







ಪುತ್ತೂರು:ಪುತ್ತೂರು ಶ್ರೀ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನೌಕರರೂ ಅಲ್ಲದ, ಯಾವುದೇ ಅಧಿಕೃತ ನೇಮಕಾತಿ/ಹುದ್ದೆ, ಅಧಿಕಾರ, ಆನುವಂಶಿಕ ಹಕ್ಕು ಇಲ್ಲದ ಪಿ.ಜಿ. ಜಗನ್ನಿವಾಸ ರಾವ್, ಪಿ.ಜಿ. ಚಂದ್ರಶೇಖರ ರಾವ್ ಮತ್ತು ಕೃಷ್ಣ ಜೆ.ರಾವ್ ಎಂಬವರಿಗೆ ದೇವಸ್ಥಾನದ ಗರ್ಭಗುಡಿಯ ಎಡನಾಳಿ ಪ್ರವೇಶ ಹಾಗೂ ಜಾತ್ರೋತ್ಸವದ ಧ್ವಜಾರೋಹಣ ಸೇರಿದಂತೆ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ನೀಡದಂತೆ ಸುಬ್ರಹ್ಮಣ್ಯ ಶೈವಕ್ಷೇತ್ರ ಸಂರಕ್ಷಣಾ ವೇದಿಕೆ-ದಕ್ಷಿಣ ಕನ್ನಡ ಜಿಲ್ಲೆ ಇದರ ಸಂಸ್ಥಾಪಕ ನಿರ್ದೇಶಕ ಶ್ರೀನಾಥ್ ಟಿ.ಎಸ್. ಕುಲ್ಕುಂದರವರು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯನಿರ್ವಹಣಾಧಿಕಾರಿಯವರಿಗೆ ಮನವಿ ಸಲ್ಲಿಸಿದ್ದಾರೆ.


ಪುತ್ತೂರು ಮಹತೋಭಾರ ಶ್ರೀಮಹಾಲಿಂಗೇಶ್ವರ ದೇವಸ್ಥಾನವು ಸರಕಾರದ ಹಿಂದೂ ಧಾರ್ಮಿಕ ದತ್ತಿಗಳ ಇಲಾಖೆಗೆ ಸೇರಿದ ಎ ಶ್ರೇಣಿಯ ದೇವಸ್ಥಾನ. ಸದ್ರಿ ದೇವಸ್ಥಾನದಲ್ಲಿ ಪ್ರತಿಯೊಂದು ಧಾರ್ಮಿಕ ಚಟುವಟಿಕೆಗಳಿಗೂ ನಿರ್ದಿಷ್ಟ ನಿಯೋಜಿತ, ಅಧಿಕೃತ ನೌಕರರು ಇರುತ್ತಾರೆ.ಹೀಗಿರುವಾಗ,ಸದ್ರಿ ದೇವಸ್ಥಾನದ ನೌಕರರೇ ಅಲ್ಲದ ಮತ್ತು ಯಾವುದೇ ಅಧಿಕೃತವಾದ ಹುದ್ದೆ,ಅಧಿಕಾರ,ಹಕ್ಕು ಇಲ್ಲದ ಪಿ.ಜಿ.ಜಗನ್ನಿವಾಸ ರಾವ್, ಪಿ.ಜಿ.ಚಂದ್ರಶೇಖರ ರಾವ್ ಮತ್ತು ಕೃಷ್ಣ ಜೆ.ರಾವ್ ಎಂಬವರು ಅನಧಿಕೃತವಾಗಿ ಸೇರಿಕೊಂಡು,ದೇವಸ್ಥಾನದ ಪವಿತ್ರತಮವಾದ ಪ್ರತಿಯೊಂದು ಕೆಲಸಕಾರ್ಯಗಳಲ್ಲಿ ಅನಧಿಕೃತ ಕೆಲಸ ಮಾಡುತ್ತಿರುತ್ತಾರೆ.



ಪಿ.ಜಿ.ಜಗನ್ನಿವಾಸ ರಾವ್‌ರವರ ಮಗ ಕೃಷ್ಣ ಜೆ.ರಾವ್ ವಿರುದ್ಧ,ಯುವತಿಯೋರ್ವರನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವ ಆರೋಪದಡಿ ಪುತ್ತೂರು ನಗರ ಆರಕ್ಷಕ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣವೊಂದು ದಾಖಲಾಗಿ,ಆತನನ್ನು ಪೋಲೀಸರು ಬಂಧಿಸಿದ್ದರು.ಈತನ ತಂದೆ ಮೇಲೆಯೂ ಈ ಪ್ರಕರಣದಲ್ಲಿ ತಕ್ಷೀರು ದಾಖಲಾಗಿ,ಎಫ್‌ಐಆರ್ ಆಗಿರುತ್ತದೆ.
ಇಂತಹ ಆರೋಪ ಹೊತ್ತಿರುವ ಈ ವ್ಯಕ್ತಿಗಳು ದೇವಸ್ಥಾನದ ಧಾರ್ಮಿಕ ಕಾರ್ಯಚಟುವಟಿಕೆಗಳಲ್ಲಿ ಯಾವುದೇ ಅನುಮತಿ, ಆದೇಶ, ಹಕ್ಕು ಇಲ್ಲದೇ ಅಕ್ರಮವಾಗಿ ಪಾಲ್ಗೊಂಡರೆ ದೇವಸ್ಥಾನದ ಘನತೆ, ಗೌರವ, ಭಕ್ತರ ಧಾರ್ಮಿಕ ಶ್ರದ್ಧೆ ನಂಬಿಕೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ.ಭಕ್ತಾದಿಗಳೇ ಈ ಬಗ್ಗೆ ಶ್ರೀ ದೇವಳದಲ್ಲಿ ಪ್ರತಿಭಟಿಸುವ ಮೊದಲು ತಾವುಗಳು, ಇಂತಹ ಅಪಸವ್ಯಗಳನ್ನು ಕಾನೂನುಬಾಹಿರ ಮತ್ತು ಅಕ್ರಮ ಚಟುವಟಿಕೆಗಳನ್ನು ನಿಯಂತ್ರಣಕ್ಕೆ ಒಳಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕಾಗಿ ಮನವಿಯಲ್ಲಿ ವಿನಂತಿಸಿದ್ದಾರೆ.









