







ವೈವಿಧ್ಯಮಯ, ಉತ್ತಮ ಸಂದೇಶ ಮತ್ತು ಸಾಂಸ್ಕೃತಿಕ ಪರಂಪರೆಯೊಂದಿಗೆ ಕಾರ್ಯಕ್ರಮ- ಪತ್ರಿಕಾಗೋಷ್ಠಿಯಲ್ಲಿ ನಳಿನ್ ಕುಮಾರ್ ಕಟೀಲ್


ಪುತ್ತೂರು:ಕರಾವಳಿಯ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ,ಪ್ರವಾಸೋದ್ಯಮ ಕ್ಷೇತ್ರವಾಗಿ ಪ್ರಸಿದ್ಧಿ ಪಡೆದಿರುವ, ಕಾರಣಿಕ ಹಾಗೂ ಭಕ್ತರ ಆಕರ್ಷಣೀಯ ಕ್ಷೇತ್ರವಾದ ಶ್ರೀ ಕೋದಂಡರಾಮ ಪಂಚಮುಖಿ ಆಂಜನೇಯ ಕ್ಷೇತ್ರ ಹನುಮಗಿರಿಯಲ್ಲಿ ಏ.9ರಿಂದ 12ರವರೆಗೆ ಬ್ರಹ್ಮಕಲಶೋತ್ಸವದ ಸಂಭ್ರಮ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ,ಮಾಜಿ ಸಂಸದರೂ ಆಗಿರುವ ನಳಿನ್ ಕುಮಾರ್ ಕಟೀಲ್ ಹೇಳಿದರು.



ಹನುಮಗಿರಿಯ ವೈದೇಹಿ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಆಗಮ ಶಾಸದ ಪ್ರಕಾರ 12 ವರ್ಷಗಳಿಗೊಮ್ಮೆ ಪ್ರತೀ ಕ್ಷೇತ್ರದಲ್ಲಿಯೂ ಬ್ರಹ್ಮಕಲಶ ನಡೆಯುತ್ತಿದೆ.ಹನುಮಗಿರಿ ಕೋದಂಡರಾಮ ಮತ್ತು ಪಂಚಮುಖಿ ಆಂಜನೇಯ ಕ್ಷೇತ್ರ ಕೂಡ ಇದೀಗ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ಸಜ್ಜಾಗಿದೆ.ಈ ಕ್ಷೇತ್ರದಲ್ಲಿ 3 ರೀತಿಯ ಆರಾಧನೆ ನಡೆಯುತ್ತಿದೆ.ಪ್ರಕೃತಿಯ ಮಧ್ಯೆ ಪಂಚಮುಖಿ ಆಂಜನೇಯ.ಇನ್ನೊಂದೆಡೆ, ಆದರ್ಶ ಪತಿಯಾಗಿರುವ ಶ್ರೀರಾಮ ದೇವರ ಆರಾಧನೆ ಜೊತೆಗೆ ದೇಶದ ರಕ್ಷಣೆ ಮಾಡುವ ಸೈನಿಕರನ್ನೂ ಆರಾಧನೆ ಮಾಡುವ ಮೂಲಕ ಭಾರತ ಮಾತೆಯ ಮಂದಿರ.ಈ ಪರಿಕಲ್ಪನೆಯಲ್ಲಿ ಆರಾಽಸುವ ದೇಶದ ಮೊದಲ ಮಂದಿರ ಇದಾಗಿದೆ ಎಂದರು.
ಜೀರ್ಣೋದ್ಧಾರ ಕೆಲಸದೊಂದಿಗೆ ಪೂರ್ವತಯಾರಿ:
ಹನುಮಗಿರಿಯಲ್ಲಿ ಬ್ರಹ್ಮಕಲಶಕ್ಕೆ ಅಂತಿಮ ಪೂರ್ವತಯಾರಿ ಕೆಲಸಗಳು ನಡೆಯುತ್ತಿದೆ.ಜೀರ್ಣೋದ್ಧಾರ ಕೆಲಸಗಳು ಈಗಾಗಲೇ ನಡೆಯುತ್ತಿದ್ದು ಇದಕ್ಕೆ ಪೂರಕವಾಗಿ ಆಂಜನೇಯ ದೇವರ ಎದುರು ಮುಖಮಂಟಪ, ಆಂಜನೇಯ ಮತ್ತು ರಾಮ ದೇವರ ಮಂಟಪದ ಸುತ್ತ ಹಿತ್ತಾಳೆಯ ಹೊದಿಕೆ,ಸುಂದರವಾದ ಉದ್ಯಾನವನ ಕೆಲಸಗಳು ಪೂರ್ಣಗೊಂಡು ಬ್ರಹ್ಮಕಲಶದ ಕಾರ್ಯಕ್ರಮಗಳು ಏ.9ರಿಂದ ಆರಂಭಗೊಳ್ಳಲಿದೆ ಎಂದರು.
ಬ್ರಹ್ಮಕಲಶದ ಮೂಲಕ ಸಮಾಜಕ್ಕೊಂದು ಉತ್ತಮ ಸಂದೇಶ:
ಬ್ರಹ್ಮಕಲಶ ಕಾರ್ಯಕ್ರಮ ಎಲ್ಲಾ ಕಡೆ ನಡೆಯುತ್ತದೆ.ಆದರೆ ಸಮಾಜಕ್ಕೆ ಒಂದು ಸಂದೇಶ ಕೂಡ ನೀಡಬೇಕೆಂಬ ಉದ್ದೇಶವಿಟ್ಟುಕೊಂಡು ಬ್ರಹ್ಮಕಲಶದೊಂದಿಗೆ ಮೂರು ಕಾರ್ಯಕ್ರಮ ಜೋಡಿಸಲಾಗಿದೆ.ರಾಮ ಹಿಂದೂ ಸಮಾಜಕ್ಕೆ ಆದರ್ಶ ಪುರುಷನಾಗಿ ಇಡೀ ಸಮಾಜಕ್ಕೆ ವ್ಯಕ್ತಿಯ ಸಂದೇಶ ನೀಡಿದ್ದಾನೆ.ರಾಮಾಯಣದ ಮೂಲಕ ಮನುಷ್ಯ ಜೀವನದಲ್ಲಿ ಬೆಳಕನ್ನು ಕಂಡುಕೊಂಡಿದ್ದಾನೆ.ಆದುದರಿಂದ ಪ್ರತಿಯೊಬ್ಬರ ಮನೆ ಮನ ಬೆಳಗಲು ಅಯೋಧ್ಯೆಯಿಂದ ಬಾಲರಾಮನ ಜ್ಯೋತಿ ತಂದು ರಥಯಾತ್ರೆಯ ಮೂಲಕ ಜಾತಿ ಮತ ಪಂಥ ಮೀರಿ ಸಂಚರಿಸಿ ಪ್ರತೀ ಮನೆಯಲ್ಲಿ ಜ್ಯೋತಿ ಬೆಳಗುವ ಪರಿಕಲ್ಪನೆ ಮಾಡಲಾಗಿದೆ.ರಾಮ ಉತ್ತರ ಮತ್ತು ದಕ್ಷಿಣವನ್ನು ಬೆಸೆದ ಕಾರಣ ಉತ್ತರದ ಅಯೋಧ್ಯೆಯ ರಾಮನ ಜ್ಯೋತಿಯೊಂದಿಗೆ ದಕ್ಷಿಣದ ಅಂಜನಾದ್ರಿಯಿಂದ ಆಂಜನೇಯನ ಜ್ಯೋತಿಯನ್ನು ಸೇರಿಸಿಕೊಂಡು ತರಲಾಗಿದೆ.ಕಾರ್ಕಳದಿಂದ ರಥಯಾತ್ರೆ ಆರಂಭಗೊಂಡು ಮಂಗಳೂರು, ಪುತ್ತೂರು, ಸುಳ್ಯ, ಕಡಬ ತಾಲೂಕುಗಳಲ್ಲಿ ಸುಮಾರು 30 ಗ್ರಾಮಗಳನ್ನು ಸಂಪರ್ಕಿಸಿ ಸಂಚರಿಸುತ್ತಿದೆ.ಜ್ಯೋತಿಯನ್ನು ನಮ್ಮ ಗ್ರಾಮದ ಮಂದಿರದ ಮೂಲಕ ಪ್ರತೀ ಮನೆಗೂ ಕೊಂಡುಹೋಗಲಾಗುತ್ತಿದೆ.ಈಗಾಗಲೇ 5 ಸಾವಿರ ಮನೆಗಳಿಗೆ ಜ್ಯೋತಿ ತಲುಪಿದೆ.ರಾಮ ಹನುಮ ಜ್ಯೋತಿ ರಥಯಾತ್ರೆಗೆ ನಿರೀಕ್ಷೆಗೂ ಮೀರಿ ಸ್ವಾಗತ ಕಾರ್ಯ ನಡೆಯುತ್ತಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.

