ಪುತ್ತೂರಿನಲ್ಲಿ ಹೊಸ ಮೈಲಿಗಲ್ಲು : ಕೆದಂಬಾಡಿ ಎಂಆರ್‌ಎಫ್ ಘಟಕದ ಸಂಪರ್ಕ ರಸ್ತೆಗೆ‌ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಡಾಮರೀಕರಣ

0

ವರದಿ : ಶರತ್ ಕುಮಾರ್ ಪಾರ

ಪುತ್ತೂರು: ಕೆದಂಬಾಡಿಯಲ್ಲಿರುವ ಸಮಗ್ರ ಒಣತ್ಯಾಜ್ಯ ನಿರ್ವಹಣಾ ಘಟಕ(ಎಂಆರ್‌ಎಫ್)ದಲ್ಲಿ ಸಂಗ್ರಹವಾದ ಏಕ ಪ್ಲಾಸ್ಟಿಕ್ ತ್ಯಾಜ್ಯದಿಂದ ಡಾಂಬಾರು ರಸ್ತೆ ನಿರ್ಮಾಣ ಮಾಡುವ ಮೂಲಕ ಪುತ್ತೂರಿನಲ್ಲಿ ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ.ಪ್ರಥಮವಾಗಿ ಘಟಕದ ಸಂಪರ್ಕ ರಸ್ತೆಯನ್ನೇ ಅಲ್ಲಿನ ಪ್ಲಾಸ್ಟಿಕ್ ತ್ಯಾಜ್ಯದಿಂದ ಇದೀಗ ನಿರ್ಮಿಸಿ ಹೊಸ ವಿಧಾನ ಕಾರ‍್ಯಾರಂಭವಾಗಿದೆ.‌


ಘಟಕದ ಕಾರ್ಯನಿರ್ವಹಣೆ:
ಕೆದಂಬಾಡಿ ಗ್ರಾಮದ ತಿಂಗಳಾಡಿ ಸಮೀಪದ ಬೋಳೋಡಿಯಲ್ಲಿ ನಿರ್ಮಾಣವಾದ ಒಣತ್ಯಾಜ್ಯ ಘಟಕಕ್ಕೆ ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕಿನ ಸುಮಾರು 68 ಗ್ರಾಮ ಪಂಚಾಯತ್‌ಗಳಿಂದ ಸಂಗ್ರಹವಾದ ಒಣತ್ಯಾಜ್ಯವನ್ನು ಗ್ರಾಮ ಪಂಚಾಯತ್‌ನ ಸ್ವಚ್ಚಭಾರತ್ ವಾಹನದ ಮೂಲಕ ತರಲಾಗುತ್ತದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 4 ಘಟಕಗಳು ಕಾರ್ಯಾಚರಿಸುತ್ತಿದ್ದು ಇದು ಪುತ್ತೂರು ತಾಲೂಕಿನಲ್ಲಿಯೇ ಪ್ರಥಮ ಒಣತ್ಯಾಜ್ಯ ಸಂಗ್ರಹಣಾ ಘಟಕವಾಗಿದೆ.ಕೆದಂಬಾಡಿಯ ಎಂಆರ್‌ಎಫ್ ಘಟಕ 5 ಟನ್ ಸಾಮರ್ಥ್ಯದ ಘಟಕವಾಗಿದ್ದು ಒಣತ್ಯಾಜ್ಯವನ್ನು ಸಮಗ್ರ ನಿರ್ವಹಣೆ ಮಾಡಲಾಗುತ್ತದೆ.ಪ್ರತೀದಿನ ಸಂಗ್ರಹವಾದ ಒಣತ್ಯಾಜ್ಯವನ್ನು ವಿವಿಧ ವಿಭಾಗಗಳಲ್ಲಿ ವಿಂಗಡಣೆ ಮಾಡಿ ಮರು ಉತ್ಪನ್ನಕ್ಕೆ ಬಳಸಲಾಗುತ್ತದೆ.ಅಲ್ಲದೆ ಉಳಿದ ತ್ಯಾಜ್ಯವನ್ನು ಸಿಮೆಂಟ್ ಕಾರ್ಖಾನೆಗಳಿಗೂ ಕಳುಹಿಸಲಾಗುತ್ತದೆ.


