






ಪುತ್ತೂರು:ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆರೋಗ್ಯ ಇಲಾಖೆಯ ಅಧಿಕಾರಿಗಳು,ವೈದ್ಯರು,ನೌಕರರು ಮಾ.11ರಿಂದ ಮಾ.15ರ ತನಕ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.ತಮ್ಮ ಬೇಡಿಕೆಗಳ ಕುರಿತು ಸರ್ಕಾರದ ಗಮನ ಸೆಳೆಯುವಂತೆ ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ, ಪುತ್ತೂರು ತಾಲೂಕು ಆರೋಗ್ಯಾಧಿಕಾರಿಯೂ ಆಗಿರುವ ಡಾ.ದೀಪಕ್ ರೈ ಅವರು ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಮನವಿ ಮಾಡಿದ್ದಾರೆ.


ಕರ್ನಾಟಕ ಸರಕಾರಿ ವೈದ್ಯಾಧಿಕಾರಿಗಳ ಸಂಘ, ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಕೇಂದ್ರ ಸಂಘ ಮತ್ತು ಇಲಾಖೆಯ ಎಲ್ಲಾ ವೈದ್ಯರ ಸಂಘಗಳ ಸಹಯೋಗದೊಂದಿಗೆ ಈ ಮುಷ್ಕರ ನಡೆಯಲಿದೆ.ಮಾ.11ರಿಂದ 15ರ ವರೆಗೆ ಕಪ್ಪುಪಟ್ಟಿ ಧರಿಸಿ, ಹೊರರೋಗಿ ಸೇವೆ ನೀಡದೇ ಕೇವಲ ತುರ್ತು ಸೇವೆ ಮಾತ್ರ ಒದಗಿಸಲಾಗುವುದು.ಬೇಡಿಕೆ ಈಡೇರದೇ ಇದ್ದಲ್ಲಿ ಮಾ.16ರಿಂದ ಅನಿರ್ದಿಷ್ಟಾವಧಿ ತನಕ ಕರ್ತವ್ಯಕ್ಕೆ ಗೈರು ಹಾಜರಾಗುವುದು ಎಂದು ರಾಜ್ಯ ಸಂಘದಿಂದ ಸೂಚನೆ ಬಂದಿದೆ ಎಂದು ಡಾ. ದೀಪಕ್ ರೈ ಅವರು ತಿಳಿಸಿದ್ದಾರೆ.



ಬೇಡಿಕೆಗಳು:
ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಸಮರ್ಪಕವಾಗಿ ಇಲಾಖೆಯಿಂದ ಔಷಧಿಗಳನ್ನು ಸರಬರಾಜು ಮಾಡಬೇಕು.ವೃಂದ ಮತ್ತು ನೇಮಕಾತಿ ನಿಯಮಗಳನ್ನು ಪ್ರತಿ 3 ವರ್ಷಕ್ಕೊಮ್ಮೆ ತಿದ್ದುಪಡಿ ಮಾಡಲು ಸರಕಾರಿ ಆದೇಶವಿದ್ದರೂ ಸಹ ಉಲ್ಲಂಸಿ 1973ರಿಂದ ಇಲ್ಲಿನ ತನಕ ಆರೋಗ್ಯ ಇಲಾಖೆಯಿಂದ ವೃಂದ ಮತ್ತು ನೇಮಕಾತಿ ನಿಯಮಗಳನ್ನು ತಿದ್ದುಪಡಿ ಮಾಡಲಾಗಿಲ್ಲ.ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು.ಇಲಾಖೆಯ ಎಲ್ಲಾ ವೃಂದಗಳ ಜೇಷ್ಠತಾ ಪಟ್ಟಿಯನ್ನು ಕಾಲಕಾಲಕ್ಕೆ ಪ್ರಕಟಿಸಬೇಕು.ಅಧಿಕಾರಿ ನೌಕರರಿಗೆ ಕಳೆದ 5 ವರ್ಷಗಳಿಂದ ಮುಂಬಡ್ತಿ ನೀಡಲಾಗಿಲ್ಲ.ಈ ಬಗ್ಗೆ ಕ್ರಮವಹಿಸಬೇಕು.ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು, ಅರೆ ವೈದ್ಯಕೀಯ ಹಾಗು ಇತರೆ ವೃಂದದ ಹುದ್ದೆಗಳನ್ನು ಭರ್ತಿ ಮಾಡಬೇಕು.ವೈದ್ಯಕೀಯ ಶಿಕ್ಷಣ ಇಲಾಖೆಯ ಮಾದರಿಯಲ್ಲಿ ವೇತನ ನೀಡಬೇಕು.ನಿಯಮದಲ್ಲಿರುವಂತೆ ಸೇವಾನಿರತ ವೈದ್ಯರು, ಅಧಿಕಾರಿ ನೌಕರರ ಉನ್ನತ ವ್ಯಾಸಂಗ, ಸ್ನಾತಕೋತ್ತರ ವ್ಯಾಸಂಗಕ್ಕೆ ಅವಕಾಶ ನೀಡಬೇಕು.ವೈದ್ಯಕೀಯ ಶಿಕ್ಷಣ ಇಲಾಖೆಯ ಸ್ವಾಯತ್ತ ಸಂಸ್ಥೆಗಳಲ್ಲಿ ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಮಹಾನಗರ ಪಾಲಿಕೆ ಹಾಗೂ ನಗರ ಪಾಲಿಕೆಗಳಲ್ಲಿ ಮಂಜೂರಾಗಿರುವ ಆರೋಗ್ಯ ಇಲಾಖೆಯ ಎನ್ಕೇಡರ್ ಹುದ್ದೆಗಳಿಗೆ ನೇಮಕಾತಿ,ಮುಂಬಡ್ತಿ ಮತ್ತು ವರ್ಗಾವಣೆಗಳಿಗೆ ಆರೋಗ್ಯ ಇಲಾಖೆಯ ವೈದ್ಯರು, ಅಧಿಕಾರಿ-ನೌಕರರನ್ನೇ ನಿಯೋಜಿಸುವುದು.ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುವ ದೃಷ್ಟಿಯಿಂದ ಇಲಾಖೆಯಲ್ಲಿ ಖಾಲಿ ಇರುವ ವೈದ್ಯರು, ಅರೆ ವೈದ್ಯಕೀಯ ಹಾಗೂ ಇತರ ವೃಂದದ ಹುದ್ದೆಗಳನ್ನು ಭರ್ತಿ ಮಾಡುವುದು.ಕೇಂದ್ರ ಪುರಸ್ಕೃತ ಯೋಜನೆಯಡಿ ಕಾರ್ಯನಿರತ ಅಧಿಕಾರಿ, ನೌಕರರಿಗೆ ಮೂರ್ನಾಲ್ಕು ತಿಂಗಳಿಗೊಮ್ಮೆ ವೇತನ ಭತ್ತೆ ನೀಡಲಾಗುತ್ತಿದ್ದು,ಇದನ್ನು ಪ್ರತಿ ತಿಂಗಳ ಮೊದಲ ವಾರ ಒದಗಿಸಬೇಕು.ವೈದ್ಯರು,ತಜ್ಞ ವೈದ್ಯರು,ಇತರ ಸಿಬ್ಬಂದಿಗೆ ಸಿ.ಜಿ.ಎಚ್.ಎಸ್ ಅಥವಾ ಎ.ಐ.ಸಿ.ಟಿ.ಇ. ಮಾದರಿ ವೇತನ ನೀಡಬೇಕು.ಸರಕಾರಿ ವೈದ್ಯರ ಕರ್ತವ್ಯದ ಅವಧಿಯ ನಂತರ ಖಾಸಗಿ ಸೇವೆಗೆ ಅವಕಾಶ ನೀಡಬೇಕು-ಇವು ಪ್ರಮುಖ ಬೇಡಿಕೆಗಳು.