ಕೋಟಿ ರಾಮ ತಾರಕ ಜಪ:
ರಾಮ ತಾರಕ ಮಂತ್ರ ಮಂತ್ರ ಜಪಿಸಿದರೆ ಅದ್ಭುತ ಶಕ್ತಿ ಬರುತ್ತದೆ.ಈ ಪರಿಕಲ್ಪನೆ ಇಟ್ಟುಕೊಂಡು ಕೋಟಿ ರಾಮ ಜಪ ಮಾಡಬೇಕು.ಇದರ ಮೂಲಕ ಎಲ್ಲರನ್ನೂ ಜೋಡಿಸಬೇಕು. ಪ್ರತಿಯೊಬ್ಬರೂ ರಾಮ ಮಂತ್ರ ಪಠಣ ಮಾಡಬೇಕು ಎಂಬ ದೃಷ್ಟಿಯಿಂದ ಕೋಟಿ ರಾಮ ತಾರಕ ಜಪ ಆಯೋಜಿಸಲಾಗಿದೆ.ಈ ಮೂಲಕ ದೇಶ ವಿಶ್ವಗುರು ಆಗಬೇಕು.ದೇಶದ ಸುಭಿಕ್ಷೆ ಆಗಬೇಕು.ವಿಶ್ವಕಲ್ಯಾಣ ಆಗಬೇಕು ಎಂಬ ಉದ್ಧೇಶದಿಂದ ಜಪ ಯಜ್ಞ ಮಾಡಲಾಗುತ್ತಿದೆ.ಈಗಾಗಲೇ 13 ಸಾವಿರ ಜನರು ದೀಕ್ಷೆ ಪಡೆದುಕೊಂಡಿದ್ದಾರೆ.ನಮ್ಮ ನಿರೀಕ್ಷೆಗೂ ಮೀರಿ ಸ್ಪಂದನೆ ಸಿಕ್ಕಿದೆ ಎಂದ ಕಟೀಲ್,ಬ್ರಹ್ಮಕಲಶ ಕಾರ್ಯಕ್ರಮಕ್ಕೆ ಯಾವುದೇ ದೇಣಿಗೆ ಇಲ್ಲ.ಆದರೆ ಭಗವಂತನಿಗೆ ಏನಾದರೂ ಅರ್ಪಣೆ ಆಗಬೇಕು.ಪ್ರತಿಯೊಂದು ಮನೆಯಿಂದ ಸಮರ್ಪಣೆ ಆಗಬೇಕೆಂಬ ಉದ್ದೇಶದಿಂದ ರಾಮನಿಗೆ ಒಂದು ತೆಂಗಿನಕಾಯಿ ಹಾಗೂ ಹನುಮಗಿಗೆ ಒಂದು ತೆಂಗಿನಕಾಯಿ ಸಮರ್ಪಣೆ ಮಾಡಲು ಲಕ್ಷೋತ್ತರ ನಾರಿಕೇಳ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸಾಂಸ್ಕೃತಿಕ ಕಾರ್ಯಕ್ರಮ:
ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ.ಇದಕ್ಕಾಗಿ 2 ವೇದಿಕೆಗಳ ರಚನೆ ಮಾಡಲಾಗಿದೆ.ಇದರಲ್ಲಿ ರಾಜ್ಯ, ರಾಷ್ಟ್ರ, ಅಂತರ್ರಾಷ್ಟ್ರೀಯ ಮಟ್ಟದ ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಕಾರ್ಯಕ್ರಮಗಳು ನಡೆಯಲಿದೆ.ಲವ ಮತ್ತು ಕುಶ ಎಂಬ ಹೆಸರಿನ 2 ವೇದಿಕೆಗಳಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ನಾಟಕ, ಯಕ್ಷಗಾನ, ಸಂಗೀತ, ನೃತ್ಯ, ಮುಂತಾದ ಕಾರ್ಯಕ್ರಮಗಳನ್ನು ಜೋಡಿಸಲಾಗಿದೆ.ಸುಮಾರು 48 ತಂಡಗಳಿಂದ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.ಕೊನೆಯ ದಿನವಾದ ಏ.12ರಂದು ಆಳ್ವಾಸ್ ವಿರಾಸತ್ ಕಾರ್ಯಕ್ರಮ ನಡೆಯಲಿದೆ.