ಪ್ಲಾಸ್ಟಿಕ್ ತ್ಯಾಜ್ಯದಿಂದ ಡಾಮಾರು ರಸ್ತೆ:
ಈ ಘಟಕದ ಸಂಪರ್ಕ ರಸ್ತೆಗೆ ತಾಲೂಕು ಪಂಚಾಯತ್‌ನಿಂದ 15 ಲಕ್ಷ ರೂ. ಅನುದಾನ ನೀಡಲಾಗಿತ್ತು.ದ.ಕ.ಜಿಲ್ಲಾ ಪಂಚಾಯತ್ ‘ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಕೆ ಮಾಡಿ ಡಾಂಬಾರು ರಸ್ತೆ ನಿರ್ಮಾಣ ಮಾಡಿ’ ಎಂದು ಸೂಚಿಸಿತ್ತು.ದ.ಕ.ಜಿಲ್ಲೆಯ ಉಜಿರೆ ಘಟಕ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಿಸಿ ಯಶಸ್ವಿಯಾಗಿದ್ದ ಬೆನ್ನಲ್ಲೇ ಕೆದಂಬಾಡಿ ತ್ಯಾಜ್ಯ ಘಟಕದ ಸಂಪರ್ಕ ರಸ್ತೆಗೆ ಅಲ್ಲಿನ ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ಮಾಡಿ ರಸ್ತೆ ನಿರ್ಮಿಸಿ ಮಾದರಿ ಆಗಲಿ ಎಂದು ಜಿಲ್ಲಾ ಪಂಚಾಯತ್ ಸೂಚಿಸಿತ್ತು.ಇದಕ್ಕೆ ಪೂರಕವಾಗಿ ಎಸ್ಟಿಮೇಶನ್ ಮಾಡಿ ಟೆಂಡರ್ ಆಗಿ ಇದೀಗ ಕೆಲಸ ಆರಂಭವಾಗಿದೆ.ರೂ.15 ಲಕ್ಷದಲ್ಲಿ 105 ಮೀಟರ್ ಉದ್ದ ಮತ್ತು 5.5 ಮೀಟರ್ ಅಗಲದ ಡಾಂಬಾರು ರಸ್ತೆ,ಮೋರಿ ನಿರ್ಮಾಣ, ಘಟಕದ ಸುತ್ತ ಕಂಪೌಂಡ್ ಹಾಗೂ ಘಟಕಕ್ಕೆ ನಾಮಫಲಕ ನಿರ್ಮಾಣವಾಗಲಿದೆ.ಒಡ್ಯಮೆ ಇನ್ ಫ್ರಾ ಕಂಪೆನಿಯು ಇದರ ಗುತ್ತಿಗೆ ವಹಿಸಿಕೊಂಡಿದೆ.


ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ಪ್ರಕ್ರಿಯೆ:
ಇಲ್ಲಿನ ಘಟಕದಲ್ಲಿ ಶೇ.60ರಷ್ಟು ಪ್ಲಾಸ್ಟಿಕ್ ತ್ಯಾಜ್ಯಗಳ ಸಂಗ್ರಹವಾಗುತ್ತಿದೆ.ಸಂಗ್ರಹವಾದ ಏಕ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ನಿರ್ವಹಣೆ ಮಾಡಿ ಸಂಗ್ರಹಿಸಿ,ಸ್ವಚ್ಛಗೊಳಿಸಿ, ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಲಾಗುತ್ತದೆ.ಬಳಿಕ ಎಂಆರ್‌ಎಫ್ ಘಟಕದಿಂದ ಕುರಿಯದಲ್ಲಿರುವ ಡಾಂಬಾರು ಮಿಶ್ರಣ ಘಟಕಕ್ಕೆ ಈ ಕಡಿಮೆ ಸಾಂದ್ರತೆಯ ಪಾಲಿಥಿಲೀನ್ ತ್ಯಾಜ್ಯವನ್ನು ಶೆಡ್ ಮಾಡಿ ಪೂರೈಕೆ ಮಾಡಲಾಗಿದೆ.ಇಲ್ಲಿ ಸಾಧಾರಣ 100 ಕೆಜಿ ಡಾಂಬಾರು ಮಿಶ್ರಣಕ್ಕೆ ಶೇ.8ರಷ್ಟು ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ಮಾಡಲಾಗಿದೆ.ಪ್ಲಾಸ್ಟಿಕ್ ತ್ಯಾಜ್ಯ(ಎಲ್‌ಡಿಪಿಇ ವೇಸ್ಟ್)ಜಲ್ಲಿ ಹಾಗೂ ಡಾಂಬಾರುನೊಂದಿಗೆ ಮಿಶ್ರಣ ಘಟಕದೊಳಗೆ ಹೋಗಿ ಹೀಟರ್‌ನಲ್ಲಿ 160 ಡಿಗ್ರಿ ತಾಪಮಾನದಲ್ಲಿ ಮಿಶ್ರಣವಾಗಿ ಹೊರಗೆ ಬರುತ್ತದೆ.ಈ ಮಿಶ್ರಣವನ್ನು ರಸ್ತೆ ನಿರ್ಮಾಣಕ್ಕೆ ಬಳಸಲಾಗಿದೆ.ಇಲ್ಲಿನ ಒಟ್ಟು 105 ಮೀಟರ್ ಉದ್ದದ ರಸ್ತೆಗೆ 100 ರಿಂದ 120 ಕೆಜೆ ವೇಸ್ಟ್ ಪ್ಲಾಸ್ಟಿಕ್ ಬಳಕೆ ಮಾಡಲಾಗಿದೆ.ಮಿಶ್ರಣವು ಹೊರಗೆ ಬಂದು ಲಾರಿಗೆ ಲೋಡ್ ಆಗುವಾಗ 140 ಡಿಗ್ರಿ ಸೆಲ್ಸಿಯಸ್ ಹಾಗೂ ರಸ್ತೆಗೆ ಬಳಕೆ ಮಾಡುವಾಗ ಕನಿಷ್ಟ 110 ಡಿಗ್ರಿ ಸೆಲ್ಸಿಯಸ್ ಇರುತ್ತದೆ.


ದೀರ್ಘಬಾಳಿಕೆಯ ಪ್ಲಾಸ್ಟಿಕ್ ರಸ್ತೆ:
ಪ್ಲಾಸ್ಟಿಕ್ ತ್ಯಾಜ್ಯದಿಂದ ಡಾಂಬಾರು ರಸ್ತೆ ನಿರ್ಮಾಣವು ಸುಸ್ಥಿರ ಪರಿಸರ ಸ್ನೇಹಿ ತಂತ್ರಜ್ಞಾನವಾಗಿದೆ.ಸಾಮಾನ್ಯ ಡಾಂಬಾರು ರಸ್ತೆಗಳಿಗಿಂತ ಈ ರಸ್ತೆ ಹೆಚ್ಚಿನ ಬಲ ಮತ್ತು ದೀರ್ಘಕಾಲ ಬಾಳಿಕೆ ಬರುತ್ತವೆ ಮತ್ತು ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.ಈ ವಿಧಾನದಲ್ಲಿ ಕರಗಿದ ಪ್ಲಾಸ್ಟಿಕ್‌ನ್ನು ಡಾಂಬರಿನೊಂದಿಗೆ ಬೆರೆಸಿ, ರಸ್ತೆಯ ಸಾಮರ್ಥ್ಯವನ್ನು ಹೆಚ್ಚಿಸಿ,ನೀರಿನಿಂದ ಆಗುವ ಹಾನಿಯನ್ನು ತಡೆಯಲಾಗುತ್ತದೆ.ಈ ರಸ್ತೆಗಳು ನೀರು ನುಗ್ಗದಂತೆ ತಡೆದು,ಗುಂಡಿ ಬೀಳುವುದನ್ನು ತಪ್ಪಿಸುತ್ತವೆ.ಪ್ಲಾಸ್ಟಿಕ್ ಬಳಕೆಯಿಂದ ಡಾಂಬರಿನ ಅವಶ್ಯಕತೆ ಪ್ರಮಾಣ ಕಡಿಮೆಯಾಗಿ,ಪ್ರತಿ ಕಿಲೋಮೀಟರ್‌ಗೆ ಸುಮಾರು 1.5 ಲಕ್ಷದವರೆಗೆ ಉಳಿತಾಯವಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗೆ
170 ಟನ್ ಪ್ಲಾಸ್ಟಿಕ್ ತ್ಯಾಜ್ಯ ಬಳಕೆಗ್ರಾಮೀಣ ಪ್ರದೇಶದಲ್ಲಿ ಡಾಂಬಾರು ರಸ್ತೆಗೆ ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ಮಾಡಿ ರಸ್ತೆ ನಿರ್ಮಿಸಬೇಕೆಂದು ಕಳೆದ ಬಾರಿ ರಾಜ್ಯ ಸರಕಾರ ಸೂಚನೆ ನೀಡಿತ್ತು.ರಾಜ್ಯದ ಎಲ್ಲಾ ಜಿಲ್ಲೆಗಳ ಸಂಬಂಧಪಟ್ಟ ಕಾರ್ಯಪಾಲಕ ಅಭಿಯಂತರರು ಹಾಗೂ ಸ್ವಚ್ಚಭಾರತ್ ಮಿಷನ್ ಯೋಜನೆಯ ನೋಡಲ್ ಅಧಿಕಾರಿಗಳ ಮೂಲಕ ಉಜಿರೆಗೆ ಕರೆಸಿಕೊಂಡು ಅಲ್ಲಿನ ಘಟಕದ ನೂರು ಮೀಟರ್ ರಸ್ತೆಯನ್ನು ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ಮಾಡಿ ನಿರ್ಮಾಣ ಮಾಡಲಾಗಿತ್ತು.ನಮ್ಮ ಜಿಲ್ಲೆಯಲ್ಲಿ ಈಗಾಗಲೇ 4 ಘಟಕಗಳು ಕಾರ್ಯನಿರ್ವಹಿಸುತ್ತಿದೆ.ಕಳೆದ ವರ್ಷದಲ್ಲಿ ತಲಪ್ಪಾಡಿಯಿಂದ ಕುಂದಾಪುರದ ಶಾಸ್ತಾನವರೆಗಿನ ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಯ ಡಾಮರೀಕರಣಕ್ಕೆ ಜಿಲ್ಲೆಯ 4 ಘಟಕಗಳಿಂದ ಸುಮಾರು 170 ಟನ್ ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ಮಾಡಲಾಗಿದೆ.