ಕಳೆದ ಎಂಟು ತಿಂಗಳಿನಿಂದ ರಾಜ್ಯ ಸರಕಾರಕ್ಕೆ ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ ಸಲ್ಲಿಸಲಾಗಿದೆ.ವೀಡಿಯೋ ಕಾನ್ಫರೆನ್ಸ್ ಮೂಲಕವೂ ಸರಕಾರದ ಗಮನ ಸೆಳೆಯಲಾಗಿದೆ.ಆದರೆ ಯಾವುದೇ ಬೇಡಿಕೆಯನ್ನೂ ಈಡೇರಿಸಲಾಗಿಲ್ಲ.ಹಾಗಾಗಿ ಸರಕಾರಕ್ಕೆ ಮಾ.10ರವರೆಗೆ ಸಮಯಾವಕಾಶ ನೀಡುತ್ತಿದ್ದು, ಬಳಿಕ ಪ್ರತಿಭಟನೆ ನಡೆಸಲಾಗುವುದು.ಇಲಾಖೆಯ ವರ್ಗಾವಣೆಯ ಕಾಯ್ದೆಯಲ್ಲಿನ ನ್ಯೂನತೆಗಳನ್ನು ಸರಿಪಡಿಸದೆ ಅವೈಜ್ಞಾನಿಕ ಕೌನ್ಸೆಲಿಂಗ್ ವರ್ಗಾವಣೆ ಮಾಡಲಾಗುತ್ತಿದೆ.ವರ್ಷದಲ್ಲಿ ಒಂದು ಬಾರಿ ಮೇ ಅಥವಾ ಜೂನ್ನಲ್ಲಿ ಮಾತ್ರವೇ ವರ್ಗಾವಣೆ ನಡೆಸಬೇಕು.ಬೇರೆ ಅವಧಿಯಲ್ಲಿ ವರ್ಗಾವಣೆ ನಡೆಸಿದರೆ, ಅದು ಕುಟುಂಬದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರುತ್ತದೆ.ಇದಕ್ಕೆ ಸರಕಾರ ಅವಕಾಶ ನೀಡಬಾರದು.ಈ ಎಲ್ಲಾ ಬೇಡಿಕೆಗಳನ್ನು ಮಾ.10ರೊಳಗೆ ಈಡೇರಿಸಬೇಕು ಎಂದು ಡಾ.ದೀಪಕ್ ರೈ ಆಗ್ರಹಿಸಿದ್ದು,ವೈದ್ಯರ ಸಂಘದ ಹೋರಾಟಕ್ಕೆ ಸರಕಾರಿ ಆರೋಗ್ಯ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ, ವೈದ್ಯಕೀಯ ಶಿಕ್ಷಣ ಇಲಾಖೆಯ ನೌಕರರು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಮಂಗಳೂರುನಲ್ಲಿ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದರು.
ರಾಜ್ಯದ ಸರಕಾರಿ ವೈದ್ಯರು ಈಗಾಗಲೇ ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ತಮ್ಮ ಹಳೆಯ ಬೇಡಿಕೆಗಳನ್ನು ಮಾ.10ರೊಳಗೆ ಈಡೇರಿಸಬೇಕು.ಇಲ್ಲವಾದಲ್ಲಿ ಮಾ.11ರಿಂದ 15ರವರೆಗೆ ಕಪ್ಪು ಪಟ್ಟಿ ಧರಿಸಿ ಕೇವಲ ತುರ್ತು ಸೇವೆಯನ್ನು ಮಾತ್ರ ಸರಕಾರಿ ಆಸ್ಪತ್ರೆಗಳಲ್ಲಿ ಒದಗಿಸುವುದು.ಮಾ.16ರಿಂದ ಸಂಪೂರ್ಣವಾಗಿ ಸೇವೆಯನ್ನು ಸ್ಥಗಿತಗೊಳಿಸಿ ಪ್ರತಿಭಟಿಸಲಾಗುವುದು-
ಡಾ.ದೀಪಕ್ ರೈ,ಅಧ್ಯಕ್ಷರು
ಸರಕಾರಿ ವೈದ್ಯಾಧಿಕಾರಿಗಳ ಸಂಘ ದ.ಕ










