ಪುತ್ತೂರು ಸಿಟಿ ಆಸ್ಪತ್ರೆಯಲ್ಲಿ ಸಕ್ಕರೆ ಕಾಯಿಲೆ ತಡೆಗಟ್ಟುವಿಕೆ ಮಾಹಿತಿ ಶಿಕ್ಷಣ

0

ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹದು – ಡಾ. ಭಾಸ್ಕರ್ ಎಸ್
ಯಾವುದೇ ವಸ್ತು ಜಾಸ್ತಿ ಆದರೆ ಅಮೃತವೂ ವಿಷ – ಡಾ ಎ.ಪಿ ಭಟ್
ಏನೇ ಸಮಸ್ಯೆ ಬಂದರೂ ವೈದ್ಯರ ಸಲಹೆ ಪಡೆಯಿರಿ – ಡಾ. ತನ್ಮಯ ಭಟ್

ಪುತ್ತೂರು: ಸಕ್ಕರೆ ಕಾಯಿಲೆಯನ್ನು ತಡೆಗಟ್ಟುವಿಕೆ ಮತ್ತು ಆರೋಗ್ಯ ಸಂರಕ್ಷಣೆ ಕುರಿತು ಮಾಹಿತಿ ಕಾರ್ಯಕ್ರಮವು ಪುತ್ತೂರು ಸಿಟಿ ಹಾಸ್ಟಿಟಲ್ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಮಾ.22ರಂದು ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಿತು. ಸುಮಾರು 45ಕ್ಕೂ ಅಧಿಕ ಮಂದಿ ಮಾಹಿತಿ ಪ್ರಯೋಜನ ಪಡೆದರಲ್ಲದೆ ತಮ್ಮ ಸಂಶಯಗಳಿಗೆ ವೈದ್ಯರಿಂದ ಉತ್ತರ ಪಡೆದುಕೊಂಡರು.


ಸಕ್ಕರೆ ಕಾಯಿಲೆಯನ್ನು ನಿಯಂತ್ರಿಸಬಹದು:
ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಭಾಸ್ಕರ್ ಎಸ್ ಅವರು ಮಾತನಾಡಿ, ರೋಗಿಗಳಿಗೆ ಚಿಕಿತ್ಸೆಗಿಂತ ರೋಗಗಳ ಬಗ್ಗೆ ಮಾಹಿತಿ ಇರಬೇಕು. ಇವತ್ತು ಸಕ್ಕರೆ ಕಾಯಿಲೆ ಅನ್ನುವಂತಹದ್ದು ಜಾಸ್ತಿ ಇದೆ. ಜಗತ್ತಿಗೆ ಭಾರತದ ಜನಸಂಖ್ಯೆ ಹೆಚ್ಚಾಗಿರುವುದರಿಂದ ಸಕ್ಕರೆ ಕಾಯಿಲೆಯ ಕ್ಯಾಪಿಟಲ್ ಆಗಿದೆ. ಈ ಕಾಯಿಲೆ ತಮ್ಮ ಜೀವನ ಶೈಲಿಯ ಸಮಸ್ಯೆ ಆಗಿದೆ. ಎಲ್ಲರಿಗೂ ಕಾಯಿಲೆ ಬಂದಾಗ ಆಸ್ಪತ್ರೆಗೆ ಹೋಗಿ ಗುಣಮುಖರಾಗುವ ಆಲೋಚನೆ ಇರುವುದು ಸಹಜ. ಆದರೆ ಸಕ್ಕರೆ ಕಾಯಿಲೆಯನ್ನು ಗುಣಪಡಿಸಲು ಸಾಧ್ಯವಿಲ್ಲ. ಇದನ್ನು ನಿಯಂತ್ರಿಸಬಹದಷ್ಟೆ. ತಮ್ಮ ಜೀವನ ಶೈಲಿಯ ಬದಲಾವಣೆಯ ಮೂಲಕ ಇದನ್ನು ಹತೋಟಿಗೆ ತರಬಹುದು. ದೇಹದ ಎಲ್ಲಾ ಭಾಗಗಳು ಮುಖ್ಯ. ರೋಗ ಬಾರದ ಹಾಗೆ ಮುಂಜಾಗ್ರತೆ ಕ್ರಮ ಕೈಗೊಳ್ಳುವುದು ಮುಖ್ಯ. ಈ ಕುರಿತು ಎಲ್ಲರಿಗೂ ಅರಿವು ಇರಬೇಕು ಎಂದರು.


