸಪಲ್ಯ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಶಾಸಕರಿಗೆ ಮನವಿ ಪತ್ರ:
ಗಾಣಿಗ ಯಾನೆ ಸಪಲಿಗರ ಸಂಘದ ಸಮುದಾಯದ ಹಿತದೃಷ್ಟಿಯಿಂದ ಸಂಘದ ಚಟುವಟಿಕೆ ನಡೆಸಲು ಕಚೇರಿ ಮತ್ತು ಸಭಾಂಗಣದ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಶಾಶ್ವತ ಕಟ್ಟಡಕ್ಕೆ ಶಾಸಕರಲ್ಲಿ ಮನವಿ ಮಾಡಲಾಯಿತು. ಸಂಘದ ಕಾರ್ಯದರ್ಶಿ ಜಯಂತ್ ಉರ್ಲಾಂಡಿಯವರು ಮನವಿ ಪತ್ರ ಮಂಡಿಸಿದರು.

ಸಾಧಕರಿಗೆ ಸನ್ಮಾನ:
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಗಾಣಿಗ ಸಮಾಜದ ಸಾಧಕರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಮಂಗಳೂರು ಲೇಡಿಗೋಷನ್ ಆಸ್ಪತ್ರೆಯ ವೈದ್ಯಾಽಕಾರಿ ಡಾ.ದುರ್ಗಾಪ್ರಸಾದ್, ಡಾ ಸತ್ಯಶಂಕರ, ಡಾ.ಇಂದಿರಾಶಂಕರ್, ಮಾಜಿ ಸೈನಿಕರಾದ ಕೃಷ್ಣಪ್ಪ ಬೋಲಾರ, ದಾಮೋದರ ನೆಲ್ಯಾಡಿ, ಸುರೇಶ್ ಕೆ ಉಪ್ಪಿನಂಗಡಿ, ಸಾಮಾಜಿಕ ಸೇವೆಯಲ್ಲಿ ತಿಮ್ಮಪ್ಪ ಸಪಲ್ಯ, ಜಯಂತಿ ಎಸ್ ಬಂಗೇರ, ರೋಹಿಣಿ ಕೆ ಬಂಟ್ವಾಳ , ಶೇಷಪ್ಪ, ಧರ್ಣಪ್ಪ, ಉರಗ ತಜ್ಞ ತೇಜಸ್ ಗಾಣಿಗ, ಕ್ರೀಡಾ ಸಾಧಕರಾದ ಸಹನ್ ಕೊಲ್ಪೆ, ಆದರ್ಶ ಅತ್ತಾವರ, ಅವನಿ, ಅನ್ವಿ, ಪ್ರವೀಣ್ ಗಾಣಿಗ ಉರ್ಲಾಂಡಿ, ಜಯಶ್ರೀ ಗಾಣಿಗ, ಲಕ್ಷ್ಮೀ ವಿಟ್ಲ, ಅನನ್ಯ, ಲಕ್ಷ್ಮೀಸಾಗರ್ ಅವರನ್ನು ಗೌರವಿಸಲಾಯಿತು.
