







ಬಜತ್ತೂರು ಗ್ರಾಮದ ಹೃದಯ ಭಾಗದಲ್ಲಿ ನೆಲೆನಿಂತಿರುವ ಮುದ್ಯ ಪಾರಂತಿ ಕ್ಷೇತ್ರ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸಡಗರ. ಗ್ರಾಮದ ಭಕ್ತರ ದಂಡೇ ಬ್ರಹ್ಮಕಲಶೋತ್ಸವದ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದು ಊರೇ ಸಂಭ್ರಮಿಸುತ್ತಿದೆ. ಏ.7ರಿಂದ 12ರ ತನಕ ಬ್ರಹ್ಮಕಲಶೋತ್ಸವ ಸಂಭ್ರಮ, ಸಡಗರದಿಂದ ನಡೆಯಲಿದೆ.



5 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಇಲ್ಲಿನ ಈಶ್ವರ ದೇವಾಲಯವು ದ್ರೌಪದಿ ದೇವಿ ಸಹಿತ ಪಂಚ ಪಾಂಡವರಿಂದ ಪ್ರತಿಷ್ಠಾಪಿಸಲ್ಪಟ್ಟಿತು ಎಂಬ ಉಲ್ಲೇಖ ಸುಮಧ್ವ ವಿಜಯ ಗ್ರಂಥದಲ್ಲಿದೆ. ಅದೇ ರೀತಿ ಇದು ಪಾರ್ವತೀಶ್ವರನ ವಾಸಸ್ಥಾನವಾದ್ದರಿಂದ ಇಲ್ಲಿಗೆ ಪಾರಂತಿ ಕ್ಷೇತ್ರವೆಂಬ ಪೌರಾಣಿಕ ಹೆಸರು ಬಂತೆಂದೂ ಗ್ರಾಮ್ಯ ಜನರು ಜಾನಪದವಾಗಿ ಮುದ್ಯ ಎಂಬ ಹೆಸರಿನಿಂದ ಕರೆಯುತ್ತಾರೆಂಬುದಾಗಿ ಶ್ರೀ ಸರಿದಂತರ ಕ್ಷೇತ್ರ ಮಹಾತ್ಮೆ ಗ್ರಂಥದಲ್ಲಿ ಉಲ್ಲೇಖವಿದೆ. ಯೋನಿರೂಪಳಾದ ಶ್ರೀ ಪಾರ್ವತಿದೇವಿಯನ್ನು ದ್ರೌಪದಿ ದೇವಿಯೇ ಪ್ರತಿಷ್ಠಾಪಿಸಿದ್ದಾಳೆಂಬುದು ಇಲ್ಲಿನ ಇನ್ನೊಂದು ವಿಶೇಷ. ಹರಿಹರ ಕ್ಷೇತ್ರವಾಗಿರುವ ಇಲ್ಲಿ ಶ್ರೀ ನಾರಾಯಣನು ಉಪದೇವತೆಯಾಗಿದ್ದಾನೆ. ಶ್ರೀ ದೇವಳವು 800 ವರ್ಷಗಳ ಹಿಂದೆ ಪಾಂಗಣ್ಣಾಯ ವಂಶಸ್ಥರಿಂದ ಆರಾಧಿಸಲ್ಪಟ್ಟಿದ್ದು ನಂತರದಲ್ಲಿ ವಳಾಲು ನೂರಿತ್ತಾಯರ ವಂಶಸ್ಥರಿಂದ ಹಾಗೂ ಪ್ರಸಕ್ತ 160 ವರ್ಷಗಳಿಂದ ಉಡುಪ ವಂಶಸ್ಥರ ಮೂಲಕ ಪೂಜಾ ವಿನಿಯೋಗಾದಿಗಳು ನಡೆದುಕೊಂಡು ಬಂದಿವೆ.



ಶ್ರೀ ಕ್ಷೇತ್ರ ಸಮಗ್ರ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶ ನಡೆದು 10 ವರ್ಷ ಕಳೆದಿದೆ. ಇದೀಗ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಹಾಗೂ ಬ್ರಹ್ಮಶ್ರೀ ಇಡಂಬಳ್ಳಿ ತರನನಲ್ಲೂರು ಸತೀಶನ್ ನಂಬೂದರಿಪ್ಪಾಡ್ರವರ ನೇತೃತ್ವದಲ್ಲಿ ಏ.7ರಿಂದ 12ರ ತನಕ ಪುನರ್ ಪ್ರತಿಷ್ಟಾ ಬ್ರಹ್ಮಕಲಶೋತ್ಸವ ನಡೆಯಲಿದೆ. ಇದಕ್ಕಾಗಿ ಈಗಾಗಲೇ ವಿವಿಧ ಸಮಿತಿಗಳ ರಚನೆ ಮಾಡಲಾಗಿದ್ದು ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ಅಂತಿಮ ಹಂತದಲ್ಲಿದೆ.
