ವೃತ್ತಿಯಲ್ಲಿ ಶಿಕ್ಷಕರಾದರೂ ದಿನದ ಒಂದು ಗಂಟೆ ಸಾರ್ವಜನಿಕ ಸ್ಥಳದ ಸ್ವಚ್ಚತೆಗೆ ಮೀಸಲು – ಕಸ, ಪ್ಲಾಸ್ಟಿಕ್ ಹೆಕ್ಕುವ ಮೂಲಕ ಸ್ವಚ್ಛತೆ ಸಂದೇಶ ಸಾರುತ್ತಿರುವ ಕೆಯ್ಯೂರಿನ ಇಬ್ರಾಹಿಂ ಮಾಸ್ತರ್

0

@ ಸಿಶೇ ಕಜೆಮಾರ್


ಪುತ್ತೂರು: ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುವ ಶಿಕ್ಷಕರೊಬ್ಬರು ಇಲ್ಲಿ ಕಳೆದ ಹಲವು ವರ್ಷಗಳಿಂದ ಪಾಠದ ಜೊತೆಗೆ ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದಿರುವ ಕಸ, ಪ್ಲಾಸ್ಟಿಕ್ ಇತ್ಯಾದಿಗಳನ್ನು ಹೆಕ್ಕಿ ಸಂಗ್ರಹಿಸುವ ಮೂಲಕ ಸಮಾಜಕ್ಕೂ ಸ್ವಚ್ಛತೆಯ ಪಾಠ ಹೇಳಿ ಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಇವರು ಬೇರಾರು ಅಲ್ಲ ಪುತ್ತೂರು ತಾಲೂಕು ಕೆಯ್ಯೂರು ಗ್ರಾಮದ ಇಬ್ರಾಹಿಂ ಮಾಸ್ತರ್ ಇವರು ಕಳೆದ 2 ವರ್ಷಗಳಿಂದ ಕೆ ಪಿ ಎಸ್ ಗಾಂಧಿನಗರ ಸುಳ್ಯದಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ತಾನೊಬ್ಬನೇ ದಿನ ಬೆಳಿಗ್ಗೆ ಎದ್ದು ಸುಮಾರು 2 ಕಿಲೋ ಮೀಟರ್ ತನಕ ನಡೆದುಕೊಂಡು ಹೋಗಿ ರಸ್ತೆ ಬದಿಯಲ್ಲಿ ಬಿದ್ದಿರುವ ಪ್ಲಾಸ್ಟಿಕ್, ಕಸ ಇತ್ಯಾದಿಗಳನ್ನು ಹೆಕ್ಕಿ ಗೋಣಿ ಚೀಲದಲ್ಲಿ ಸಂಗ್ರಹಿಸಿ ಪಂಚಾಯತ್ ಸ್ವಚ್ಛತಾ ಘಟಕಕ್ಕೆ ಹಸ್ತಾಂತರಿಸುವ ಕೆಲಸವನ್ನು ಮಾಡುವ ಮೂಲಕ ಇಬ್ರಾಹಿಂ ಮಾಸ್ತರ್‌ರವರು ಕೇವಲ ಶಾಲೆಗೆ ಮಾತ್ರವಲ್ಲ ಊರಿಗೂ ಒಬ್ಬರು ಉತ್ತಮ ಮೇಸ್ಟ್ರು ಆಗಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಹೇಳೋದು ಕೆಲವರು ವಿದ್ಯಾರ್ಥಿಗಳಿಗೆ ಮಾತ್ರ ಒಳ್ಳೆಯ ಮೇಸ್ಟ್ರು, ಕೆಲವರು ಊರಿಗೆ ಉತ್ತಮ ಮೇಸ್ಟ್ರು, ಕೆಲವರು ಪ್ರಶಸ್ತಿಗಾಗಿ ಮಾತ್ರ ಕೆಲಸ ಮಾಡುವವರು ಆದರೆ ಇವರ ಮಧ್ಯೆ ಮಕ್ಕಳಿಗೂ ಊರಿಗೂ ಶಾಲೆಗೂ ಇಲಾಖೆಗೂ ಲೋಕಕ್ಕೂ ಸಲ್ಲುವ ಅರ್ಹತೆ ಉಳ್ಳವರು ಕನಿಷ್ಠ ಮಂದಿ. ಇಂತವರಲ್ಲಿ ಕೆಯ್ಯೂರಿನ ಇಬ್ರಾಹಿಂ ಮೇಸ್ಟ್ರು ಒಬ್ಬರಾಗಿದ್ದಾರೆ.


