






ಉಪ್ಪಿನಂಗಡಿ: ಹೋರಿ ಹಾಯ್ದು ಚಿಕಿತ್ಸೆಯಲ್ಲಿದ್ದ ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ನಿವಾಸಿ ಮಹಮ್ಮದ್ ಶರೀಫ್ ಪಿ. (35) ಎಂಬವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದು, ಇವರ ಸಾವಿಗೆ ಉಪ್ಪಿನಂಗಡಿಯ ಸೂರ್ಯ ಆಸ್ಪತ್ರೆಯ ವೈದ್ಯರು ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡಿದ್ದೇ ಕಾರಣವೆಂದು ಅವರ ಸಹೋದರ ನಾಸಿರುದ್ದೀನ್ ಪಿ. ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ.



ಮೇ.14ರಂದು ರಾತ್ರಿ ಮನೆಯಲ್ಲಿದ್ದ ಹೋರಿ ಹಾಯ್ದು ಮಹಮ್ಮದ್ ಶರೀಫ್ ಪಿ. ಅವರು ಗಾಯಗೊಂಡಿದ್ದರು. ತಕ್ಷಣ ಅವರನ್ನು ಚಿಕಿತ್ಸೆಗಾಗಿ ಉಪ್ಪಿನಂಗಡಿಯ ಸೂರ್ಯ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಬಗ್ಗೆ ಮಹಮ್ಮದ್ ಶರೀಫ್ ಪಿ. ಅವರ ಸಹೋದರ ನಾಸೀರುದ್ದೀನ್ ಪಿ. ಯವರು, ಸೂರ್ಯ ಆಸ್ಪತ್ರೆಯ ವೈದ್ಯರು ತನ್ನ ಸಹೋದರನಿಗೆ ನಿರ್ಲಕ್ಷ್ಯದಿಂದ ಚಿಕಿತ್ಸೆ ನೀಡಿದ ಕಾರಣ ಮಹಮ್ಮದ್ ಶರೀಫ್ ಅವರ ಆರೋಗ್ಯ ಹದಗೆಟ್ಟಿದ್ದು, ಅವರನ್ನು ಮೇ.16ರಂದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೇ.20ರಂದು ಮೃತಪಟ್ಟಿರುತ್ತಾರೆ. ಇವರ ಸಾವಿಗೆ ಸೂರ್ಯ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಚಿಕಿತ್ಸೆಯೇ ಕಾರಣ ಎಂದು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ , ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ : 28/2026, ಕಲಂ: 194(3) (iv) ಬಿ.ಎನ್.ಎಸ್,ಎಸ್ 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.



ವೈದ್ಯಕೀಯ ತಂಡ ರಚನೆಗೆ ಪತ್ರ ವ್ಯವಹಾರ: ಈ ಪ್ರಕರಣದಲ್ಲಿ ವೈದ್ಯರ ನಿರ್ಲಕ್ಷ್ಯದ ಆರೋಪಗಳನ್ನು ಪರಿಶೀಲಿಸಿ ವರದಿ ನೀಡುವ ಸಲುವಾಗಿ ವೈದ್ಯಕೀಯ ತಂಡವನ್ನು ರಚಿಸುವಂತೆ ಸಂಬಂಧಪಟ್ಟ ಇಲಾಖೆಯೊಂದಿಗೆ ಪತ್ರ ವ್ಯವಹಾರ ನಡೆಸಲಾಗಿದ್ದು, ವರದಿ ಬಂದ ಬಳಿಕ ಸೂಕ್ತ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಆರೋಪದಲ್ಲಿ ಹುರುಳಿಲ್ಲ: ಡಾ. ರಾಜೇಶ್
ಮಹಮ್ಮದ್ ಶರೀಫ್ ಅವರು ನಮ್ಮ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ಚಿಕಿತ್ಸೆಯಿಂದ ಸಾವನ್ನಪ್ಪಿದ್ದಾರೆ ಎಂಬ ಆರೋಪದಲ್ಲಿ ಹುರುಳಿಲ್ಲ. ಇದು ವೈದ್ಯರ ನಿರ್ಲಕ್ಷ್ಯದಿಂದ ಆಗಿದ್ದು ಅಲ್ಲ ಎಂದು ಸೂರ್ಯ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ರಾಜೇಶ್ ತಿಳಿಸಿದ್ದಾರೆ.
