ಪ್ರತೀ ಕುಟುಂಬಕ್ಕೆ ತಿಂಗಳಿಗೆ ಒಂದೇ ಗ್ಯಾಸ್ ಸಿಲಿಂಡರ್ : ಅಧಿವೇಶನದಲ್ಲಿ ಸಚಿವ ಕೆ.ಎಚ್.ಮುನಿಯಪ್ಪ

0

ಬೆಂಗಳೂರು:ಇರಾನ್-ಇಸ್ರೇಲ್,ಅಮೆರಿಕ ನಡುವೆ ಯುದ್ಧದ ಹಿನ್ನೆಲೆಯಲ್ಲಿ ಹೋಟೆಲ್,ಕಲ್ಯಾಣ ಮಂಟಪಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬಳಕೆಗೆ ತಾತ್ಕಾಲಿಕವಾಗಿ ನಿಷೇಧ ಹೇರಲಾಗಿದೆ. ಅದೇರೀತಿ ಪ್ರತೀ ಕುಟುಂಬಕ್ಕೆ ತಿಂಗಳಿಗೆ ಒಂದೇ ಗ್ಯಾಸ್ ಸಿಲಿಂಡರ್ ನೀಡಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.


ಗ್ಯಾಸ್ ಸಿಲಿಂಡರ್ ಸಮಸ್ಯೆ ಕುರಿತು ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಡಾ|ರಂಗನಾಥ್ ಪ್ರಸ್ತಾಪಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಅಡುಗೆ ಅನಿಲ ಸಿಲಿಂಡರ್ ದೊರೆಯುವುದಿಲ್ಲ ಎಂದು ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ.ಈ ಬಗ್ಗೆ ಈಗಾಗಲೇ ಸಭೆ ನಡೆಸಲಾಗಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದೆ ಎಂದರು.


ತೈಲ ಸರಬರಾಜು ಕಂಪೆನಿಗಳಾದ ಎಚ್.ಪಿ., ಇಂಡಿಯನ್ ಆಯಿಲ್,ಶೆಲ್ ಸೇರಿದಂತೆ ಇತರ ಕಂಪೆನಿಗಳ ಮುಖ್ಯಸ್ಥರೊಂದಿಗೆ ಸಭೆ ನಡೆಸಲಾಗಿದ್ದು,ಮುಂದಿನ ದಿನಗಳಲ್ಲಿ ಸಿಲಿಂಡರ್ ಸಮಸ್ಯೆಗೆ ಪರಿಹಾರ ಕಂಡು ಕಂಡುಕೊಳ್ಳಲಾಗಿದೆ.ಅದರಂತೆ,ಒಂದು ಕುಟುಂಬಕ್ಕೆ ಒಂದು ತಿಂಗಳಿಗೆ ಒಂದು ಸಿಲಿಂಡರ್ ಕೊಡಲು ತೀರ್ಮಾನ ಮಾಡಲಾಗಿದೆ.ಅದೇ ರೀತಿ,ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಮೇಲೆ ಕೊಂಚ ಮಟ್ಟಿಗೆ ನಿಯಂತ್ರಣ ಹೇರಲಾಗಿದ್ದು ಹೋಟೆಲ್, ಕಲ್ಯಾಣ ಮಂಟಪಗಳಲ್ಲಿ ಹಾಗೂ ಇತರ ಅನಗತ್ಯ ಬಳಕೆಗೆ ಕಡಿವಾಣ ಹಾಕಲಾಗಿದೆ.ಆದರೆ ಇದು ತಾತ್ಕಾಲಿಕ ನಿರ್ಬಂಧವಾಗಿದೆ ಎಂದು ತಿಳಿಸಿದರು.ಶಾಲೆ,ಕಾಲೇಜು,ಆಸ್ಪತ್ರೆ,ಸರಕಾರ ನಿಗದಿತ ಸ್ಥಳ ಅಥವಾ ತುರ್ತು ಸೇವೆಗೆ ವಾಣಿಜ್ಯ ಬಳಕೆಯ ಸಿಲಿಂಡರ್ ದೊರೆಯುತ್ತದೆ.ಆದರೆ,ಹೋಟೆಲ್ ಮತ್ತು ರೆಸ್ಟೋರೆಂಟ್,ಕಲ್ಯಾಣ ಮಂಟಪಗಳಿಗೆ ಸದ್ಯ ವಾಣಿಜ್ಯ ಬಳಕೆ ಸಿಲಿಂಡರ್ ಪೂರೈಕೆಯಾಗುತ್ತಿಲ್ಲ ಎಂದು ಸಚಿವರು ತಿಳಿಸಿದರು.