ಹಿಂದೆ 2008 ರಿಂದ 2023 ರ ವರೆಗೆ 15 ವರ್ಷಗಳ ಕಾಲ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ನೇರುಗಳಲೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಈ ಶಾಲೆಯನ್ನು ಕೊಡಗು ಜಿಲ್ಲೆಯಲ್ಲಿ ಒಂದು ಮಾದರಿ ಶಾಲೆಯಾಗಿ ಬೆಳೆಸುವಲ್ಲಿ ಯಶಸ್ವಿ ಯಾಗಿದ್ದರು. ಕುಗ್ರಾಮದ ಶಾಲೆಯೊಂದರಲ್ಲಿ, ಸರ್ಕಾರದಿಂದ ಬಂದ ಅನುದಾನ ಮತ್ತು ದಾನಿಗಳಿಂದ ದೊರೆತ ಆರ್ಥಿಕ ಸಹಾಯವನ್ನು ಸಮರ್ಪಕವಾಗಿ ಬಳಸಿ ಒಂದು ಉತ್ತಮ ವಿಜ್ಞಾನ ಪ್ರಯೋಗ ಶಾಲೆಯನ್ನು ನಿರ್ಮಿಸಿ ವಿದ್ಯಾರ್ಥಿಗಳ, ಪೋಷಕರ, ಶಿಕ್ಷಣ ಇಲಾಖೆಯ ಮತ್ತು ವಿದ್ಯಾ ಪ್ರೇಮಿಗಳ ಮೆಚ್ಚುಗೆಯನ್ನು ಗಳಿಸಿದ್ದರು. ಅದರೊಂದಿಗೆ ಶಾಲೆಯ ಎಲ್ಲಾ ಶಿಕ್ಷಕರನ್ನು ಮತ್ತು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ತನ್ನ ಶಾಲೆಯ ಸುತ್ತ ಸ್ವಚ್ಛ ಮತ್ತು ಹಸಿರು ಪರಿಸರವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದರು. ಇವರ ಸಾಧನೆಯನ್ನು ಗಮನಿಸಿದ ಇಲಾಖೆಯು 2019ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು 2022 ರಲ್ಲಿ ರಾಜ್ಯ ಮಟ್ಟದ ಉತ್ತಮ ಶಿಕ್ಷಕಪ್ರಶಸ್ತಿನೀಡಿ ಗೌರವಿಸಿತ್ತು. ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಕೆ ಪಿ ಎಸ್ ಗಾಂಧಿನಗರ ಶಾಲೆಯಲ್ಲಿ, ಮುತ್ತೂಟ್ ಫೈನಾನ್ಸ್ ನಿಂದ ಆರ್ಥಿಕ ಸಹಾಯ ಪಡೆದು ಮುಖ್ಯ ಶಿಕ್ಷಕಿ ಶ್ರೀಮತಿ ಜ್ಯೋತಿ ಲಕ್ಷ್ಮಿ ಅವರ ಮಾರ್ದರ್ಶನದಲ್ಲಿ ಪ್ರೌಢ ಶಾಲಾ ಮಟ್ಟದ ಮಾದರಿ ವಿಜ್ಞಾನ ಪ್ರಯೋಗಾಲಯವನ್ನು ನಿರ್ಮಿಸಿ ಎಲ್ಲರ ಪ್ರಶಂಶೆಗೆ ಪಾತ್ರರಾಗಿದ್ದಾರೆ.


ಗ್ರಾಮ ಪಂಚಾಯತಿಯ ನಮ್ಮ ಸಂಸ್ಕೃತಿ- ಸ್ವಚ್ಛ ಸಂಸ್ಕೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ ಸ್ವಚ್ಛತೆಯಲ್ಲಿ ದೇವರನ್ನು ಕಾಣುವ ಇಬ್ರಾಹಿಂ ಮಾಸ್ತರ್‌ರವರು ಕಾರ್ಯಕ್ರಮಕ್ಕೆ ಸಂಪೂರ್ಣ ಬೆಂಬಲ ಸೂಚಿಸಿ ತಿಂಗಳಿಗೊಮ್ಮೆ ಪಂಚಾಯತ್ ವತಿಯಿಂದ ನಡೆಸಲ್ಪಡುವ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾ ಬರುತ್ತಿದ್ದಾರೆ. ಹಸಿರು ಮತ್ತು ಸ್ವಚ್ಛತೆ ವಿಚಾರದಲ್ಲಿ ತನ್ನ ಮನೆಯ ಪರಿಸರ ಮಾದರಿ ಯಾಗಿರಬೇಕೆಂದು ಇವರ ಕನಸು. ಇವರ ಮನೆಯ ಅಂಗಳ ದಲ್ಲಿರುವ ಕಿರಲ್ ಬೋಗಿ ಮರಗಳನ್ನು ಕಡಿಯದೆ ಸಂರಕ್ಷಣೆ ಮಾಡಿ ಪರಿಸರವನ್ನು ಸದಾ ತಂಪಾಗಿರುವಂತೆ ನೋಡಿಕೊಂಡಿದ್ದಾರೆ. ಮನೆಯ ಸುತ್ತಲೂ ಗಿಡಗಳನ್ನು ಬೆಳೆಸಿ ಹಸಿರನ್ನು ಕಾಪಾಡಿ ಕೊಂಡು ಬಂದಿದ್ದಾರೆ. ಒಬ್ಬ ಶಿಕ್ಷಕರಾದರೂ ಯಾವುದೇ ಅಹಂ ಇಲ್ಲದೆ ಸ್ವಚ್ಛತೆಗಾಗಿ ತನ್ನ ಅಮೂಲ್ಯ ಸಮಯವನ್ನು ಮೀಸಲಿಟ್ಟಿರುವ ಇವರ ಸೇವೆ ನಿಜಕ್ಕೂ ಶ್ಲಾಘನೀಯ.


