






ಪುಣಚ: ಪುಣಚ ಗ್ರಾಮದ ನೀರುಮಜಲು ಶ್ರೀ ಕೋಟಿ ಚೆನ್ನಯ ಗರಡಿಯಲ್ಲಿ ವರ್ಷಂಪ್ರತಿ ನಡೆಯುವ ಶ್ರೀ ಬ್ರಹ್ಮ ಬೈದೆರ್ಕಳ ನೇಮೋತ್ಸವ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ.1ರಂದು ನಡೆಯಿತು.






ಫೆ.28ರಂದು ಬೆಳಿಗ್ಗೆ ನಾಗತಂಬಿಲ, ರಾತ್ರಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ ನಡೆಯಿತು. ಮಾ.1ರಂದು ಬೆಳಿಗ್ಗೆ ಪುಣಚ ದೇವಾಲಯದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರ ಪೌರೋಹಿತ್ಯದಲ್ಲಿ ಮಹಾಗಣಪತಿ ಹೋಮ ನಡೆದು ಮಧ್ಯಾಹ್ನ ಶುದ್ಧ ಕಲಶಾದಿ ಹೋಮ ತಂಬಿಲ ನಡೆಯಿತು. ರಾತ್ರಿ ಶ್ರೀ ಬೈದರ್ಕಳ ಗರಡಿ ಇಳಿಯುವ ಕಾರ್ಯಕ್ರಮ, ಆಯುಧ ಒಪ್ಪಿಸುವುದು, ಮಾಯಂದಾಳ್ ದೇವಿಯ ಉತ್ಸವ, ಪೂಜಾರಿಗಳ ಸೇಟು, ಬೈದೆರ್ಕಳ ಸೇಟು ನಡೆದು ಮಾ.2ರ ಮುಂಜಾನೆ ಪ್ರಸಾದ ವಿತರಣೆ ನಡೆಯಿತು. ಬೈದರ್ಕಳ ದರ್ಶನ ಹಾಗೂ ಮಾತೆ ದೇಯಿಬೈದ್ಯೆತಿಯ ಹರಿಕೆ ಪ್ರಸಾದ ವಿತರಣೆಯಲ್ಲಿ ಭಕ್ತರು ಭಾಗವಹಿಸಿ ತಮ್ಮ ಸಂಕಷ್ಟಗಳ ಬಗ್ಗೆ ಪ್ರಾರ್ಥಿಸಿಕೊಂಡು ಪ್ರಸಾದ ಸ್ವೀಕರಿಸಿದರು. ಮಾತೆ ಶ್ರೀದೇವಿಯ ಅಭಯದ ನುಡಿಯಂತೆ ಮನ ಸಂತುಷ್ಟರಾದರು.
ವಿಶೇಷ ಆಕರ್ಷಣೆ
ನೇಮೋತ್ಸವದ ಅಂಗವಾಗಿ ಆರಂಭದಲ್ಲಿ ಸಾಯಂಕಾಲ ಗಂಟೆ 7ರಿಂದ ಅಜ್ಜಿನಡ್ಕ ಶ್ರೀ ದುರ್ಗಾಪರಮೇಶ್ವರಿ ಭಜನಾ ತಂಡದವರಿಂದ ಭಜನೆ, ಕುಣಿತ ಭಜನೆ ಹಾಗೂ ಶ್ರೀ ಮಹಿಷಮರ್ದಿನಿ ಸಿಂಗಾರಿ ಮೇಳದವರಿಂದ ಆಕರ್ಷಕ ವಯೋಲಿನ್’ವಾದನದೊಂದಿಗೆ ಚೆಂಡೆ ಪ್ರದರ್ಶನ ನಡೆಯಿತು. ಮಧ್ಯಾಹ್ನ ಮತ್ತು ರಾತ್ರಿ ಭಕ್ತಾದಿಗಳಿಗೆ ಮಹಾ ಅನ್ನಸಂತರ್ಪಣೆ ನಡೆಯಿತು. ಧಾರ್ಮಿಕ ಕ್ಷೇತ್ರದ ಪ್ರಮುಖರು, ಗಣ್ಯರು, ಜನ ಪ್ರತಿನಿಧಿಗಳು ಮಿತ್ರರು, ಊರ ಹಾಗೂ ಪರ-ಊರ ಸಾವಿರಾರು ಭಕ್ತಾದಿಗಳು ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು. ಗರಡಿಯ ಆಡಳಿತ ಮೊಕ್ತೇಸರ ನಾರಾಯಣ ಪೂಜಾರಿ ನೀರುಮಜಲು ಅವರ ಸಹೋದರರಾದ ಸಂಕಪ್ಪ ಪೂಜಾರಿ ನೀರುಮಜಲು, ಸೀತಾರಾಮ ಪೂಜಾರಿ ನೀರುಮಜಲು ಅತಿಥಿಗಳನ್ನು ಭಕ್ತಾದಿಗಳನ್ನು ಸ್ವಾಗತಿಸಿದರು. ಯುವವಾಹಿನಿ ವಿಟ್ಲ ಘಟಕದ ಪದಾಧಿಕಾರಿಗಳು, ಸದಸ್ಯರುಗಳು ಅನ್ನಸಂತರ್ಪಣೆಯಲ್ಲಿ ಸ್ವಯಂ ಸೇವಕರಾಗಿ ಸಹಕರಿಸಿದರು.










