ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಕೆಸಿಡಿಸಿ ಅಧ್ಯಕ್ಷೆ ಮಮತಾ ಗಟ್ಟಿ ಭೇಟಿ

0

ಪುತ್ತೂರು: ಸಿರಿಕಡಮಜಲು ಕೃಷಿ ಕ್ಷೇತ್ರಕ್ಕೆ ಕರ್ನಾಟಕ ಸರಕಾರದ ಅರಣ್ಯ ಇಲಾಖೆಗೆ ಒಳಪಟ್ಟ ಕರ್ನಾಟಕ ಗೇರು ಅಭಿವೃದ್ಧಿ ನಿಗಮ (ಕೆಸಿಡಿಸಿ) ಯ ಅಧ್ಯಕ್ಷೆ ಮಮತಾ ಗಟ್ಟಿ ಮೇ.8ರಂದು ಭೇಟಿ ನೀಡಿ ಸಿರಿಕಡಮಜಲು ಕೃಷಿ ಕ್ಷೇತ್ರದ ಸುಮಾರು 14 ಎಕರೆ ʻಸ್ವೇದಬಿಂದುʼ ಗೇರು ತೋಟವನ್ನು ವೀಕ್ಷಿಸಿ, ವೈಜ್ಞಾನಿಕ ಗೇರು ಕೃಷಿ ಬಗ್ಗೆ ಗೇರು ರಾಯಭಾರಿ ಕಡಮಜಲು ಸುಭಾಸ್‌ ರೈಯವರಿಂದ ಮಾಹಿತಿ ತಿಳಿದುಕೊಂಡರು.


ಮೇ.16 ರಿಂದ ಮಂಗಳೂರಿನ ಕದ್ರಿ ಪಾರ್ಕ್‌ನಲ್ಲಿ ನಡೆಯುವ 2025-26ನೇ ಸಾಲಿನ ರಾಜ್ಯಮಟ್ಟದ ಗೇರು ಮೇಳವನ್ನು ಯಶಸ್ವಿಗೊಳಿಸಲು ವಿಶೇಷವಾಗಿ ಗೇರು ಬೆಳೆಸಿದ ತೋಟಗಳನ್ನು ಸಂದರ್ಶನ ಮಾಡಿ ಮೇಳಕ್ಕೆ ಮೆರುಗು ನೀಡುವ ಉದ್ದೇಶದಿಂದ ಸದ್ರಿ ಗೇರು ತೋಟಕ್ಕೆ ಗಟ್ಟಿಯವರು  ಭೇಟಿ ನೀಡಿದ್ದಾರೆ.


ಸಾಂಪ್ರದಾಯಿಕ ಸನ್ಮಾನ
ಇದೇ ವೇಳೆ ಮಮತಾ ಗಟ್ಟಿಯವರನ್ನು ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಬೆಳೆಸಲಾದ ತರಕಾರಿ, ಹಣ್ಣು ಹಂಪಲುಗಳನ್ನು ಬುಟ್ಟಿಯಲ್ಲಿ ನೀಡಿ ಶಾಲು, ಹಾರ ಹಾಕಿ ಪ್ರೀತಿ ಸುಭಾಸ್‌ ರೈಯವರು ಸನ್ಮಾನಿಸಿದರು. ಇದೇ ವೇಳೆ ಮಾತನಾಡಿದ ಮಮತಾ ಗಟ್ಟಿಯವರು ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಗೇರು ಬೆಳೆಗಾರರನ್ನು ಬರಮಾಡಿಸಿ ಸಿರಿಕಡಮಜಲು ಕೃಷಿ ಕ್ಷೇತ್ರದಲ್ಲಿ ಗೇರು ಬೆಳೆಗಾರರ ಸಮಾವೇಶ ಮಾಡುವ ಆಶಯ ವ್ಯಕ್ತಪಡಿಸಿದರು.


ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ, ಬಂಟ್ವಾಳ ತಾ.ಪಂ. ಮಾಜಿ ಅಧ್ಯಕ್ಷ ಕೆ. ಪದ್ಮನಾಭ ರೈ, ಕೆಸಿಡಿಸಿ ಪುತ್ತೂರು ನೆಡುತೋಪು ಅಧೀಕ್ಷಕ ರವಿಪ್ರಸಾದ್‌, ಸ್ನೇಹ ಸ್ಟುಡಿಯೋ ಪುತ್ತೂರು ಇದರ ಈಶ್ವರಚಂದ್ರ, ಮಮತಾ ಗಟ್ಟಿಯವರ ಆಪ್ತ ಸಹಾಯಕ ಸುಮಂತ್‌, ಕೆಸಿಡಿಸಿ ಸಿಬ್ಬಂದಿ ನವೀನ್‌, ಹಮೀದ್‌ ಉಪಸ್ಥಿತರಿದ್ದರು.


ಕಡಮಜಲು ಸುಭಾಸ್‌ ರೈಯವರಿಗೆ ಸನ್ಮಾನಕ್ಕಾಗಿ ಆಹ್ವಾನ
ಮಂಗಳೂರಿನಲ್ಲಿ ನಡೆಯಲಿರುವ ಗೇರು ಮೇಳದಲ್ಲಿ ಅರಣ್ಯ ಸಚಿವ ಈಶ್ವರ ಖಂಡ್ರಯವರ ಸಮ್ಮುಖದಲ್ಲಿ ವೈಜ್ಞಾನಿಕ ಗೇರು ಕೃಷಿಕ ಕಡಮಜಲು ಸುಭಾಸ್‌ ರೈಯವರಿಗೆ ಸನ್ಮಾನ ನಡೆಯಲಿದ್ದು, ಮಮತಾ ಗಟ್ಟಿಯವರು ಸನ್ಮಾನಕ್ಕಾಗಿ ಕಡಮಜಲು ಸುಭಾಸ್‌ ರೈಯವರಿಗೆ ಆಹ್ವಾನ ನೀಡಿದರು. ಇದೇ ವೇಳೆ ವೈಜ್ಞಾನಿಕ ಗೇರು ಕೃಷಿಯ ಬಗ್ಗೆ ಸಮಗ್ರ ಮಾಹಿತಿಯನ್ನು ನೀಡುವಂತೆಯೂ ರೈಯವರಲ್ಲಿ ಗಟ್ಟಿ ಹೇಳಿದರು.

LEAVE A REPLY

Please enter your comment!
Please enter your name here