ನಾಳೆ(ಮೇ.20) ವಿಟ್ಲದಲ್ಲಿ ರೇಷ್ಮೆ ಕೃಷಿ ಮೇಳ

0

ವಿಟ್ಲ: ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸದಲ್ಲಿ ಪ್ರಥಮ ಬಾರಿಗೆ ವಿಟ್ಲದ ಪದವಿ ಪೂರ್ವ ಕಾಲೇಜು ಸುವರ್ಣ ರಂಗಮಂದಿರದಲ್ಲಿ ಮೇ 20 ರಂದು ಜಿಲ್ಲಾ ಮಟ್ಟದ ರೇಷ್ಮೆ ಕೃಷಿ ಮೇಳ ಆಯೋಜಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ರೇಷ್ಮೆ ಇಲಾಖೆ ಹಾಗೂಭಾರತ ಕೃಷಿ ಅಭಿವೃದ್ಧಿ ಸಂಸ್ಥೆ, ಕೇಂದ್ರ ಕಛೇರಿ ವಿಟ್ಲ ಇವುಗಳ ಸಂಯುಕ್ತಾಶ್ರಯದಲ್ಲಿ ಈ ಮೇಳ ಆಯೋಜನೆಗೊಂಡಿದೆ.


ಬೆಳಗ್ಗೆ 10 ಗಂಟೆಗೆ ಕರ್ನಾಟಕ ಸರ್ಕಾರದ ರೇಷ್ಮೆ ಇಲಾಖೆ ಮತ್ತು ಪಶುಸಂಗೋಪನೆ ಸಚಿವ ಕೆ. ವೆಂಕಟೇಶ್ ಉದ್ಘಾಟಿಸಲಿರುವ ಈ ಮೇಳ ಸಂಜೆ 5 ಗಂಟೆ ವರೆಗೆ ಇರಲಿದೆ. ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್, ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ಕುಮಾ‌ರ್ ರೈ, ರೇಷ್ಮೆ ಕೃಷಿ ಅಭಿವೃದ್ಧಿ ಆಯುಕ್ತ ಮತ್ತು ರೇಷ್ಮೆ ನಿರ್ದೇಶಕಿ ಶಿಲ್ಪಾನಾಗ್ ಸಿ.ಟಿ. (ಭಾ.ಆ.ಸೇ), ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ನವೀನ್ ವಿನಾಯಕ್ ಕಾರ್ಭಾರಿ (ಐ.ಎ.ಎಸ್.) ಎನ್‌ಆರ್‌ಎಲ್‌ಎಂ ಯೋಜನಾಧಿಕಾರಿ ಕೆ.ಇ.ಜಯರಾಮ, ಸಿಪಿಸಿಆರ್‌ಐ ಕಾಸರಗೋಡು ನಿರ್ದೇಶಕ ಡಾ.ಬಾಲಚಂದ್ರ ಹೆಬ್ಬಾರ್, ಸಿಪಿಸಿಆರ್‌ಐ ವಿಟ್ಲ ಮುಖ್ಯಸ್ಥ ಡಾ.ರಾಜೇಶ್, ಡಿಸಿಆರ್‌ಎನ್‌ಆರ್‌ಸಿಸಿ ಪುತ್ತೂರು ಮುಖ್ಯಸ್ಥ ಡಾ.ದಿನಕರ್ ಅಡಿಗ, ಮಂಗಳೂರು ಕೇಂದ್ರೀಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ರಮೇಶ್, ಜಿಲ್ಲಾ ರೇಷ್ಮೆ ಇಲಾಖೆ ಸಹ ನಿರ್ದೇಶಕ ದೇವೇಂದ್ರ ಕುಮಾರ್, ಎಂಎಸ್‌ಎಂಇ ಡಿಎಫ್‌ಒ ಸಹ ನಿರ್ದೇಶಕಿ ಶೃತಿ ಜಿ.ಕೆ., ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ಕರುಣಾಕರ್ ನಾಯೊಟು, ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.


ಎಂ ಪ್ರಸಾದ್ ಶೆಟ್ಟಿ ಅವರ ನೇತೃತ್ವದಲ್ಲಿ ಸಂಘಟಿಸಲಾಗುತ್ತಿರುವ ಈ ಮೇಳದಲ್ಲಿ ರೇಷ್ಮೆ ಕೃಷಿಯಲ್ಲಿ ಉತ್ತಮ ಅನುಭವ ಹೊಂದಿರುವ ಮಮತಾ ರೈ ದೇವಸ್ಯ ಹಾಗೂ ಮಿಶ್ರ ಕೃಷಿಯಲ್ಲಿ ಉತ್ತಮ ಅನುಭವ ಹೊಂದಿರುವ ಕೃಷಿಕ ನವೀನ್ ಚಾತುಬಾಯ್ ಸುಳ್ಯ ಅವರನ್ನು ಸನ್ಮಾನಿಸಲಾಗುತ್ತಿದೆ.


ಜಿಲ್ಲೆಯಲ್ಲಿ ರೇಷ್ಮೆ ಕೃಷಿಗೆ ಉತ್ತೇಜನ ನೀಡಲು, ನೂತನ ತಂತ್ರಜ್ಞಾನ, ರೋಗ ನಿರ್ವಹಣೆ, ಮಾರುಕಟ್ಟೆ ವ್ಯವಸ್ಥೆ, ಸಬ್ಸಿಡಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯಲು ಈ ರೇಷ್ಮೆ ಮೇಳ ಅನುಕೂಲವಾಗಲಿದೆ. ಅಲ್ಲದೆ, ವಿವಿಧ ಮಳಿಗೆಗಳಿಗೆ ಭೇಟಿ ನೀಡಿ ಖುದ್ದು ಮಾಹಿತಿ ಪಡೆಯಬಹುದಾಗಿದೆ. ತಾಂತ್ರಿಕ ವಿಚಾರಸಂಕಿರಣಗಳನ್ನೂ ಆಯೋಜಿಸಲಾಗಿದ್ದು, ಆಸಕ್ತರು ಇದರಸದುಪಯೋಗ ಪಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ 9663420541, 7618770541 ಸಂಪರ್ಕಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here