ಕೆಮ್ಮಿಂಜೆ ಶ್ರೀ ಶಿರಾಡಿ ರಾಜನ್ ದೈವ, ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ, ಸಾರ್ವಜನಿಕ ಅಶ್ವತ್ಥ ಪೂಜೆ, ಶನಿಪೂಜೆ

0

ಪುತ್ತೂರು:ಕೆಮ್ಮಿಂಜೆ ಗ್ರಾಮದೈವ ಶ್ರೀ ಶಿರಾಡಿ ರಾಜನ್ ದೈವ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಸಾರ್ವಜನಿಕ ಅಶ್ವತ್ಥ ಪೂಜೆ ಹಾಗೂ ಶನಿಪೂಜೆ ಕಾರ್ಯಕ್ರಮ ಮಾ.15 ರಂದು ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಜರಗಿತು.


ಶ್ರೀ ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳುಕ್ಕುರಾಯರು ಮಾತನಾಡಿ, ಶ್ರೀ ಕ್ಷೇತ್ರವು ಗ್ರಾಮದೈವ ಆಗಿ ಆರಾಧನೆ ಮಾಡಿಕೊಂಡು ಬಂದಿರುವ ಸಾನಿಧ್ಯವಾಗಿದೆ. ಒಂದು ಕಾಲದಲ್ಲಿ ದೇವಸ್ಥಾನದಲ್ಲಿ ನೇಮವಾಗಿ ಬರುತ್ತಾ ಇದ್ದ ಸಾನಿಧ್ಯ 80 ವರ್ಷಗಳ ಹಿಂದೆ ನಿಂತು ಹೋಗಿ ಇದೀಗ ಶ್ರೀ ಕ್ಷೇತ್ರ ಎದ್ದು ನಿಂತಿದೆ. ದೇವಸ್ಥಾನದ ಸಂಪರ್ಕ ಬಿಟ್ಟು ಹೋದ ಮೇಲೆ ಊರಿನ ಸಂಪರ್ಕವೂ ಬಿಟ್ಟು ಹೋಗಿತ್ತು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಗ್ರಾಮದೈವದ ಸಾನಿಧ್ಯವನ್ನು ಅಭಿವೃದ್ಧಿಗೊಳಿಸಿ ಗ್ರಾಮದೈವದ ಅನುಗ್ರಹವನ್ನು ಬೇಡಿಕೊಳ್ಳೋಣ ಎಂದರು.


ಕೆಮ್ಮಿಂಜೆ ಬಯಲು ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಪಿ.ಶ್ರೀಧರ್ ಹೆಗ್ಡೆ ಏಳ್ಮುಡಿರವರು ಮಾತನಾಡಿ, ನಾನು ಈ ಕ್ಷೇತ್ರಕ್ಕೆ ಬರಲು ಮೂಲ ಕಾರಣ ಇಲ್ಲಿನ ತಂತ್ರಿವರ್ಯರಾದ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳುಕ್ಕುರಾಯರು. ಆದ್ದರಿಂದ ನನಗೆ ಈ ಯೋಗ ಲಭಿಸಿದೆ. ಶ್ರೀ ಕ್ಷೇತ್ರದ ಅಭಿವೃದ್ಧಿ ಆಗಬೇಕಾದರೆ ಟ್ರಸ್ಟ್ ನಿರ್ಮಾಣವಾಗಬೇಕು, ಆ ಮೂಲಕ ಸರಕಾರದಿಂದ ಅನುದಾನ ಕೇಳಬಹುದಾಗಿದೆ. ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದಲ್ಲಿ ಪ್ರಶ್ನಾಚಿಂತನೆಯನ್ನು ನೆರವೇರಿಸಿ ಆ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಊರಿನ ಭಕ್ತರು ತನು-ಮನ-ಧನದಿಂದ ಸಹಕಾರ ನೀಡಬೇಕು ಎಂದರು.


