







ಪುತ್ತೂರು: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಯಾರು ಕಣಕ್ಕಿಳಿಯಲಿದ್ದಾರೆ ಎಂಬ ಚರ್ಚೆ ಸ್ವಲ್ಪ ತಣ್ಣಗಾಗಿರುವ ಬೆನ್ನಲ್ಲಿಯೇ ಮತ್ತೆ ಕೆಲವರ ಹೆಸರು ಕೇಳಿ ಬರಲಾರಂಭಿಸಿದೆ.


ಬಾಲ್ಯೊಟ್ಟು, ಸಾಜ ಹೆಸರು
ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸಮರ್ಥವಾಗಿ ಎದುರಿಸಬಹುದಾದ ಬಿಜೆಪಿ ಅಭ್ಯರ್ಥಿ ಯಾರಾಗಬಹುದು ಎಂದು ಭಾರೀ ಚರ್ಚೆ ನಡೆಯುತ್ತಿತ್ತು. ಹೈಕೋರ್ಟ್ ಹಿರಿಯ ನ್ಯಾಯವಾದಿ ಡಾ| ಅರುಣ್ ಶ್ಯಾಮ್ ಸಹಿತ ಹಲವರ ಹೆಸರು ಬಿಜೆಪಿಯಿಂದ ಕೇಳಿ ಬರುತ್ತಿತ್ತು. ಪುತ್ತಿಲ ಪರಿವಾರದ ಸಂಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರ ಬಂಡಾಯ ಸ್ಪರ್ಧೆಗೆ ಕಡಿವಾಣ ಹಾಕಬೇಕಾದರೆ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲೇ ಬೇಕು ಎಂದು ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಹೀಗಾಗಿ ದಿನಕ್ಕೊಬ್ಬರ ಹೆಸರು ಕೇಳಿ ಬರುತ್ತಿತ್ತು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಚಾರವಾಗುತ್ತಿತ್ತು. ಆದರೆ ಮೇ.19ರಂದು ಸುದ್ದಿ ಬಿಡುಗಡೆ ಪತ್ರಿಕೆಯಲ್ಲಿ ಯಾವ ಅಭ್ಯರ್ಥಿಯ ಹೆಸರೂ ಅಂತಿಮವಾಗಿಲ್ಲ-ಯಾರ ಹೆಸರೂ ಅಧಿಕೃತ ಚರ್ಚೆಯೇ ಆಗಿಲ್ಲ ಎಂದು ವಿಶೇಷ ವರದಿ ಪ್ರಕಟವಾದ ಬಳಿಕ ಅಭ್ಯರ್ಥಿಗಳ ಆಯ್ಕೆಯ ವಿಚಾರದ ಚರ್ಚೆಗೆ ಬ್ರೇಕ್ ಬಿದ್ದಿತ್ತು. ಇದೀಗ ಮತ್ತೆ ಈ ಚರ್ಚೆ ಮುನ್ನಲೆಗೆ ಬರುತ್ತಿದೆ. ಪುತ್ತೂರು ಕ್ಷೇತ್ರ ಮಹಿಳೆಯರಿಗೆ ಮೀಸಲಾದರೆ ಅವರಂತೆ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಮೀಸಲಾದರೆ ಇವರಂತೆ ಎಂದು ಅವರವರಿಗೆ ಇಷ್ಟವಾದವರ ಹೆಸರು ಕೇಳಿ ಬರುತ್ತಿದೆ. ಆದರೆ ರಾಜಕೀಯ ಪಕ್ಷಗಳು ಮತಗಳನ್ನು ಬಾಚಿಕೊಳ್ಳುವುದಕ್ಕಾಗಿ ಅಳೆದು ತೂಗಿ ಸಮರ್ಥ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದೆ. ಹಾಗಾಗಿ ಯಥಾ ಸ್ಥಿತಿ ಮುಂದುವರಿದು ಕಾಂಗ್ರೆಸ್ ಪಕ್ಷದಿಂದ ಅಶೋಕ್ ರೈ ಅವರೇ ಕಣಕ್ಕಿಳಿಯುವುದಾದರೆ ಅವರ ಬಂಟ ಸಮುದಾಯದವರನ್ನೇ ಕಣಕ್ಕಿಳಿಸಬೇಕು ಎಂಬ ಅಭಿಪ್ರಾಯವೂ ಕೇಳಿ ಬರ ತೊಡಗಿದೆ. ಆ ಪೈಕಿ ಎಸ್.ಸಿ. ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ, ಸಹಕಾರಿ ಯೂನಿಯನ್ ಜಿಲ್ಲಾಧ್ಯಕ್ಷರೂ ಆಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು ಮತ್ತು ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರೂ ಆಗಿರುವ ಸಾಜ ರಾಧಾಕೃಷ್ಣ ಆಳ್ವ ಅವರ ಹೆಸರು ಕೇಳಿ ಬರುತ್ತಿದೆ. ಪಕ್ಷಾತೀತವಾಗಿ, ಜಾತ್ಯಾತೀತವಾಗಿ ಗುರುತಿಸಿಕೊಂಡಿರುವ ಬಾಲ್ಯೊಟ್ಟು ಅಥವಾ ಸಾಜ ಕಣಕ್ಕಿಳಿದರೆ ಬಿಜೆಪಿ ಭದ್ರಕೋಟೆಯನ್ನು ಉಳಿಸಿಕೊಳ್ಳಬಹುದು ಎಂದು ಅಭಿಪ್ರಾಯ ಕೇಳಿ ಬಂದಿದೆ. ಈ ಮಧ್ಯೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರೊಂದಿಗೆ ಬಲವಾಗಿ ನಿಂತಿದ್ದ ಡಾ. ಸುರೇಶ್ ಪುತ್ತೂರಾಯ ಅವರಿಗೆ ಬಿಜೆಪಿ ಅವಕಾಶ ನೀಡಿದರೆ ಅರುಣ್ ಪುತ್ತಿಲರ ಬಂಡಾಯವೂ ಶಮನವಾಗುತ್ತದೆ ಜತೆಗೆ ಬಿಜೆಪಿಗೆ ಸಮರ್ಥ ವ್ಯಕ್ತಿಯೂ ಸಿಕ್ಕಿದಂತಾಗುತ್ತದೆ ಎಂದೂ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ ಚುನಾವಣೆಗೆ ಇನ್ನೂ ಬಹಳಷ್ಟು ಸಮಯ ಇರುವುದರಿಂದ ಬಿಜೆಪಿ ಹೈಕಮಾಂಡ್ ಸದ್ಯಕ್ಕೆ ಈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದು ಪಕ್ಷದ ಮೂಲಗಳಿಂದ ತಿಳಿದು ಬಂದಿದೆ.



