







ವಿಟ್ಲ: ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಸಂಜೆ ಕಾರ್ಯಕರ್ತರ ಸಭೆ ನಡೆಯಿತು. ಹಿರೇಹಡಗಲಿ ಮಠದ ಅಭಿನವ ಹಾಲಶ್ರೀ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಂದರ್ಭ ಸತ್ಚಿಂತನೆಗಳು ನಡೆಯಬೇಕು ಎಂದು ಅವರು ಕರೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಹಿಂದು ಜಾಗರಣಾ ವೇದಿಕೆ ಕರ್ನಾಟಕ ಕ್ಷೇತ್ರೀಯ ಪ್ರಮುಖ ಜಗದೀಶ್ ಕಾರಂತ ವಹಿಸಿ ಮಾತನಾಡಿ, ದೇವಸ್ಥಾನವು ಸಾಮಾಜಿಕ ಪರಿವರ್ತನೆಯ ಕೇಂದ್ರವಾಗಬೇಕು ಎಂದರು. ಭಗವಂತ ಸರ್ವವ್ಯಾಪಿ ಎಂಬುದು ಮೂಢನಂಬಿಕೆಯಲ್ಲ, ದೇವಸ್ಥಾನ ಸಮಾಜವನ್ನು ಸೆಳೆಯುವ ಆಕರ್ಷಣೆಯಾಗಬೇಕು ಎಂದು ಅಭಿಪ್ರಾಯಪಟ್ಟರು.



ವಿಹಿಂಪ ಸಹಕಾರ್ಯದರ್ಶಿ ಶರಣ್ ಕುಮಾರ್ ಪಂಪ್ವೆಲ್, ಬಜರಂಗದಳ ವಿಭಾಗ ಸಂಯೋಜಕ ಪುನೀತ್ ಅತ್ತಾವರ, ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ರಘುರಾಮ ಕಾರಂತ ಉಪಸ್ಥಿತರಿದ್ದರು.
ಈ ವೇಳೆ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ. ಅರುಣ ಶ್ಯಾಮ್ ಅವರನ್ನು ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಅವರು, ಪದ್ಯಾಣ ಮನೆತನದವರು ಹಾಗೂ ಪರಿಸರದವರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಕೃತಜ್ಞತೆ ಸಲ್ಲಿಸಿದರು.



ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಅರವಿಂದ ಪದ್ಯಾಣ, ಕಾರ್ಯದರ್ಶಿ ಈಶಾನ್ಯ ಪದ್ಯಾಣ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ಕೃಷ್ಣ ಎಂ.ಆರ್. ಕಡಬ, ಕಾರ್ಯಾಧ್ಯಕ್ಷ ಶ್ಯಾಮಸುಂದರ ಹೊಸಮೂಲೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಸಂಘಟನಾ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಅನೆಯಾಲಗುತ್ತು ಸ್ವಾಗತಿಸಿದರು. ವಿಜೆ ವಿಖ್ಯಾತ್ ಮತ್ತು ನವ್ಯ ಕೃಷ್ಣ ಮಾಣಿಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.









