






ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಾಜಾಂಗಣದಲ್ಲಿರುವ 5 ಕಟ್ಟೆಗಳ ಪುನರ್‌ನಿರ್ಮಾಣದ ಪೈಕಿ ಕದಿರು ವಿನಿಯೋಗದ ಕಟ್ಟೆಯ ಪುನರ್ ನಿರ್ಮಾಣಕ್ಕೆ ರೂ. 25ಲಕ್ಷ ಸಮರ್ಪಣೆ ಮಾಡಿದ ಬೆಂಗಳೂರಿನ ಉದ್ಯಮಿ ಅತ್ತಾಳ ನಾಗೇಶ್ ರಾವ್ ಅವರನ್ನು ದೇವಳದಿಂದ ವಿಶೇಷವಾಗಿ ಗೌರವಿಸಲಾಯಿತು.






ಇತ್ತೀಚೆಗೆ ಕ್ಷೇತ್ರದ ತಂತ್ರಿಗಳ ನೇತೃತ್ವದಲ್ಲಿ ಕಟ್ಟೆಗಳ ಪುನರ್‌ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಸಂದರ್ಭ ನಾಗೇಶ್ ರಾವ್ ಅವರು ಅನ್ಯ ಕಾರ್ಯಕ್ರಮದ ನಿಮಿತ್ತ ಆಗಮಿಸದ ಹಿನ್ನಲೆಯಲ್ಲಿ ಮಾ.2ರಂದು ಬೆಳಿಗ್ಗೆ ದೇವಳಕ್ಕೆ ಆಗಮಿಸಿದ್ದರು. ಈ ವೇಳೆ ದೇವಳದಿಂದ ಅವರನ್ನು ವಿಶೇಷವಾಗಿ ಗೌರವಿಸಲಾಯಿತು. ದೇವಳದ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆಯವರು ಅವರಿಗೆ ಶಲ್ಯ ಹೊದಿಸಿ, ಗೌರವಿಸಿದರು.
ಪ್ರಧಾನ ಅರ್ಚಕ ವೇ.ಮೂ ವಸಂತ ಕೆದಿಲಾಯ ಅವರು ಪ್ರಾರ್ಥನೆ ಮಾಡಿದರು. ಬಳಿಕ ಪುನರ್‌ನಿರ್ಮಾಣದ ಕಟ್ಟೆಯ ಮುಂದೆ ಅತ್ತಾಳ ನಾಗೇಶ್ ರಾವ್ ಮತ್ತು ಅವರ ಪತ್ನಿ ಸುಜಾತಾ ದಂಪತಿಯಿಂದ ಸಂಕಲ್ಪ ನೆರವೇರಿಸಲಾಯಿತು.
ಈ ಸಂದರ್ಭ ನಾಗೇಶ್ ರಾವ್ ಅವರ ಸೊಸೆ ಸುಪ್ರಿತಾ, ಮೊಮ್ಮಗಳು, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿದೇರ್ಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಬೆದ್ರಾಳ, ಶಶಿಧರ್ ಅತ್ತಾಳ, ಸುರೇಶ್ ಕೆಮ್ಮಿಂಜೆ, ನವೀನ್‌ಚಂದ್ರ ನಾೖಕ್ ಮತ್ತಿತರರು ಉಪಸ್ಥಿತರಿದ್ದರು.










