






ಕಡಬ: ಇತ್ತೀಚೆಗೆ ಐರ್ಲೆಂಡ್ನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಕುಟ್ರುಪ್ಪಾಡಿ ನಿವಾಸಿ ಸಾಂಜೋ ಸುನಿಲ್ ಅವರ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿ ಕಡಬದಲ್ಲಿ ಮಾ.15ರಂದು ಸಂಜೆ ಸಾವಿರಾರು ಜನರು ಭಾಗವಹಿಸಿ ಮೌನ ಕ್ಯಾಂಡಲ್ ಮೆರವಣಿಗೆ ನಡೆಸಿದರು.


ಕಡಬ ಕ್ರಿಶ್ಚಿಯನ್ ಲೈಟ್ನಿಂಗ್ ಕ್ಲಬ್ ಹಾಗೂ ಮಲಯಾಳಿ ಫ್ರೆಂಡ್ಸ್ ಸಂಘಟನೆಗಳ ನೇತೃತ್ವದಲ್ಲಿ ನಡೆದ ಮೆರವಣಿಗೆ ಕಡಬದ ಅನುಗ್ರಹ ಸಭಾಭವನದಿಂದ ಆರಂಭವಾಗಿ ಸೈಂಟ್ ಜೋಕಿಮ್ಸ್ ವಾಣಿಜ್ಯ ಕಟ್ಟಡದ ಮುಂಭಾಗದವರೆಗೆ ಸಾಗಿತು. ಮೆರವಣಿಗೆಯಲ್ಲಿ ಭಾಗವಹಿಸಿದವರು ಮೇಣದ ಬತ್ತಿ ಹಿಡಿದು ಮೌನವಾಗಿ ಸಾಗಿದರು.



ಮೆರವಣಿಗೆಯ ಬಳಿಕ ಕಡಬ ಸೈಂಟ್ ಜೋಕಿಮ್ಸ್ ಕಾಂಪ್ಲೆಕ್ಸ್ನ ಸಭಾಭವನದಲ್ಲಿ ಸಭೆ ನಡೆಸಲಾಯಿತು. ಸಭೆಯಲ್ಲಿ ಮಾತನಾಡಿದ ಜಿ.ಪಂ. ಮಾಜಿ ಸದಸ್ಯ ಪಿ.ಪಿ.ವರ್ಗೀಸ್ ಅವರು, ಸಾಂಜೋ ಸುನಿಲ್ ಅವರದ್ದು ಆತ್ಮಹತ್ಯೆ ಅಲ್ಲ ಎಂಬ ಸಂಶಯ ಸಾರ್ವಜನಿಕರಲ್ಲಿ ಮೂಡಿದ್ದು, ಪ್ರಕರಣದಲ್ಲಿ ಅನೇಕ ಅನುಮಾನಗಳು ಕಂಡುಬರುತ್ತಿವೆ. ಆದ್ದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ಸಾಂಜೋ ಸುನಿಲ್ ಅವರ ಸಾವಿನ ಕುರಿತು ಸಂಪೂರ್ಣ ಸತ್ಯ ಹೊರಬರಬೇಕು ಎಂಬುದು ಎಲ್ಲರ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ನಾನು ಈಗಾಗಲೇ ಕರ್ನಾಟಕ ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತನಾಡಿ ಪ್ರಕರಣದ ಸಮಗ್ರ ತನಿಖೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ಹೇಳಿದರು.
ಬಿಜೆಪಿ ಮುಖಂಡ ಅನಿಲ್ ಈಶೋ ಮಾತನಾಡಿ, ಮೃತ ಸಾಂಜೋ ಸುನಿಲ್ ಅವರ ಮೃತದೇಹವನ್ನು ಊರಿಗೆ ತರಲು ಸಂಸದ ಬ್ರಿಜೇಶ್ ಚೌಟ ಅವರ ಮೂಲಕ ವ್ಯವಸ್ಥೆ ಮಾಡಲಾಗಿದೆ, ಚೌಟ ಅವರ ಮೂಲಕ ಕೇಂದ್ರ ಸರ್ಕಾರದ ಮೇಲೆ ಒತ್ತಡ ತಂದು ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಪ್ರಕರಣದ ಸಂಪೂರ್ಣ ತನಿಖೆ ನಡೆಯುವಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಲಾಗಿದೆ ಎಂದರು.

ಸಾಂಜೋ ಸುನಿಲ್ ಅವರ ಸಾವಿನ ಬಗ್ಗೆ ಐರ್ಲೆಂಡ್ನಲ್ಲಿ ನಡೆದಿರುವ ಶವ ಮಹಜರು ಹಾಗೂ ತನಿಖಾ ವರದಿಯನ್ನು ತರಿಸಿಕೊಂಡು ಸಮಗ್ರ ತನಿಖೆ ನಡೆಸಬೇಕು ಮತ್ತು ಸಾರ್ವಜನಿಕರಲ್ಲಿ ಮೂಡಿರುವ ಅನುಮಾನಗಳಿಗೆ ತೆರೆ ಎಳೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಮೆರವಣಿಗೆಯಲ್ಲಿ ಕಡಬ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಬಂದ ಸಾವಿರಾರು ಮಂದಿ ಭಾಗವಹಿಸಿ ಮೃತ ಸಾಂಜೋ ಸುನಿಲ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಕಡಬ ಕ್ರಿಶ್ಚಿಯನ್ ಲೈಟ್ನಿಂಗ್ ಕ್ಲಬ್ನ ಮನೋಜ್ ಅವರು ಸ್ವಾಗತಿಸಿ, ಕಾರ್ಯದರ್ಶಿ ಕ್ಸೇವಿಯರ್ ಬೇಬಿ ವಂದಿಸಿದರು.