ಕಲಾವಿದರಿಗೆ ಗೌರವ:
ಸಮುದಾಯ ಕಲಾವಿದರಾದ ಅನಾರ್ಕಲಿ ಚಿತ್ರದ ನಿರ್ದೇಶಕ ಹರ್ಷಿತ್ ಸೋಮವೇಶ್ವರ, ಕಟ್ಟೆಮಾರು ಚಿತ್ರದ ನಟ, ನಿರ್ದೇಶಕ ರಕ್ಷಿತ್ ಗಾಣಿಗ ಅಡ್ಯಾರ್ಪದವು, ಕಲರ್ಸ್ ಕನ್ನಡದ ಕಿರುತೆರೆ ನಟ ರಿದ್ವನ್ ಗಾಣಿಗ ಪುತ್ತೂರು ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕೊಂಬು, ಠಾಸೆಸೇವೆ ನೀಡಿದವರಿಗೆ ಸನ್ಮಾನ:
ಕೊಂಬು, ಠಾಸೆ ಸೇವೆ ನೀಡಿದ ರವಿರಾಜ್ ಗಾಣದಕೊಟ್ಯ, ಪ್ರವೀಣ್ ಗಾಣದಕೊಟ್ಯ ಕುಂಜಾರು, ಯೋಗೀಶ್ ಕಂಬಳಗದ್ದೆ ಪುತೂ ರು, ವಿಶ್ವನಾಥ ಮಿತ್ತೂರು, ಚಂದ್ರ ಮಿತ್ತೂರು, ಜಯರಾಮ ಅನಂತಾಡಿ, ಹೇಮಂತ್, ಈಶ್ವರ, ರಾಜೇಶ್ ಕಂಬಳಬೆಟ್ಟು, ಹರೀಶ್, ಧನಂಜಯ, ಗೋಪಾಲ, ರಕ್ಷಾ ವಿದ್ಯಾಪುರ, ಕೃತಿಕ್, ಚಂದ್ರಪ್ಪ ಮಿತ್ತೂರು, ರಶ್ವಿನ್ ಕುಂಜಾರು ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಸಾಧಕರಿಗೆ ಗೌರವ ಪುರಸ್ಕಾರ:
ವಿವಿಧ ಕ್ಷೇತ್ರದ ಸಾಧಕರಾದ ಸೋಮಪ್ಪ ಸಪಲ್ಯ, ಸಂದೇಶ್, ಮೋನಪ್ಪ, ತನ್ವಿ, ರಿದನ್ಶ್ರೀನಿವಾಸ್, ಶ್ರೇಯ, ಶ್ರದಾ ಕೆಮ್ಮಾಯಿ, ಪ್ರವೀಣ್ ಉರ್ಲಾಂಡಿ, ಕಮಲಾಕ್ಷ ಉಳ್ಳಾಲ, ರವಿ ವಾಮದಪದವು, ಮಹಾಬಲ ಅಡ್ಯಾರು, ರವಿ ಮೂಡಬಿದ್ರೆ, ಮನೀಶ್ ಮಿತ್ತೂರು, ನಾರಾಯಣ ಅವರನ್ನು ಸಂಘದ ವತಿಯಿಂದ ಪುರಸ್ಕರಿಸಲಾಯಿತು.
ಅಖಿಲ ಕರ್ನಾಟಕ ಗಾಣಿಗರ ಸಂಘ ಬೆಂಗಳೂರು ಇದರ ಎಂ.ಆರ್. ರಾಜಶೇಖರ ಗಾಣಿಗ, ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಅಖಿಲ ಕರ್ನಾಟಕ ಜ್ಯೋತಿ ನಗರ ವೈಶ್ಯ ಗಾಣಿಗ ಸಂಘದ ಅಧ್ಯಕ್ಷ ಪಿ.ಜಿ. ವಿಜಯ್ಕುಮಾರ್, ಗಿರಿಜಾ ವೆಲ್ಫೆರ್ ಅಸೋಸಿಯೇಶನ್ ಮುಂಬೈ ಇದರ ಅಧ್ಯಕ್ಷ, ಉದ್ಯಮಿ ವಸಂತ ಜಿ ಸಪಲ್ಯ ಮುಂಬೈ, ಗಾಣಿಗ ಸಂಘ ಉಪ್ಪಿನಂಗಡಿ ಅಧ್ಯಕ್ಷ ಹರಿರಾಮಚಂದ್ರ, ಉದ್ಯಮಿ ಭುವನೇಶ್, ರಘು ಸಪಲ್ಯ ಪಾಣೆಮಂಗಳೂರು, ಮಾತೃಮಂಡಳಿಯ ಅಧ್ಯಕ್ಷೆ ರಮಣಿ ಡಿ ಗಾಣಿಗ ಕುಂಜಾರು, ಪ್ರಹ್ಲಾದ್ ದಾಮೋದರ್ ಮೋದಿ ಅವರ ಪುತ್ರಿ ಸೋನಾಲ್ ಬೆನ್ ಮೋದಿ, ಅಳಿಯ ವಿರಾಜ್, ಮಧ್ಯಪ್ರದೇಶದ ಪ್ರವೀಣ್ ಸಹಿತ ಹಲವು ಮಂದಿ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಗಾಣಿಗ ಯಾನೆ ಸಪಲಿಗರ ಸಂಘದ ಉಪಾಧ್ಯಕ್ಷ ಪ್ರದೀಪ್ ಬೊಳ್ವಾರು, ಗೌರವ ಸಲಹೆಗಾರ ಕಿರಣ್ ಸಪಲ್ಯ, ಗೋವರ್ಧನ್ ಕಲ್ಲೇಗ, ಪ್ರಧಾನ ಕಾರ್ಯದರ್ಶಿ ಸಂದೀಪ್ ನೆಲ್ಲಿಕಟ್ಟೆ ಅತಿಥಿಗಳನ್ನು ಗೌರವಿಸಿದರು. ಭಾಗ್ಯ, ಶರ್ವಾಣಿ, ತನ್ವಿ ಪ್ರಾರ್ಥಿಸಿದರು. ದೇವಿಪ್ರಸಾದ್ ವಂದೇ ಮಾತರಂ ಹಾಡಿದರು. ಗಾಣಿಗ ಯಾನೆ ಸಪಲಿಗರ ಸಂಘದ ಕಾರ್ಯದರ್ಶಿ ಜಯಂತ ಉರ್ಲಾಂಡಿ ಸ್ವಾಗತಿಸಿ, ವಂದಿಸಿದರು. ದೀಪಕ್ ಅಡ್ಯಾರ್ ಮತ್ತು ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು. ಗಾಣಿಗ ಯಾನೆ ಸಪಲಿಗರ ಸಂಘದ ಉಪಾಧ್ಯಕ್ಷ ಪ್ರದೀಪ್ ಬೊಳ್ವಾರು, ರಾಜೇಶ್ ಕಲ್ಲೇಗ, ವಿನಯ್ ಕಲ್ಲೇಗ, ಸಂಘದ ಪ್ರಧಾನ ಕಾರ್ಯದರ್ಶಿ ಸಂದೀಪ್ ನೆಲ್ಲಿಕಟ್ಟೆ, ಸಂಚಾಲಕರಾದ ಪ್ರಶಾಂತ್ ಮುರ, ವಿಜಯಕುಮಾರ್ ಕೊಪ್ಪಳ, ಜೊತೆ ಕಾರ್ಯದರ್ಶಿಗಳಾದ ಶಶಿಧರ್ ಕಲ್ಲೇಗ, ವಿನೋದ್ ಕುಮಾರ್, ಗೌರವ ಸಲಹೆಗಾರರಾದ ಮೋಹನ್ ನಗರ, ಸುರೇಶ್ ಎಂ., ಗೋವರ್ಧನ ಕಲ್ಲೇಗ, ವಸಂತ ಜಿ ಸಪಲ್ಯ ಕುಂಜಾರು, ಖಜಾಂಜಿ ಹೇಮಚಂದ್ರ ಬೊಳ್ವಾರು, ಕಾರ್ತಿಕ್ ಕಬಕ, ಮಾತೃಮಂಡಳಿಯ ಉಪಾಧ್ಯಕ್ಷೆ ವನಿತಾ ಕೆ.ಟಿ. ಉರ್ಲಾಂಡಿ, ರೂಪಶ್ರೀನಿವಾಸ್, ಕಾರ್ಯದರ್ಶಿ ಸುನಿತಾ ನಗರ, ವಿಜಯಲಕ್ಷ್ಮೀ ನೆಲ್ಲಿಕಟ್ಟೆ, ಜೊತೆಕಾರ್ಯದರ್ಶಿ ಗುಲಾಬಿ ಯೋಗೀಶ್ , ಶ್ವೇತಾ ನಾಗೇಶ್, ಕೋಶಾಧಿಕಾರಿ ಮಮತಾ ಸಂದೇಶ್, ಜಯಶ್ರೀ ಪರ್ಲಡ್ಕ ಸಹಿತ ಹಲವಾರು ಮಂದಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.ಸಭೆಯಲ್ಲಿ ಬ್ಯಾರಿಷ್ಟರ್ ಅತ್ತಾವರ ಎಲ್ಲಪ್ಪ ಅವರ ಚರಿತ್ರೆಯ ಪುಸ್ತಕ ವಿತರಿಸಲಾಯಿತು. ಕಾಯಕ್ರಮದ ನೇರಪ್ರಸಾರವನ್ನು ಸುದ್ದಿ ಯುಟ್ಯೂಬ್ ಚಾನೆಲ್ನಲ್ಲಿ ಪ್ರಸಾರ ಮಾಡಲಾಗಿತ್ತು.

