






ಪುತ್ತೂರು:ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಏ.10ರಿಂದ ಜಾತ್ರೋತ್ಸದ ಆರಂಭಗೊಳ್ಳಲಿದೆ.ಏ.10ರಂದು ನಡೆಯುವ ಜಾತ್ರೆಯ ಧ್ವಜಾರೋಹಣವನ್ನು ತಡೆಯುವ ನಿಟ್ಟಿನಲ್ಲಿ ಧ್ವಜಸ್ಥಂಭದ ಕೆಳಗೆ ಅಕ್ರಮವಾಗಿ ಪ್ರತಿಭಟನೆ ಮಾಡುವ ಸಾಧ್ಯತೆ ಇದೆ.ಹಾಗಾಗಿ ಧ್ವಜಾರೋಹಣಕ್ಕೆ ತೊಂದರೆ ಆಗದಂತೆ ಸೂಕ್ತ ಬಂದೋಬಸ್ತ್ ಏರ್ಪಡಿಸಿ ಪ್ರತಿಭಟನೆಗೆ ಅವಕಾಶ ನೀಡದಂತೆ ಆರ್.ಕೆ.ಪಾಂಗಣ್ಣಾಯ ಅವರು ಸರಕಾರದ ಪ್ರಧಾನ ಕಾರ್ಯದರ್ಶಿ ಸಹಿತ 8 ಇಲಾಖೆಗಳಿಗೆ ಏ.7ರಂದು ಮನವಿ ನೀಡಿದ್ದಾರೆ.


ಪಿ.ಜಿ.ಜಗನ್ನಿವಾಸ ರಾವ್ ಮತ್ತು ಅವರ ಕುಟುಂಬಸ್ಥರು ಸುಮಾರು 200 ವರ್ಷಗಳಿಂದ ಪುತ್ತೂರು ಮಹತೋಭಾರ ಮಹಾಲಿಂಗೇಶ್ವರ ದೇವಳದಲ್ಲಿ ಸೇವೆ ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ 30 ವರ್ಷಗಳಿಂದ ಪಿ.ಜಿ.ಜಗನ್ನಿವಾಸ ರಾವ್ ದೇವಳದ ಎಲ್ಲಾ ಕೆಲಸಗಳನ್ನು ಮಾಡಿಕೊಂಡು ಬಂದಿರುವುದಲ್ಲದೇ ಸಿವಿಲ್ ಇಂಜಿನಿಯರ್ ಮತ್ತು ವಾಸ್ತು ತಜ್ಞರಾಗಿ ದೇವಳದ ಅಭಿವೃದ್ಧಿ ಕಾರ್ಯಗಳಲ್ಲಿ ಕೂಡಾ 20 ವರ್ಷಗಳಿಂದ ದುಡಿಯುತ್ತಿದ್ದು,ದೇವಳದಿಂದ ಯಾವುದೇ ಪ್ರತಿಫಲ ಪಡೆಯದೇ ಇರುವುದರಿಂದ ಕಳೆದ 20 ವರ್ಷಗಳಲ್ಲಿ ದೇವಳಕ್ಕೆ ಕನಿಷ್ಠ 2 ಕೋಟಿ ರೂಪಾಯಿ ಉಳಿತಾಯವಾಗಿರುತ್ತದೆ.ಆದರೆ ಸಂತ್ರಸ್ತೆಯೋರ್ವರು ಪಿ.ಜಿ.ಜಗನ್ನಿವಾಸ ರಾವ್ ಅವರ ಮಗನ ವಿರುದ್ಧ ದೂರು ನೀಡಿದ ಕುರಿತು ಮಾಧ್ಯಮದ ಮೂಲಕ ತಿಳಿದಿರುತ್ತದೆ.