ಯಾವುದೇ ವಸ್ತು ಜಾಸ್ತಿ ಆದರೆ ಅಮೃತವೂ ವಿಷ :
ಪುತ್ತೂರು ಸಿಟಿ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ. ಎ.ಪಿ. ಭಟ್ ಅವರು ಮಾತನಾಡಿ, ಸಕ್ಕರೆ ಕಾಯಿಲೆ ಅಂದಾಗ ಭಯಪಡಬೇಕಾದ ಅಗತ್ಯವಿಲ್ಲ. ಯಾಕೆಂದರೆ ಸಕ್ಕರೆ ಶರೀರಕ್ಕೆ ಬೇಕು. ನಮ್ಮ ಚೈತನ್ಯದ ಮೂಲ ಅದು. ಆದರೆ ಯಾವುದೇ ವಸ್ತು ಜಾಸ್ತಿ ಆದರೆ ಅಮೃತವೂ ವಿಷ ಎಂಬಂತೆ ಸಕ್ಕರೆ ಪ್ರಮಾಣ ಜಾಸ್ತಿಯಾದರೆ ಸಮಸ್ಯೆ ಬರುತ್ತದೆ. ಅದು ಬೇರೆ ಬೇರೆ ಅಂಗಾಂಗಳ ಮೇಲೆ ದುಷ್ಪರಿಣಾಮ ಬೀರುತ್ತದೆ. ಕೆಲವರಿಗೆ ಇದು ಪಾರಂಪರ್ಯವಾಗಿ ಬರುತ್ತದೆ. ಇನ್ನು ಕೆಲವರಿಗೆ ಅಧಿಕ ಆಹಾರ ಸೇವನೆ, ಕಡಿಮೆ ವ್ಯಾಯಾಮದಿಂದ ಬರಬಹುದು. ಇವತ್ತಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಬೇಗ ಬರುತ್ತದೆ. ಯಾಕೆಂದರೆ ಮಕ್ಕಳಿಗೆ ನಾವು ತಿನ್ನಿಸುವುದು ಜಾಸ್ತಿ ಆಗುತ್ತದೆ. ಆಗ ಕೊಬ್ಬು ಜಾಸ್ತಿ ಉತ್ಪತಿಯಾಗುತ್ತದೆ. ಸಕ್ಕರೆ ಕಾಯಿಲೆ ಬಾರದ ಹಾಗೆ ಬಹಳ ಮಂದಿಗೆ ತಡೆಗಟ್ಟಬಹುದು. ಸಮಯಕ್ಕೆ ಸರಿಯಾಗಿ ಗಮನ ಹರಿಸಿದರೆ ಜೀವನಶೈಲಿಯ ಬದಲಾವಣೆಯ ಮೂಲಕ ಸಕ್ಕರೆ ಕಾಯಿಲೆಯನ್ನು ತಡೆಗಟ್ಟಬಹುದು ಎಂದ ಅವರು ಭಾರತದಲ್ಲಿ ಸುಮಾರು 13 ಕೋಟಿಗೂ ಮಿಕ್ಕಿ ಜನರು ಸಕ್ಕರೆ ಕಾಯಿಲೆಗೆ ತುತ್ತಾಗಿದ್ದಾರೆ. ಹಾಗೆಂದು ಸುಮಾರು ಶೇ.70 ಮಂದಿಗೆ ತಮಗೆ ಸಕ್ಕರೆ ಕಾಯಿಲೆ ಇದೆ ಎಂದು ತಿಳಿಯದಿರುವವರೂ ಇದ್ದಾರೆ. ಆರೋಗ್ಯ ಕಾಪಾಡಲು ಆಹಾರ ಪದ್ಧತಿ, ಉತ್ತಮ ಔಷಧಿಯ ಕುರಿತು ಅವರು ಮಾಹಿತಿ ನೀಡಿದರು.