ಮೋದಿ ದೇವಸ್ಥಾನಕ್ಕೆ ಭೇಟಿ:
ಗಾಣಿಗ ಸಮಾವೇಶಕ್ಕೆ ಪುತ್ತೂರಿಗೆ ಆಗಮಿಸಿದ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಅವರು ಬೆಳಗ್ಗೆ ನೇರವಾಗಿ ಶ್ರೀ ಲಕ್ಷ್ಮೀದೇವಿ ಬೆಟ್ಟ, ಬಳಿಕ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಗಾಣಿಗ ಸಂಗಮ ಕಾರ್ಯಕ್ರಮಕ್ಕೆ ಆಗಮಿಸಿದರು. ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಅವರು ತುಪ್ಪದ ದೀಪ ಬೆಳಗಿಸಿದರು.
ಗಾಣಿಗರು ನೀಡಿದ ತೈಲದಿಂದಲೇ ಲಂಕೆ ಸುಟ್ಟ ಹನುಮಂತ…!
ರಾಮಾಯಣದಲ್ಲೂ ಗಾಣಿಗರ ಪಾತ್ರವಿದೆ. ಗಾಣಿಗ ಸಮಾಜ ರಾವಣನಿಗೆ ತೈಲ ನೀಡಿದ್ದು, ರಾವಣ ಈ ತೈಲದಲ್ಲಿ ಹನುಮಂತನನ್ನು ಸುಡಲು ಪ್ರಯತ್ನಿಸಿದ್ದು, ಅದೇ ತೈಲ ಬಳಸಿ ಹನುಮಂತ ಲಂಕೆಯನ್ನು ಸುಟ್ಟಿರುವುದರಿಂದ ಯುದ್ಧಕ್ಕೆ ಮೊದಲೇ ರಾವಣನ ಮನೋಬಲ ಕುಸಿಯುವಂತಾಗಿ ರಾವಣನಿಗೆ ಸೋಲಾಗುತ್ತದೆ. ಇದು ಗಾಣಿಗ ಸಮಾಜ ನೀಡಿರುವ ಅತೀ ದೊಡ್ಡ ಕೊಡುಗೆ. ಇದರ ಉಲ್ಲೇಖವೇ ರಾಮಚರಿತ ಮಾನಸ ಕೃತಿಯಲ್ಲಿ ಇಲ್ಲದಿರುವುದು ಗಾಣಿಗ ಸಮಾಜಕ್ಕಾದ ಅತೀ ದೊಡ್ಡ ಅನ್ಯಾಯ.