ಇಲ್ಲಿಯವರೆಗೂ ಎಲ್ಲೂ ಗ್ಯಾಸ್ ಸಿಲಿಂಡರ್ ಸರಬರಾಜಿನಲ್ಲಿ ಯಾವುದೇ ಸಮಸ್ಯೆ ಉಂಟಾಗಿಲ್ಲ.ಯಾವ ದೇಶದಿಂದಲೂ ಗ್ಯಾಸ್ ಸರಬರಾಜು ಆಗಿಲ್ಲವೆಂದರೂ, ನಾವು ಕನಿಷ್ಠ ಶೇಕಡಾವಾರು 20ರಿಂದ 30ರಷ್ಟು ಸ್ವಂತವಾಗಿಯೇ ಅನಿಲ ಉತ್ಪಾದನೆ ಮಾಡಬಹುದು.ಈ ಪ್ರಮಾಣದಲ್ಲಿಯೇ ನಾವು ಅಡುಗೆ ಅನಿಲ ಗ್ಯಾಸ್ ಬಳಕೆ ಮಾಡಬಹುದಾಗಿದೆ.ಹೀಗಾಗಿ ಗ್ರಾಹಕರು ಆತಂಕಕ್ಕೆ ಒಳಗಾಗಿ ಮುಂಗಡವಾಗಿ ಕಾಯ್ದಿರಿಸುವಿಕೆ ಪ್ರಕ್ರಿಯೆ ಮಾಡಬಾರದು ಎಂದು ಸಚಿವರು ವಿವರಿಸಿದರು.


ಶೇಕಡಾ 70ರಷ್ಟು ಅನಿಲ ವಿದೇಶದಿಂದ ಬರಬೇಕು.ಆದರೆ, ಇರಾನ್ ಜಲ ಮಾರ್ಗದಲ್ಲಿ ತಡೆ ಹಾಕಿರುವ ಕಾರಣ ಸೂಕ್ತ ಸಮಯಕ್ಕೆ ಅನಿಲ ಮತ್ತು ಕಚ್ಚಾ ತೈಲವು ಭಾರತಕ್ಕೆ ಬರುತ್ತಿಲ್ಲ ಎಂದು ಹೇಳಿದ ಸಚಿವ ಮುನಿಯಪ್ಪ,ಇದು ಯುದ್ಧದ ಸಮಯ.ಆದ ಕಾರಣ, ಗ್ಯಾಸ್ ವ್ಯರ್ಥ ಮಾಡದೆ ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು.


ವಾರಕ್ಕೊಮ್ಮೆ ಸಭೆ:
ಸದ್ಯ ಗ್ಯಾಸ್ ಸಿಲಿಂಡರ್ ಬಳಕೆ ಮಾರ್ಗ ಸೂಚಿ ಮತ್ತು ಇತರೆ ಕ್ರಮಗಳನ್ನು ಕೈಗೊಳ್ಳುವ ಸಲುವಾಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ವಾರಕ್ಕೊಮ್ಮೆ ಸಭೆ ನಡೆಸಲಾಗುವುದು ಎಂದು ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.

ಶೇಖರಣೆ ಮಾಡಿದರೆ ಕೇಸ್..!
ಗ್ಯಾಸ್ ಬೇಡಿಕೆ ಹೆಚ್ಚಿರುವ ನೆಪ ಇಟ್ಟುಕೊಂಡು ಯಾರಾದರೂ ಅಕ್ರಮವಾಗಿ ಅಡುಗೆ ಅನಿಲ ಅಥವಾ ವಾಣಿಜ್ಯ ಬಳಕೆಯ ಸಿಲಿಂಡರ್ ದಾಸ್ತಾನು, ಶೇಖರಣೆ ಮಾಡಿದರೆ ಮುಲಾಜಿಲ್ಲದೆ ಕಾನೂನು ರೀತ್ಯಾ ಕೇಸ್ ಹಾಕುತ್ತೇವೆ ಎಂದು ಸಚಿವ ಕೆ.ಎಚ್.ಮುನಿಯಪ್ಪ ಎಚ್ಚರಿಕೆ ನೀಡಿದ್ದಾರೆ.

LEAVE A REPLY

Please enter your comment!
Please enter your name here