ಇಷ್ಟಾರ್ಥ ಸಿದ್ಧಿ ಕ್ಷೇತ್ರ;
ಮುದ್ಯ ಪಾರಂತಿ ಶ್ರೀ ಪಾರ್ವತಿ ಪಂಚಲಿಂಗೇಶ್ವರ ದೇವರು ಈ ಊರಿನ ಜನರ ಆರಾಧ್ಯಮೂರ್ತಿ. ತಮಗೆ ಸಂಕಷ್ಟಗಳು ಎದುರಾದಾಗ ದೇವರ ಮುಂದೆ ಕೈಮುಗಿದು ಪ್ರಾರ್ಥಿಸಿರುವುದರಿಂದ ತಮ್ಮ ಸಂಕಷ್ಟಗಳೆಲ್ಲ ದೂರವಾಗಿರುವ ಹಲವಾರು ನಿದರ್ಶನಗಳೂ ಇವೆ. ಉದ್ಯೋಗ, ಮದುವೆ, ನೀರು ಸಿಗುವಂತೆ ಇಲ್ಲಿ ಹಲವಾರು ಮಂದಿ ಪ್ರಾರ್ಥನೆ ಸಲ್ಲಿಸಿದ್ದು ಅವರ ಇಷ್ಟಾರ್ಥಗಳು ಈಡೇರಿರುವ ಹಲವಾರು ನಿದರ್ಶನಗಳೂ ಇಲ್ಲಿ ಇವೆ.
ವಿವಿಧ ಅಭಿವೃದ್ಧಿ ಕೆಲಸ;
ದೇವಸ್ಥಾನದಲ್ಲಿ ವಿವಿಧ ಅಭಿವೃದ್ಧಿ ಕೆಲಸದ ನಿಟ್ಟಿನಲ್ಲಿ ವೇಣುಗೋಪಾಲ ನಾಯಕ್ ಕುಳ್ಳಾಜೆ ಅವರ ನೇತೃತ್ವದಲ್ಲಿ ಜೀರ್ಣೋದ್ದಾರ ಸಮಿತಿ ರಚಿಸಲಾಗಿದೆ. ಇಲ್ಲಿ ಈಗಾಗಲೇ ಸುಮಾರು ರೂ.55ರಿಂದ 60 ಲಕ್ಷಕ್ಕೂ ಹೆಚ್ಚು ವೆಚ್ಚದಲ್ಲಿ ವಿವಿಧ ಜೀರ್ಣೋದ್ಧಾರ ಕೆಲಸಗಳು ನಡೆದಿವೆ. ಪ್ರಶ್ನಾಚಿಂತನೆಯಲ್ಲಿ ಕಂಡುಬಂದಂತೆ ಸಾನಿಧ್ಯವೃದ್ಧಿಯ ಕೆಲಸಗಳು ನಡೆದಿವೆ. ರಕ್ತೇಶ್ವರಿ ಗುಡಿ, ನಂದಿಮಂಟಪ, ನಾಗನಕಟ್ಟೆ ಸಹಿತ ವಿವಿಧ ಕೆಲಸಗಳು ಆಗಿವೆ.
ಮೆಟ್ಟಿಲು ರಚನೆ, ಶೌಚಾಲಯಕ್ಕೆ ಅನುದಾನ;
ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷರೂ ಆಗಿರುವ ಪುತ್ತೂರು ಶಾಸಕ ಅಶೋಕ್ಕುಮಾರ್ ರೈ ಅವರ ಅನುದಾನದಲ್ಲಿ ದೇವಸ್ಥಾನಕ್ಕೆ ಮೆಟ್ಟಿಲುಗಳ ರಚನೆ ಆಗಿದೆ. ಅಲ್ಲದೇ ಶಾಸಕರ ಅನುದಾನದಲ್ಲಿ ಶೌಚಾಲಯವೂ ನಿರ್ಮಾಣಗೊಂಡಿದೆ. ಬ್ರಹ್ಮಕಲಶೋತ್ಸವದಂದು ನಡೆಯುವ ಅನ್ನಸಂತರ್ಪಣೆಗೆ 1 ಲಕ್ಷ ರೂ.ದೇಣಿಗೆ ನೀಡುವುದಾಗಿಯೂ ಶಾಸಕರು ಭರವಸೆ ನೀಡಿದ್ದಾರೆ. ದೇವಸ್ಥಾನಕ್ಕೆ ಭೇಟಿ ನೀಡಿ ಬ್ರಹ್ಮಕಲಶೋತ್ಸವದ ಸಿದ್ಧತೆಗಳ ಕುರಿತಂತೆ ಪರಿಶೀಲನೆ ನಡೆಸಿರುವ ಶಾಸಕರು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಶಾಸಕರ ಮಾರ್ಗದರ್ಶನ, ಸಲಹೆಯಂತೆ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆಗಳೂ ನಡೆದಿವೆ.
