







ಶಿಕ್ಷಕಿ ವೃತ್ತಿ ಬಿಟ್ಟು ಮೀನು ಮಾರಿ ಲಾಭ ಗಳಿಸುತ್ತಿರುವ ಮಹಿಳೆಯ ಸಾಧನೆಯ ಕಥೆ ಇದು


ಅದೊಂದು ಕಾಲವಿತ್ತು.. ನಾಲ್ಕು ಗೋಡೆಯ ಮಧ್ಯೆ ಮಹಿಳೆ ಕೈಯಲ್ಲಿ ಸೌಟು ಹಿಡಿದುಕೊಂಡು ಅಡುಗೆ ಮಾಡುತ್ತಾ ಮನೆ ಮಂದಿಯ ಚಾಕರಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಳು. ಆದರೆ, ಈಗ ಕಾಲ ಬದಲಾಗಿದೆ. ಪುರುಷರಿಗೆ ಸರಿಸಮಾನರಾಗಿ ಮಹಿಳೆಯರೂ ಹೊರಜಗತ್ತಿಗೆ ಬಂದು ದುಡಿದು ಸ್ವಂತ ಕಾಲಮೇಲೆ ನಿಲ್ಲುತ್ತಿದ್ದಾರೆ. ಅದೆಷ್ಟೋ ಮಹಿಳೆಯರು ತಾನು ದುಡಿದು ಮನೆಮಂದಿಯವರನ್ನು ಸಾಕುತ್ತಿದ್ದಾರೆ. ಏರ್ಲೈನ್ಸ್, ರೈಲ್ವೇ, ಬಸ್, ಆಟೋ, ಕಸ ಸಂಗ್ರಹಣೆ ವಾಹನಗಳಲ್ಲಿ ಚಾಲಕಿಯರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಲ್ಲದೆ, ಹೊಟೇಲ್, ಅಂಗಡಿ ಸೇರಿದಂತೆ ಅನೇಕ ಸ್ವ ಉದ್ಯಮಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.




ಹಳ್ಳಿಯಲ್ಲಿ ಸಣ್ಣ ಸಣ್ಣ ಉದ್ಯಮದಲ್ಲಿ ತೊಡಗಿಸಿಕೊಂಡಿರುವವರು ಅಲ್ಪ ಶಿಕ್ಷಣವನ್ನು ಪಡೆದವರು ಎಂದು ಮೇಲ್ನೋಟಕ್ಕೆ ಭಾವಿಸುವುದು ಸಹಜ. ಆದರೆ, ಕೆಲವರು ಉನ್ನತ ಶಿಕ್ಷಣ ಪಡೆದು ಮಹಾನ್ ಹುದ್ದೆಯನ್ನು ಅಲಂಕರಿಸಿ ಕೊನೆಗೆ ಸ್ವ ಉದ್ಯಮವೇ ಮೇಲು ಎಂದು ಸ್ವಂತ ಉದ್ಯೋಗ ಆರಂಭಿಸಿ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಇಂಥವರ ಸಾಲಿನಲ್ಲಿ ಪುತ್ತೂರಿನಲ್ಲಿ ಮೀನು ಮಾರುತ್ತಿರುವ ಮಾಜಿ ಶಿಕ್ಷಕಿಯೇ ಸಾಕ್ಷಿ.
ಹೌದು, ಬಂಗುಡೆ, ಬೂತಾಯಿ, ಮದುಮಾಲ್, ಕಾಂಡಾಯಿ ಅಂತ ಹೇಳುತ್ತಾ ಮೀನು ಮಾರುತ್ತಿರುವ ಈ ಮಹಿಳೆ ಈ ಹಿಂದೆ ಶಿಕ್ಷಕಿಯಾಗಿ ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡಿದವರು. 15 ವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನು ನಿರ್ವಹಿಸಿ ತನ್ನ ಹುದ್ದೆಗೆ ನಿವೃತ್ತಿ ಘೋಷಿಸಿ ಬಳಿಕ ಪುತ್ತೂರಿನ ಏಳ್ಮುಡಿಯಲ್ಲಿರುವ ಪೆಟ್ರೋಲ್ ಬಂಕ್ ಬಳಿ ಸಣ್ಣ ಮೀನಿನ ಅಂಗಡಿಯೊಂದನ್ನು ತೆರೆದು ಭರ್ಜರಿ ಲಾಭ ಗಳಿಸುತ್ತಿದ್ದಾರೆ.

