ಏ.24ರಿಂದ ಬೆಳ್ಳಿತೆರೆಯಲ್ಲಿ “ದೇವದಾಸ್ ನ ಲೀಲಾ”

0

ಪುತ್ತೂರು: ತುಳುನಾಡಿನ ಸಮಸ್ತ ಸಿನಿಮಾ ರಸಿಕರ ಮನಗೆಲ್ಲಲು, ನಗುವಿನ ಹೊನಲನ್ನು ಹರಿಸಲು ಅದ್ದೂರಿಯಾಗಿ ಸಿದ್ಧಗೊಂಡಿದೆ ‘ದೇವದಾಸ್ ನ ಲೀಲಾ’. ತುಳು ಚಿತ್ರರಂಗದ ಮತ್ತೊಂದು ಆಶಾದಾಯಕ ಮೈಲಿಗಲ್ಲಾಗಿ ಮೂಡಿಬಂದಿರುವ ಈ ಚಿತ್ರವು ಇದೇ ಬರುವ ಏಪ್ರಿಲ್ 24 ರಂದು ತುಳುನಾಡಿನಾದ್ಯಂತ ಎಲ್ಲಾ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ.

‘ತುಡರ್’ ಖ್ಯಾತಿಯ ಪ್ರತಿಭಾನ್ವಿತ ನಿರ್ದೇಶಕ ತೇಜೇಶ್ ಪೂಜಾರಿ ಅವರ ನಿರ್ದೇಶನದಲ್ಲಿ ಈ ಚಿತ್ರವು ಅದ್ಭುತವಾಗಿ ಮೂಡಿಬಂದಿದೆ. ಇದು ಇವರ ನಿರ್ದೇಶನದ ದ್ವಿತೀಯ ಚಿತ್ರವಾಗಿದೆ. ಜಯಂತಿ ಪ್ರೊಡಕ್ಷನ್, ಡಿ ಎಸ್ ಎಂಟರ್ಟೈನ್ಮೆಂಟ್ಸ್ ಹಾಗೂ ಅಪ್ಸರಾ ಎಂಟರ್ಟೈನ್ಮೆಂಟ್ಸ್ ಸಹಭಾಗಿತ್ವದಲ್ಲಿ ತೇಜೇಶ್ ಪೂಜಾರಿ, ದೀಪಕ್ ಸಿಂಗ್ ಮತ್ತು ಅಪ್ಸರಾ ಎಂಟರ್ಟೈನ್ಮೆಂಟ್ಸ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ತೇಜೇಶ್ ಪೂಜಾರಿ ಹಾಗೂ ನಿರ್ಮಾಪಕ ದೀಪಕ್ ಸಿಂಗ್ ಅವರು ಬಾಲಿವುಡ್ ಚಿತ್ರರಂಗದಲ್ಲಿ ನೃತ್ಯ ನಿರ್ದೇಶಕರಾಗಿ 25 ವರ್ಷಗಳ ಸುದೀರ್ಘ ಹಾಗೂ ಶ್ರೀಮಂತ ಅನುಭವ ಹೊಂದಿದ್ದು, ಈ ಅನುಭವದ ಛಾಪು ಚಿತ್ರದ ಪ್ರತಿ ಫ್ರೇಮ್‌ನಲ್ಲೂ ಎದ್ದು ಕಾಣುತ್ತದೆ.

ತುಳುನಾಡಿನ ಹಾಸ್ಯ ದಿಗ್ಗಜರಾದ ‘ತೆಲಿಕೆದ ಬೊಳ್ಳಿ’ ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್ ಅವರಲ್ಲದೆ, ಎಲ್ಟನ್ ಜೆಫ್, ಅದ್ವಿತಿ ಶೆಟ್ಟಿ, ಅನೂಪ್ ಸಾಗರ್, ಅನುಷಾ ರಾಜ್, ವಿನಾಯಕ್ ಜಪ್ಪು, ಶೈಲಶ್ರೀ ಮುಲ್ಕಿ, ರಾಧೇಶ್ ಶೆಣೈ ಹಾಗೂ ತಿಮ್ಮಪ್ಪ ಕುಲಾಲ್ ಅವರಂತಹ ಕಲಾವಿದರ ತಾರಾಗಣ ಚಿತ್ರಕ್ಕೆ ಮೆರುಗು ನೀಡಿದೆ. ಮುಖ್ಯ ಕಲಾವಿದರಾದ ಎಲ್ಟನ್ ಜೆಫ್ ಅವರು 15 ವರ್ಷಗಳ ನೃತ್ಯ ನಿರ್ದೇಶನದ ಅನುಭವವನ್ನು ಚಿತ್ರಕ್ಕೆ ಧಾರೆ ಎರೆದಿದ್ದಾರೆ.

