






ಸಂಸ್ಕೃತಿ ರಕ್ಷಣೆಯ ಕಾರ್ಯ ಮನೆಯಿಂದಲೇ ಆರಂಭ ಆಗಬೇಕು: ಅಕ್ಷತಾ ಪ್ರಸಾದ್


ಪುತ್ತೂರು: ಸಂಸ್ಕೃತಿಯನ್ನು ರಕ್ಷಿಸುವ ಕಾರ್ಯ ನಮ್ಮ ಮನೆಯಿಂದಲೇ ಆರಂಭವಾಗಬೇಕು ಎಂದು ಉಪ್ಪಿನಂಗಡಿ ವೇದಶಂಕರನಗರದ ಶ್ರೀರಾಮ ಶಾಲೆಯ ಮಾತಾಜಿ ಅಕ್ಷತಾ ಪ್ರಸಾದ್ ಬೆಳ್ಳಿಪ್ಪಾಡಿ ಹೇಳಿದರು.



34ನೇ ನೆಕ್ಕಿಲಾಡಿ ಗ್ರಾಮದ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ಉತ್ಸವದ ಅಂಗವಾಗಿ ಮೇ.೭ರಂದು ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಉಪನ್ಯಾಸ ನೀಡಿದ ಅವರು ನಮ್ಮ ಮನೆಯ ಮಕ್ಕಳನ್ನು ದೇವಸ್ಥಾನಗಳಿಗೆ ಕರೆದುಕೊಂಡು ಹೋಗುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಸಂಸ್ಕೃತಿ, ಸಂಪ್ರದಾಯದ ಕುರಿತು ಮನೆಯಿಂದಲೇ ತಿಳಿಸಿಕೊಡುವ ಕಾರ್ಯ ಆಗಬೇಕು ಎಂದು ಹೇಳಿದರು. ಇಂದು ಮನುಷ್ಯನ ವೈಚಾರಿಕತೆಗೆ ಸೋಶಿಯಲ್ ಮೀಡಿಯಾದ ವೈರಸ್ ಲಗ್ಗೆ ಇಟ್ಟಿದೆ ಎಂದು ಹೇಳಿದ ಅಕ್ಷತಾ ಅವರು ಧರ್ಮ ರಕ್ಷಣೆ ಮತ್ತು ಸಂಸ್ಕೃತಿಯ ರಕ್ಷಣೆ ಮನೆಯಿಂದಲೇ ಆರಂಭವಾಗಬೇಕು ಎಂದು ಹೇಳಿದರಲ್ಲದೆ ಹಿಂದೂ ಧರ್ಮದಲ್ಲಿರುವ ಆಚರಣೆಗಳ ಹಿಂದಿರುವ ವೈಜ್ಞಾನಿಕ ಕಾರಣಗಳನ್ನು ತಿಳಿಸಿದರು.
ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದ್ದ ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ನಾೖಕ್ ಮಾತನಾಡಿ ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವ ಮಾದರಿಯಾಗಿ ನಡೆದಿದೆ. ಶಿಸ್ತು ಮತ್ತು ಅಚ್ಚುಕಟ್ಟುತನದಿಂದ ಶಾಂತಿನಗರ ದೇವಸ್ಥಾನ ಗಮನ ಸೆಳೆಯುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಂತಿನಗರ ಮಹಾವಿಷ್ಣು ದೇವಸ್ಥಾನದ ಆಡಳಿತ ಮೊಕ್ತೇಸರ ರಾಜೇಶ್ ಶಾಂತಿನಗರ ಮಾತನಾಡಿ ಮೊಕ್ತೇಸರರು, ಬೈಲುವಾರು ಮುಖ್ಯಸ್ಥರು ಮತ್ತು ಊರ, ಪರವೂರಿನ ಭಕ್ತರ ಸಹಕಾರದಿಂದ ದೇವಸ್ಥಾನದ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯುತ್ತಿದೆ. ಮುಂದಕ್ಕೂ ತಮ್ಮೆಲ್ಲರ ಸಹಕಾರ ಬೇಕಿದೆ ಎಂದು ಹೇಳಿದರು. ಹಿರಿಯ ಮೊಕ್ತೇಸರ ಯು.ಜಿ.ರಾಧ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಶೇಖರ ಪೂಜಾರಿ ನಿಡ್ಯ ವಂದಿಸಿದರು. ಚಿನ್ಮಯಿ ಪ್ರಾರ್ಥಿಸಿದರು. ಸಂತೋಷ್ ಕುಮಾರ್ ಶಾಂತಿನಗರ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಅನ್ನಪ್ರಸಾದ ವಿತರಣೆ ನಡೆಯಿತು. ಬಳಿಕ ಗಯಾಪದ ಕಲಾವಿದೆರ್ ಉಬಾರ್ ಇವರಿಂದ ಸೇವಾರ್ಥವಾಗಿ ಈ ವರ್ಷದ ಸೂಪರ್ ಹಿಟ್ ಪೌರಾಣಿಕ ನಾಟಕ ನಾಗಮಾಣಿಕ್ಯ ಪ್ರದರ್ಶನಗೊಂಡಿತು.
ವಿವಿಧ ಕಾರ್ಯಕ್ರಮ:
34ನೇ ನೆಕ್ಕಿಲಾಡಿ, ಕೋಡಿಂಬಾಡಿ ಮತ್ತು ಬೆಳ್ಳಿಪ್ಪಾಡಿ ಗ್ರಾಮಗಳ ತ್ರಿವೇಣಿ ಸಂಗಮ ಸ್ಥಳವಾದ ಶಾಂತಿನಗರದಲ್ಲಿ ಸುಮಾರು 700 ವರ್ಷಗಳ ಐತಿಹ್ಯವಿರುವ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಮೇ.6 ಮತ್ತು 7ರಂದು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಪ್ರತಿಷ್ಠಾ ವಾರ್ಷಿಕ ಉತ್ಸವ ನಡೆಯಿತು. ಮೇ. 6ರಂದು ಬೆಳಿಗ್ಗೆ ನಿತ್ಯ ಪೂಜೆಯ ಬಳಿಕ ಶಾಂತಿನಗರ ಶ್ರೀ ಸತ್ಯನಾರಾಯಣ ಪೂಜಾ ಮೈದಾನದಿಂದ ದೇವಸ್ಥಾನಕ್ಕೆ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಬಳಿಕ ಭಕ್ತರಿಂದ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ಜರಗಿತು. ಮೇ.7ರಂದು ನಿತ್ಯ ಮಹಾಪೂಜೆ, ಶ್ರೀ ಗಣಪತಿ ಹವನ, ಕಲಶ ಪೂಜೆ, ಅಶ್ವತ್ಥ ಕಲ್ಪೋಕ್ತ ಪೂಜೆ, ಶ್ರೀ ನಾಗದೇವರ ತಂಬಿಲ, ಶ್ರೀ ರಕ್ತೇಶ್ವರಿ ಸಹಿತ ಪರಿವಾರ ದೈವಗಳಿಗೆ ತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಕಲಶಾಭಿಷೇಕ, ವಿವಿಧ ಭಜನಾ ತಂಡಗಳಿಂದ ಭಜನಾ ಸೇವೆ ಮತ್ತು ಶ್ರೀ ದೇವರಿಗೆ ರಂಗಪೂಜೆ ನಡೆಯಿತು.