ಈ ಆರೋಪದ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಮಹಮ್ಮದ್ ಶರೀಫ್ ಅವರನ್ನು ಮೇ 14ರ ರಾತ್ರಿ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಮೊದಲಿಗೆ ಕರು ಗುದ್ದಿದೆ. ಆದ್ದರಿಂದ ಹೊಟ್ಟೆನೋವು ಇದೆ ಅಂದರು. ಬಳಿಕ ಹೋರಿ ಅಂದರು. ಹೊಟ್ಟೆನೋವಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಆದರೂ ನಾನು ಹೊಟ್ಟೆಯ ಸ್ಕ್ಯಾನಿಂಗ್ ಆಗಬೇಕು ಅಂದೆ. ರಾತ್ರಿ 1 ಗಂಟೆಗೆ ಉಪ್ಪಿನಂಗಡಿ ಹಾಗೂ ಪುತ್ತೂರಿನಲ್ಲಿ ಸ್ಕ್ಯಾನಿಂಗ್ ಸೌಲಭ್ಯಗಳಿಲ್ಲ. ಅದಕ್ಕೆ ಅವರನ್ನು ಮಂಗಳೂರಿಗೆ ತೆರಳಲು ಹೇಳಿದ್ದೆ. ಅವರು ರಾತ್ರಿ 2.30ರ ಸುಮಾರಿಗೆ ಮಂಗಳೂರಿಗೆ ತೆರಳಿ ಅಲ್ಲಿ ಸ್ಕ್ಯಾನಿಂಗ್ ಮಾಡಿಸಿದ್ದಾರೆ. ಅಲ್ಲಿನ ಆಸ್ಪತ್ರೆಯವರು ಇವರನ್ನು ಅಡ್ಮಿಷನ್ ಆಗಲು ಹೇಳಿದ್ದಾರಂತೆ. ಆದರೆ ಅವರು ಅಲ್ಲಿ ಅಡ್ಮಿಷನ್ ಆಗದೇ ನೇರವಾಗಿ ಅವರ ಮನೆಗೆ ಬಂದಿದ್ದಾರೆ. ಅಲ್ಲಿಯೂ ಕೂಡಾ ಅವರು ಸ್ಥಳೀಯ ವೈದ್ಯರಲ್ಲಿ ಹೊಟ್ಟೆನೋವಿಗೆ, ಗ್ಯಾಸ್ಸ್ಟ್ರಿಕ್ ಹಾಗೂ ಮಲಬದ್ಧತೆಗೆ ಔಷಧಿ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿಯಿದೆ. ಮತ್ತೆ ಮೇ.15ರ ರಾತ್ರಿ ನಮ್ಮ ಸೂರ್ಯ ಆಸ್ಪತ್ರೆಗೆ ಬಂದಿದ್ದಾರೆ. ಅವರ ಸ್ಕ್ಯಾನಿಂಗ್ ರಿಪೋರ್ಟ್ ಪರಿಶೀಲಿಸಿದಾಗ ಅದರಲ್ಲಿ ಕಿಡ್ನಿ ಸ್ಟೋನ್ ಅಂತ ಇತ್ತು. ಅವರು ಕೂಡಾ ಹೊಟ್ಟೆ ಉಬ್ಬರನೂ ಇದೆ. ನಾಲ್ಕು ದಿನದಿಂದಲೂ ಮಲವಿಸರ್ಜನೆ ಆಗಿಲ್ಲ. ಎರಡು ಡ್ರಿಪ್ ಇಟ್ಟುಕೊಂಡು ಹೋಗುತ್ತೇವೆ ಎಂದಿದ್ದಾರೆ. ರೋಗಿಗೆ ಡ್ರಿಪ್ ಹಾಗೂ ಎನಿಮಾ ಹಾಕಲಾಗಿದೆ. ಬಳಿಕ ನಾನು ರಕ್ತ ಪರೀಕ್ಷೆ ಮಾಡಬೇಕು ಎಂದಿದ್ದೆ. ರಕ್ತ ಪರೀಕ್ಷೆ ಮಾಡಿಸಿ ಅವರು ಈಗ ಹೊಟ್ಟೆ ನೋವು ಕಡಿಮೆ ಆಗಿದೆ. ಮಲ ವಿಸರ್ಜನೆಯೂ ಆಗಿದೆ. ನಾವು ಮನೆಗೆ ಹೋಗುತ್ತೇವೆ ಎಂದಿದ್ದಾರೆ. ಆಗ ಒಂದು ಡ್ರಿಪ್ ಮಾತ್ರ ಮುಗಿದಿತ್ತು. ಇನ್ನೊಂದು ಡ್ರಿಪ್ ಮುಗಿದ ಮೇಲೆ ಹೋಗುತ್ತೇನೆ ಎಂದಿದ್ದರು. ರಾತ್ರಿ ನಾನು ರೌಂಡ್ಸ್ಗೆ ತೆರಳಿದಾಗ ಅವರಿಗೆ ಸ್ವಲ್ಪ ಹೊಟ್ಟೆ ನೋವು ಇತ್ತು. ಆಗ ರಕ್ತ ಪರೀಕ್ಷೆಯ ವರದಿನೂ ಬಂದಿತ್ತು. ಅದನ್ನು ನೋಡುವಾಗ ರೋಗಿಗೆ ಸೀರಿಯಸ್ ಸೋಂಕು ಇರುವುದು, 16 ಸಾವಿರ ಕೌಂಟ್ ಇರುವುದು ಕಂಡು ಬಂತು. ಆಗ ನಾನು ಅವರಿಗೆ ಹೇಳಿದೆ ನೀವು ತಕ್ಷಣ ಸೀಟಿ ಸ್ಕ್ಯಾನ್ ಮಾಡಿಸಬೇಕು ಅಂತ. ರೋಗಿಗೆ ಕಿಡ್ನಿಯಲ್ಲಿ ಅಥವಾ ದೊಡ್ಡ ಕರುಳು ಅಥವಾ ಸಣ್ಣ ಕರುಳಿನಲ್ಲಿ ಸೋಂಕು ಆಗಿರಬಹುದು ಎಂದಿದ್ದೆ. ಒಮ್ಮೆ ಸ್ಕ್ಯಾನಿಂಗ್ ಮಾಡಿಸಿದ ನಂತರ ಮತ್ತೊಂದು ಸ್ಕ್ಯಾನಿಂಗ್ ಯಾಕೆ? ಈಗ ನೋವು ಸ್ವಲ್ಪ ಕಮ್ಮಿ ಉಂಟು. ಒಂದು ಡ್ರಿಪ್ ಹಾಕಿ ಹೋಗುತ್ತೇವೆ ಅಂದರು. ಆಗ ನಾನು ಇಲ್ಲ ರೋಗಿಯನ್ನು ಅಡ್ಮಿಷನ್ ಮಾಡಿಸಬೇಕು. ಅವರು ವೈದ್ಯರ ಅಬ್ಸರ್ವೇಷನ್ನಲ್ಲಿರಬೇಕು. ಸೀಟಿ ಸ್ಕ್ಯಾನಿಂಗ್ ಮಾಡಿಸಲೇ ಬೇಕು ಎಂದೆ. ಆದರೆ ಅವರು ಅದಕ್ಕೆ ಒಪ್ಪಲಿಲ್ಲ. ರಾತ್ರಿ 10.30ಯಿಂದ 11ಗಂಟೆಯ ನಡುವೆ ನನಗೆ ಕಾಲ್ ಬಂತು. ನಾವು ಹೋಗುತ್ತೇವೆ ಅಂತ. ಅದಕ್ಕೆ ನಾನು ನಾವು ಯಾರನ್ನು ಇಲ್ಲಿ ಒತ್ತಾಯದಲ್ಲಿ ನಿಲ್ಲಿಸುವುದಿಲ್ಲ. ಹೋಗುವುದಾದರೆ ಹೋಗಿ ಅಂದಿದ್ದೆ. ಆದರೆ ರೋಗಿಯ ಪಾರ್ಟಿಯವರು ಯಾರೋ ಹೇಳಿದ್ದಕ್ಕೆ ಆ ದಿನ ಅವರು ಆಸ್ಪತ್ರೆಯಲ್ಲಿ ನಿಂತಿದ್ದಾರೆ. ಯಾವಾಗಲೂ ಆಸ್ಪತ್ರೆಗೆ 9 ಗಂಟೆಗೆ ಬರುವ ನಾನು ಇನ್ನೊಬ್ಬ ರೋಗಿಯ ತುರ್ತು ಚಿಕಿತ್ಸೆಗಾಗಿ ಅಂದು ಆರೂವರೆಗೆ ಆಸ್ಪತ್ರೆಗೆ ಬಂದಿದ್ದೆ. ಅವರಿಗೆ ಚಿಕಿತ್ಸೆ ನೀಡಿ ಸುಮಾರು 6.45ಕ್ಕೆ ಇವರ ಬಳಿ ಹೋಗಿ ಹೇಳಿದ್ದೆ. ನೀವು ತುರ್ತಾಗಿ ಸೀಟಿ ಸ್ಕ್ಯಾನ್ ಮಾಡಿಸಲೇ ಬೇಕು ಎಂದು. ಆದರೂ ಅವರು ಅದನ್ನು ಅವರು ಗಂಭೀರವಾಗಿ ಪರಿಗಣಿಸಲಿಲ್ಲ. ಮತ್ತೆ ಮನೆಗೆ ಹೋದ ನಾನು 9.30ಕ್ಕೆ ವಾಪಸ್ ಆಸ್ಪತ್ರೆಗೆ ಬಂದಾಗ ನರ್ಸ್ ಹೇಳಿದರು, ಅವರಿಗೆ ಸ್ವಲ್ಪ ಜ್ವರ ಬಂದ ಹಾಗೆ ಉಂಟು ಅಂತ. ಹೋಗಿ ನೋಡಿದಾಗ ಸ್ವಲ್ಪ ಜ್ವರನೂ ಇತ್ತು. ಉಸಿರಾಟದಲ್ಲಿ ತೀವ್ರತೆ ಇತ್ತು. ಹೊಟ್ಟೆ ಉಬ್ಬರಿಸಿತ್ತು. ರೋಗಿಯ ವಿಷಮ ಪರಿಸ್ಥಿತಿಯನ್ನು ಅವರೊಂದಿಗಿದ್ದವರಲ್ಲಿ ಹೇಳಿದಾಗ ಆಗ ಗಂಭೀರತೆಯನ್ನು ಅರಿತ ಅವರು ಈಗ ಪುತ್ತೂರಿಗೆ ಕರೆದುಕೊಂಡು ಹೋಗಿ ಸೀಟಿ ಸ್ಕ್ಯಾನ್ ಮಾಡಿಸಿಕೊಂಡು ಬರಬೇಕಾ ಎಂದು ಕೇಳಿದರು. ಆಗ ನಾನಂದೆ, ಇನ್ನು ಪುತ್ತೂರಿಗೆ ಹೋಗಿ ಸೀಟಿ ಸ್ಕ್ಯಾನ್ ಅಲ್ಲ. ಮಂಗಳೂರಿನ ಆಸ್ಪತ್ರೆಗೆ ಹೋಗಿ ದಾಖಲಾಗಬೇಕು ಅಂತ. ಯಾಕೆಂದರೆ ರೋಗಿಯ ಸ್ಥಿತಿ ಉಲ್ಭಣವಾದಾಗ ಅದಕ್ಕೆ ಆಧುನಿಕ ಐಸಿಯು ವ್ಯವಸ್ಥೆ ಬೇಕಾಗುತ್ತದೆ. ಇದು ನಿಜವಾಗಿ ನಡೆದ ವಿಷಯ. ಅವರು ಆರೋಪಿಸುವ ಹಾಗೆ ಎನೀಮಾದಿಂದ ತೂತಾಗಲು ಸಾಧ್ಯವಿಲ್ಲ. ಎನೀಮಾ ಎಷ್ಟಾದರೂ 2-3 ಸೆಂ.ಮೀ. ಇರುವುದು. ಆದರೆ ದೊಡ್ಡ ಕರುಳು ತೂತಾದ ಜಾಗ 12 ಸೆಂ.ಮೀ.ಗಿಂತಲೂ ಮೇಲೆ ಇದೆ. ಮಂಗಳೂರಿನಲ್ಲಿ ಅವರು ಸೀಟಿ ಸ್ಕ್ಯಾನ್ ಮಾಡಿಸಿದ್ದು, ಅದರಲ್ಲಿ ಶ್ವಾಸಕೋಶ, ಸಣ್ಣ ಕರುಳು ಹಾಗೂ ದೊಡ್ಡ ಕರುಳು ಜಜ್ಜಿ ಹೋಗಿದೆ ಎಂಬ ರಿಪೋರ್ಟ್ ಬಂದಿದೆ. ಇಲ್ಲಿ ಆ ರೋಗಿಯ ಸಾವಿಗೆ ಸೂರ್ಯ ಆಸ್ಪತ್ರೆಯಾಗಲೀ, ಅಲ್ಲಿನ ವೈದ್ಯರ ಚಿಕಿತ್ಸೆಯಲ್ಲಾದ ನಿರ್ಲಕ್ಷ್ಯವಾಗಲಿ ಕಾರಣವಲ್ಲ ಎಂದು ತಿಳಿಸಿದ್ದಾರೆ.









