






ಉಪ್ಪಿನಂಗಡಿ: ಬಿ.ಸಿ.ರೋಡ್- ಅಡ್ಡಹೊಳೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯಾರಂಭಕ್ಕೆ ಅಣಿಯಾಗಿರುವ ಟೋಲ್ಗೇಟ್ನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಾಮಫಲಕ ಹಾಕುವಾಗ ಗ್ರಾಮದ ಹೆಸರನ್ನೇ ಬದಲಾಯಿಸಿದ ಘಟನೆ ನಡೆದಿದ್ದು, ವಳಾಲು ಎಂಬ ಹೆಸರನ್ನು ವಲ್ಲಾಳ ಎಂದು ಬರೆದಿದೆ. ಇದು ಒಂದೆಡೆ ನಗೆಪಾಟಲಿಗೆ ಗುರಿಯಾದರೆ, ಇನ್ನೊಂದೆಡೆ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.


ಬಜತ್ತೂರು ಗ್ರಾಮದ ವಳಾಲು (ವಳಾಲ್) ಬಳಿ ಕಾರ್ಯಾರಂಭಕ್ಕೆ ಅಣಿಯಾಗುತ್ತಿರುವ ಟೋಲ್ಗೇಟ್ನಲ್ಲಿ ನಾಮಫಲಕ ಅಳವಡಿಸುವ ಸಂದರ್ಭ ಬಜತ್ತೂರು ಗ್ರಾಮದ ಬದಲಾಗಿ ವಲ್ಲಾಳ ಗ್ರಾಮ ಎಂದು ಬರೆಯಲಾಗಿದೆ. ಮೂಲವಾಗಿ ಇದು ಬಜತ್ತೂರು ಗ್ರಾಮದ ವಳಾಲು (ವಳಾಲ್) ಎಂದಾಗಬೇಕಿತ್ತು. ಆದರೆ ವಳಾಲು ಇದ್ದ ಹೆಸರನ್ನು ವಲ್ಲಾಳ ಎಂದು ಮಾಡಿದೆ. ಹಿಂದಿಯಲ್ಲಿ ಕೂಡಾ ವಲ್ಲಾಳ ಎಂದೇ ಬರೆಯಲಾಗಿದ್ದು, ಇಂಗ್ಲೀಷ್ನಲ್ಲಿ ವಲ್ಲಾಳ್ ಗ್ರಾಮ ಎಂದು ಬರೆಯಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ಅಕ್ಷರ ದೋಷಕ್ಕೆ ಸ್ಥಳೀಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಇದನ್ನು ಸರಿಪಡಿಸಿ ಮೂಲ ಹೆಸರನ್ನು ಬರೆಯಬೇಕು ಎಂದು ಆಗ್ರಹಿಸಿದ್ದಾರೆ.