ಕೆಮ್ಮಿಂಜೆ ಬಯಲು ಗ್ರಾಮ ದೈವ ಶ್ರೀ ಶಿರಾಡಿ ರಾಜನ್ ದೈವಸ್ಥಾನ ಟ್ರಸ್ಟ್‌ನ ಸಂಚಾಲಕ ದಯಾನಂದ ಎಂ ಆದರ್ಶ ಆಸ್ಪತ್ರೆ, ಗೌರವ ಸಲಹೆಗಾರರಾದ ಡಾ.ದಿನೇಶ್ ಭಟ್, ಡಾ.ರಮೇಶ್, ಪ್ರಧಾನ ಕಾರ್ಯದರ್ಶಿ ಗಣೇಶ್ ದೇವಾಡಿಗ, ಉಪಾಧ್ಯಕ್ಷ ವಿಶ್ವನಾಥ ನಾಯ್ಕ, ಕೆಮ್ಮಿಂಜೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಮಹೇಶ್ ಕಾವೇರಿಕಟ್ಟೆ, ಪದಾಧಿಕಾರಿಗಳಾದ ಪೂವಪ್ಪ ದೇವಾಡಿಗ, ಸುರೇಶ್ ದೇವಾಡಿಗ, ಯೋಗೀಶ್ ದೇವಾಡಿಗ, ದಿನೇಶ್ ದೇವಾಡಿಗ, ಸುರೇಶ್(ಬಾಬು), ಸತೀಶ್ ಸಪಲ್ಯ, ಸುಕೇಶ್ ಕುಮಾರ್, ಚಂದ್ರಶೇಖರ ಗೌಡ, ವೀಣಾ ಜನಾರ್ದನ್, ತಮ್ಮಪ್ಪ ಗೌಡ ಸೇರಿದಂತೆ ಹಲವರು ಭಕ್ತರು ಉಪಸ್ಥಿತರಿದ್ದರು.


ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಿ..
ಇಲ್ಲಿನ ಶ್ರೀ ಕ್ಷೇತ್ರವು ಅಭಿವೃದ್ಧಿ ಆಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ಶ್ರೀ ಕ್ಷೇತ್ರದ ತಂತ್ರಿಗಳಾದ ಸುಬ್ರಹ್ಮಣ್ಯ ಬಳ್ಳುಕ್ಕುರಾಯರನ್ನು ಪಡೆದ ನಾವು ಭಾಗ್ಯವಂತರು. ಮುಂದಿನ ದಿನಗಳಲ್ಲಿ ಶ್ರೀ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಶ್ನಾಚಂತನೆಯು ನೆರವೇರಲಿದೆ. ನನ್ನನ್ನು ಶ್ರೀ ಕ್ಷೇತ್ರದ ಗೌರವಾಧ್ಯಕ್ಷರನ್ನಾಗಿ ಮಾಡಿರುವುದು ನನ್ನಲ್ಲಿ ನಿಮಗೆ ಇರುವ ಅಭಿಮಾನವಾಗಿದೆ. ಶ್ರೀ ಕ್ಷೇತ್ರದ ಅಭಿವೃದ್ಧಿಗೆ ಭಕ್ತರೆಲ್ಲರೂ ಯಾವುದೇ ಭಿನ್ನಮತವಿಲ್ಲದೆ ಸಮಾಜಕ್ಕೆ ಒಳ್ಳೆಯ ಸಂದೇಶ ರವಾನಿಸುವ ಮೂಲಕ ಗ್ರಾಮದೈವದ ಅಭಿವೃದ್ದಿ ಮಾಡೋಣ.
-ಎನ್.ರವೀಂದ್ರ ಶೆಟ್ಟಿ ನುಳಿಯಾಲು, ಗೌರವಾಧ್ಯಕ್ಷರು, ಕೆಮ್ಮಿಂಜೆ ಗ್ರಾಮದೈವ ಶ್ರೀ ಶಿರಾಡಿ ರಾಜನ್ ದೈವಸ್ಥಾನ ಟ್ರಸ್ಟ್

ಧಾರ್ಮಿಕ ಕಾರ್ಯಕ್ರಮ..
ಶ್ರೀ ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ಬ್ರಹ್ಮಶ್ರೀ ವೇದಮೂರ್ತಿ ಸುಬ್ರಹ್ಮಣ್ಯ ಬಳ್ಳುಕ್ಕುರಾಯರ ನೇತೃತ್ವದಲ್ಲಿ ಬೆಳಿಗ್ಗೆ ನಾಗತಂಬಿಲ, ಅಶ್ವತ್ಥ ಪೂಜೆ, ಶನಿಪೂಜೆ, ಮಧ್ಯಾಹ್ನ ದೈವತಂಬಿಲ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನೆರವೇರಿತು.

LEAVE A REPLY

Please enter your comment!
Please enter your name here