ಇದರೊಂದಿಗೆ ಭಕ್ತಿಯ ಸಂಕೇತವಾಗಿರುವ ಭಜನಾ ಕಾರ್ಯಕ್ರಮ ನಿರಂತರ ನಡೆಯಲಿದೆ. ಜಿಲ್ಲೆಯ 300 ತಂಡಗಳಿಂದ ಭಜನೆ ನಡೆಯಲಿದೆ.ಏ.11ರಂದು ಕುಣಿತ ಭಜನೆ ನಡೆಯಲಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ವೈವಿಧ್ಯಮಯಾವಾದ, ಉತ್ತಮ ಸಂದೇಶ ಕೊಡಬಲ್ಲ, ಸಾಂಸ್ಕತಿಕ ಪರಂಪರೆಯನ್ನು ಉಳಿಸುತ್ತಾ ಇಲ್ಲಿನ ಧರ್ಮ, ಚಿಂತನೆಗಳು, ಇಲ್ಲಿನ ಶಾಸೋಕ್ತವಾದ ಕಾರ್ಯಗಳೊಂದಿಗೆ ಬ್ರಹ್ಮಕಲಶ ಕಾರ್ಯಗಳನ್ನು ನಡೆಸಲು ಯೋಜನೆ ಹಾಕಿದ್ದೇವೆ.ಹಿಂದೆ ಎಲ್ಲಿಯೂ ಆಗದ ರೀತಿಯಲ್ಲಿ ವಿಶಿಷ್ಟವಾದ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗಿದೆ.ಇಂತಹ ಅದ್ಭುತವಾದ ಕಾರ್ಯಗಳನ್ನು ಜೋಡಿಸಿ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಲು ವಿವಿಧ ಗಣ್ಯರನ್ನು ಸೇರಿಸಿಕೊಂಡು ಸಮಿತಿ, ಉಪ ಸಮಿತಿಗಳನ್ನು ರಚಿಸಲಾಗಿದೆ.ಐದು ದಿನದ ಎಲ್ಲಾ ಕಾರ್ಯಕ್ರಮಗಳಿಗೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿ ಎಂದು ನಳಿನ್ ಕುಮಾರ್ ಕಟೀಲ್ ವಿನಂತಿಸಿದರು.
ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡೆತ್ತಾಯ, ಬ್ರಹ್ಮಕಲಶೋತ್ಸವ ಸ್ವಾಗತ ಸಮಿತಿ ಅಧ್ಯಕ್ಷ ಡಾ|ರವೀಶ್ ಪಡುಮಲೆ, ಹೊರೆಕಾಣಿಕೆ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು,ನಗರ-ಗ್ರಾಮ ಸಮಿತಿ ರಚನಾ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ,ಸಮಿತಿ ಉಪಾಧ್ಯಕ್ಷರಾದ ರವಿಕಿರಣ್ ಶೆಟ್ಟಿ ಬೆದ್ರಾಡಿ, ಬೂಡಿಯಾರ್ ರಾಧಾಕೃಷ್ಣ ರೈ, ಶ್ರೀರಾಮ ಪಕ್ಕಳ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರಧಾನ ಕಾರ್ಯದರ್ಶಿಗಳಾದ ಆರ್.ಸಿ.ನಾರಾಯಣ ರೆಂಜ ಸ್ವಾಗತಿಸಿ, ನಹುಷ ಪಳನೀರು ವಂದಿಸಿದರು.
