






ಕಡಬ: ಕುಟ್ರುಪ್ಪಾಡಿ ಗ್ರಾಮದ ಕೊಲ್ಯದಕಟ್ಟ ಎಂಬಲ್ಲಿನ ಗುಂಡ್ಯ ಹೊಳೆಯಲ್ಲಿ ಸ್ನಾನಕ್ಕೆ ತೆರಳಿದ್ದ ಆರು ಮಂದಿಯಲ್ಲಿ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮೇ.8ರಂದು ಸಂಜೆ ನಡೆದಿದೆ.


ಕುಟ್ರುಪಾಡಿ ಗ್ರಾಮದ ವಿಮಲಗಿರಿ ಸಮೀಪದ ಪೂವತಿಂಗಲ್ ನಿವಾಸಿ ಹರೀಶ್ ಪಿ.ಕೆ. ಅವರ ಪುತ್ರಿ ಹತ್ತನೆ ತರಗತಿ ವಿದ್ಯಾರ್ಥಿನಿ ಅರ್ಪಿತಾ(15ವ.) ಹಾಗೂ ಹರೀಶ್ ಪಿ.ಕೆ.ಯವರ ಸಹೋದರಿ ಶಕುಂತಳಾ ಎಂಬವರ ಪುತ್ರಿ ಸುನೀತಾ(21ವ.) ಎಂಬವರು ಮೃತಪಟ್ಟ ದುರ್ದೈವಿಗಳು.




ಘಟನೆಯ ವಿವರ:
ಮೇ.8ರಂದು ಮಧ್ಯಾಹ್ನದ ವೇಳೆಗೆ ಹರೀಶ್ ಪಿ.ಕೆ. ಮತ್ತು ರಮ್ಯಾ ಅವರ ಮಕ್ಕಳಾದ ಹರಿವಿಷ್ಣು, ಅರ್ಪಿತಾ, ಹರೀಶ್ ಅವರ ಅಕ್ಕ ನೆರೆಮನೆ ನಿವಾಸಿ ಶಕುಂತಳಾ ಅವರ ಮಕ್ಕಳಾದ ಸುರೇಶ, ಸುನೀತಾ, ಸುರೇಶರ ಮಗಳಾದ ಅಕ್ಷತಾ ಮತ್ತು ಮನೆಗೆ ನೆಂಟರಾಗಿ ಬಂದಿದ್ದ ನೆಟ್ಟಣ ನಿವಾಸಿ ಶ್ರೇಯ ಸೇರಿ ಒಟ್ಟು 6 ಮಂದಿ ಸ್ನಾನಕ್ಕೆಂದು ಗುಂಡ್ಯ ಹೊಳೆಗೆ ತೆರಳಿ ನೀರಿಗಿಳಿದಿದ್ದರು. ಆ ಪೈಕಿ ಅರ್ಪಿತಾ ಹಾಗೂ ಸುನೀತರವರು ನೀರಿನ ಆಳ ತಿಳಿಯದೆ ನೀರಿನಲ್ಲಿ ಮುಳುಗಿದ್ದಾರೆ. ಜೊತೆಗೆ ಸ್ನಾನಕ್ಕೆ ಇಳಿದಿದ್ದವರು. ಇದನ್ನು ಗಮನಿಸಿ ಅವರನ್ನು ರಕ್ಷಿಸಲು ಯತ್ನಿಸಿದರೂ ಫಲಕಾರಿಯಾಗಲಿಲ್ಲ. ಈ ವಿಚಾರವನ್ನು ಹರಿವಿಷ್ಣುರವರು ತಂದೆ ಹರೀಶ್ ಅವರಿಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದರಲ್ಲದೆ. ನದಿಯ ಪಕ್ಕದ ಮನೆಯವರಿಗೆ ತಿಳಿಸಿ ನೀರಲ್ಲಿ ಮುಳುಗಿದವರನ್ನು ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ, ಆದರೆ ಯಾವ ಪ್ರಯತ್ನವೂ ಫಲಿಸಲಿಲ್ಲ. ಬಳಿಕ ಕೊಲ್ಯದಕಟ್ಟ ನಿವಾಸಿ ಮುಳುಗುತಜ್ಞ ಜಾರ್ಜ್ ಎಂಬವರು ಮೃತದೇಹವನ್ನು ನೀರಿನಿಂದ ಮೇಲಕ್ಕೆತ್ತಿದ್ದಾರೆ. ಸ್ಥಳಕ್ಕೆ ಕಡಬ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ಕಡಬ ಸರಕಾರಿ ಆಸ್ಪತ್ರೆಗೆ ಸಾಗಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತರ ಕುಟುಂಬದವರ ಅಕ್ರಂದನ ಮುಗಿಲು ಮುಟ್ಟಿದೆ. ಹರೀಶ್ ಅವರು ನೀಡಿದ ದೂರಿನಂತೆ ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.










