ಶ್ರೀಕ್ಷೇತ್ರ ಹನುಮಗಿರಿ ಬ್ರಹ್ಮಕಲಶೋತ್ಸವ: ಬೆಂಗಳೂರು ಭಕ್ತರ ಪೂರ್ವಭಾವಿ ಸಭೆ ಹಾಗೂ ಸಮಿತಿ ರಚನೆ

0

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರವಾದ ಹನುಮಗಿರಿಯ ಬ್ರಹ್ಮಕಲಶೋತ್ಸವದ ಅಂಗವಾಗಿ ಬೆಂಗಳೂರಿನ ಭಕ್ತರ ಪೂರ್ವಭಾವಿ ಸಭೆಯು ಸದಾಶಿವನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ವಿವಿಧ ಭಾಗಗಳಿಂದ ಆಗಮಿಸಿದ ಭಕ್ತಾದಿಗಳು ಪಾಲ್ಗೊಂಡು ಉತ್ಸವದ ಸಿದ್ಧತೆಗಳ ಬಗ್ಗೆ ಚರ್ಚಿಸಿದರು. ಸಭೆಯಲ್ಲಿ ಉಪಸ್ಥಿತರಿದ್ದ ನಿವೃತ್ತ ಹಿರಿಯ ಆರ್ ಟಿಓ ಅಧಿಕಾರಿ ಆನಂದಗೌಡ ಹಾಗೂ ಹನುಮಗಿರಿ ಬ್ರಹ್ಮಕಲಶೋತ್ಸವ ಸಮಿತಿಯ ಉಪಾಧ್ಯಕ್ಷರಾದ ಖ್ಯಾತ ನ್ಯಾಯವಾದಿ ರಾಜಶೇಖರ್ ಹಿಲಿಯಾರು ಅವರು ಬ್ರಹ್ಮಕಲಶೋತ್ಸವದ ಮಹತ್ವ ಹಾಗೂ ಕ್ಷೇತ್ರದ ಐತಿಹಾಸಿಕ ಹಿನ್ನೆಲೆಯ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ಹಂಚಿಕೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ರಾಜಶೇಖರ್ ಹಿಲಿಯಾರು, ಮುಂಬರುವ ಬ್ರಹ್ಮಕಲಶೋತ್ಸವದ ರೂಪುರೇಷೆಗಳನ್ನು ವಿವರಿಸುತ್ತಾ, ಅಯೋಧ್ಯೆಯಿಂದ ಹನುಮಗಿರಿಯವರೆಗೆ ಸಾಗಲಿರುವ ಭವ್ಯ ‘ಶ್ರೀರಾಮ ಹನುಮ ಜ್ಯೋತಿ ರಥ ಯಾತ್ರೆ’ಯ ಬಗ್ಗೆ ಮಾಹಿತಿ ನೀಡಿದರು. ಇದರೊಂದಿಗೆ ಲಕ್ಷೋತ್ತರ ನಾರಿಕೇಳ ಸಮರ್ಪಣೆ, ಕೋಟಿ ರಾಮ ತಾರಕ ಜಪಯಜ್ಞ ಹಾಗೂ ಉತ್ಸವದ ದಿನಗಳಲ್ಲಿ ನಡೆಯಲಿರುವ ವಿವಿಧ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಭಜನಾ ಸಂಕೀರ್ತನಾ ಕಾರ್ಯಕ್ರಮಗಳ ಕುರಿತು ವಿಸ್ತೃತವಾಗಿ ತಿಳಿಸಿದರು. ಸಮಾಜಕ್ಕೆ ಒಂದು ಸತ್ಸಂದೇಶ ನೀಡುವ ಉದ್ದೇಶದಿಂದ ಈ ಬಾರಿಯ ಬ್ರಹ್ಮಕಲಶೋತ್ಸವವನ್ನು ಅತ್ಯಂತ ವಿಶೇಷವಾಗಿ ಆಯೋಜಿಸಲಾಗುತ್ತಿದ್ದು, ಶ್ರೀರಾಮ ಮತ್ತು ಹನುಮಂತನ ಸೇವೆಗೆ ನಮಗೆ ಒದಗಿ ಬಂದಿರುವ ಸುವರ್ಣ ಅವಕಾಶ ಎಂದು ಹೇಳಿದರು.

ಬ್ರಹ್ಮಕಲಶೋತ್ಸವದ ಕೇಂದ್ರ ಸಮಿತಿಯ ನಿರ್ಣಯದಂತೆ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಡೆಸಲು ಬೆಂಗಳೂರಿನಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯ ಅಧ್ಯಕ್ಷರಾಗಿ ಸುಧಾಕರ್ ಪೈ, ಉಪಾಧ್ಯಕ್ಷರಾಗಿ ಆನಂದಗೌಡ, ಸಂಚಾಲಕರಾಗಿ ವಿನೋದ್ ಕುಮಾರ್ ಹಾಗೂ ಕಾರ್ಯದರ್ಶಿಯಾಗಿ ಪ್ರವೀಣ್ ಮುಗಳಿ ಅವರು ಆಯ್ಕೆಯಾದರು. ಜತೆ ಕಾರ್ಯದರ್ಶಿಗಳಾಗಿ ಸ್ನೇಹ, ಕಿರಣ್ ಕುಮಾರ್ ಮತ್ತು ಜಗನ್ನಾಥ ರೈ ಅವರನ್ನು ನೇಮಿಸಲಾಯಿತು. ಸಮಿತಿಯ ಸದಸ್ಯರಾಗಿ ರಾಜಾರಾಮ್ ಸೂರಂಬೈಲು, ನಾಗರಾಜ ಶೆಟ್ಟಿ, ಅಜಯ್ ಪ್ರಭು, ಮನೋಜ್ ಕುಮಾರ್ ರೈ, ಶೇಷಾದ್ರಿ ಹಾಗೂ ಆದೀಶ್ ಸೇರಿದಂತೆ ಅನೇಕ ಗಣ್ಯರನ್ನು ಆಯ್ಕೆ ಮಾಡಲಾಗಿದ್ದು, ಆಯ್ಕೆಯಾದವರ ಪಟ್ಟಿಯನ್ನು ಧರ್ಮಶ್ರೀ ಪ್ರತಿಷ್ಠಾನದ ಸದಸ್ಯರಾದ ವಿಶ್ವೇಶ್ವ ಪಿ.ಎಸ್. ಅವರು ವಾಚಿಸಿದರು. ವೇದಿಕೆಯಲ್ಲಿ ಪ್ರವೀಣ್ ಮುಗಳಿ, ಸಚಿನ್ ಬಿ.ಎಸ್. ಹಾಗೂ ಎಸ್.ಕೆ. ಆಚಾರ್ಯ ಅವರು ಉಪಸ್ಥಿತರಿದ್ದರು. ವಿಶ್ವೇಶ ಅವರು ಸ್ವಾಗತಿಸಿ, ವಂದನಾರ್ಪಣೆ ಮಾಡಿದರು.

LEAVE A REPLY

Please enter your comment!
Please enter your name here