ಏನೇ ಸಮಸ್ಯೆ ಬಂದರೂ ವೈದ್ಯರ ಸಲಹೆ ಪಡೆಯಿರಿ:
ದೇರಳಕಟ್ಟೆ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಪ್ರೋ. ಡಾ ತನ್ಮಯ ಭಟ್ ಅವರು ಮಾತನಾಡಿ ಇವತ್ತು ಮನುಷ್ಯನ ಸುತ್ತ ಎಲ್ಲಾ ರೀತಿಯ ವಿಷ ಸುತ್ತುವರಿದಿದೆ. 40 ವರ್ಷದ ಒಳಗಿನವರಿಗೆ ಸಕ್ಕರೆ ಬಂದರೆ ಅವರಿಗೆ 10 ರಿಂದ 15 ವರ್ಷದೊಳಗೆ ಎನಾದರು ಕಾಯಿಲೆ ಬರುವುದು ಗ್ಯಾರೆಂಟಿ. ದೇಹದಲ್ಲಿ ಸಕ್ಕರೆ ಜಾಸ್ತಿಯಾದರೂ ಕಡಿಮೆ ಆದರು ಸಮಸ್ಯೆ ಇದೆ. ಕೆಲವರಿಗೆ ಯಾವುದೇ ಲಕ್ಷಣವಿಲ್ಲ ಎಂದು ಪರೀಕ್ಷೆ ಮಾಡದೇ ಇರುವುದು ಸರಿಯಲ್ಲ. ಏನೇ ಸಮಸ್ಯೆ ಬಂದರೂ ವೈದ್ಯರ ಸಲಹೆ ಪಡೆಯಿರಿ. ವೈದ್ಯರು ಮೆಡಿಸಿನ್ ಕೊಟ್ಟರೆ ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡಬೇಕು. ಕೆಲಸದ ಒತ್ತಡ ಎಂದು ತಾವು ಜೀವನದಲ್ಲಿ ಗಳಿಸಿದ್ದನ್ನು ಕೊನೆಗೆ ವೈದ್ಯರಿಗೆ ಕೊಡುವ ಪರಿಸ್ಥಿತಿ ಬರುತ್ತದೆ. ಔಷಧಿ ಸೇವೆನೆ ಮತ್ತು ಬಿಡುವಾಗಲೂ ವೈದ್ಯರ ಸಲಹೆ ಅಗತ್ಯ. ಕ್ಯಾರ್‌ಲೆಸ್ ಮಾಡಿದರೆ ದೀರ್ಘಾವಧಿ ಕಾಯಿಲೆಯಾಗಿ ಬಿಪಿ, ಕಾಲಿನ ನರ, ದೃಷ್ಟಿಹೀನತೆ ಬರಬಹುದು. ಸಕ್ಕರೆ ಜಾಸ್ತಿಯಾದಂತೆ ಸಾವಿನ ಪ್ರಮಾಣ ಜಾಸ್ತಿ. ಕಣ್ಣಿನ ಸಮಸ್ಯೆ ಬರುತ್ತದೆ ಹಾಗಾಗಿ ವರ್ಷಕ್ಕೆ ಒಮ್ಮೆ ಕಣ್ಣಿನ ಚಿಕಿತ್ಸೆ ಮಾಡಲೇ ಬೇಕು. ಕಿಡ್ನಿ ಸಮಸ್ಯೆಯೂ ಬರುತ್ತದೆ. ಎದೆ ನೋವು ಎಂದು ಸುಮ್ಮನೆ ಕೂರಬೇಡ. ಇಸಿಜಿ ಮಾಡಿಸಿ. ಕಾಲಿನ ಪಾದಗಳನ್ನೂ ಪರೀಕ್ಷಿಸಿಕೊಳ್ಳಿ. ಒಟ್ಟಿನಲ್ಲಿ ಸಕ್ಕರೆ ಕಾಯಿಲೆ ಸೈಲೆಂಟ್ ಕಿಲ್ಲರ್ ಆಗಿದೆ. ಹಾಗಾಗಿ ನಾರ್ಮಲ್ ಇದ್ದವರೂ ಕೂಡಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದರು.

ಡಾ ನಿರೂಪಮ ಸ್ವಾಗತಿಸಿದರು. ಕಿರಣ್ ಮತ್ತು ಹರೀಶ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಸ್ವಾಮಿ ಕಲಾಮಂದಿರದ ಮಾದವ ಅವರು ಶಿಕ್ಷಣ ಮಾಹಿತಿ ಕಾರ್ಯಕ್ರಮ ಪ್ರಾಯೋಜಿಸಿದರು. ಕಾರ್ಯಕ್ರಮದ ಬಳಿಕ ಮಧ್ಯಾಹ್ನ ಸಕ್ಕರೆ ಕಾಯಿಲೆ ನಿಯಂತ್ರಿಸುವ ನಿಟ್ಟಿನಲ್ಲಿ ಆರೋಗ್ಯಕರವಾದ ಭೋಜನದ ಜೊತೆಗೆ ಶುಗರ್‌ಲೆಸ್ ಐಸ್‌ಕ್ರೀಮ್, ಜಂಬೂನೇರಳೆ ಹಣ್ಣು ವಿತರಿಸಲಾಯಿತು.


ಉಚಿತ ಮಧುಮೇಹ ತಪಾಸಣೆ:
ಸಕ್ಕರೆ ಕಾಯಿಲೆ ತಡೆಗಟ್ಟುವಿಕೆ ಮಾಹಿತಿ ಶಿಕ್ಷಣಕ್ಕೆ ಸಂಬಂಧಿಸಿ ಕಾರ್ಯಾಗಾರಕ್ಕೆ ಆಗಮಿಸಿದವರಿಗೆ ಡಾ. ಸುಕೇಶ್ ಅವರ ನೇತೃತ್ವದಲ್ಲಿ ಉಚಿತ ಮಧುಮೇಹ ತಪಾಸಣೆ ನಡೆಸಲಾಯಿತು.

