







ಉಪ್ಪಿನಂಗಡಿ: ಈ ಭಾಗದಲ್ಲಿ ಮೇ.8ರ ಸಂಜೆ ಗಾಳಿ- ಮಳೆ ಬಂದಿದ್ದು, ಮೆಸ್ಕಾಂ ಉಪ್ಪಿನಂಗಡಿ ವಿಭಾಗದ ವ್ಯಾಪ್ತಿಯಲ್ಲಿ 48 ವಿದ್ಯುತ್ ಕಂಬಗಳು ತುಂಡಾಗಿದ್ದು, ವಿದ್ಯುತ್ ವ್ಯವಸ್ಥೆ ಅಸ್ತವ್ಯಸ್ಥವಾಗಿವೆ. ಶನಿವಾರ ಕೂಡಾ ಹಲವು ಪ್ರದೇಶಗಳು ಕಗತ್ತಲಲ್ಲಿರುವಂತಾಗಿದೆ.


ಮೇ.8ರ ಸಂಜೆ ಈ ಭಾಗದಲ್ಲಿ ಭಾರೀ ಗಾಳಿಯೊಂದಿಗೆ ಮಳೆ ಸುರಿದಿತ್ತು. ಇದರಿಂದ ಹಿರೇಬಂಡಾಡಿ, ಬಜತ್ತೂರು, ಪೆರಿಯಡ್ಕ, ಕೆಮ್ಮಾರ, ಪಂರ್ದಾಜೆ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮರಗಳು, ಮರದ ಗೆಲ್ಲುಗಳು ಉರುಳಿ ಬಿದ್ದು 48 ವಿದ್ಯುತ್ ಕಂಬಗಳು ತುಂಡಾಗಿ ವಿದ್ಯುತ್ ವ್ಯವಸ್ಥೆ ಅಸ್ಥವ್ಯಸ್ಥವಾಗಿತ್ತು. ಶನಿವಾರ ದಿನ ತುಂಡಾಗಿರುವ 48 ಕಂಬಗಳಲ್ಲಿ 28 ಕಂಬಗಳನ್ನು ಹಾಕಲಾಗಿದ್ದು, 20 ಕಂಬಗಳನ್ನು ಹಾಕಲು ಬಾಕಿಯಿವೆ.



ಕಗ್ಗತ್ತಲೆಯಲ್ಲಿ ಹಲವು ಪ್ರದೇಶಗಳು:
ಶುಕ್ರವಾರ ಸಂಜೆಯಿಂದಲೇ ಈ ಭಾಗದಲ್ಲಿ ವಿದ್ಯುತ್ ವ್ಯತ್ಯಯಗೊಂಡಿದ್ದು, ಕೆಲವು ಪ್ರದೇಶಗಳಲ್ಲಿ ಶನಿವಾರ ವಿದ್ಯುತ್ ಸಮಸ್ಯೆ ಸರಿಯಾದರೆ, ಇನ್ನು ಹಲವು ಪ್ರದೇಶಗಳು ವಿದ್ಯುತ್ ಇಲ್ಲದೆ ಶನಿವಾರ ರಾತ್ರಿ ಕೂಡಾ ಕಗ್ಗತ್ತಲೆಯಲ್ಲೇ ಇರುವಂತಾಗಿದೆ. ವಿದ್ಯುತ್ ಇಲ್ಲದಿರುವುದರಿಂದ ಹಲವು ಕಡೆಗಳಲ್ಲಿ ನೀರಿನ ಸಮಸ್ಯೆ ಕೂಡಾ ಉದ್ಭವವಾಗಿದೆ. ಪುತ್ತೂರಿನಿಂದ ಉಪ್ಪಿನಂಗಡಿ ಬರುವ ಮುಖ್ಯ ವಿದ್ಯುತ್ ಸಂಪರ್ಕ ಲೈನ್ ಶುಕ್ರವಾರದಿಂದ ಶನಿವಾರ ಸಂಜೆಯವರೆಗೆ ಚಾರ್ಚ್ ಆಗದಿರುವುದರಿಂದ ಇದರಿಂದ ಸಂಪರ್ಕ ಪಡೆಯುವ ಹಲವು ಪ್ರದೇಶಗಳಲ್ಲಿ ಕೂಡಾ ವಿದ್ಯುತ್ ಸಮಸ್ಯೆ ಉಂಟಾಗಿದೆ. ಗಾಳಿಗೆ ಹಲವು ಕಡೆಗಳಲ್ಲಿ ಅಡಿಕೆ ಮರಗಳು ಧರಾಶಾಹಿಯಾಗಿದ್ದು, ಕೃಷಿ ಹಾನಿ ಉಂಟಾಗಿದೆ.