ಇಂದು ಹೊರೆಕಾಣಿಕೆ ಸಮರ್ಪಣೆ
ಏ.8ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರನ ಸಾನಿಧ್ಯಕ್ಕೆ ಎಲ್ಲಾ ಗ್ರಾಮಗಳಿಂದ ಹಸಿರು ಹೊರೆಕಾಣಿಕೆ ಆಗಮಿಸಲಿದೆ.ಇಲ್ಲಿಂದ ಹೊರಕಾಣಿಕೆ ಸಮಿತಿ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟುರವರ ನೇತೃತ್ವದಲ್ಲಿ ಸಂಜೆ 3 ಗಂಟೆಗೆ ಮೆರವಣಿಗೆ ಹೊರಡಲಿದೆ.ಬಳಿಕ ದರ್ಬೆವರೆಗೆ ಭಜನೆ, ವಾದ್ಯ ಘೋಷ, ಗೊಂಬೆ ಬಳಗದೊಂದಿಗೆ ಪಾದಯಾತ್ರೆಯಲ್ಲಿ ಮೆರವಣಿಗೆ ಸಾಗಲಿದೆ.ದರ್ಬೆಯಿಂದ ವಾಹನದ ಮೂಲಕ ಈಶ್ವರಮಂಗಲಕ್ಕೆ ಬಂದು ಸಂಜೆ 6 ಗಂಟೆಗೆ ಹನುಮಗಿರಿ ಕ್ಷೇತ್ರಕ್ಕೆ ಹೊರೆಕಾಣಿಕೆ ಪ್ರವೇಶವಾಗಲಿದೆ.ಬೆಳಿಗ್ಗೆ ಈಶ್ವರಮಂಗಲದ ಗ್ರಾಮಸ್ಥರಿಂದ ಹೊರೆಕಾಣಿಕೆ ಸಮರ್ಪಣೆ ಕಾರ್ಯ ನಡೆಯಲಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.
ಏ.8ರಂದು ಹಸಿರುಹೊರೆ ಕಾಣಿಕೆ ನಡೆಯಲಿದ್ದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಿಂದ ಮೆರವಣಿಗೆಯೊಂದಿಗೆ ಹನುಮಗಿರಿಗೆ ಬರಲಿದೆ.ಏ.9ರಂದು ರಾಮಹನುಮ ಜ್ಯೋತಿ ರಥಯಾತ್ರೆ ಈಶ್ವಮಂಗಲ ಶ್ರೀ ಪಂಚಲಿಂಗೇಶ್ವರ ದೇವಾಲಯಕ್ಕೆ ಬಂದು ಅಲ್ಲಿಂದ ಮೆರವಣಿಗೆಯ ಮೂಲಕ ಮಧ್ಯಾಹ್ನ 3 ಗಂಟೆಗೆ ಹನುಮಗಿರಿಗೆ ಪ್ರವೇಶವಾಗಲಿದೆ.ಬಳಿಕ ಹನುಮಗಿರಿಯ ಭದ್ರದೀಪಕ್ಕೆ ಜ್ಯೋತಿಯನ್ನು ಜೋಡಿಸಲಾಗುತ್ತದೆ.ಏ.10ರಂದು ಕರ್ನಾಟಕದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ರವರು ಆಗಮಿಸಲಿದ್ದು ಬೆಳಿಗ್ಗೆ 11.30ಕ್ಕೆ ನೂತನ ಗೋಪುರ, ಮುಖಮಂಟಪ, ಉದ್ಯಾನವನವನ್ನು ಅವರು ಲೋಕಾರ್ಪಣೆ ಮಾಡಲಿದ್ದಾರೆ.ಬಳಿಕ ಯಾಗಶಾಲೆಯಲ್ಲಿ ಪೇಜಾವರ ಶ್ರೀಗಳು ಯಾಗಶಾಲೆಯನ್ನು ಉದ್ಘಾಟನೆ ಮಾಡಲಿದ್ದಾರೆ.ಬಳಿಕ ರಾಜ್ಯಪಾಲರು ಹಾಗೂ ಪೇಜಾವರಶ್ರೀಗಳು ಇಲ್ಲಿನ ವೇದಿಕೆಯಲ್ಲಿ ಸಂದೇಶ ನೀಡಲಿದ್ದಾರೆ.ಏ.11ರಂದು ಯಾಗದ ಪೂರ್ಣಾಹುತಿ ನಡೆಯಲಿದೆ.ರಾಮ ತಾರಕ ಜಪ ದೀಕ್ಷೆ ಮಾಡಿದವರು ದಂಪತಿ ಸಮೇತ ಆಗಮಿಸಬೇಕು.10 ಕುಂಡಗಳಲ್ಲಿ ನಡೆಯುತ್ತಿರುವ ಯಾಗ ಅಂದು ಪೂರ್ಣಾಹುತಿಗೊಳ್ಳಲಿದೆ.