







ನೆಲ್ಯಾಡಿ: ಮಿನಿಗೂಡ್ಸ್ ವಾಹನದಲ್ಲಿ ಬಂದವರು ರಸ್ತೆ ಬದಿ ಕಸ ಎಸೆಯುತ್ತಿರುವುದನ್ನು ಗಮನಿಸಿದ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿ ಅವರಿಂದಲೇ ತೆರವುಗೊಳಿಸಿದ ಘಟನೆ ನೆಲ್ಯಾಡಿ ಸಮೀಪದ ಪೆರಿಯಶಾಂತಿಯಲ್ಲಿ ಏ.7ರಂದು ಬೆಳಗ್ಗೆ ನಡೆದಿದೆ.


ಎನ್ಎಚ್ಎಐ ಆನ್ ಡ್ಯೂಟಿ ಎಂಬ ಸ್ಟಿಕ್ಕರ್ ಅಂಟಿಸಿದ್ದ ಮಿನಿಗೂಡ್ಸ್ ವಾಹನದಲ್ಲಿ ಬಂದವರು ಪೆರಿಯಶಾಂತಿಯಲ್ಲಿ ಇಚ್ಲಂಪಾಡಿ ಕಡೆಗೆ ತೆರಳುವ ರಸ್ತೆ ಬದಿ ಚೀಲವೊಂದರಲ್ಲಿ ಕಸ ಎಸೆದಿದ್ದರು. ಇದನ್ನು ಗಮನಿಸಿದ ಇದೇ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ಇಚ್ಲಂಪಾಡಿ ಕ್ರಿಶ್ಚಿಯನ್ ಬ್ರದರ್ಸ್ ತಂಡದ ಅಧ್ಯಕ್ಷ ಜಾನ್ಸನ್ ಕೆ.ಜೆ. ಅವರು ವಾಹನ ತಡೆದು ಆಕ್ಷೇಪ ವ್ಯಕ್ತಪಡಿಸಿದರು.



ಬಳಿಕ ಕಸ ಎಸೆದವರೇ ಕಸವನ್ನು ಅಲ್ಲಿಂದ ತೆರವುಗೊಳಿಸಿದರು. ಪೆರಿಯಶಾಂತಿ-ಇಚ್ಲಂಪಾಡಿ ರಸ್ತೆಯ ಎರಡೂ ಬದಿಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಹಳೆಯ ಬಟ್ಟೆಗಳು ಹಾಗೂ ಇನ್ನಿತರ ತ್ಯಾಜ್ಯಗಳು ರಾಶಿ ಬಿದ್ದಿವೆ. ಪ್ರವಾಸಿಗರು ಸೇರಿದಂತೆ ಎಲ್ಲಿಂದಲೋ ಬರುವವರು ಈ ಪ್ರದೇಶಗಳಲ್ಲಿ ತ್ಯಾಜ್ಯ ಎಸೆದು ಪರಿಸರ ಮಲೀನಗೊಳಿಸುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ. ಈ ಬಗ್ಗೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.