ಜ್ಯೂಸ್ ಬದಲು ಹಣ್ಣು ತಿನ್ನಿ
ಅರೋಗ್ಯಕರ ಆಹಾರ ಸೇವನೆಯಿಂದಲೂ ಸಕ್ಕರೆ ಕಾಯಿಲೆ ಬರುತ್ತದೆ. ಇವತ್ತು ವೈದ್ಯರು ಹಣ್ಣು ತಿನ್ನಿ ಎಂದಾಗ ಹಲವಾರು ಮಂದಿ ಜ್ಯೂಸ್ ಕುಡಿಯುತ್ತಾರೆ. ರೋಗಿಳಿಗೆ ಜ್ಯೂಸ್ ಒಳ್ಳೆಯದಲ್ಲ. ಇದು ಆರೋಗ್ಯಕ್ಕೆ ಉತ್ತಮವಲ್ಲ. ಜ್ಯೂಸ್ನಿಂದ ಹಣ್ಣಿನ ನಾರಿನಾಂಶ ಸಿಗುವುದಿಲ್ಲ. ಇಡಿ ಹಣ್ಣು ತಿಂದಾಗ ನಾರಿನಾಂಶ ಸಿಗುತ್ತದೆ. ನೀರು, ವ್ಯಾಯಾಮ, ನಾರು ಪದಾರ್ಥ, ನಿಯಮಿತ ಊಟ, ನಿಧಾನವಾಗಿ ತಿನ್ನುವುದು ಮಾಡಿದರೆ ಆರೋಗ್ಯ ಕಾಪಾಡಬಹುದು.
ಡಾ. ಎ.ಪಿ. ಭಟ್ ವೈದ್ಯಕೀಯ ತಜ್ಞರು
ಪುತ್ತೂರು ಸಿಟಿ ಆಸ್ಪತ್ರೆ

ಮುಂದೆ ನಿರಂತರ ಮಾಹಿತಿ ಕಾರ್ಯಕ್ರಮ
ವೈಜ್ಞಾನಿಕ ಯುಗದಲ್ಲಿ ಹೊಸ ಹೊಸ ಪ್ರಯೋಗ ಆಗುತ್ತದೆ. ಇವತ್ತು ಮೊಬೈಲ್ ಇನ್‌ಫಾಮೇರ್ಶನ್ ಜಾಸ್ತಿ ಇದೆ. ಅದರಲ್ಲಿ ಎಷ್ಟು ಸರಿ, ತಪ್ಪು ಎಂಬುದು ವೈದ್ಯರಿಗೆ ಮಾತ್ರ ಗೊತ್ತು. ಎಷ್ಟೋ ರೋಗಿಗಳು ಅದನ್ನು ನೋಡಿ ಗಾಬರಿಯಿಂದ ಬಂದಿದ್ದೂ ಇದೆ. ಮೊಬೈಲ್‌ನ ಮಾಹಿತಿಯಿಂದ ಮನಸ್ಸಿಗೆ ಉದ್ವೇಗ ಮಾತ್ರ ಕೊಡುತ್ತದೆ. ಈ ನಿಟ್ಟಿನಲ್ಲಿ ಎಲ್ಲರಿಗೂ ಸರಿಯಾದ ಮಾಹಿತಿ ನೀಡಲು ಮಾಹಿತಿ ಶಿಕ್ಷಣ ಕಾರ್ಯಕ್ರಮ ಆಯೋಜಿಸಿದ್ದೇವೆ. ಮುಂದೆ ಇದನ್ನು ಬೇರೆ ಬೇರೆ ವಿಭಾಗಕ್ಕೆ ಸಂಬಂಧಿಸಿ ಮಾಡಲಿದ್ದೇವೆ. ಕ್ಯಾನ್ಸರ್, ಅಪಘಾತ ಸಹಿತ ಇತರ ವಿಷಯಗಳ ಕುರಿತು ಮಾಹಿತಿ ನೀಡಲಿದ್ದೇವೆ.
ಡಾ. ಭಾಸ್ಕರ್ ಎಸ್ ಆಡಳಿತ ವೈದ್ಯಾಧಿಕಾರಿ
ಪುತ್ತೂರು ಸಿಟಿ ಆಸ್ಪತ್ರೆ

LEAVE A REPLY

Please enter your comment!
Please enter your name here