ವೇಣುಗೋಪಾಲ ನಾಯಕ್ ಕುಳ್ಳಾಜೆ ಅವರ ಅಧ್ಯಕ್ಷತೆಯ ಜೀರ್ಣೋದ್ಧಾರ ಸಮಿತಿಯ ಸಾರಥ್ಯದಲ್ಲಿ ಹಲವು ಅಭಿವೃದ್ಧಿ ಕೆಲಸಗಳು ನಡೆದಿವೆ. ಇದೀಗ ನಿವೃತ್ತ ಉಪನ್ಯಾಸಕರೂ ಆಗಿರುವ ನೇಮಿಚಂದ್ರ ಗೌಡ ಮುದ್ಯ ಅವರ ನೇತೃತ್ವದ ಬ್ರಹ್ಮಕಲಶೋತ್ಸವ ಸಮಿತಿ ಬ್ರಹ್ಮಕಲಶೋತ್ಸವದ ಯಶಸ್ವಿಗಾಗಿ ಹಗಲಿರುಳು ಶ್ರಮಿಸುತ್ತಿದೆ. ಏ.7ರಿಂದ 12ರ ತನಕ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ಶ್ರೀ ಎಡನೀರು ಮಠಾಧೀಶರಾದ ಶ್ರೀ ಸಚ್ಚಿದಾನಂದ ಭಾರತಿ ಶ್ರೀಗಳು ಹಾಗೂ ಶ್ರೀ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಡಾ|ಡಿ.ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಬ್ರಹ್ಮಶ್ರೀ ಇಡಂಬಳ್ಳಿ ತರನನಲ್ಲೂರು ಸತೀಶನ್ ನಂಬೂದರಿಪ್ಪಾಡ್ರವರ ನೇತೃತ್ವದಲ್ಲಿ ನವೀಕರಣ ಪುನರ್ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ. ಈ ಪುಣ್ಯ ಕಾರ್ಯಕ್ರಮಗಳಲ್ಲಿ ಊರ, ಪರವೂರಿನ ಭಕ್ತರು ಪಾಲ್ಗೊಂಡು ತನು-ಮನ-ಧನದ ಸಹಕಾರ ನೀಡಿ ಶ್ರೀ ದೇವರ ಕೃಪಕಟಾಕ್ಷಕಕ್ಕೆ ಪಾತ್ರರಾಗುವಂತೆ ಸಮಿತಿಯ ಪದಾಧಿಕಾರಿಗಳು ಆಮಂತ್ರಿಸಿದ್ದಾರೆ.
ಲೋಕಕಲ್ಯಾಣಕ್ಕಾಗಿ ಕೋಟಿ ಶಿವಪಂಚಾಕ್ಷರಿ ಜಪ ಮಹಾಯಜ್ಞ;
ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಶ್ರೀ ಕ್ಷೇತ್ರದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ದೇವತಾ ಸಾನಿಧ್ಯ ಪುಷ್ಟಿಗಾಗಿ ಬ್ರಹ್ಮಶ್ರೀ ಕೃಷ್ಣದಾಸ ತಂತ್ರಿ ಇರುವೈಲು ಹಾಗೂ ಬ್ರಹ್ಮಶ್ರೀ ಕೆಮ್ಮಿಂಜೆ ಸುಜಯಕೃಷ್ಣ ತಂತ್ರಿಗಳ ನೇತೃತ್ವದಲ್ಲಿ ಕೋಟಿ ಶಿವಪಂಚಾಕ್ಷರಿ ಜಪ ಮಹಾಜ್ಞ ನಡೆಯಲಿದೆ. ಏ.9ರಂದು ಸಂಜೆ ಮಹಾಯಜ್ಞ ಆರಂಭಗೊಳ್ಳಲಿದ್ದು, ಏ.11ರಂದು ಪೂರ್ವಾಹ್ನ 11ಕ್ಕೆ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಕೋಟಿ ಶಿವಪಂಚಾಕ್ಷರೀ ಜಪಯಜ್ಞದ ಪೂರ್ಣಾಹುತಿ ನಡೆಯಲಿದೆ.