ಪೂರ್ಣಾಹುತಿಯಲ್ಲಿ ಜಪದೀಕ್ಷೆ ಮತ್ತು ನಾರಿಕೇಳ ಸಮರ್ಪಣೆಯಾಗಲಿದೆ.ಏ.10ರಿಂದ ಆಂಜನೇಯ ಮತ್ತು ಕೋದಂಡರಾಮನ ಸನ್ನಿಧಿಯಲ್ಲಿ ಬ್ರಹ್ಮಕಲಶೋತ್ಸವದ ಧಾರ್ಮಿಕ ಕಾರ್ಯಗಳು ಆರಂಭಗೊಂಡು 12ರಂದು ಬೆಳಿಗ್ಗೆ ಬ್ರಹ್ಮಕಲಶ ಕಾರ್ಯಕ್ರಮ ನಡೆಯಲಿದೆ.ಇಲ್ಲಿಗೆ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ. ಕಾರ್ಯಕ್ರಮದಲ್ಲಿ ನಿರಂತರ ಅನ್ನದಾನ ವ್ಯವಸ್ಥೆ ಮಾಡಲಾಗಿದೆ.ಇದಕ್ಕಾಗಿ ಹೈಜಾನಿಕ್ ಆಗಿರುವ ಪಾಕಶಾಲೆ, ಅನ್ನಛತ್ರ ನಿರ್ಮಾಣ ಮಾಡಲಾಗಿದೆ.ಹೊರೆಕಾಣಿಕೆ ಸಂಗ್ರಹಕ್ಕೆ ಉಗ್ರಾಣ ವ್ಯವಸ್ಥೆ ಮಾಡಲಾಗಿದೆ.ಇದಕ್ಕೆ ಪೂರಕವಾಗಿ ಹಾಗೂ ಅತಿಥಿ ಅಭ್ಯಾಗತರಿಗೆ ಎಲ್ಲಾ ಮೂಲಭೂತ ಸೌಲಭ್ಯಗಳ ವ್ಯವಸ್ಥೆ ಮಾಡಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ಮಾಹಿತಿ ನೀಡಿದರು.
ಮಠಾಧಿಪತಿಗಳು, ಪೀಠಾಧಿಪತಿಗಳು,
ಸಾಧುಸಂತರು, ಜಗದ್ಗುರುಗಳು ಭಾಗಿರಾಜ್ಯ, ಜಿಲ್ಲೆಯ ಪ್ರತಿಷ್ಠಿತ ಧಾರ್ಮಿಕ ನೇತಾರರನ್ನು, ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.ಕಂಚಿ ಕಾಮಕೋಟಿ ಶ್ರೀಗಳು, ಪೇಜಾವರ ಶ್ರೀಗಳು, ರಾಘವೇಶ್ವರ ಶ್ರೀಗಳು, ಸುಬ್ರಹ್ಮಣ್ಯ ಮಠಾಧಿಶರು, ಎಡನೀರು ಮಠಾಧಿಶರು, ಕನ್ಯಾಡಿ, ಒಡಿಯೂರು ಸ್ವಾಮೀಜಿಗಳು ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ.ಹೀಗೆ ಜಿಲ್ಲೆಯ, ರಾಜ್ಯದ,ಅಂತರ್ರಾಜ್ಯದ ಮಠಾಧಿಪತಿಗಳು, ಪೀಠಾಧಿಪತಿಗಳು, ಸಾಧುಸಂತರುಗಳು, ಜಗದ್ಗುರುಗಳು ಭಾಗವಹಿಸಲಿದ್ದಾರೆ.ಪಂದಳ ರಾಜರು, ಅರಸು ವಂಶದವರು, ಗುತ್ತುಮನೆದವರು, ಗಡಿಕಾರರು ಸೇರಿದಂತೆ ಹಲವು ಮನೆತನದವರನನ್ನು ಆಹ್ವಾನಿಸಲಾಗಿದೆ. 10 ಗ್ರಾಮದ ಮನೆ ಮನೆಗೆ ನಮ್ಮ ಸಮಿತಿಯವರು ಆಮಂತ್ರಣ ಪತ್ರ ನೀಡಿದ್ದಾರೆ.ಎಲ್ಲಾ ಜಾತಿ, ಮತ, ಪಂಥದವರಿಗೂ ಆಹ್ವಾನ ನೀಡಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದರು.