ಇವರ ಹೆಸರು ಪ್ರೇಮ. ಮಾಸ್ಟರ್ ಆಫ್ ಆರ್ಟ್ಸ್ (ಎಂ.ಎ.) ಹಾಗೂ ಬಿ.ಇಡಿ ಮಾಡಿದ ಇವರು ಕುಂದಾಪುರದಲ್ಲಿ ನಾಲ್ಕು ವರ್ಷಗಳ ಕಾಲ ಅರ್ಥಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಮದುವೆಯ ನಂತರ ಪತಿಯ ಮನೆಯಲ್ಲೇ ಉಳಿದುಕೊಂಡಿದ್ದರು. ನಂತರ ಮತ್ತೆ ಶಿಕ್ಷಕ ವೃತ್ತಿಗೆ ಮರಳಿದ ಅವರು ಅನೇಕ ವರ್ಷಗಳ ಕಾಲ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಸ್ವ ಉದ್ಯಮದ ಕನಸು ನನಸಾಗಿಸಲು ಶಿಕ್ಷಕ ವೃತ್ತಿ ತೊರೆದು ಶಿಕ್ಷಕ ವೃತ್ತಿಯನ್ನು ಮನೆಗೆ ಸೀಮಿತಗೊಳಿಸಿ (ತನ್ನ ಮಕ್ಕಳಿಗೆ) ಪುತ್ತೂರಿನಲ್ಲಿ ದುರ್ಗಾ ಫಿಶರೀಸ್ ಎಂಬ ಅಂಗಡಿಯನ್ನು ತೆರೆದು ಮೀನುಗಳನ್ನು ಮಾರಾಟ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ.
ತನ್ನ ಅಂಗಡಿಗೆ ಬಂದಂತಹ ಗ್ರಾಹಕರಿಗೆ ಎಕ್ಸ್ಟ್ರಾ ಮೀನೊಂದನ್ನು ಉಚಿತವಾಗಿ ನೀಡುವುದರ ಜೊತೆಗೆ 10 ರೂ. ಡಿಸ್ಕೌಂಟ್ ಮಾಡುತ್ತಾ ಗ್ರಾಹಕರನ್ನು ಸೆಳೆಯುತ್ತಿದ್ದಾರೆ. ಇವರ ಜೀವನದ ಏಳು-ಬೀಳುಗಳು, ಉದ್ಯಮದಲ್ಲಿನ ವ್ಯಾವಹಾರಿಕ ಜ್ಞಾನ ಇವೆಲ್ಲವೂ ಯುವ ಪೀಳಿಗೆಗೆ ಸ್ಪೂರ್ತಿದಾಯಕವಾಗಿದೆ ಎಂದರೆ ತಪ್ಪಾಗಲಾರದು.
ಮೂಲತಃ ಕುಂದಾಪುರದವರಾದ ಪ್ರೇಮ ಅವರ ಮನೆಯ ಕುಲಕಸುಬು ಮೀನುಗಾರಿಕೆಯಾಗಿದೆ. ಇವರ ಪತಿ ಉಪ್ಪಿನಂಗಡಿ ಶಾಂತಿನಗರದ ಕುಮಾರ ಕಿಶನ ಕಳೆದ 10 ವರ್ಷಗಳಿಂದ ಮೀನಿನ ಲೈನ್ ಸೇಲ್ ಮಾಡಿಕೊಂಡು ಬರುತ್ತಿದ್ದಾರೆ. ಇದೀಗ ಏಳ್ಮುಡಿಯಲ್ಲಿ ಕಳೆದ ಎರಡು ವರ್ಷಗಳಿಂದ ದುರ್ಗಾ ಫಿಶರೀಸ್ ಎಂಬ ಶಾಪ್ ತೆರೆದಿರುವ ಪ್ರೇಮ, ಮೀನು ಮಾರಾಟದಲ್ಲಿ ತೊಡಗಿಕೊಂಡಿದ್ದಾರೆ. ದಿನ ನಿತ್ಯ ರಾತ್ರಿ 2 ಗಂಟೆ ಸುಮಾರಿಗೆ ಮಂಗಳೂರಿಗೆ ತೆರೆಳುವ ಪ್ರೇಮ ಅವರ ಪತಿ ಧಕ್ಕೆಯಿಂದ ಫ್ರೆಶ್ ಮೀನುಗಳನ್ನು ತಂದು ಪುತ್ತೂರಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಗ್ರಾಹಕರಿಗೆ ನಿತ್ಯ ಫ್ರೆಶ್ ಮೀನುಗಳನ್ನು ನೀಡುವುದೇ ಇವರ ಮುಖ್ಯ ಉದ್ದೇಶವಾಗಿದೆ.

