ಪುತ್ತೂರು: ಅಕ್ರಮ ಗೋಸಾಗಾಟ ಮಾಹಿತಿ ಸಿಕ್ಕ ಮೇಲೂ ಗೋವುಗಳನ್ನು ರಕ್ಷಿಸಲು ಪೊಲೀಸರು ವಿಫಲವಾದರೆ ಪ್ರತಿಭಟನೆ – ವಿಹಿಂಪ ಬಜರಂಗದಳ ಎಚ್ಚರಿಕೆ

0

ಪುತ್ತೂರು: ಕರ್ನಾಟಕ ರಾಜ್ಯದಲ್ಲಿ ಗೋ ಹತ್ಯೆ, ಅಕ್ರಮ ಸಾಗಾಟ, ಹಿಂಸೆ ಮತ್ತು ಬಲಿ ಸಂಪೂರ್ಣ ನಿಷೇಧಿಸಲ್ಪಟ್ಟಿದೆ ಹಾಗಾಗಿ ಗೋ ಸಂಬಂಧಿ ಅಪರಾಧಗಳು ಕಂಡು ಬಂದಲ್ಲಿ ಸಾರ್ವಜನಿಕರು ತಕ್ಷಣ 112ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿ ಮತ್ತು ಸ್ಥಳೀಯ ವಿಶ್ವಹಿಂದು ಪರಿಷತ್ ಬಜರಂಗದಳದ ಕಾರ್ಯಕರ್ತರನ್ನೂ ಸಂಪರ್ಕಿಸಿ, ಮಾಹಿತಿ ಸಿಕ್ಕಮೇಲೂ ಪೊಲೀಸರು ಗೋವುಗಳನ್ನು ರಕ್ಷಿಸಲು ವಿಫಲವಾದರೆ ಅವರ ವಿರುದ್ಧ ಪ್ರತಿಭಟನೆ ಮತ್ತು ನ್ಯಾಯಾಲಯದಲ್ಲಿ ಸೂಕ್ತ ದಾವೆ ಹೂಡಲಾಗುವುದು ಎಂದು ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ಎಚ್ಚರಿಕೆ ನೀಡಿದೆ.


ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಗೋ ಹತ್ಯೆ ನಡೆಸಿದ ಸ್ಥಳವನ್ನು ಸರಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂಬ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಆದರೆ ಇವತ್ತು ಕಾನೂನು ಇದ್ದರೂ ಅದನ್ನು ಉಲ್ಲಂಘನೆ ಮಾಡಿ ಅಕ್ರಮ ಗೋ ಸಾಗಾಟ ನಡೆಯುತ್ತಿದೆ. ಹಾಗಾಗಿ ಪೊಲೀಸರು ತಮ್ಮ ಪೂರ್ಣ ಅಧಿಕಾರ ಬಳಸಿಕೊಂಡು ಗೋ ಹತ್ಯೆ ತಡೆಯಬೇಕು. ನಿರ್ಲಕ್ಷ್ಯ ವಹಿಸುವ ಬೀಟ್ ಪೊಲೀಸರನ್ನು ತಕ್ಷಣ ಸಸ್ಪೆಂಡ್ ಮಾಡಿ ಇಲಾಖೆ ತನಿಖೆ ನಡೆಸಬೇಕು. ಹೆಚ್ಚುವರಿ ಪೊಲೀಸ್ ಅಥವಾ ಮೀಸಲು ಪೊಲೀಸ್ ಪಡೆಯನ್ನು ನಿಯೋಜಿಸಬೇಕು. ಮೇ.28ರ ತನಕ ಯಾವುದೇ ವಾಹನದಲ್ಲಿ ಅಕ್ರಮ ಗೋಸಾಗಟ ಆಗದಂತೆ ವಿಶೇಷ ಬಂದೋಬಸ್ತ್ ಒದಗಿಸಬೇಕು. ಅಕ್ರಮ ಗೋಸಾಗಾಟದ ವಾಹನ ಮಾಲಿಕರನ್ನು ಬಂಧಿಸಬೇಕು ಎಂದ ಅವರು ಸಾರ್ವಜನಿಕರು ಗೋಹತ್ಯೆ / ಹಿಂಸೆ ನಡೆಯುವುದನ್ನು ಕಂಡರೆ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ(ಬಿಎನ್‌ಎಸ್) ಕಾಯ್ದೆಯಂತೆ 40ರ ಪ್ರಕಾರ ಅಪರಾಧಿಯನ್ನು ತಾವೆ ಬಂಧಿಸಿ ತಡಮಾಡದೆ ಗರಿಷ್ಠ 6 ಗಂಟೆಯೊಳಗೆ ಪೊಲೀಸರಿಗೆ ಹಸ್ತಾಂತರಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಕುರಿತು ಪೊಲೀಸರು ಜಾಗೃತಿ ಮೂಡಿಸಬೇಕು. ಹಳ್ಳಿಗಳಲ್ಲಿ ಗ್ರಾಮ ಗೋರಕ್ಷದಳ ರಚಿಸಲು ಬಜರಂಗದಳ ಸಹಕರಿಸುತ್ತದೆ ಎಂದರು.

