







ವಿದ್ಯಾರ್ಥಿಗಳಿಗೆ ಬದುಕಿನಲ್ಲಿ ಗುರಿ ಮುಖ್ಯ: ಇಬ್ರಾಹೀಂ


ಉಪ್ಪಿನಂಗಡಿ: ವಿದ್ಯಾರ್ಥಿಗಳು ತಮ್ಮ ಪ್ರೌಢ ಹಂತದಲ್ಲೇ ತಮ್ಮ ಮುಂದಿನ ಕಲಿಕೆ, ಓದು, ಬದುಕಿನ ಬಗ್ಗೆ ಆಸೆ, ಗುರಿ ಹೊಂದಿರಬೇಕು. ಹೀಗಾದಾಗ ಮಾತ್ರ ತಾನು ಬದುಕಿನಲ್ಲಿ ಏನಾದರೊಂದು ಸಾಧನೆ ಮಾಡಲು ಸಾಧ್ಯ ಎಂದು ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಇಬ್ರಾಹಿಂ ಹೇಳಿದರು.



ಉಬಾರ್ ಸ್ಪೋರ್ಟಿಂಗ್ ಕ್ಲಬ್ ವತಿಯಿಂದ ಉಪ್ಪಿನಂಗಡಿಯಲ್ಲಿ ನಡೆದ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ನಂತರ ಮುಂದೇನು ಎಂಬ ಕಾರ್ಯಕ್ರಮ ಮತ್ತು ಉಪ್ಪಿನಂಗಡಿ ಪರಿಸರದ ಪಿಯುಸಿ ಮತ್ತು ಎಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ಸಾಧಕ ವಿದ್ಯಾರ್ಥಿಗಳ ಪುರಸ್ಕಾರ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಮುಂದೆ ಕಾಣುವ ಐ.ಎ.ಎಸ್., ಐಪಿಎಸ್ ಪದವಿ ಪಡೆದು ಜಿಲ್ಲಾಧಿಕಾರಿ, ಪೊಲೀಸ್ ಅಧಿಕಾರಿ, ನ್ಯಾಯಾಧೀಶರು, ವಕೀಲರು, ವೈದ್ಯರು, ಎಂಜಿನಿಯರ್ ಮೊದಲಾದ ವ್ಯಕ್ತಿಗಳ ಹಾಗೆಯೇ ನಾನೂ ಆಗಬೇಕು ಎನ್ನುವ ಆಸೆ ಪಡಬೇಕು. ಇದಕ್ಕಾಗಿ ಸಾಧನೆಯ ಗುರಿ ಇಟ್ಟುಕೊಳ್ಳಬೇಕು. ಅದಕ್ಕಾಗಿ ಯೋಜನೆ, ಕಾರ‍್ಯ ಚಟುವಟಕೆ, ಶಿಸ್ತು ಅಳವಡಿಸಿಕೊಳ್ಳಬೇಕು ಮುಂದೆ ಸಾಗಿದಾಗ ತಮ್ಮ ಆಸೆ, ಕನಸು ನನಸಾಗಲು ಸಾಧ್ಯ ಎಂದರು.
ರಾಯಚೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ರಝೀಯಾ ಬಾನು, ಶೈಕ್ಷಣಿಕ ತರಬೇತುದಾರರಾದ ವತ್ಸಲಾ ನಾಯಕ್, ಹನೀಫ್ ಪುತ್ತೂರು, ಉಬಾರ್ ಸ್ಪೋರ್ಟಿಂಗ್ ಕ್ಲಬ್ ಗೌರವ ಸಲಹೆಗಾರ ಯು.ಟಿ. ಮಹಮ್ಮದ್ ತೌಸೀಫ್ ಪೋಷಕರೊಂದಿಗೆ ಮಕ್ಕಳು ಮತ್ತು ಪೋಷಕರ ಸಂಬಂಧ ಹಾಗೂ ಶಿಕ್ಷಣದ ಆಯ್ಕೆಯಲ್ಲಿ ಪೋಷಕರ ಪಾತ್ರ ಎಂಬ ವಿಷಯದಲ್ಲಿ ಮಾತನಾಡಿದರು.
ಉಬಾರ್ ಸ್ಪೋರ್ಟಿಂಗ್ ಕ್ಲಬ್ ಉಪ್ಪಿನಂಗಡಿ ಇದರ ಅಧ್ಯಕ್ಷ ಶಬೀರ್ ಕೆಂಪಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ಅಧ್ಯಕ್ಷ ಎಚ್. ಯೂಸುಫ್ ಹಾಜಿ, ಇಂಡಿಯನ್ ಸ್ಕೂಲ್ ಪ್ರಾಂಶುಪಾಲೆ ಶಂಶಾದ್ ಬಾನು, ಸರಳೀಕಟ್ಟೆ ಸರಕಾರಿ ಪ್ರೌಢ ಶಾಲೆ ಅಧ್ಯಾಪಕ ಮಹಮ್ಮದ್ ಹನೀಫ್ ಮಾತನಾಡಿದರು.
ಇಂಡಿಯನ್ ಸ್ಕೂಲ್ ಕಾರ್ಯದರ್ಶಿ ಹಾಜಿ ಶುಕೂರ್ ಶುಕ್ರಿಯಾ, ದೈಹಿಕ ಶಿಕ್ಷಣ ಶಿಕ್ಷಕ ರಫೀಕ್ ಮಾಸ್ಟರ್ ಉಪ್ಪಿನಂಗಡಿ, ಯು.ಟಿ. ರಹೀನಾಝ್ ಅಂಡೆತ್ತಡ್ಕ, ರಿಜ್ವಾನ್ ಮಂಗಳೂರು, ಅರಫಾ ವಿದ್ಯಾ ಕೇಂದ್ರದ ಶಫೀಕ್ ಅರಫಾ, ಜ್ಞಾನ ಭಾರತಿ ವಿದ್ಯಾ ಸಂಸ್ಥೆಯ ರವೂಫ್ ಭಾಗವಹಿಸಿದ್ದರು.
ಪ್ರತಿಭಾ ಪುರಸ್ಕಾರ:
ಕಾರ್ಯಕ್ರಮದಲ್ಲಿ ಇಂಡಿಯನ್ ಸ್ಕೂಲ್, ಜ್ಞಾನಭಾರತಿ ವಿದ್ಯಾ ಕೇಂದ್ರ, ಇಂದ್ರಪ್ರಸ್ಥ ವಿದ್ಯಾಲಯ, ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲೆ, ಅರಫಾ ವಿದ್ಯಾ ಕೇಂದ್ರ, ಆಯಿಷಾ ವಿದ್ಯಾ ಸಂಸ್ಥೆ ಆತೂರು, ಬದ್ರಿಯಾ ವಿದ್ಯಾ ಸಂಸ್ಥೆ ಆತೂರು, ಸರಕಾರಿ ಪ್ರೌಢ ಶಾಲೆ ಸರಳೀಕಟ್ಟೆ, ಅಲ್ ಮುನವ್ವರ ಮೂಡಡ್ಕ ಶಾಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.










