ಅಕ್ರಮ ಸಾಗಾಟದಲ್ಲಿ ವಶಪಡಿಸಿಕೊಂಡ 20 ಜಾನುವಾರುಗಳು ಬಿಸಿಲಿಗೆ ಕಂಗಾಲು – ಗೋ ಶಾಲೆಗೆ ಸ್ಥಳಾಂತರಿಸುವಂತೆ ಆಗ್ರಹ

0

ಕಡಬ: ಕಡಬ ಠಾಣಾ ವ್ಯಾಪ್ತಿಯ ನೂಜಿಬಾಳ್ತಿಲ ಗ್ರಾಮದ ಕನ್ವರೆ ಎಂಬಲ್ಲಿ ಎ.3 ರಂದು ಬೆಳಗ್ಗಿನ ಜಾವ ಕಂಟೈನರ್ ಲಾರಿಯಲ್ಲಿ ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ 20 ಗೋವುಗಳನ್ನು ಕಡಬ ಪೊಲೀಸರು ವಶಕ್ಕೆ ಪಡೆದು ಮೂವರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ವಶಕ್ಕೆ ಪಡೆದ ಗೋವುಗಳನ್ನು 5 ದಿನದಿಂದ ಠಾಣಾ ವಠಾರದಲ್ಲಿ ಕಟ್ಟಿ ಹಾಕಲಾಗಿರುವುದರಿಂದ ಬಿಸಿಲ ತಾಪಕ್ಕೆ ಹೈರಾಣವಾಗಿದೆ.


ಎ. 3 ರಂದು ಠಾಣಾ ಉಪನಿರೀಕ್ಷಕ ಜಂಬುರಾಜ್ ಮಹಾಜನ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಗೋವುಗಳನ್ನು ತಡೆಹಿಡಿದು ಸಾಗಾಟ ಮಾಡುತ್ತಿದ್ದ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹೊಸೂರು ಗ್ರಾಮದ ಇರ್ಫಾನ್ , ಪರಾರಿಯಾದ ಚಾಲಕ ನಯಾಝ್ ಮತ್ತು ಕಂಟೈನರ್‌ಗೆ ಲೋಡ್ ಮಾಡಿಕೊಟ್ಟ ಕಂಟೈನರ್ ಮಾಲಿಕ ಅಬ್ದುಲ್ ರಹಿಮಾನ್ ವಿರುದ್ದ ಪ್ರಕರಣ ದಾಖಲಿಸಿಕೊಂಡಿದೆ.‌


ಪ್ರಕರಣ ನಡೆದು 5 ದಿನ ಕಳೆದರೂ ಠಾಣಾ ವಠಾರದಲ್ಲಿ ಗೋವುಗಳನ್ನು ಕಟ್ಟಿ ಹಾಕಲಾಗಿದ್ದು, ಗೋವುಗಳಿಗೆ ಹುಲ್ಲು ನೀರು ಕೊಡುವ ಸವಾಲು ಎದುರಾಗಿದೆ. 5 ದಿನಗಳಿಂದ ದಿನ ನಿತ್ಯ ಹಿಂದೂ ಸಂಘಟನೆಯ ಪ್ರಮುಖರು ಕೃಷಿ ತೋಟಗಳಿಂದ ಹುಲ್ಲುಗಳನ್ನು ಸಂಗ್ರಹಿಸಿ ಗೋವುಗಳಿಗೆ ತಿನ್ನಿಸುತ್ತಿದ್ದಾರೆ. ನೀರು ಕುಡಿಸುತ್ತಿದ್ದಾರೆ. ಗೋಶಾಲೆಗೆ ಸಾಗಾಟ ಮಾಡುವ ಮಾತುಕತೆ ನಡೆದರೂ ಎಸ್ ಐ ದಿನ ದೂಡುತ್ತಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿದೆ. ಉರಿಬಿಸಿಲಿಗೆ ಗೋವುಗಳು ಸುಸ್ತಾಗಿದ್ದು, ಈ ಬಗ್ಗೆ ತಕ್ಷಣ ಕ್ರಮಕೈಗೊಳ್ಳಬೇಕೆಂದು ಹಿಂದೂ ಸಂಘಟನೆಯ ಪ್ರಮುಖರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here