ಖ್ಯಾತ ವಕೀಲರ ಬೆಂಬಲ-ಸ್ಪಷ್ಟನೆ
ಮಾಜಿ ಸಂಸದ, ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ಮತ್ತು ಹಲವು ದೇವಸ್ಥಾನಗಳ ಬ್ರಹ್ಮಕಲಶೋತ್ಸವದ ಮುಂಚೂಣಿಯಲ್ಲಿರುವವರೂ ಆಗಿರುವ ನಳಿನ್ ಕುಮಾರ್ ಕಟೀಲ್ ಅವರ ಹೆಸರು ಬಿಜೆಪಿಯಲ್ಲಿ ಕೇಳಿ ಬರುತ್ತಿದೆ ಮತ್ತು ನಳಿನ್ ಅವರಿಗೆ ಟಿಕೆಟ್ ಕೊಡಿಸಲು ಖ್ಯಾತ ವಕೀಲರೋರ್ವರು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ ಎಂಬುದಾಗಿ ಮೇ.19ರ ಸುದ್ದಿ ಬಿಡುಗಡೆಯ ವಿಶೇಷ ವರದಿಯಲ್ಲಿ ಪ್ರಕಟವಾಗಿರುವುದು ಭಾರೀ ಚರ್ಚೆಗೆ ಗ್ರಾಸ ಒದಗಿಸಿದೆ. ನಳಿನ್ ಅವರನ್ನು ಬೆಂಬಲಿಸುತ್ತಿರುವ ಖ್ಯಾತ ವಕೀಲರು ಯಾರು ಎಂದು ಕುತೂಹಲ ಮೂಡಿಸಿದೆ ಎಂದು ಹಲವರು ವಿಚಾರಿಸಿದ್ದಾರೆ. ನಳಿನ್ ಕುಮಾರ್ ಅವರು ಸತತ ಮೂರು ಬಾರಿ ಸಂಸದರಾಗಿ, ಪಕ್ಷದ ರಾಜ್ಯಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿರುವ ಪ್ರಭಾವಿ ಮುಖಂಡ ಆಗಿರುವುದರಿಂದ ಅವರಿಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸಲು ವಕೀಲರೂ ಪ್ರಯತ್ನಿಸುತ್ತಿದ್ದಾರೆ ಎಂಬ ಅರ್ಥದಲ್ಲಿ ಅಂದಿನ ವರದಿಯಲ್ಲಿ ಉಲ್ಲೇಖಿಸಲಾಗಿದೆಯೇ ಹೊರತು ಯಾವುದೇ ನಿರ್ದಿಷ್ಟ ವಕೀಲರನ್ನು ಉಲ್ಲೇಖಿಸಿ ವರದಿ ಪ್ರಕಟಿಸಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ.