-ಪ್ರಹ್ಲಾದ್ ದಾಮೋದರ್ ದಾಸ್ ಮೋದಿ
ಡ್ಯಾನ್ಸ್ -ಡ್ಯಾನ್ಸ್ ಗಾಣಿಗ ಟ್ರೋಫಿ- 2026
ಮಧ್ಯಾಹ್ನದ ಬಳಿಕ ಡ್ಯಾನ್ಸ್ ಆಂಡ್ ಡ್ಯಾನ್ಸ್ ಗಾಣಿಗ ಟ್ರೋಫಿ-2026 ನಡೆಯಿತು. ಸೆಮಿಕ್ಲಾಸಿಕಲ್, ಜಾನಪದ ನೃತ್ಯ, ಸಂಸ್ಕಾರಯುತವಾದ ಚಲನಚಿತ್ರ ಗೀತೆಯ ನೃತ್ಯಕ್ಕೆ ಸ್ಪರ್ಧಿಗಳು ಹೆಜ್ಜೆ ಹಾಕಿದರು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ಬಳಿಕ ದಿನೇಶ್ ಕೋಡಪದವು ಅವರಿಂದ ಯಕ್ಷ ತೆಲಿಕೆ ಹಾಸ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು.
ಸೀರೆ ವಿತರಣೆ, ವಧು-ವರ ಅನ್ವೇಷಣೆ
ಬೆಳಗ್ಗೆ 9ರಿಂದ 10ರ ತನಕ ಸಭಾಂಗಣದಲ್ಲಿ ಉಪಸ್ಥಿತರಿದ್ದ 20 ವರ್ಷದಿಂದ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಸೀರೆ ವಿತರಣೆ ನಡೆಯಿತು. ಕಾರ್ಯಕ್ರಮದಲ್ಲಿ ವಧು-ವರರ ಅನ್ವೇಷಣೆಯ ನೋಂದಾವಣೆ ಕಾರ್ಯಕ್ರಮ ನಡೆಯಿತು.

ನಮ್ಮ ಶಕ್ತಿ ನಮ್ಮವರಿಗೆ ಗೊತ್ತಾಗಬೇಕು
ಗಾಣಿಗ ಯಾನೆ ಸಪಲಿಗರ ಸಂಘ ಗಾಣದ ಎಣ್ಣೆ ತೆಗೆಯುವ ಕಾಯಕದಲ್ಲಿದ್ದರೂ ಕಾಲ ಬದಲಾದಂತೆ ಬದಲಾಗಿದೆ. ಇತರ ಸಮುದಾಯವನ್ನು ನೋಡಿದಾಗ ನಾವು ಎಲ್ಲಿ ಕ್ಷೀಣಿಸುತ್ತಿದ್ದೇವಾ ಎಂಬ ಸಂಶಯ ಬರುತ್ತದೆ. ಆದ್ದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕೃತಿ ನೀಡಬೇಕು. ನಮ್ಮ ಆಚಾರ ವಿಚಾರ ಸಂಸ್ಕೃತಿಯನ್ನು ಯುವ ಜನತೆಗೆ ತಿಳಿಸುವ ಕಾರ್ಯಕ್ರಮ ಬಹಳ ಅಗತ್ಯ. ಇಲ್ಲವಾದರೆ ನಮ್ಮ ಸಮಾಜ ದಿಕ್ಕು ತಪ್ಪುತ್ತದೆ. ಸಂಘಟನೆ ಕೇಲವ ಸಂಘಕ್ಕೆ ಮೀಸಲಾಗುವುದಲ್ಲ. ಸಮಾಜದ ಸಾಧನೆಗಳು, ಸಂಪನ್ಮೂಲಗಳನ್ನು ಸಮಾಜದ ವೆಬ್ಸೈಟ್ ಮೂಲಕ ಪ್ರಸಾರ ಮಾಡಬೇಕು. ಶಿಕ್ಷಣದಲ್ಲಿ ಉಚಿತ ಸೌಲಭ್ಯ. ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ. ನಿರುದ್ಯೋಗಿಗಳ ಮನೆಯನ್ನು ಸ್ವಾವಲಂಬಿಯನ್ನಾಗಿ ಮಾಡಬೇಕು.
-ಶ್ರೀನಿವಾಸ ಪಿ. ಸಪಲ್ಯ ಅಧ್ಯಕ್ಷರು, ಮುಂಬೈ ಸಾಪಲ್ಯ ಸೇವಾ ಸಂಘ










