







ನೆಲ್ಯಾಡಿ: ಐದು ದಿನದ ಹಿಂದೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ನಂಜರಾಯಪಟ್ಟಣದ ಪ್ರಸಿದ್ಧ ದುಬಾರೆ ಆನೆ ಶಿಬಿರದಲ್ಲಿ ಸಹ ಆನೆ ’ಮಾರ್ತಾಂಡ’ ಹಾಗೂ ಮಹಿಳೆಯೊಬ್ಬರ ಸಾವಿಗೆ ಕಾರಣವಾಗಿ ಸುದ್ದಿಯಲ್ಲಿರುವ ಕಂಜನ್ ಆನೆ ಮೂರು ವರ್ಷದ ಹಿಂದೆ ಕಡಬಕ್ಕೂ ಆಗಮಿಸಿತ್ತು. ಕಡಬ ಸಮೀಪದ ರೆಂಜಿಲಾಡಿಯಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡಿದ್ದ ಕಾಡಾನೆಯೊಂದರ ಸೆರೆ ಕಾರ್ಯಾಚರಣೆಗೆ ದುಬಾರೆ ಆನೆ ಶಿಬಿರದಿಂದ ಕಂಜನ್ ಆನೆ ಸಹಿತ 5 ಆನೆಗಳನ್ನು ಕರೆಸಿಕೊಳ್ಳಲಾಗಿತ್ತು.


2023ರ ಫೆ.20ರಂದು ಬೆಳ್ಳಂಬೆಳಿಗ್ಗೆ ರೆಂಜಿಲಾಡಿ ಗ್ರಾಮದ ಮೀನಾಡಿ ಸಮೀಪ ನಡೆದ ಆನೆ ದಾಳಿಗೆ ರೆಂಜಿಲಾಡಿ ಗ್ರಾಮದ ನೈಲ ನಿವಾಸಿ, ಪೇರಡ್ಕ ಹಾಲು ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ರಂಜಿತಾ ರೈ(22ವ.)ಹಾಗೂ ನೈಲ ನಿವಾಸಿ ದಿ.ತಿಮ್ಮಪ್ಪ ಶೆಟ್ಟಿ ಎಂಬವರ ಪುತ್ರ ರಮೇಶ್ ರೈ(55ವ.)ಎಂಬವರು ಮೃತಪಟ್ಟಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿದ್ದ ಆಗಿನ ಜಿಲ್ಲಾಧಿಕಾರಿ ಎಂ.ಆರ್.ರವಿಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ವೈ.ಕೆ.ದಿನೇಶ್ಕುಮಾರ್ ಸಹಿತ ಹಿರಿಯ ಅಧಿಕಾರಿಗಳಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸುವಂತೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನು ಬಲಿ ಪಡೆದುಕೊಂಡಿದ್ದ ಕಾಡಾನೆ ಪತ್ತೆ ಕಾರ್ಯಾಚರಣೆ ಫೆ.21ರಂದು ಬೆಳಗ್ಗಿನಿಂದಲೇ ಆರಂಭಿಸಲಾಗಿತ್ತು.