ಪೊರ್ಲುದ ಕೆಯ್ಯೂರು ವಿಷನ್ ಆರಂಭಿಸಿದ್ದರು
ಎಷ್ಟೋ ಮಂದಿ ಊರು ಬಿಟ್ಟು ಇನ್ಯಾವುದೋ ಊರಲ್ಲಿ ದುಡಿಯುವಾಗ ಬೇರು ಕಳಚಿ ಕೊಂಡು ಹೋಗುತ್ತಾರೆ. ಆದರೆ ಇಬ್ರಾಹಿಂ ಮಾಸ್ತರ್‌ರವರು ಈ ಹಿಂದೆ ಸೋಮವಾರ ಪೇಟೆಯಲ್ಲಿ ಇದ್ದರೂ ತನ್ನೂರಿನ ಸ್ವಚ್ಛತೆ ಬಗ್ಗೆ ಕನಸು ಕಂಡವರು. 2019 ರಲ್ಲಿ ತನ್ನ ಹುಟ್ಟೂರಲ್ಲಿ ಜಾತಿ,ಮತ ಧರ್ಮ ರಹಿತ ಒಗ್ಗೂಡುವಿಕೆಯಿಂದ 2019 ರಲ್ಲಿ ‘ಪೊರ್ಲುದ ಕೆಯ್ಯೂರು ವಿಷನ್ 2025’ ಪ್ರಾರಂಭ ಮಾಡಿದ್ದರು. ಇದರ ಗೌರವ ಅಧ್ಯಕ್ಷರಾದ ದಂಬೆಕಾನ ಸದಾಶಿವ ರೈ, ಅಧ್ಯಕ್ಷ ವಿಶ್ವನಾಥ ಪೂಜಾರಿ ಮತ್ತು ಆನಂದ ರೈ ಮತ್ತು ಇತರ ಪದಾಧಿಕಾರಿಗಳೊಂದಿಗೆ ಸೇರಿಕೊಂಡು ಊರಿನ ಹಸಿರು ಮತ್ತು ಸ್ವಚ್ಛತೆಗಾಗಿ ಅನೇಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದರು. ಈ ಸಂದರ್ಭದಲ್ಲಿ ಮಾಡಾವು ವಿಖಾಯ ತಂಡವು ಊರಿನ ಸ್ವಚ್ಛತೆ ಮಾಡಲು ಸಂಪೂರ್ಣವಾಗಿ ಸಹಕರಿಸಿತ್ತು.


