ರಾಜ್ಯ ವಕೀಲರ ಪರಿಷತ್ ಸದಸ್ಯ ಸ್ಥಾನದ ಚುನಾವಣೆ : ಪುತ್ತೂರುನಲ್ಲಿ ಶೇ.77.8 ಮತದಾನ

0

23 ಸ್ಥಾನಗಳಿಗೆ 42 ಮಹಿಳೆಯರ ಸಹಿತ 149 ಅಭ್ಯರ್ಥಿಗಳು ಕಣದಲ್ಲಿ


ಪುತ್ತೂರು:ಸುಪ್ರೀಂ ಕೋರ್ಟ್ನ ಮಾರ್ಗದರ್ಶನದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ 23 ಸ್ಥಾನಗಳಿಗೆ ಪುತ್ತೂರು ಸೇರಿದಂತೆ ರಾಜ್ಯಾದ್ಯಂತ ಎಲ್ಲ ತಾಲೂಕು ಮತ್ತು ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣದಲ್ಲಿ ಮಾ.11ರಂದು ಚುನಾವಣೆ ನಡೆಯಿತು.ಚುನಾವಣೆ ಬೆಳಿಗ್ಗೆ 9.30ರಿಂದ ಸಂಜೆ 6 ಗಂಟೆ ತನಕ ನಡೆದಿದೆ.


ಪುತ್ತೂರು,ಕಡಬ ತಾಲೂಕಿಗೆ ಸಂಬಂಧಿಸಿ ಬನ್ನೂರು ಆನೆಮಜಲು ನೂತನ ನ್ಯಾಯಾಲಯ ಸಂಕೀರ್ಣದಲ್ಲಿ ಬಾರ್ ಎಸೋಸಿಯೇಷನ್‌ನಲ್ಲಿ ಶಾಂತಿಯುತ ಚುನಾವಣೆ ನಡೆಯಿತು.ತಾಲೂಕಿನಲ್ಲಿ ಒಟ್ಟು 356 ವಕೀಲ ಮತದಾರರ ಪೈಕಿ 277 ಮಂದಿ ಮತ ಚಲಾಯಿಸಿದ್ದು ಶೇ.77.8 ಮತದಾನವಾಗಿದೆ.ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್.ಅವರು ಮತಗಟ್ಟೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.ಸಿಬ್ಬಂದಿ ಸಹಕರಿಸಿದರು.


ಸುಳ್ಯದಲ್ಲಿ ಒಟ್ಟು 133 ಮತದಾರರಲ್ಲಿ 102 ಮಂದಿ ಮತಚಲಾಯಿಸಿದ್ದು ಶೇ.76.69 ಮತದಾನವಾಗಿದೆ.ಸುಳ್ಯದಲ್ಲಿ ಪುತ್ತೂರು ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ಎಂ.ರಘು ಅವರು ಮತಗಟ್ಟೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು.


23 ಸ್ಥಾನಗಳಿಗೆ 149 ಅಭ್ಯರ್ಥಿಗಳು:
ಪುತ್ತೂರು ಮೂಲದವರಾಗಿದ್ದು ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ಅಧ್ಯಕ್ಷರಾಗಿ ಎರಡು ಬಾರಿ ಕಾರ್ಯನಿರ್ವಹಿಸಿರುವ ಖ್ಯಾತ ವಕೀಲ ಪಿ.ಪಿ.ಹೆಗ್ಡೆ,ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಹೈಕೋರ್ಟ್ ವಕೀಲ ಸುಭಾಸ್ ಕೌಡಿಚ್ಚಾರ್, ಬೆಳ್ಳಾರೆಯ ಜಯಪ್ರಕಾಶ್ ಶೆಟ್ಟಿ,ಮಂಗಳೂರುನ ಸಂಧ್ಯಾ ಪ್ರಭು ಸೇರಿದಂತೆ ಒಟ್ಟು 149 ಅಭ್ಯರ್ಥಿಗಳು ಕಣದಲ್ಲಿದ್ದಾರೆ.ಈ ಪೈಕಿ 42 ಮಂದಿ ಮಹಿಳೆಯರು.ಪ್ರತಿ ಮತದಾರನಿಗೆ 23 ಮಂದಿ ಅಭ್ಯರ್ಥಿಗಳಿಗೆ ಮತ ಚಲಾವಣೆಗೆ ಅವಕಾಶವಿತ್ತು.23 ಸ್ಥಾನಗಳ ಪೈಕಿ ಇದೇ ಮೊದಲ ಬಾರಿಗೆ 5 ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿರಿಸಲಾಗಿದೆ.ಒಂದು ಸ್ಥಾನಕ್ಕೆ ಪದನಿಮಿತ್ತ ಸದಸ್ಯರಾಗಿ ಅಡ್ವೊಕೇಟ್ ಜನರಲ್ ಅವರು ಇರುತ್ತಾರೆ.ಸುಪ್ರೀಂ ಕೋರ್ಟ್ನ ನಿರ್ದೇಶನದಂತೆ ಚುನಾವಣೆ ಪಾರದರ್ಶಕವಾಗಿ ನಡೆದಿದೆ.ಮತಪತ್ರಗಳು ಅಂಚೆ ಇಲಾಖೆಗೆ ಬಂದು ಅಲ್ಲಿಂದ ಚುನಾವಣಾಧಿಕಾರಿ, ತಂಡ ಪಡೆದುಕೊಂಡು ಬಂದ ಬಳಿಕ ಪೊಲೀಸ್ ಬಂದೋಬಸ್ತ್ನಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿತು.ಸಂಪೂರ್ಣ ಚುನಾವಣಾ ಪ್ರಕ್ರಿಯೆಯನ್ನು ವೀಡಿಯೋ ಚಿತ್ರೀಕರಣ ಮಾಡಲಾಗಿದೆ.ರಾಜ್ಯ ಚುನಾವಣಾ ಅಧಿಕಾರಿಯಾಗಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಸುಭಾಸ್ ಬಿ.ಕಾರ್ಯನಿರ್ವಹಿಸುತ್ತಿದ್ದಾರೆ.


ಪುತ್ತೂರು ಬಾರ್ ಎಸೋಸಿಯೇಷನ್‌ನಲ್ಲಿ ಚುನಾವಣೆ ಶಾಂತಿಯುತವಾಗಿ ನಡೆದಿದೆ.ಬಾರ್ ಕೌನ್ಸಿಲ್‌ನ ಕೋರಿಕೆಯಂತೆ ವಕೀಲರ ಸಂಘದಿಂದ ಗೌರೀಶ್ಚಂದ್ರ ಶ್ಯಾನುಭೋಗ್, ಎಸ್.ಪ್ರವೀಣ್ ಕುಮಾರ್ ಮತ್ತು ಮನೋಹರ್ ಎ.ಅವರನ್ನು ಚುನಾವಣೆಗೆ ವೀಕ್ಷಕರಾಗಿ ನೇಮಕಗೊಳಿಸಲಾಗಿತ್ತು ಎಂದು ವಕೀಲರ ಸಂಘದ ಅಧ್ಯಕ್ಷ ಜಿ.ಜಗನ್ನಾಥ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here