






ಅಮೇರಿಕಾ, ಇಸ್ರೇಲ್-ಇರಾನ್ ನಡುವೆ ಯುದ್ಧ ಬೇಕಿತ್ತೇ?
ಕೋಟ್ಯಾಂತರ ಜನರ ಜೀವನಕ್ಕೆ ಹಾನಿ ಮಾಡಿದೆ.
ಅದರ ಪರಿಣಾಮ ನಮ್ಮ ಅಡುಗೆ ಮನೆಯನ್ನೂ ಮುಟ್ಟಿದೆ


ಬಾಹ್ಯಾಕಾಶದಿಂದ ಭೂಮಿಯನ್ನು ನೋಡಿದವರು ಅದನ್ನು ಸಣ್ಣ ಚುಕ್ಕೆಯಾಗಿಯೂ ಕಂಡಿದ್ದೇವೆ ಎಂದು ಹೇಳಿದ್ದಾರೆ. ಇವತ್ತು ಜಗತ್ತೇ ಸಣ್ಣ ಹಳ್ಳಿ ಎಂದು ಹೇಳಲಾಗುತ್ತಿದೆ. ನಮ್ಮವರು ನಮ್ಮ ಸಂಬಂಧಿಕರು ಅನೇಕರು ಜಗತ್ತಿನಾದ್ಯಂತ ಇದ್ದಾರೆ. ಅಮೇರಿಕ, ಇರಾನ್, ಇಸ್ರೇಲ್ನಲ್ಲೂ ನಮ್ಮವರು ಇದ್ದಾರೆ. ಮದ್ಯಪ್ರಾಚ್ಯ ದೇಶಗಳಲ್ಲಿಯೂ ಇದ್ದಾರೆ. ಇಡೀ ಜಗತ್ತಿನಲ್ಲಿ ಒಬ್ಬರಿಗೊಬ್ಬರು ಅವಲಂಬಿತರಾಗಿದ್ದಾರೆ. ಅಭಿವೃದ್ಧಿಗೂ ಕಾರಣರಾಗಿದ್ದಾರೆ. ಅದಕ್ಕಾಗಿ ರಾಷ್ಟ್ರ ಕವಿ ಕುವೆಂಪುರವರು ನೋಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಠಾಗೋರ್ರವರು ಜಾಗತಿಕ ಮನುಷ್ಯ ಎಂಬ ಯೋಚನೆಯಲ್ಲಿ ಮಾತನಾಡಿದ್ದಾರೆ.



ಈ ಯುದ್ದದ ಪರಿಣಾಮ ಜಗತ್ತಿನಾದ್ಯಂತ ಹರಡಿದೆ. ಕೋಟ್ಯಾಂತರ ಜನರ ಜೀವನವನ್ನು ಹಾಳು ಮಾಡಿದೆ. ಜನ ಜೀವನ ಅಸ್ತವ್ಯಸ್ತ ಮಾಡಿದೆ. ನಮ್ಮ ಅಡುಗೆ ಮನೆಗಳಿಗೂ ಮುಟ್ಟಿದೆ. ಈ ಯುದ್ಧಗಳು ಯಾವ ಕಾರಣಕ್ಕಾಗಿ ನಡೆಯುತ್ತಿದೆ ಎಂಬುವುದಕ್ಕಿಂತ ಯಾರಿಗೆ ಲಾಭ ಎಂಬ ಕಾರಣಕ್ಕೆ ನಡೆಯುತ್ತಿದೆ. ಈ ವಿಚಾರದ ಹಿನ್ನೆಲೆಯಲ್ಲಿ ಕೆಳಗೆ ಯುನಿಸೆಫ್ ನಿಂದ ಪ್ರಕಟಗೊಂಡ ಮಕ್ಕಳ ಪದ್ಯದ ಹಿನ್ನೆಲೆಯಲ್ಲಿ ಅಮೇರಿಕಾ, ಇಸ್ರೇಲ್ ಮತ್ತು ಇರಾನ್ ಮೇಲಿನ ಯುದ್ಧವನ್ನು ಜನರು ಗಮನಿಸಿ ಪ್ರಶ್ನಿಸಬೇಕಾಗಿದೆ. ಅದು ಶೀಘ್ರ ಶಮನಗೊಳ್ಳಲು ತಮ್ಮ ತಮ್ಮ ಅಭಿಪ್ರಾಯವನ್ನು ಹೇಳಬೇಕಾಗಿದೆ.

ಈ ಹಾಡಿನಲ್ಲಿ ಒಂದು ಮಗು ಯುದ್ಧದ ಅರ್ಥವೇನು ಎಂದು ರಾಷ್ಟ್ರಪತಿಯನ್ನು ಪ್ರಶ್ನಿಸುತ್ತದೆ. ಯಾರಿಗೂ ಸಾಯಲು ಇಷ್ಟವಿಲ್ಲ, ಯಾವ ತಾಯಿಗೂ ತನ್ನ ಮಗುವನ್ನು ಕಳೆದುಕೊಳ್ಳಲು ಇಷ್ಟವಿಲ್ಲ, ಹಾಗಿದ್ದರೆ ಯುದ್ಧ ಏಕೆ ನಡೆಯಬೇಕು ಎಂದು ಅದು ಕೇಳುತ್ತದೆ. ಕ್ಷಿಪಣಿಗಳು, ಟ್ಯಾಂಕ್ಗಳು, ಸೈರನ್ಗಳು, ಬಾಂಬ್ಗಳು ಮತ್ತು ನಿರಪರಾಧಿ ಜನರ ನೋವನ್ನು ಉಲ್ಲೇಖಿಸಿ, ಯುದ್ಧವು ಭಯ, ಹಿಂಸೆ ಮತ್ತು ಮರಣವನ್ನೇ ತರಿಸುತ್ತದೆ ಎಂದು ಹೇಳುತ್ತದೆ. ಜನರು ಪರಸ್ಪರ ಸ್ನೇಹಿತರಾಗಬಹುದಾದರೆ ಏಕೆ ಒಬ್ಬರನ್ನೊಬ್ಬರು ಕೊಲ್ಲುತ್ತಾರೆ ಎಂಬ ಪ್ರಶ್ನೆಯನ್ನು ಎತ್ತುತ್ತದೆ. ಕೊನೆಯಲ್ಲಿ, ಅಧಿಕಾರ, ಹಣ, ಧರ್ಮ ಮತ್ತು ದ್ವೇಷಕ್ಕಾಗಿ ಯುದ್ಧ ಮಾಡಲಾಗುತ್ತಿದೆಯೇ ಎಂದು ಕೇಳಿ, ಪ್ರೀತಿಯೇ ನಿಜವಾದ ಸಂದೇಶವಾಗಿರಬೇಕು ಎಂದು ಸೂಚಿಸುತ್ತದೆ.