ದಿನಕ್ಕೆ ಒಂದು ಘಂಟೆ ಸಾರ್ವಜನಿಕ ಸ್ಥಳದ ಸ್ವಚ್ಛತೆಗಾಗಿ ಸೇವೆ
ಸ್ವಚ್ಛತೆಯಲ್ಲಿ ದೇವರನ್ನು ಕಾಣುವ ಇಬ್ರಾಹಿಂ ಮಾಸ್ತರ್‌ರವರು ಎರಡು ವರ್ಷಗಳ ಹಿಂದೆ ವರ್ಗಾವಣೆಗೊಂಡು ಊರಲ್ಲೇ ನೆಲೆಸಲು ಪ್ರಾರಂಭಿಸಿದ ಮೇಲೆ ಪ್ರತಿ ದಿನದ ಒಂದು ಘಂಟೆಯನ್ನು ಸಾರ್ವಜನಿಕ ಸ್ಥಳದ ಸ್ವಚ್ಛತೆಗಾಗಿ ಮೀಸಲಿಟ್ಟರು. ಈ ಒಂದು ಘಂಟೆಯಲ್ಲಿ ಮಾಡಾವು ಕಟ್ಟೆಯಿಂದ ಸಂತೋಷ್ ನಗರದ ನಡುವಿನ ಹೆದ್ದಾರಿ ಬದಿಯಿಂದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಸಂಗ್ರಹಿಸಿ ಪಂಚಾಯತ್ ಗೆ ಒಪ್ಪಿಸಲು ಪ್ರಾರಂಬಿಸಿದರು. ಈ ಸೇವೆಯನ್ನು ದೇಶ ಸೇವೆ ಎಂದು ಅವರು ನಂಬಿದ್ದಾರೆ. ಅಂದಿನಿಂದ ಇಂದಿನವರೇಗೂ ಈ ಸೇವೆಯನ್ನು ನಿರಂತರವಾಗಿ ಮಾಡುತ್ತಾ ಬಂದಿದ್ದಾರೆ. ತಾನೊಬ್ಬನೇ ಪ್ರತಿ ದಿನ ಬೆಳಿಗ್ಗಿನ ಜಾವ ಗೋಣಿ ಚೀಲ ಹಿಡಿದುಕೊಂಡು ರಸ್ತೆಯುದ್ಧಕ್ಕೂ ಬಿದ್ದಿರುವ ಪ್ಲಾಸ್ಟಿಕ್, ಕಸಗಳನ್ನು ಸಂಗ್ರಹಿಸಿ ಪಂಚಾಯತ್ ಸ್ವಚ್ಛ ಸಂಕೀರ್ಣ ಘಟಕಕ್ಕೆ ನೀಡುತ್ತಾ ಬಂದಿದ್ದಾರೆ.

ಮಾದರಿ ಮಸೀದಿ ಪರಿಸರದ ಕನಸು
ಮಾಡಾವು ಬದ್ರಿಯಾ ಮಸೀದಿಯ ಪರಿಸರವನ್ನು ಸ್ವಚ್ಛತೆಯಲ್ಲಿ ಒಂದು ಮಾದರಿ ಪರಿಸರವಾಗಿ ಬೆಳೆಸುವ ಪಣ ತೊಟ್ಟು ಕಾರ್ಯ ಪ್ರವೃತರಾದ ಕಾರಣ ಇಂದು ವಿಶಾಲವಾದ ಈ ಮಸೀದಿ ಪರಿಸರವು ಕಸ ಮುಕ್ತವಾಗಿ ಎಲ್ಲರ ಗಮನ ಸೆಳೆಯುತ್ತಿದೆ. ಮಸೀದಿ ಮುಂದೆ ಹಾದು ಹೋಗುವ ರಸ್ತೆ ಬದಿಯಲ್ಲಿ ವಿಖಾಯ ತಂಡದ ನೆರವಿನೊಂದಿಗೆ ಸಣ್ಣ ಗಾರ್ಡನ್ ನಿರ್ಮಿಸಿ ಪರಿಸರವನ್ನು ಹಸಿರುಮಯ ಮಾಡುವ ಪ್ರಯತ್ನವನ್ನು ಇಬ್ರಾಹಿಂ ಮಾಸ್ತರ್‌ರವರು ಮಾಡಿ ತೋರಿಸಿದ್ದಾರೆ.


‘ ಇಬ್ರಾಹಿಂ ಮಾಸ್ತರ್ ಓರ್ವ ಪರಿಸರ ಪ್ರೇಮಿ. ತಾನು ಹೋದ ಶಾಲೆ ಹಾಗೂ ಊರಲ್ಲಿ ಸ್ವಚ್ಚ ಪರಿಸರ ನಿರ್ಮಾಣ ಇವರ ಕನಸು. ಪೊರ್ಲುದ ಕೆಯ್ಯೂರು ವಿಷನ್ -2025 ಸ್ಥಾಪನೆಯಿಂದ ಗ್ರಾಮದಲ್ಲಿ ಸ್ವಚ್ಛತೆಯ ಜಾಗೃತಿ ಮೂಡಿದೆ. ಕಳೆದ 5 ವರ್ಷಗಳಿಂದ ಇವರು ಸಾರ್ವಜನಿಕ ಸ್ಥಳಗಳ ಸ್ವಚ್ಚತೆಯ ಸೇವೆ ಸಲ್ಲಿಸುತ್ತಿದ್ದಾರೆ. ಇವರೊಬ್ಬರು ಆದರ್ಶ ಶಿಕ್ಷಕ ಎಂದೇಳೆಲು ಹೆಮ್ಮೆ ಆಗುತ್ತಿದೆ.’
ಆನಂದ ರೈ ದೇವಿನಗರ, ಸ್ಥಾಪಕ ಅಧ್ಯಕ್ಷರು ವರ್ತಕರ ಸಂಘ ಕೆಯ್ಯೂರು

LEAVE A REPLY

Please enter your comment!
Please enter your name here