







ರಾಮಕುಂಜ: ಆಲಂಕಾರು ನಗ್ರಿಯಲ್ಲಿನ ನಮ್ಮ ಜಮೀನಿಗೆ ಅಕ್ರಮ ಪ್ರವೇಶಿಸಿ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಹಾಸನ ಆಲೂರು ತಾಲೂಕಿನ ಬೈರಾಪುರ ನಿವಾಸಿ ಮಹಾರುದ್ರಪ್ಪ ಎಂಬವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ರಾಜೇಶ್ ಹಾಗೂ ಇತರರ ವಿರುದ್ಧ ಕೇಸು ದಾಖಲಾಗಿದೆ.


ಮಹಾರುದ್ರಪ್ಪ ಹಾಗೂ ಅವರ ಅಕ್ಕ ಪುಷ್ಪಲತಾ ಆಲೂರಿನಲ್ಲಿ ಅಕ್ಕ ಪಕ್ಕದಲ್ಲಿ ವಾಸವಾಗಿದ್ದು ಇವರಿಗೆ ತಾಯಿಯ ಆಸ್ತಿಯಲ್ಲಿ ಆಲಂಕಾರು ಗ್ರಾಮದ ನಗ್ರಿ ಎಂಬಲ್ಲಿ ಜಂಟಿಯಾಗಿ ಸರ್ವೆ ನಂಬರ್ 44/3 ರಲ್ಲಿ 1 ಎಕ್ರೆ ಜಮೀನು ಪಹಣಿಯಾಗಿದ್ದು ಸದ್ರಿ ಜಮೀನಿಗೆ ಅವರಿಬ್ಬರು ತಿಂಗಳಿಗೆ ಒಂದು ಸಲ ಬೈರಾಪುರದಿಂದ ಬಂದು ಉಸ್ತುವಾರಿ ನೋಡಿಕೊಂಡು ಹೋಗುತ್ತಿದ್ದರು. ಏ.5ರಂದು ಮಧ್ಯಾಹ್ನ ನಗ್ರಿ ಎಂಬಲ್ಲಿಗೆ ಬಂದಾಗ ಅವರ ಜಮೀನಿಗೆ ರಾಜೇಶ ಎಂಬವರು ಅಕ್ರಮ ಪ್ರವೇಶ ಮಾಡಿ ಜೆಸಿಬಿ ಮುಖಾಂತರ ಮನೆ ಕಟ್ಟಲು ಜಾಗ ಸಮತಟ್ಟು ಮಾಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ವಿಚಾರಿಸಿದಾಗ ರಾಜೇಶ, ಅವರ ಪತ್ನಿ ರೇಖಾ ಮತ್ತು ಪತ್ನಿಯ ತಮ್ಮ ನೀನು ಯಾರು, ಇದನ್ನು ಕೇಳುವುದಕ್ಕೆ ನಿನಗೆ ಏನು ಸಂಬಂಧ ಎಂದು ಏರು ಧ್ವನಿಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಈ ವಿಚಾರವಾಗಿ ಮಾತನಾಡುವುದಕ್ಕೆ ಬಂದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ, ರಾಜೇಶ ಹಾಗೂ ಅಲ್ಲಿಯೇ ಇದ್ದ ಅವರ ನಾಲ್ಕೈದು ಜನ ಸಂಬಂಧಿಕರು ಸೇರಿ ಕೈಯಿಂದ ಹಲ್ಲೆ ನಡೆಸಿದ್ದು ಬಿಡಿಸಲು ಬಂದ ಪುಷ್ಪಲತಾಳಿಗೂ ಕೈಯಿಂದ ಹಲ್ಲೆ ನಡೆಸಿ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿರುತ್ತಾರೆ ಎಂದು ದೂರಲಾಗಿದೆ. ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.