ಕಂಜನ್ ಸಹಿತ 5 ಸಾಕಾನೆಗಳ ಬಳಕೆ;
ಕಾಡಾನೆ ಸೆರೆಗೆ ಮೈಸೂರಿನ ತಿಥಿಮತಿ ಹಾಗೂ ದುಬಾರೆಯ ಸಾಕಾನೆ ಶಿಬಿರದಿಂದ 5 ಸಾಕಾನೆಗಳನ್ನು ಆನೆಗಳ ಕ್ಷಿಪ್ರ ಕಾರ್ಯಪಡೆ ವಾಹನದ ಮೂಲಕ ಕರೆತರಲಾಗಿತ್ತು. ಇದರಲ್ಲಿ ಕಂಜನ್ ಆನೆ ಸಹ ಸೇರಿತ್ತು. ಕಂಜನ್ ಅಲ್ಲದೇ ಕಾಡಾನೆ ಸೆರೆ ಹಿಡಿಯುವುದರಲ್ಲಿ ಪಳಗಿರುವ ಅಭಿಮನ್ಯು, ಪ್ರಶಾಂತ್, ಹರ್ಷ ಹಾಗೂ ಮಹೇಂದ್ರ ಎಂಬ ಸಾಕಾನೆಗಳನ್ನು ಕರೆಸಿಕೊಂಡು ಕಾರ್ಯಾಚರಣೆ ನಡೆಸಲಾಗಿತ್ತು. ಲಾರಿ ಮೂಲಕ ಬಂದ ಈ ಸಾಕಾನೆಗಳನ್ನು ರೆಂಜಿಲಾಡಿ ಗ್ರಾಮದ ಪೇರಡ್ಕ ಬಳಿಯ ತುಂಬೆ ಅರಣ್ಯ ಪ್ರದೇಶದಲ್ಲಿ ಇಳಿಸಲಾಗಿತ್ತು. ಬಳಿಕ ಆನೆಗಳಿಗೆ ಪೂಜೆ ಸಲ್ಲಿಸಿ ಕಾರ್ಯಾಚರಣೆ ಆರಂಭಿಸಲಾಗಿತ್ತು. ಎರಡು ದಿನಗಳ ಕಾರ್ಯಾಚರಣೆ ಬಳಿಕ ಫೆ.೨೩ರಂದು ಕೊಂಬಾರು ಗ್ರಾಮದ ಮಂಡೆಕರ ಸಮೀಪದ ಮುಜೂರು ಅರಣ್ಯ ಪ್ರದೇಶದಲ್ಲಿ ನರಬಲಿ ಪಡೆದುಕೊಂಡಿದ್ದ ಕಾಡಾನೆಯನ್ನು ಸೆರೆ ಹಿಡಿಯಲಾಯಿತು. ಈ ಕಾರ್ಯಾಚರಣೆಗೆ ಕಂಜನ್ ಆನೆಯನ್ನು ಸಹ ಬಳಸಿಕೊಂಡಿರುವುದು ವಿಶೇಷವಾಗಿದೆ. ಇದೀಗ ದುಬಾರೆ ಆನೆ ಶಿಬಿರದಲ್ಲಿ ಸಹ ಆನೆಯೊಂದಿಗೆ ಕಾದಾಟ ನಡೆಸಿ ಮಾರ್ತಾಂಡ ಆನೆ ಹಾಗೂ ಮಹಿಳೆಯೊಬ್ಬರ ಸಾವಿಗೆ ಕಾರಣವಾಗುವ ಮೂಲಕ ಕಂಜನ್ ಆನೆ ಸುದ್ದಿಯಲ್ಲಿದೆ.
ಕಂಜನ್ಗೆ ದಸರಾದಿಂದ ಗೇಟ್ಪಾಸ್;
ಸಹ ಆನೆ ಹಾಗೂ ಮಹಿಳೆಯ ಸಾವಿಗೆ ಕಾರಣವಾದ ಕಂಜನ್ ಆನೆಯನ್ನು ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದಿಂದ ಶಾಶ್ವತವಾಗಿ ನಿಷೇಧಿಸಲಾಗಿದೆ. 2024ರ ಮೈಸೂರು ದಸರಾ ಮಹೋತ್ಸವದ ತಾಲೀಮಿನ ಅವಧಿಯಲ್ಲೂ ಕಂಜನ್ ಭಾರಿ ಗದ್ದಲ ಸೃಷ್ಟಿಸಿತ್ತು. ಮೈಸೂರು ಅರಮನೆಯ ಆವರಣದಲ್ಲೇ ಮತ್ತೊಂದು ದಸರಾ ಆನೆಯನ್ನು ಕಂಜನ್ ಆಕ್ರೋಶದಿಂದ ಅಟ್ಟಿಸಿಕೊಂಡು ಹೋಗಿ ಪ್ರವಾಸಿಗರು ಹಾಗೂ ಅಧಿಕಾರಿಗಳಲ್ಲಿ ತೀವ್ರ ಆತಂಕ ಸೃಷ್ಟಿಸಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಕಂಜನ್ ಆನೆಗೆ ಮೈಸೂರು ದಸರಾ ಮಹೋತ್ಸವಿಂದ ಕೋಕ್ ನೀಡಲಾಗಿದೆ.
ಮಾರ್ತಾಂಡ ಆನೆ, ಮಹಿಳೆ ಬಲಿ;
ಮೇ.18ರಂದು ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುವ ವೇಳೆ ಕಂಜನ್ ಮತ್ತು ಮಾರ್ತಾಂಡ ಆನೆಗಳ ನಡುವೆ ದಿಢೀರ್ ಕಾದಾಟ ಆರಂಭವಾಗಿತ್ತು. ಕಂಜನ್ ದಾಳಿಗೆ ಸಿಲುಕಿ ಮಾರ್ತಾಂಡ ಆನೆ ನಿಯಂತ್ರಣ ತಪ್ಪಿ ನದಿ ದಂಡೆಯಲ್ಲಿದ್ದ ಪ್ರವಾಸಿಗರ ಮೇಲೆ ಬಿದ್ದಿತ್ತು. ಇದರ ಅಡಿಯಲ್ಲಿ ಸಿಲುಕಿದ ಚೆನ್ನೈ ಮೂಲದ ಮಹಿಳೆ ತುಳಸಿ(33ವ.) ಸ್ಥಳದಲ್ಲೇ ಮೃತಪಟ್ಟರೆ, ಆಕೆಯ ಪತಿ ಮತ್ತು ಮಗು ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು. ಕಂಜನ್ ಆನೆಯು ಮಾರ್ತಾಂಡ ಆನೆಯ ಹೊಟ್ಟೆ, ಕಿವಿ ಹಾಗೂ ದೇಹದ ಇತರೇ ಭಾಗಗಳಿಗೆ ತನ್ನ ದಂತಗಳಿಂದ ತೀವ್ರವಾಗಿ ತಿವಿದು ಗಂಭೀರ ಗಾಯಗೊಳಿಸಿತ್ತು. ಗಂಭೀರ ಗಾಯಗೊಂಡಿದ್ದ ಮಾರ್ತಾಂಡ ಆನೆಗೆ ದುಬಾರೆ ಶಿಬಿರದಲ್ಲೇ ವೈದ್ಯರು ತುರ್ತು ಚಿಕಿತ್ಸೆ ನೀಡಿದ್ದರೂ ಚಿಕಿತ್ಸೆ ಫಲಿಸದೆ ಮೇ.19ರಂದು ಮೃತಪಟ್ಟಿತ್ತು.