ಈ ಚಿತ್ರದಲ್ಲಿ ಒಟ್ಟು 7 ಹಾಡುಗಳಿದ್ದು, ಸಂಗೀತದ ರಸದೌತಣವೇ ಇದೆ ಎನ್ನಬಹುದು. ವಿಶೇಷವಾಗಿ ಬಾಲಿವುಡ್‌ನ ಖ್ಯಾತ ಗಾಯಕ ಶಾನ್ ಅವರು ಮೊದಲ ಬಾರಿಗೆ ತುಳು ಸಿನಿಮಾಗೆ ಧ್ವನಿಯಾಗಿರುವುದು ವಿಶೇಷ. ಜೊತೆಗೆ ದಿವ್ಯ ಕುಮಾರ್, ‘ದುರಂದರ್’ ಖ್ಯಾತಿಯ ಶೆಹಜಾದ್ ಅಲಿ, ಅನಿರುದ್ಧ ಶಾಸ್ತ್ರಿ ಹಾಗೂ ಪ್ರಕಾಶ್ ಮಹಾದೇವನ್ ಅವರ ಕಂಠಸಿರಿ ಹಾಡುಗಳಿಗೆ ಜೀವ ತುಂಬಿದೆ. ಸಾಯಿಷ್ ಭಾರದ್ವಾಜ್ ಮತ್ತು ಪ್ಯಾಟ್ಸನ್ ಪಿರೇರಾ ಅವರ ಸಂಗೀತ ನಿರ್ದೇಶನ ಚಿತ್ರದ ಆಕರ್ಷಣೀಯ ಅಂಶಗಳಲ್ಲಿ ಒಂದಾಗಿದೆ. ಮಂಗಳೂರು, ಮುಡಿಪು, ಬಜ್ಪೆ ಹಾಗೂ ಬೆಂಗಳೂರಿನ ಸುಂದರ ತಾಣಗಳಲ್ಲಿ ಸುಮಾರು 35 ದಿನಗಳ ಕಾಲ ಅವಿರತ ಶ್ರಮದಿಂದ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಸಂತೋಷ್ ಆಚಾರ್ಯ ಗುಂಪಲಾಜೆ ಅವರ ಛಾಯಾಗ್ರಹಣ ಮತ್ತು ಗಣೇಶ್ ನಿರ್ಚಲ್ ಅವರ ಚೊಕ್ಕ ಸಂಕಲನ ಚಿತ್ರವನ್ನು ಮತ್ತಷ್ಟು ಸುಂದರವಾಗಿಸಿದೆ.

ಈಗಾಗಲೇ ಚಿತ್ರದ ಟೀಸರ್, ಹಾಡುಗಳು ಹಾಗೂ ಟ್ರೇಲರ್ ‘ಜಯಂತಿ ಪ್ರೊಡಕ್ಷನ್’ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದು, ಪ್ರೇಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಈ ಅದ್ದೂರಿ ಮನರಂಜನಾ ಚಿತ್ರವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದು, ಏಪ್ರಿಲ್ 24ರಂದು ಸಿನಿಮಾ ಮಂದಿರಗಳಲ್ಲಿ ಈ ಹಬ್ಬವನ್ನು ಸಂಭ್ರಮಿಸಲು ಚಿತ್ರತಂಡ ಸಜ್ಜಾಗಿದೆ.

LEAVE A REPLY

Please enter your comment!
Please enter your name here