






ಪುತ್ತೂರು: ಗುಡುಗು ಸಹಿತ ಸುರಿದ ಭಾರಿ ಗಾಳಿ ಮಳೆಗೆ ಆರ್‌ಸಿಸಿ ಮನೆಯೊಂದರ ಮೇಲ್ಛಾವಣಿಗೆ ಅಳವಡಿಸಿದ್ದ ಶೀಟ್ ಗಾಳಿಯ ರಭಸಕ್ಕೆ ಹಾರಿ ಹೋಗಿ ಎದುರಿನ ಹಂಚಿನ ಮನೆ ಮೇಲೆ ಬಿದ್ದು ಭಾರಿ ಹಾನಿ ಉಂಟಾದ ಘಟನೆ ಹಾರಾಡಿಯಲ್ಲಿ ನಡೆದಿದೆ. ಘಟನೆಯ ವೇಳೆ ಮನೆಯಲ್ಲಿದ್ದ 9 ಮಂದಿ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.



ಹಾರಾಡಿ ಗುಡ್ಡೆಮನೆ ನಿವಾಸಿ ಹರೀಶ್ ಆಚಾರ್ಯ ಅವರ ಮನೆಗೆ ಹಾನಿಯಾಗಿದೆ. ಮೇ.8ರಂದು ರಾತ್ರಿ ಸುರಿದ ಭಾರಿ ಗಾಳಿ ಮಳೆಯ ಸಂದರ್ಭ, ಹಾರಾಡಿ ಮೂಕಾಂಬಿಕಾ ಗ್ಯಾಸ್ ಸಮೀಪ ರಸ್ತೆಯ ಮತ್ತೊಂದು ಬದಿಯಲ್ಲಿದ್ದ ಆರ್‌ಸಿಸಿ ಮನೆಯ ಮೇಲ್ಛಾವಣಿಯ ಶೀಟ್ ಮಾಡು ಗಾಳಿಯ ತೀವ್ರತೆಗೆ ಕಿತ್ತು ಹಾರಿ ಬಂದು ಹರೀಶ್ ಆಚಾರ್ಯ ಅವರ ಹಂಚಿನ ಮನೆ ಮೇಲೆ ಬಿದ್ದಿದೆ.




ಘಟನೆಯ ಪರಿಣಾಮ ಮನೆಯ ಹಂಚುಗಳು ಪುಡಿಯಾಗಿ ಮನೆಯೊಳಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಮನೆಯ ಮಾಡು, ಆವರಣ ಗೋಡೆ ಹಾಗೂ ಪಕ್ಕದ ಗೋಡೆಗಳಿಗೆ ಹಾನಿಯಾಗಿದೆ. ಇದೇ ವೇಳೆ ಶೀಟ್ ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಅವುಗಳಲ್ಲಿ ಒಂದು ಕಂಬ ಮನೆ ಮೇಲೆ ಬಿದ್ದಿದ್ದು, ಸಮೀಪದ ದೈವದ ಗುಡಿಗೂ ಹಾನಿಯಾಗಿದೆ.
ಮುರಿದು ಬಿದ್ದ ವಿದ್ಯುತ್ ಕಂಬಗಳು ರಸ್ತೆಗೆ ಅಡ್ಡವಾಗಿ ಬಿದ್ದ ಪರಿಣಾಮ ಕೆಲಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










