






ಪುತ್ತೂರು: ಮಾಯ್ ದೆ ದೇವುಸ್ ಚರ್ಚ್‌ನ ನೂತನ ಪ್ರಧಾನ ಗುರುಗಳು ಹಾಗೂ ಮಾಯ್ ದೆ ದೇವುಸ್ ಶಿಕ್ಷಣ ಸಂಸ್ಥೆಗಳ ನೂತನ ಸಂಚಾಲಕರಾಗಿ ಅಧಿಕಾರ ಸ್ವೀಕರಿಸಿರುವ ವಂ|ಡಾ| ಜೆ. ಬಿ. ಸಲ್ಡಾನರವರನ್ನು ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಮುಖ್ಯಗುರುಗಳು, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಭೇಟಿಯಾಗಿ, ಪುಷ್ಪಗುಚ್ಛ ನೀಡಿ ಶುಭ ಕೋರಿದರು.


ಸಂಘದ ಮಾಜಿ ಅಧ್ಯಕ್ಷರಾದ ಯನ್. ಕೆ. ಜಗನ್ನೀವಾಸ್ ರಾವ್ ಮಾತನಾಡಿ 75 ವರ್ಷ ಇತಿಹಾಸವಿರುವ ಸಂತ ಫಿಲೋಮಿನಾ ಪ್ರೌಢಶಾಲೆಗೆ ಹಿರಿಯ ವಿದ್ಯಾರ್ಥಿಗಳು ಆಧಾರ ಸ್ತಂಭ, ಸಂಚಾಲಕರ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಹಿರಿಯ ವಿದ್ಯಾರ್ಥಿಗಳು ಶಾಲೆಗೆ ಸಹಕಾರ ನೀಡುತ್ತಾ ಬಂದಿರುತ್ತಾರೆ ಎಂದು ಹೇಳಿದರು. ಸಂಘದ ಉಪಾಧ್ಯಕ್ಷ ಜಾನ್ ಕುಟಿನ್ಹರವರು ಶಾಲೆಯ ಹಾಗೂ ಸಂಘದ ಬಗ್ಗೆ ವಿವರ ನೀಡಿದರು.



ಸಂಘದ ಅಧ್ಯಕ್ಷರಾದ ಜಯಕುಮಾರ್ ರೈ ಮಾತನಾಡಿ ಶಾಲೆಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಪ್ರಯುಕ್ತ ಹಲವು ಸಭೆಗಳು ನಡೆಯುತ್ತದೆ. ಮುಂಬರುವ ದಿನಗಳಲ್ಲಿ ತಮ್ಮ ಕಾರ್ಯಕ್ರಮಗಳಿಗೆ ಸಹಕಾರ ಮತ್ತು ಆಶೀರ್ವಾದ ಕೋರಿದರು. ಜೂನ್ 27ರಂದು ನಡೆಯುವ ಸಂಘದ ವಾರ್ಷಿಕ ಸಮ್ಮಿಳನ ಕಾರ್ಯಕ್ರಮಕ್ಕೆ ಅನುಮತಿ ಕೋರಿದರು. ಶಾಲಾ ಮುಖ್ಯಶಿಕ್ಷಕ ವಂ|ಮ್ಯಾಕ್ಸಿಂ ಡಿಸೋಜಾ ಮಾತನಾಡಿ ಹಿರಿಯ ವಿದ್ಯಾರ್ಥಿ ಸಂಘವು ಶಾಲೆಯಲ್ಲಿ ಸಭೆಗಳ ಜೊತೆಗೆ ಕೆಲವು ಚಟುವಟಿಕೆಗಳನ್ನು ಮಾಡಿವೆ. ಕಳೆದ ಬಾರಿಯ ಶಾಲಾ ಅಮೃತ ಮಹೋತ್ಸವ ಸಂದರ್ಭದಲ್ಲಿ ಮತ್ತು ಅದಕ್ಕಿಂತ ಮುನ್ನ ಹೊಸ ಕಟ್ಟಡ ರಚನೆಯಲ್ಲಿ ದಾನ ಸಂಗ್ರಹಣೆಯ ಕಾರ್ಯ ಕೈಗೊಂಡಿತ್ತು ಎಂದು ಹೇಳಿದರು.
ನೂತನ ಸಂಚಾಲಕರಾದ ವಂ|ಡಾ|ಜೆ.ಬಿ. ಸಲ್ದಾನರವರು ಮಾತನಾಡಿ ಸಂತ ಫಿಲೋಮಿನಾ ಶಾಲೆಯ ಹಿರಿಯ ವಿದ್ಯಾರ್ಥಿಗಳು ಶಾಲೆಗೆ ಬೆನ್ನೆಲುಬಾಗಿ ನಿಂತಿರುವುದು ಸಂತೋಷದ ವಿಷಯ. ಉತ್ತಮ ವಿದ್ಯಾರ್ಹತೆ, ಕೆಲಸ ಹೊಂದಿದ್ದು, ತುಂಬಾ ಹಿರಿಯವರು ಆಗಿದ್ದರೂ ಚೈತನ್ಯದಿಂದ ಇದ್ದೀರಿ. ಶಾಲೆಯ ಬೆಳವಣಿಗೆಗೆ ಸಂಘಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡುತ್ತೇನೆ ಎಂದರು.
ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಹಾಗೂ ಸಮಿತಿಯ ಸದಸ್ಯರುಗಳು ತಮ್ಮ ಪರಿಚಯ ನೀಡಿದರು. ಸಂಘದ ಕಾರ್ಯದರ್ಶಿ ಬೆನೆಟ್ ಮೊಂತೇರೊ, ಖಜಾಂಜಿ ಜಗಜೀವನ್‌ದಾಸ್ ರೈ, ಸದಸ್ಯರಾದ ಡಾ. ಎಸ್.ಎನ್. ಅಮೃತ್ ಮಲ್ಲ, ರಾಮಮೋಹನ್ ರಾವ್, ಜೇರೋಮಿಯಸ್ ಪಾಯ್ಸ್, ಅಶ್ರಫ್ ಮುಕ್ವೆ, ನರೇಶ್ ಲೋಬೊ, ಸುನಿಲ್ ಡಿಸೋಜಾ, ಡಿಕ್ಸನ್ ತಾವ್ರೋ ಮುಂತಾದವರು ಉಪಸ್ಥಿತರಿದ್ದರು.