ತಾನು ಶಿಕ್ಷಕ ವೃತ್ತಿಯನ್ನು ನಿರ್ವಹಿಸುತ್ತಿದ್ದಾಗಲೂ ಸ್ವಂತ ಉದ್ಯಮ ನಡೆಸಬೇಕು ಎಂಬ ಕನಸು ಕಟ್ಟಿಕೊಂಡಿದ್ದ ಪ್ರೇಮ, ಈ ಬಗ್ಗೆ ಪತಿಯೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಅದರಂತೆ ಏಳ್ಮುಡಿಯಲ್ಲಿ ಮೀನಿನ ಅಂಗಡಿ ತೆರೆದರು. ಕ್ವಾಲಿಟಿ ಮೀನುಗಳನ್ನು ಇಲ್ಲಿ ನೀಡುತ್ತಿರುವುದರಿಂದ ಗ್ರಾಹಕರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆರಂಭದಲ್ಲಿ ಬರುತ್ತಿದ್ದ ಗ್ರಾಹಕರು ಈಗಲೂ ಇಲ್ಲಿಂದಲೇ ಮೀನುಗಳನ್ನು ಖರೀದಿಸುತ್ತಿದ್ದಾರೆ. ಕ್ಯಾಟರಿಂಗ್ಗಳಿಗೂ ಇಲ್ಲಿಂದಲೇ ಮೀನುಗಳನ್ನು ಖರೀದಿಸುತ್ತಾರೆ.
ಗ್ರಾಹಕರ ಭರ್ಜರಿ ರೆಸ್ಪಾನ್ಸ್ನಿಂದಾಗಿ ಈ ಅಂಗಡಿಯಲ್ಲಿ ಮೀನುಗಳ ಸ್ಟಾಕ್ ಇರುವುದಿಲ್ಲ. ನಿತ್ಯವೂ ಇಲ್ಲಿ ಫ್ರೆಶ್ ಮೀನುಗಳು ಲಭ್ಯವಾಗುತ್ತವೆ. ವೀಕೆಂಡ್ನ ಎರಡು ದಿನಗಳಲ್ಲಿ 140-150 ಕೆಜಿ ಮೀನುಗಳು ಮಾರಾಟವಾದರೆ ಉಳಿದ ದಿನಗಳಲ್ಲಿ 80-90 ಕೆಜಿ ಮೀನುಗಳು ಮಾರಾಟವಾಗುತ್ತವೆ. ಈ ಅಂದಾಜಿನ ಮೇಲೆ ಮಂಗಳೂರಿನಿಂದ ಮೀನುಗಳನ್ನು ತಂದು ಮಾರಾಟ ಮಾಡುವುದರಿಂದ ಮೀನುಗಳು ಉಳಿಯುವುದಿಲ್ಲ. ಬಂಗುಡೆ, ಅಂಜಲ್, ಅಡವು, ಬೊಳ್ಳೆಂಜಿರ್ ಮೀನುಗಳನ್ನು ಗ್ರಾಹಕರು ಅತಿ ಹೆಚ್ಚು ಖರೀದಿಸುತ್ತಾರೆ ಎಂದು ಪ್ರೇಮ ಅವರು ಹೇಳಿಕೊಂಡಿದ್ದಾರೆ.
ಉದ್ಯಮ ಆಯ್ಕೆ ಮಾಡುವಾಗ ಯೋಚಿಸಿ ಅದರ ಸಾಧಕ ಬಾಧಕಗಳನ್ನು ಅರಿತು ಮುಂದಡಿ ಇಡಬೇಕು. ಆಯ್ಕೆ ಮಾಡಿದ ನಂತರ ಸವಾಲಾಗಿ ತೆಗೆದುಕೊಳ್ಳಬೇಕು. ಪ್ರತೀ ಹೆಣ್ಣುಮಕ್ಕಳು ಧೈರ್ಯಗೆಡಬಾರದು. ಉದ್ಯಮದಲ್ಲಿ ಕಷ್ಟಗಳು ಎದುರಾಗುತ್ತವೆ. ಅದನ್ನು ಧೈರ್ಯದಿಂದ ಎದುರಿಸಬೇಕು. ಆಗ ಯಶಸ್ಸು ಸಿಗುತ್ತದೆ ಎಂಬುದು ಸ್ವ ಉದ್ಯಮದ ಕನಸು ಕಾಣುತ್ತಿರುವ ಮಹಿಳೆಯರಿಗೆ ಪ್ರೇಮ ಅವರ ಸಲಹೆಯಾಗಿದೆ.