ಈ ಕುರಿತು ಪ್ರಕರಣ ದಾಖಲಾಗಿದ್ದು, ಆರೋಪಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.ಪ್ರಕರಣ ಇದೀಗ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಆದರೆ ಸಂತ್ರಸ್ತೆಯ ತಾಯಿ ಏ.10ರಂದು ಧ್ವಜಸ್ತಂಭದ ಅಡಿಯಲ್ಲಿ ಕೂತು ನ್ಯಾಯ ಕೇಳುವುದಾಗಿ ಮಾಧ್ಯಮದ ಮೂಲಕ ತಿಳಿಸಿದ್ದಾರೆ.ದೇವರಲ್ಲಿ ನ್ಯಾಯ ಕೇಳುತ್ತೇನೆಂದರೆ ದೇವರಲ್ಲಿ ಪ್ರಾರ್ಥನೆ ಮಾಡುವುದು, ಆದರೆ ಕೊಡಿ ಮರದ ಅಡಿಯಲ್ಲಿ ನ್ಯಾಯ ಕೇಳಿ ಪ್ರತಿಭಟನೆಗೆ ಯಾರಿಗೂ ಅವಕಾಶವಿಲ್ಲ.ಒಂದು ವೇಳೆ ಪ್ರತಿಭಟನೆಯನ್ನೇ ಮಾಡಬೇಕೆಂದು ನಿರ್ಧಾರಕ್ಕೆ ಬಂದಿದ್ದಲ್ಲಿ ಸಂಬಂಧಿಸಿದ ಇಲಾಖೆಯ ಅನುಮತಿ ಪಡೆದು ಮಿನಿ ವಿಧಾನ ಸೌಧದ ಮುಂದೆಯೂ ಮಾಡಬಹುದು.ಹಾಗಾಗಿ ಸಂತ್ರಸ್ತೆಯ ತಾಯಿ, ತನ್ನೊಂದಿಗಿರುವವರನ್ನು ಸೇರಿಸಿಕೊಂಡು ಏ.10ರಂದು ನಡೆಯುವ ಜಾತ್ರೆಯ ಧ್ವಜಾರೋಹಣವನ್ನು ತಡೆಯುವ ನಿಟ್ಟಿನಲ್ಲಿ ದ್ವಜಸ್ಥಂಭದ ಕೆಳಗೆ ಅಕ್ರಮವಾಗಿ ಪ್ರತಿಭಟನೆ ನಡೆಸುವ ಸಾಧ್ಯತೆ ಇದೆ.ಇದರಿಂದಾಗಿ ಸಮಯಕ್ಕೆ ಸರಿಯಾಗಿ ಧ್ವಜಾರೋಹಣ ನಡೆಯದೇ ದೇವಳದ ಇತರ 47ಕ್ಕಿಂತಲೂ ಹೆಚ್ಚು ಸಮುದಾಯದ ಭಕ್ತರಿಗೆ ಅನ್ಯಾಯವಾಗುತ್ತದೆ. ಯಾರಾದರೂ ಕಾನೂನನ್ನು ಕೈಗೆತ್ತಿಕೊಂಡು ಭಕ್ತರು ಸಂಕಷ್ಟಕ್ಕೆ ಒಳಗಾಗುತ್ತಾರೆ ಎಂಬ ಭಯದಿಂದ ಕೊಡಿ ಏರುವ ಸಂದರ್ಭ ಸೂಕ್ತ ಬಂದೋಬಸ್ತ್ ಏರ್ಪಡಿಸಿ ಯಾವುದೇ ಪ್ರತಿಭಟನೆಗೆ ಅವಕಾಶ ನೀಡದಂತೆ ಮತ್ತು ಜಾತ್ರೆ ನಿರ್ವಿಘ್ನವಾಗಿ ನೆರವೇರುವಂತೆ ಆಗತ್ಯ ಕ್ರಮಕೈಗೊಳ್ಳುವಂತೆ ಅವರು ಮನವಿಯಲ್ಲಿ ಒತ್ತಾಯಿಸಿದ್ದಾರೆ.