ಪುತ್ತೂರಿನಲ್ಲಿ ಹೊಸ ಮೈಲಿಗಲ್ಲು
ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಬನ್ನೂರು ನೆಕ್ಕಿಲದಲ್ಲಿ ಈಗಾಗಲೇ ತ್ಯಾಜ್ಯವನ್ನು ಬಳಸಿಕೊಂಡು ಬಯೋ ಸಿಎನ್‌ಜಿ ಗ್ಯಾಸ್ ಉತ್ಪಾದನೆ ಮಾಡಿ ಮಾರಾಟಕ್ಕೂ ಪೆಸೋ ಅನುಮತಿ ನೀಡುವ ಮೂಲಕ ದೇಶದಲ್ಲೇ ನಗರಸಭೆ ವ್ಯಾಪ್ತಿಯಲ್ಲಿ ಪುತ್ತೂರು ಪ್ರಥಮ ಘಟಕವಾಗಿ ಹೊರಹೊಮ್ಮಿದ್ದರೆ ಇದೀಗ ಏಕಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ಡಾಂಬರೀಕರಣದಲ್ಲಿ ಬಳಕೆ ಮಾಡುವ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಲಾಗಿದೆ.


ಪ್ಲಾಸ್ಟಿಕ್ ಬಳಕೆಯಲ್ಲಿ ರಸ್ತೆ ನಿರ್ಮಿಸಿದ ದ.ಕ.ಜಿಲ್ಲೆಯ ಎರಡನೇ ಘಟಕ
ಪುತ್ತೂರು ತಾಲೂಕು ಪಂಚಾಯತ್ ಅನುದಾನದಲ್ಲಿ ಜಿಲ್ಲಾ ಪಂಚಾಯತ್ ಶರತ್ತು ಪ್ರಕಾರ ಪರಿಸರ ಸ್ನೇಹಿ ರಸ್ತೆ ನಿರ್ಮಾಣ ಮಾಡಲಾಗಿದೆ.ಕೆದಂಬಾಡಿ ಘಟಕದ ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ಘಟಕಕ್ಕೆ ಡಾಂಬಾರು ರಸ್ತೆ ಮಾಡಲಾಗಿದೆ.ಡಾಂಬಾರು ಉತ್ಪಾದನೆಯಲ್ಲಿ ಶೇ.8ರಷ್ಟನ್ನು ಪ್ಲಾಸ್ಟಿಕ್ ತ್ಯಾಜ್ಯ ಬಳಕೆ ಮಾಡಿ ಮಾಡಲಾಗುತ್ತದೆ.ಇಲ್ಲಿ ಒಟ್ಟು 105 ಮೀ ಉದ್ದ ಹಾಗೂ 5.5. ಮೀ.ಅಗಲದ ರಸ್ತೆಗೆ ಸುಮಾರು 100ರಿಂದ 120 ಕೆಜಿ ವೇಸ್ಟ್ ಪ್ಲಾಸ್ಟಿಕ್ ಬಳಕೆ ಮಾಡಲಾಗಿದೆ.ಪ್ಲಾಸ್ಟಿಕ್ ಬಳಸಿ ರಸ್ತೆ ಡಾಮರೀಕರಣ ಮಾಡಿರುವ ಕೆದಂಬಾಡಿ ಘಟಕ ದ.ಕ.ಜಿಲ್ಲೆಯ ಎರಡನೇ ಘಟಕವಾಗಿದೆ
ಸುರೇಶ್, ಕಾರ್ಯನಿರ್ವಾಹಕ ಇಂಜಿನಿಯರ್
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ

ಏಕಬಳಕೆ ಪ್ಲಾಸಿಕ್‌ಗೆ ಪರಿಹಾರ ಸಿಕ್ಕಿದೆ
ಕೆದಂಬಾಡಿಯಲ್ಲಿ ಎಂಆರ್‌ಎಫ್ ಘಟಕ ನಿರ್ಮಾಣ ಮಾಡಿ ಪುತ್ತೂರು, ಸುಳ್ಯ, ಕಡಬ ತಾಲೂಕಿನ ಗ್ರಾಮ ಪಂಚಾಯತ್‌ಗಳಿಂದ ಒಣತ್ಯಾಜ್ಯ ಸಂಗ್ರಹ ಮಾಡಿ ಪ್ರತ್ಯೇಕಿಸಲಾಗುತ್ತಿದೆ.ಇಲ್ಲಿ ಒಣತ್ಯಾಜ್ಯಗಳನ್ನು 30 ರಿಂದ 35ರಷ್ಟು ವಿವಿಧ ಬಗೆಯಲ್ಲಿ ಪ್ರತ್ಯೇಕಿಸಿ ಶೇ.40ರಷ್ಟು ಸಿಗುತ್ತಿರುವ ತ್ಯಾಜ್ಯವನ್ನು ಬಾಗಲಕೋಟೆ, ಗುಲ್ಬರ್ಗ ಜಿಲ್ಲೆಗೆ ಕಳುಹಿಸಿಕೊಡುತ್ತಿದ್ದೇವೆ.ಉಳಿದ ಪ್ಲಾಸ್ಟಿಕ್ ತ್ಯಾಜ್ಯವನ್ನು ಇದೀಗ ಡಾಂಬಾರು ರಸ್ತೆಗೆ ಮಿಶ್ರಣ ಮಾಡಿ ರಸ್ತೆ ನಿರ್ಮಿಸಿ ತೋರಿಸಿದ್ದೆವೆ.ಇದರಿಂದ ಏಕಬಳಕೆ ಪ್ಲಾಸಿಕ್‌ಗೆ ಪರಿಹಾರ ಸಿಕ್ಕಿದೆ.ಇದು ದ.ಕ. ಜಿಲ್ಲೆಯಲ್ಲಿ ಎರಡನೇ ಘಟಕವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಗ್ರಾಮೀಣ ರಸ್ತೆಗಳಿಗೂ ಅಳವಡಿಕೆ ಮಾಡಲಿದ್ದೇವೆ
ನವೀನ್ ಭಂಡಾರಿ, ಕಾರ್ಯನಿರ್ವಾಹಕಾಧಿಕಾರಿ, ತಾ.ಪಂ. ಪುತ್ತೂರು

LEAVE A REPLY

Please enter your comment!
Please enter your name here