ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಪ್ರತಿಷ್ಠಾ ದಿನದ ಸುಧರ್ಮ ಸಭೆ

0

ವಿಟ್ಲ: ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ಪ್ರತಿಷ್ಠಾ ದಿನದ ಸುಧರ್ಮ ಸಭೆ ಶುಕ್ರವಾರ ಸಂಜೆ ಭಕ್ತಿಭಾವದಿಂದ ನಡೆಯಿತು.
ಹೊರನಾಡು ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಡಾ. ಜಿ. ಭೀಮೇಶ್ವರ ಜೋಷಿ ದೀಪಪ್ರಜ್ವಲನ ಮಾಡಿ ಮಾತನಾಡಿ, ದೇವರ ಅನುಗ್ರಹ ನಿರಂತರವಾಗಿ ಹರಿಯುವ ವ್ಯವಸ್ಥೆ ಮಾಡಿಕೊಂಡರೆ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು. ದೇವತಾ ಸಾನಿಧ್ಯಕ್ಕೆ ಅಳತೆಗೊಲು ಇಲ್ಲ; ಸಣ್ಣ ಗುಡಿಯಾಗಲಿ, ದೊಡ್ಡ ದೇವಾಲಯವಾಗಲಿ ಚೈತನ್ಯ ಒಂದೇ ಆಗಿರುತ್ತದೆ. ಮೂಲತತ್ವವನ್ನು ಉಳಿಸಿಕೊಂಡು ಹೋಗುವುದು ಮುಖ್ಯ, ಬದುಕು ಸೃಜನಶೀಲವಾಗಬೇಕು ಎಂದರು.


ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಸಮಾಜ ಮತ್ತು ಧರ್ಮದ ಸಂಸ್ಕಾರ ಉಳಿವಿಗೆ ದೇವರಲ್ಲಿ ಅಚಲವಾದ ವಿಶ್ವಾಸ ಅಗತ್ಯ ಎಂದು ತಿಳಿಸಿದರು. ದೇವಸ್ಥಾನಗಳ ಜೀರ್ಣೋದ್ಧಾರದಿಂದ ಧರ್ಮದ ಉಳಿವು ಸಾಧ್ಯ ಎಂದರು.


ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಿ, ಶಿವನ ಆಂತರ್ಯದಲ್ಲಿ ವಿಷ್ಣು ಹಾಗೂ ವಿಷ್ಣುವಿನ ಆಂತರ್ಯದಲ್ಲಿ ಶಿವನಿರುವುದನ್ನು ಉಲ್ಲೇಖಿಸಿ, ಧರ್ಮ ಮತ್ತು ಸಂಸ್ಕೃತಿ ಉಳಿವಿಗೆ ಬ್ರಹ್ಮಕಲಶೋತ್ಸವಗಳ ಅಗತ್ಯವಿದೆ ಎಂದರು. ಕದಂಬ ಫೌಂಡೇಶನ್ ಸ್ಥಾಪಕ ಹಾಗೂ ಮಾಜಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾತನಾಡಿ, ಹಿಂದುತ್ವವು ನಿರಂತರ ಪ್ರವಾಹವಾಗಿದ್ದು, ಅದನ್ನು ಅರ್ಥಮಾಡಿಕೊಳ್ಳಲು ಯೋಗ್ಯತೆ ಅಗತ್ಯವಿದೆ ಎಂದರು. ಆಚರಣೆಗಳಿಗೆ ಶಾಸ್ತ್ರೀಯ ನೆಲೆಗಟ್ಟಿದೆ. ದೇವಸ್ಥಾನಕ್ಕೆ ಬರುವಾಗ ಶರಣಾಗತಿಯ ಭಾವದಿಂದ ಬರಬೇಕು. ಬದುಕಿನ ಕಲ್ಮಶವನ್ನು ತ್ಯಜಿಸಿ ಶುದ್ಧ ಮನಸ್ಸಿನಿಂದ ದೇವರನ್ನು ಅನುಭವಿಸಬೇಕು ಎಂದು ಹೇಳಿದರು.


ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಯೋಚನೆಗಳನ್ನು ಪ್ರೋತ್ಸಾಹಿಸಬೇಕು. ‘ಬ್ಯಾಕ್ ಟು ಊರು’ ಪರಿಕಲ್ಪನೆಯನ್ನು ಮುಂದುವರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಹಾಗೂ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ. ಟಿ. ಶಾಮ ಭಟ್ ವಹಿಸಿದ್ದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಶುಭ ಹಾರೈಸಿದರು. ಕದ್ರಿ ಮಂಜುನಾಥ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ಪ್ರಭಾಕರ ಅಡಿಗ, ಬಾಯಾರು ಪಂಚಲಿಂಗೇಶ್ವರ ದೇವಸ್ಥಾನದ ಮೊಕ್ತೇಸರ ಪೆರುವಡಿ ರಾಮಕೃಷ್ಣ ಭಟ್, ದೇಲಂತಮಜಲು ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ್ ಭಟ್, ಉದ್ಯಮಿ ರಶ್ಮಿತ್ ಶೆಟ್ಟಿ ಕೈತ್ರೋಡಿ, ಬಿಜೆಪಿ ಕ್ಷೇತ್ರಾಧ್ಯಕ್ಷ ಆರ್. ಚೆನ್ನಪ್ಪ ಕೋಟ್ಯಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.


ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಅರುಣ್ ಶಾಮ್ ಸ್ವಾಗತಿಸಿದರು. ವಿದ್ಯಾ ಜಯರಾಮ ಭಟ್ ಕಜೆ ಪ್ರಾರ್ಥಿಸಿದರು. ಗಣಪತಿ ಪಿ.ಕೆ. ಪದ್ಯಾಣ ವಂದಿಸಿದರು. ವಿ.ಬಿ. ಹಿರಣ್ಯ ಮತ್ತು ಪ್ರಸನ್ನ ಕೆ. ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here