ಕುಂದಾಪುರದಲ್ಲಿ ಅಪ್ಪ, ಪುತ್ತೂರಿನಲ್ಲಿ ಮಗಳು
ಪ್ರೇಮಾ ಅವರ ತಂದೆ ಗುಂಡು ಸುವರ್ಣ ಅವರು ಕುಂದಾಪುರದಲ್ಲಿ ಮೀನುಗಾರಿಕೆಯಲ್ಲಿ ಹೆಸರುವಾಸಿಯಾದವರು. ಈ ವೃತ್ತಿಯಲ್ಲಿ ಅನೇಕ ಪುರಸ್ಕಾರಗಳನ್ನು ಪಡೆದವರಾಗಿದ್ದಾರೆ. ಇವರ ಹೆಸರು ಚಿರಪರಿಚಿತವಾಗಿದ್ದು, ಎಲ್ಲರ ಬಾಯಲ್ಲೂ ಇವರ ಹೆಸರು ಅಚ್ಚಳಿಯದೆ ಉಳಿದಿದೆ. ಇವರು ಕಳೆದ ಮೂರು ವರ್ಷಗಳ ಹಿಂದೆ ನಿಧನರಾಗಿದ್ದರೂ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ಇವರ ಮಗಳಾಗಿರುವ ಪ್ರೇಮ ಮೀನು ಮಾರಾಟ ವೃತ್ತಿಯಲ್ಲಿ ಪುತ್ತೂರಿನಲ್ಲಿ ಹೆಸರು ಪಡೆಯುತ್ತಿದ್ದಾರೆ.
ಪ್ರಾಮಾಣಿಕವಾಗಿ ದುಡಿಯಲು ಯಾವ ಕಸುಬಾದರೇನು ಎಂದು ಹೇಳುವ ಪ್ರೇಮ, ಮೀನು ಮಾರಾಟ ಉದ್ಯಮದಲ್ಲಿ ನನಗೆ ತೃಪ್ತಿ ಇದೆ. ನನ್ನ ಪತಿಗೂ ನನ್ನ ಉದ್ಯಮದ ಬಗ್ಗೆ ಸಂತೃಪ್ತಿ ಇದೆ. ಪ್ರಾರಂಭದಲ್ಲಿ ಬೀಳುಗಳನ್ನು ಕಂಡೆವು. ನಂತರದಲ್ಲಿ ವ್ಯಾಪಾರವು ಏರು ಮುಖವಾಗಿ ಸಾಗಲು ಪ್ರಾರಂಭವಾಯಿತು. ಮನೆಯವರ ಹಾಗೂ ಗ್ರಾಹಕರ ಪ್ರೋತ್ಸಾಹದೊಂದಿಗೆ ಎಲ್ಲವೂ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆ ಎನ್ನುತ್ತಿದ್ದಾರೆ.
ಕರೆ ಮಾಡಿ ಮೀನು ಕಾಯ್ದಿರಿಸುವ ಗ್ರಾಹಕರು
ಈ ಅಂಗಡಿಯಲ್ಲಿ ಸಿಗುವ ಮೀನುಗಳಿಗೆ ಎಷ್ಟು ಡಿಮ್ಯಾಂಡ್ ಇದೆ ಎಂದರೆ, ಗ್ರಾಹಕರು ಕರೆ ಮಾಡಿ ಮೀನುಗಳನ್ನು ಕಾಯ್ದಿರಿಸುತ್ತಾರೆ. ಇಂತಹವರಿಗಾಗಿಯೇ ಪ್ರತ್ಯೇಕ ಎರಡು ಫ್ರಿಜ್ಡ್ಗಳನ್ನು ಮೀಸಲಿರಿಸಿದ್ದು, ಇದರಲ್ಲಿ ಮೀನುಗಳನ್ನು ತೆಗೆದಿಡಲಾಗುತ್ತದೆ.