ಗೋ ಅಪರಾಧಗಳು ಕಂಡು ಬಂದಲ್ಲಿ ತಕ್ಷಣ 112ಗೆ ಕರೆ ಮಾಡಿ ಜೊತೆಗೆ ಸ್ಥಳೀಯ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳದವರನ್ನು ಸಂಪರ್ಕಿಸಿ. ಮಾಹಿತಿ ಸಿಕ್ಕ ಮೇಲೂ ಪೊಲೀಸರು ಗೋವುಗಳನ್ನು ರಕ್ಷಿಸುವಲ್ಲಿ ವಿಫಲರಾದರೆ ಅವರ ವಿರುದ್ಧ ಪ್ರತಿಭಟನೆ ಮತ್ತು ಕೋರ್ಟ್‌ನಲ್ಲಿ ದಾವೆ ಹೂಡಲಾಗುವುದು ಎಂದು ಅವರು ಎಚ್ಚರಿಸಿದರು. ಪತ್ರಿಕಾಗೋಷ್ಟಿಯಲ್ಲಿ ವಿಶ್ವಹಿಂದು ಪರಿಷತ್ ಪುತ್ತೂರು ಜಿಲ್ಲಾ ಕಾರ್ಯದರ್ಶಿ ನವೀನ್ ನೆರಿಯ, ಜಿಲ್ಲಾ ಕೋಶಾಧಿಕಾರಿ ಮಾಧವ ಪೂಜಾರಿ, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ, ಬಜರಂಗದಳ ಜಿಲ್ಲಾ ಸಹ ಸಂಯೋಜಕ ದಿನೇಶ್ ಚಾರ್ಮಾಡಿ, ಜಿಲ್ಲಾ ಸಹಸಂಯೋಜಕ ಸಂತೋಷ್ ಉಪ್ಪಿನಂಗಡಿ ಉಪಸ್ಥಿತಿದ್ದರು.

ವಿದ್ಯಾರ್ಥಿಗಳು ಕೇಸರಿ ಶಲ್ಯ ಹಾಕಿದರೆ ಬೆಂಬಲ
ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸುವ ಅವಕಾಸ ನೀಡಿದ ರಾಜ್ಯ ಸರಕಾರದ ಶಿಕ್ಷಣ ಇಲಾಖೆಯ ಕಾರ್ಯವೈಖರಿ ವಿವೇಚನಾರಹಿತ ಮತ್ತು ತುಷ್ಟೀಕರಣದಿಂದ ಹೇಳಿ ಮಾಡಿಸಿದಂತಿದೆ. ನ್ಯಾಯಾಲಯದಲ್ಲಿ ಇನ್ನೂ ಇದರ ಕುರಿತು ಯಾವುದೇ ಅಂತಿಮ ತೀರ್ಪು ಹೊರ ಬಂದಿಲ್ಲ. ಅದಕ್ಕೂ ಮುಂದೆಯೇ ರಾಜ್ಯ ಸರಕಾರ ಶಿಕ್ಷಣ ಇಲಾಖೆಯನ್ನು ಒಲೈಕೆ ರಾಜಕಾರಣಕ್ಕೆ ಬಳಸಿಕೊಂಡರುವುದು ತುಷ್ಟೀಕರಣದ ಕೆಟ್ಟ ಉದಾಹರಣೆ. ಇದು ವಿದ್ಯಾರ್ಥಿಗಳಲ್ಲಿ ಒಡಕುಮೂಡಿಸಿ ರಾಜ್ಯದಲ್ಲಿ ಅಶಾಂತಿಯನ್ನು ತರುವ ಹುನ್ನಾರವಾಗಿದೆ. ಹಾಗಾಗಿ ಹಿಂದು ವಿದ್ಯಾರ್ಥಿಗಳು ಕೇಸರಿ ಶಲ್ಯ ತೊಟ್ಟು ಬರುವ ಕುರಿತು ವಿದ್ಯಾರ್ಥಿ ಸಂಘಟನೆ ನಿರ್ಧಾರ ಮಾಡಿದರೆ ಅದಕ್ಕೆ ವಿಶ್ವಹಿಂದು ಪರಿಷತ್ ಮತ್ತು ಬಜರಂಗಳದಿಂದ ಬೆಂಬಲ ನೀಡಲಿದ್ದೇವೆ ಎಂದು ವಿಶ್ವಹಿಂದು ಪರಿಷತ್ ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ತಿಳಿಸಿದರು.

LEAVE A REPLY

Please enter your comment!
Please enter your name here